ಸರ್ಕಾರದ ‘ಶಕ್ತಿ’ಯಿಂದ ದಾವಣಗೆರೆ ಜಿಲ್ಲೆಯಲ್ಲಿ ನಿಶ್ಯಕ್ತವಾದ ಖಾಸಗಿ ಬಸ್ ವಲಯ
ದಾವಣಗೆರೆ, ಜೂ. 12 – ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ಉಚಿತವಾಗಿ ಪ್ರಯಾಣಿಸಲು ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ, ಖಾಸಗಿ ಬಸ್ ವಲಯವನ್ನು ನಿಶ್ಯಕ್ತಗೊಳಿಸಿದೆ. ಇದರಿಂದಾಗಿ ಖಾಸಗಿ ಬಸ್ ವಲಯದ ಭವಿಷ್ಯದ ಮೇಲೆ ಪರಿಣಾಮವಾಗುತ್ತಿದೆ.
ಭಾನುವಾರದಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಸೋಮವಾರ ಅದರ ಪರಿಣಾಮ ಸ್ಪಷ್ಟವಾಗಿ ಕಂಡು ಬಂತು. ಸರ್ಕಾರಿ ಬಸ್ಗಳು ತುಂಬಿ ತುಳುಕುತ್ತಿದ್ದರೆ, ಖಾಸಗಿ ಬಸ್ಗಳಲ್ಲಿ ಜನಸಂದಣಿ ವಿರಳವಾಗಿತ್ತು. ಇದು ಮದುವೆಯ ಸಮಯವಾಗಿರುವುದರಿಂದ ಒಂದಿಷ್ಟು ಜನ ಖಾಸಗಿ ಬಸ್ ಕಡೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರೂ ಬರದೇ ಇರಬಹುದು ಎಂಬ ಕಳವಳ ವ್ಯಕ್ತವಾಗುತ್ತಿತ್ತು.
ಈ ಬಗ್ಗೆ ಮಾತನಾಡಿರುವ ಖಾಸಗಿ ಬಸ್ ಏಜೆಂಟ್ ಉಮೇಶ್ ರಾವ್ ಸಾಳಂಕಿ, ಜಿಲ್ಲೆಯಲ್ಲಿ 150-180 ಸ್ಟೇಜ್ ಕ್ಯಾರಿಯರ್ ಬಸ್ಗಳಿವೆ. ಮದುವೆಗಳಿಗೆಂದು 50-60 ಬಸ್ಗಳನ್ನು ಪಡೆಯಲಾಗಿದೆ. ಹೀಗಾಗಿ ಇಂದು 100-120 ಬಸ್ಗಳಷ್ಟೇ ಇವೆ. ಇವೂ ಸಹ ಭರ್ತಿಯಾಗುತ್ತಿಲ್ಲ ಎಂದಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ಮೊದಲ ದಿನ ದಾವಣಗೆರೆ ಜಿಲ್ಲೆಯಲ್ಲಿ 9,597 ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಿದ್ದು, ಅದರ ವೆಚ್ಚ 3.48 ಲಕ್ಷ ರೂಪಾಯಿ. ಇಂದು ಸೋಮವಾರ 34,640 ಮಹಿಳೆಯರು ಪ್ರಯಾಣಿಸಿದ್ದು ಅದರ ವೆಚ್ಚ 15.81 ಲಕ್ಷ ರೂ.ಗಳಾಗಿದೆ.
ವಿದ್ಯಾರ್ಥಿನಿಯರಿಂದಲೂ ದುಡ್ಡು ಬರುತ್ತೆ
ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ವಿದ್ಯಾರ್ಥಿನಿಯರ ಹಣವನ್ನು ಪಾವತಿಸುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ಈ ಹಿಂದೆ ಪಾಸ್ನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲಾ ಈಗ ಟಿಕೆಟ್ಗೆ ಬರಲಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯ ರಿಂದಲೂ ಸಾರಿಗೆ ನಿಗಮಕ್ಕೆ ಹಣ ಬರಲಿದೆ. ಇದು ನಿಗಮಕ್ಕೆ ಅನುಕೂಲಕರ ಎಂಬ ಅಭಿಪ್ರಾಯಗಳು ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಯಿಂದ ಕೇಳಿ ಬಂತು.
ಇನ್ನು ಮುಂದೆ ಎಲ್ಲಾ ಸ್ಟ್ಯಾಂಡಿಂಗ್
ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚನ್ನಗಿರಿ ಕಡೆ ತೆರಳುವ ಬಸ್ ಬಗ್ಗೆ ವಿಚಾರಿಸುತ್ತಿದ್ದರು. ಬಸ್ ಫುಲ್ ರಶ್ ಇದೆ, ನಿಂತು ಹೋಗಲು ಕಷ್ಟ. ಮುಂದಿನ ಬಸ್ ಖಾಲಿ ಇರುತ್ತದೆಯಾ? ಎಂದು ಮಾಹಿತಿ ಕೇಂದ್ರದ ಸಿಬ್ಬಂದಿಗೆ ಕೇಳಿದರು. ಫ್ರೀ ಅಂದ ಮೇಲೆ ಬಸ್ ಫುಲ್ ಆಗಿಯೇ ಇರುತ್ತದೆ. ಇನ್ನು ಮುಂದೆ ಸ್ಟಾಂಡಿಂಗೇ ಇರುತ್ತದೆ. ಏನೂ ಮಾಡಲಾಗದು ಎಂದು ಮಹಿಳೆಗೆ ತಿಳಿಸುತ್ತಿದ್ದುದು ಕಂಡು ಬಂತು.
ಮೊಬೈಲ್ ಸ್ವಿಚ್ ಆಫ್ ಆದ್ರೆ?
ಮಹಿಳೆಯೊಬ್ಬರು, ಮೊಬೈಲ್ನಲ್ಲಿ ಗುರುತಿನ ಚೀಟಿ ತೋರಿಸಿದರೆ ಸಾಲದೇ? ಎಂದು ಕಂಡಕ್ಟರ್ ಬಳಿ ವಿಚಾರಿಸುತ್ತಿದ್ದರು. ಅದಕ್ಕೆ ಕಂಡಕ್ಟರ್, ನೀವೇನೋ ಮೊಬೈಲ್ನಲ್ಲಿ ಗುರುತು ತೋರಿಸುತ್ತೀರಿ. ಆಮೇಲೆ ಚಾರ್ಜ್ ಖಾಲಿ ಆಗಿ ಆಫ್ ಆಗುತ್ತೆ. ಆಗ ಚೆಕ್ಕಿಂಗ್ ಬಂದರೆ ಏನು ಹೇಳಬೇಕು? ಒರಿಜಿನಲ್ ಅಲ್ಲದಿದ್ದರೂ ಪರವಾಗಿಲ್ಲ, ಜೆರಾಕ್ಸ್ ಗುರುತಿನ ಚೀಟಿಯಾದರೂ ಬೇಕು ಎಂದು ತಿಳಿಸಿದರು.
ಪಾಲನೆಯಾಗದ 50% ಮೀಸಲಾತಿ
ದಾವಣಗೆರೆ, ಜೂ. 12 – ರಾಜ್ಯ ಸರ್ಕಾರ ಹೆಣ್ಣು ಮಕ್ಕಳು ಹಾಗೂ ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿತ್ತು. ಪುರುಷರಿಗೆ ಸಮಾಧಾನಕರವಾಗಿ ಶೇ.50ರಷ್ಟು ಪಾವತಿ ಸೀಟುಗಳನ್ನು ಕಾಯ್ದಿರಿಸುವುದಾಗಿ ಹೇಳಿತ್ತು.
ಆದರೆ, ಉಚಿತ ಪ್ರಯಾಣದ ಎರಡನೇ ದಿನದಂದು ಈ ಮೀಸಲಾತಿ ಜಾರಿಗೆ ಬಂದಿರುವ ಬಗ್ಗೆ ಅನುಮಾನಗಳು ವ್ಯಕ್ತವಾದವು. ಈ ಬಗ್ಗೆ ಕಂಡಕ್ಟರ್ಗಳ ಬಳಿ ವಿಚಾರಿಸಿದಾಗ, ಯಾವ ರೀತಿ ಸೀಟು ಕಾಯ್ದಿರಿಸಬೇಕು ಹೇಳಿ? ಈಗಾಗಲೇ ಹತ್ತಿರುವ ಹಾಗೂ ಸೀಟುಗಳ ಮೇಲೆ ಕುಳಿತಿರುವ ಮಹಿಳೆಯರನ್ನು ಇಳಿಸಬೇಕಾ? ಆ ರೀತಿ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಮರು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮ
ಈಗ ಕೆಲ ಮಾರ್ಗಗಳಲ್ಲಿ ಖಾಸಗಿ ಬಸ್ಗಳಷ್ಟೇ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಇಲ್ಲಿಯ ಜನರೂ ನಮಗೆ ಸರ್ಕಾರಿ ಬಸ್ ಬೇಕು ಎಂಬ ಪಟ್ಟು ಹಿಡಿಯಬಹುದು. ಆಗ ಖಾಸಗಿ ಬಸ್ಗಳು ಇನ್ನಷ್ಟು ಸಮಸ್ಯೆಗೆ ಸಿಲುಕಲಿವೆ ಎಂದು ಖಾಸಗಿ ಬಸ್ಗಳ ಏಜೆಂಟರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ಖಾಸಗಿ ಬಸ್ ಮಾಲೀಕರಿಗಷ್ಟೇ ಅಲ್ಲದೇ, ಕನಿಷ್ಠ 20-25 ಜನರಿಗೆ ಕೆಲಸ ಕೊಡುತ್ತಿದೆ. ಚಾಲಕರು, ನಿರ್ವಾಹಕರು, ಏಜೆಂಟರಿಂದ ಹಿಡಿದು ಗ್ಯಾರೇಜ್ಗಳವರೆಗೆ ಹಲವರು ಈ ವಲಯದಲ್ಲಿದ್ದಾರೆ. ಅವರ ಭವಿಷ್ಯದ ಬಗ್ಗೆ ಸರ್ಕಾರ ಯೋಚಿಸಬೇಕು ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಮೊದಲ ದಿನ 5.71 ಲಕ್ಷ ಮಹಿಳೆಯರಿಂದ ಉಚಿತ ಪ್ರಯಾಣ
ಬೆಂಗಳೂರು, ಜೂ. 12 – ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಯಾದ ಮೊದಲ ದಿನದಂದು 5.71 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಉಚಿತ ಪ್ರಯಾಣ ಸೌಲಭ್ಯ ಆರಂಭಿಸಲಾಗಿತ್ತು. ಮೊದಲ ದಿನದಂದು 5.71 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಈ ಪೈಕಿ ಬಿಎಂಟಿಸಿ ಬಸ್ನಲ್ಲಿ 2,01,215, ವಾಯವ್ಯ ಸಾರಿಗೆ ಬಸ್ನಲ್ಲಿ 1,22,354, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53,623, ಮಹಿಳೆಯರು ಪ್ರಯಾಣಿಸಿದ್ದಾರೆ. ಇವರ ಪ್ರಯಾಣದ ಟಿಕೆಟ್ ವೆಚ್ಚ 1.40 ಕೋ ರೂ. ಆಗಿದೆ.
ಜಗಳೂರು, ಹರಪನಹಳ್ಳಿ, ಬಾಡ, ಸೂಳೆಕೆರೆ ಹಾಗೂ ಚನ್ನಗಿರಿ ಮಾರ್ಗಗಳ ಖಾಸಗಿ ಬಸ್ಗಳಿಗೆ ಅತಿ ಹೆಚ್ಚು ಸಮಸ್ಯೆಯಾಗಿದೆ. ಕೊರೊನಾ ನಂತರ ಖಾಸಗಿ ಬಸ್ಗಳ ನಿರ್ವಹಣೆಯೇ ಕಷ್ಟವಾಗಿದೆ. ಈಗ ಶೇ.20-25ರಷ್ಟು ಜನರು ಖಾಸಗಿ ಬಸ್ ಬಿಟ್ಟು ಹೋದರೂ ನಿರ್ವಹಣೆ ಕಷ್ಟ ಎಂದವರು ಹೇಳಿದರು.
ಮೊದಲೆಲ್ಲ ಖಾನಾಹೊಸಳ್ಳಿಗೆ ತೆರಳುವ ಬಸ್ನಲ್ಲಿ ಜನ ನಿಂತುಕೊಂಡು ಹೋಗುತ್ತಿದ್ದರು. ಈಗ ಜಗಳೂರಿನವರೆಗೆ ಸರ್ಕಾರಿ ಬಸ್ನಲ್ಲಿ ತೆರಳಿ, ನಂತರ ಖಾಸಗಿ ಬಸ್ಗೆ ಬರುತ್ತಿದ್ದಾರೆ. ಹೀಗಾಗಿ ಸೀಟ್ಗಳೆಲ್ಲಾ ಖಾಲಿ ಇವೆ ಎಂದು ಬಸ್ ಚಾಲಕ ಸುರೇಶ್ ತಿಳಿಸಿದರು.
ಚನ್ನಗಿರಿ, ಬಾಡ ಹಾಗೂ ಸಂತೇಬೆನ್ನೂರು ಮಾರ್ಗಗಳಲ್ಲಿ ಖಾಸಗಿ ಬಸ್ಗಳಿಗೆ ಬರುವವರ ಸಂಖ್ಯೆ ಶೇ.75ರಷ್ಟು ಕಡಿಮೆಯಾಗಿದೆ. 8-10 ಜನ ಬಂದರೂ ಸಾಕು ಎಂದು ಬಸ್ ಓಡಿಸುವಂತಾಗಿದೆ ಎಂದು ಖಾಸಗಿ ಬಸ್ ನಿರ್ವಾಹಕ ನಿಂಗರಾಜ್ ತಿಳಿಸಿದ್ದಾರೆ.
ಮೊದಲು ಖಾಸಗಿ ಬಸ್ಗಳಿಗೆ ದಿನಕ್ಕೆ 8-9 ಸಾವಿರ ಜನ ಬರುತ್ತಿದ್ದರು. ಈಗ ಅವರ ಸಂಖ್ಯೆ 3-4 ಸಾವಿರಕ್ಕೆ ಇಳಿದಿದೆ. ಬರುವ ಆದಾಯ ಡೀಸೆಲ್ಗೆ ಹೊಂದಿಸಿದರೆ ಸಾಕು ಎನ್ನುವಂತಾಗಿದೆ ಎಂದು ಖಾಸಗಿ ಬಸ್ ಏಜೆಂಟರು ಹೇಳುತ್ತಿದ್ದಾರೆ.
ಮತ್ತೊಂದೆಡೆ ಸರ್ಕಾರಿ ಬಸ್ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಸಂಜೆ ವೇಳೆಯಲ್ಲಿ ಚನ್ನಗಿರಿ ಮಾರ್ಗಕ್ಕೆ ತೆರಳುವ ಬಸ್ಗಳು ಕಾಲಿಡಲೂ ಜಾಗವಿಲ್ಲದಷ್ಟು ಭರ್ತಿಯಾಗಿದ್ದವು. ಕೆಲವರು ಫುಟ್ಬೋರ್ಡ್ ಮೇಲೆ ನೇತಾಡುತ್ತಿದ್ದರು.
ಹಿಂದಿನ ದಿನಗಳಿಗೆ ಹೋಲಿಸಿದರೆ ಸರ್ಕಾರಿ ಬಸ್ಗಳಿಗೆ ಬರುವವರ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ. ಬಹುತೇಕ ಎಲ್ಲ ಮಾರ್ಗಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಸರ್ಕಾರಿ ಬಸ್ಗಳ ಡ್ರೈವರ್ ಹಾಗೂ ಕಂಡಕ್ಟರ್ಗಳು ತಿಳಿಸಿದ್ದಾರೆ.
ಸರ್ಕಾರದ ಉಚಿತ ಪ್ರಯಾಣ ಗ್ಯಾರಂಟಿಯು ಮಹಿಳೆಯರ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಖಾಸಗಿ ಬಸ್ಗಳ ವಲಯದ ಭವಿಷ್ಯ ಈಗ ಅತಂತ್ರವಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಖಾಸಗಿ ವಲಯಕ್ಕೆ ನೆರವಾಗದೇ ಇದ್ದರೆ, ಕೇವಲ ಸರ್ಕಾರಿ ಬಸ್ಗಳಷ್ಟೇ ಉಳಿಯುವ ಪರಿಸ್ಥಿತಿ ಬರಬಹುದು.