ನಗರದ ಮೋತಿ ವೀರಪ್ಪ ಹೈಸ್ಕೂಲ್ ಮೈದಾನದಲ್ಲಿ 5 ಸಾವಿರ ಜನರಿಂದ ಯೋಗ ಪ್ರದರ್ಶನ
ದಾವಣಗೆರೆ, ಜೂ. 12 – ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 5 ಸಾವಿರ ಜನರಿಂದ ಯೋಗ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಿದ್ದತೆಗಳ ಕುರಿತು ಮಾತನಾಡಿದರು.
ಇದೇ ದಿನಾಂಕ 21 ರಂದು 9 ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಾಡ ಲಾಗುತ್ತಿದೆ. ಈ ವರ್ಷವೂ ವಸುದೈವ ಕುಟುಂಬ ಕಂ ಧ್ಯೇಯದಡಿ ಪ್ರತಿ ಮನೆಯ ಅಂಗಳದಲ್ಲಿ ಯೋಗ ಎಂಬ ಘೋಷ ವಾಕ್ಯದಡಿ ಯೋಗಾಚರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಯೋಗ ದಿನಾಚರಣೆಯನ್ನು ಮೋತಿ ವೀರಪ್ಪ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 5.30 ರಿಂದ 6.30 ರವರೆಗೆ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಧ್ಯಾನ, 6.30 ರಿಂದ 7 ರವರೆಗೆ ಉದ್ಘಾಟನೆ, 7 ರಿಂದ 7.30 ಸಾಮಾನ್ಯ ಯೋಗ, 7.30 ರಿಂದ 8.30 ರವರೆಗೆ ವೇದಿಕೆ ಕಾರ್ಯಕ್ರಮ, 8.30 ರಿಂದ 9 ರ ವರೆಗೆ ಉಪಹಾರ ಮತ್ತು 10 ರವರೆಗೆ ಇತರೆ ಚಟುವಟಿಕೆಗಳು ನಡೆಯುತ್ತವೆ.
ಯೋಗ ಕಲಿತವರ ಅಂಕಿ ಅಂಶ ನೀಡಿ; ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಲು ಮತ್ತು ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಯೋಗ ಪ್ರಮುಖವಾಗಿದ್ದು, ಒತ್ತಡ ಮುಕ್ತ ಜೀವನಕ್ಕೆ ಎಲ್ಲರ ಮನೆಯ ಅಂಗಳದಲ್ಲಿ ಯೋಗ ಸಹಕಾರಿಯಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸಲು ಯೋಗ ದಿನಾಚರಣೆ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಯೋಗದ ಮಹತ್ವವನ್ನು ತಿಳಿಸಲಾಗಿದೆ.
ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ವಿವಿಧ ಯೋಗ ಸಂಸ್ಥೆಗಳ ಮೂಲಕ ಯೋಗಾಸನಕ್ಕೆ ತರಬೇತಿ ನೀಡಿದ ವಿವರ ಮತ್ತು ಜಿಲ್ಲೆಯಲ್ಲಿನ ಎಲ್ಲಾ ಜನರಿಗೂ ಯೋಗದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರವನ್ನು ಸಂಗ್ರಹಿಸಲು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ರಾಮಗೊಂಡ ಬಸರಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಹಾಗೂ ವಿವಿಧ ಯೋಗ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.