ಪಾಶ್ಚಾತ್ಯ ಸಂಸ್ಕೃತಿಯತ್ತ ಯುವ ಜನರ ಚಿತ್ತ

ಪಾಶ್ಚಾತ್ಯ ಸಂಸ್ಕೃತಿಯತ್ತ ಯುವ ಜನರ ಚಿತ್ತ

ಎಸ್‌ಬಿಸಿ ಕಾಲೇಜಿನ `ಸಂಸ್ಕೃತ ಸಂಭ್ರಮ’ ಕಾರ್ಯಕ್ರಮದಲ್ಲಿ ಬಿ.ಸಿ. ಉಮಾಪತಿ ವ್ಯಾಕುಲತೆ

ದಾವಣಗೆರೆ, ಜೂ. 13- ಇಂದಿನ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದು, ದೇಶಿಯ ಪರಂಪರೆ, ಕಲೆಗಳತ್ತ ನಿರಾಸಕ್ತಿ ತೋರುತ್ತಿದ್ದಾರೆ. ಇಂತಹ ದೇಶಿಯ ಪರಂಪರೆ ಯನ್ನು ಉಳಿಸುವಲ್ಲಿ `ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮ ಮಹತ್ತರ ಪಾತ್ರ ವಹಿಸುತ್ತಿದೆ ಎಂದು  ಎಸ್‌.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಧ್ಯಕ್ಷರೂ, ಜವಳಿ ವರ್ತಕರೂ ಆದ ಬಿ.ಸಿ. ಉಮಾಪತಿ ಅಭಿಪ್ರಾಯಪಟ್ಟರು.

ನಗರದ ಎಸ್.ಬಿ.ಸಿ. ಕಾಲೇಜಿನ ಸಭಾಂಗಣದಲ್ಲಿ ಶ್ರೀ ವಿನಾಯಕ ಎಜುಕೇಶನ್ ಟ್ರಸ್ಟ್ ನ ಶ್ರೀಮತಿ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಸಂಸ್ಕೃತ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತೀಯ ಪರಂಪರೆ, ಜಾನಪದ ಕಲೆ, ಹಬ್ಬ-ಹರಿದಿನಗಳನ್ನು ಮರೆಯುತ್ತಿದ್ದೇವೆ. ಇವುಗಳನ್ನು ಇಂದಿನ ವಿದ್ಯಾರ್ಥಿಗಳು ಮುಂದುವರೆಸಿಕೊಂಡು ಹೋಗುವ ಮೂಲಕ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕು. ವರ್ಷಕ್ಕೆ ಮೂರು ಬಾರಿಯಾದರೂ ಇಂತಹ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.

ಸೀರೆ ಉಡುವುದು ಭಾರತೀಯ ನಾರಿಯರ ವಿಶೇಷ. ಸೀರೆಯುಟ್ಟ ವಿದ್ಯಾರ್ಥಿನಿಯರು ದೇವತೆಯಂತೆ ಕಂಗೊಳಿಸುತ್ತಿದ್ದೀರಿ. ಹೆಣ್ಣುಮಕ್ಕಳನ್ನು ದೇವತೆಯಂತೆ ಪೂಜ್ಯ ಭಾವನೆಯಿಂದ ನೋಡುವುದು ಭಾರತೀಯ ಸಂಸ್ಕೃತಿ, ಪರಂಪರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಷಣ್ಮುಖ ಮಾತನಾಡಿ, ಕಾಲೇಜಿನ ಹಬ್ಬದ ವಾತಾವರಣ ಸೃಷ್ಠಿಯಾಗಲು ಕಾಲೇಜಿನ ವಿದ್ಯಾರ್ಥಿನಿಯರು ಸಾಕ್ಷಿಯಾಗಿರುವುದು ನಮಗೆಲ್ಲಾ ಸಂತಸ ತಂದಿದೆ. ಎಲ್ಲರೂ ವಿವಿಧ ದೇವತೆಗಳನ್ನು ಪ್ರತಿನಿಧಿಸಿದ್ದು, ಇಂತಹ ಆಚರಣೆಗಳು ಮನಸ್ಸಿಗೆ ಮುದ ನೀಡುತ್ತವೆ ಎಂದರು.

 ಶಿಕ್ಷಣದ ಒಂದು ಭಾಗವಾಗಿ ಪಠ್ಯೇತರ ಚಟುವಟಿಗಳಿದ್ದು, ಅವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೇಶಿಯತೆಯನ್ನು ಉಳಿಸುವಲ್ಲಿ ಮುಂದಾಗಿರುವುದು ಶ್ಲ್ಯಾಘನೀಯ ಎಂದು ಹೇಳಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗ್ಯಶ್ರೀ ಬಿ. ಹುಬ್ಳಿಕರ್, ಬಿ. ಸೌಮ್ಯ, ಜ್ಯೋತಿ, ಅಶ್ವಿನಿ, ಸ್ಫೂರ್ತಿ, ವಿಶ್ವನಾಥ್, ರುದ್ರೇಶ್, ಮಂಜುನಾಥ್, ನಿಂಗಪ್ಪ, ಕೊಟ್ರೇಶ್, ಅಣ್ಣಪ್ಪ, ಸರಳಾ ಮುಂತಾದವರಿದ್ದರು.

ಸಮಾಜಶಾಸ್ತ್ರ ವಿಭಾಗದ ಡಾ. ಮಂಜುನಾಥ್ ಶ್ಯಾಗಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: Content is protected !!