ಜಗಳೂರು, ಜೂ.12- ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಗಿಂತ ಶೇಕಡ 33ರಷ್ಟು ಕಡಿಮೆ ಮಳೆಯಾಗಿದ್ದು ಮುಂಗಾರು ಮುಗ್ಗರಿಸಿದಂತಾಗಿದೆ. ಹೀಗಾಗಿ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.
ಈ ವರ್ಷದ ವಾಡಿಕೆ ಮಳೆ 107.5 ಮಿಲಿಮೀಟರ್. ಈವರೆಗೆ ಬಿದ್ದ ಮಳೆ 72.3 ಮಿಲಿಮೀಟರ್ ಶೇಕಡ 33 ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿರುತ್ತದೆ. 55000 ಹೆಕ್ಟೇರ್ ಬಿತ್ತನೆ ಕ್ಷೇತ್ರದಲ್ಲಿ ಈವರೆಗೆ 510 ಹೆಕ್ಟೇರ್ ಹತ್ತಿ ಮತ್ತು 55 ಹೆಕ್ಟೇರ್ ಮೆಕ್ಕೆಜೋಳ ಮಾತ್ರ ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಸಮರ್ಪಕ ಮಳೆ ಆಗದೇ ಇರುವುದರಿಂದ ಬಿತ್ತನೆ ಹಾಗೂ ಇತರೆ ಚಟುವಟಿಕೆಗಳು ಸ್ತಬ್ಧಗೊಂಡಿದ್ದು ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೈ ಹಿಡಿದಿದೆ.
ತಾಲ್ಲೂಕಿನಾದ್ಯಂತ 22 ಗ್ರಾಮ ಪಂಚಾ ಯಿತಿಗಳ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 24 ಸಾಮೂಹಿಕ ಕಾಮಗಾರಿಗಳು ಮತ್ತು 64 ವೈಯಕ್ತಿಕ ಕಾಮಗಾರಿಗಳಿಂದ ಒಟ್ಟು 2,44,555 ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ.
ಪಿಡಿಒಗಳ ಕೊರತೆ
ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಿಗೆ 13 ಜನ ಮಾತ್ರ ಕಾಯಂ ಪಿಡಿಒಗಳಿದ್ದು, ನಾಲ್ವರು ನಿಯೋಜನೆ ಮೇಲೆ ಬಂದಿದ್ದಾರೆ. ಉಳಿದಂತೆ ಆರು ಜನ ಗ್ರೇಡ್1 ಕಾರ್ಯದರ್ಶಿಗಳಿಗೆ ಪಿಡಿಒ ಪ್ರಭಾರ ವಹಿಸಲಾಗಿದೆ.
ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆ ಮತ್ತು 14ನೇ ಹಣಕಾಸು ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ. ಕೆಲವು ಪಿಡಿಒಗಳು ಅಮಾನತ್ತುಕೊಂಡರೆ ಇನ್ನೂ ಕೆಲವರು ತನಿಖೆ ಎದುರಿಸುತ್ತಿದ್ದಾರೆ. ಒಟ್ಟಾರೆ ಹಲವಾರು ಗ್ರಾಮ ಪಂಚಾಯಿತಿ ಗಳ ಖಾಯಂ ಪಿಡಿಒಗಳು ಇಲ್ಲವಾಗಿದೆ.
ಸಾಮೂಹಿಕ ಕಾಮಗಾರಿಗಳಲ್ಲಿ ಸಮಗ್ರ ಕೆರೆ ಅಭಿವೃದ್ಧಿ ಮತ್ತು ಫೀಲ್ಡರ್ ಚಾನೆಲ್ ಕಾಮಗಾರಿಗಳು ಮತ್ತು ವೈಯಕ್ತಿಕ ಕಾಮಗಾರಿಯಲ್ಲಿ ರೇಷ್ಮೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಕಾಮಗಾರಿಗಳು ನಡೆದಿವೆ.
ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ, ದೊಣ್ಣೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸು. 30 ಸಾವಿರ ಮಾನವ ದಿನಗಳ ಕಾಮಗಾರಿ ನಡೆದಿದೆ. ಉಳಿದಂತೆ ಬಿಳಿಚೋಡು, ದಿದ್ದಿಗಿ, ಹೊಸಕೆರೆ, ಕ್ಯಾಸೇನಹಳ್ಳಿ, ಮುಸ್ಟೂರು, ಪಲ್ಲಾಗಟ್ಟೆ, ಸೊಕ್ಕೆ ಮತ್ತು ತೋರಣಗಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಾನವ ದಿನಗಳ ಸೃಜನೆಯಾಗಿವೆ.
ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ನಾಲ್ಕು `ಕಂದಕ ಬದು’ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿ ಇದ್ದು, ಎರಡು ಕಾಮಗಾರಿಗಳು ಪೂರ್ಣ ಗೊಂಡಿವೆ. ಸುಮಾರು ನಾಲ್ಕು ಸಾವಿರ ಮಾನವ ದಿನಗಳು ಸೃಜನೆಯಾಗಿ ಕಾರ್ಮಿಕರಿಗೆ ನೆರ ವಾಗಿದೆ ಎನ್ನುತ್ತಾರೆ ಮರಿಕಟ್ಟೆ ಗ್ರಾಮದ ಶಿವರಾಜ್.
ಮಳೆಗಾಲವಾಗಿದ್ದರೂ ಸಹ ತಾಲೂಕಿನಲ್ಲಿ ಎಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿದ್ದು, ಇವರಿಗೆ 2.44 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರ) ವೈ.ಎಚ್.ಚಂದ್ರಶೇಖರ್ ತಿಳಿಸಿದರು.
– ಬಿ.ಪಿ. ಸುಭಾನ್