ಅವಕಾಶ ವಂಚಿತ ಮಹಿಳೆಯರಿಗೆ `ಶಕ್ತಿ’

ಅವಕಾಶ ವಂಚಿತ ಮಹಿಳೆಯರಿಗೆ `ಶಕ್ತಿ’

ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್ ನೀಡುವ ಮೂಲಕ ಬೆಂಗಳೂರಿನಲ್ಲಿ ಚಾಲನೆ ನೀಡಿದರು.  ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಕೇತಿಕವಾಗಿ ಬಸ್ ಓಡಿಸಿ, ಶಾಸಕ ಶಾಮನೂರು ಶಿವಶಂಕರಪ್ಪ ಶೂನ್ಯ ದರದ ಟಿಕೆಟ್ ನೀಡಿ ಯೋಜನೆಗೆ ಚಾಲನೆ ನೀಡಿದರು.

ದಾವಣಗೆರೆ, ಜೂ.11 – ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ `ಶಕ್ತಿ’ ಯೋಜನೆಗೆ ಭಾನುವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಚಾಲನೆ ನೀಡಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಕೆ.ಎಸ್.ಆರ್.ಟಿ.ಸಿ. ಸಾಮಾನ್ಯ ಹಾಗೂ ವೇಗದೂತ ಬಸ್‍ಗಳು ಸೇರಿದಂತೆ ನಗರಸಾರಿಗೆಯಲ್ಲಿ ಯಾವುದೇ ಮಿತಿ ಇಲ್ಲದೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದರು.

ಶಕ್ತಿಯಿಂದ ಬಡ ಮಹಿಳೆಯರಿಗೆ ಬಹಳ ಅನುಕೂಲವಾಗುತ್ತದೆ. ಉದ್ಯೋಗಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಮತ್ತು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರು ನಗರ, ಪಟ್ಟಣಕ್ಕೆ ಬಂದು ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗಲಿದೆ ಎಂದರು. 

ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಆರ್ಥಿಕಾಭಿವೃದ್ದಿಗೆ ಮುಂದಾಗುವ ಭರವಸೆ ನೀಡಲಾಗಿತ್ತು. ಮೊದಲ ಗ್ಯಾರಂಟಿಯನ್ನು ಇಂದು ಈಡೇರಿಸಲಾಗಿದೆ. ಬರುವ ಆಗಸ್ಟ್ 15 ರೊಳಗಾಗಿ ಉಳಿದ 4 ಗ್ಯಾರಂಟಿಗಳನ್ನು ಈಡೇರಿಸಲಾಗುತ್ತದೆ. ಜುಲೈ 1 ರಿಂದ ಎರಡನೇ ಗ್ಯಾರಂಟಿ ಅನ್ನಭಾಗ್ಯದಡಿ ತಲಾ 10 ಕೆ.ಜಿ.ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದರು. 

ಮನೆಯ ಒಡತಿ ಗೃಹಲಕ್ಷ್ಮಿಗೆ ಮನೆಯನ್ನು ಮುನ್ನಡೆಸಲು ಆರ್ಥಿಕ ಭದ್ರತೆ ಬೇಕೆಂದು ಅರಿತು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಎರಡು ಸಾವಿರ ನೀಡಲಾಗುವುದು. ನಿರುದ್ಯೋಗ ಭತ್ಯೆ ಪದವೀಧರರಿಗೆ ಮೂರು ಸಾವಿರ, ಡಿಪ್ಲೋಮಾದವರಿಗೆ ಮಾಸಿಕ ಒಂದೂವರೆ ಸಾವಿರ ನೀಡಲಾಗುತ್ತದೆ. ಮತ್ತು 200 ಯುನಿಟ್‍ವರೆಗಿನ ಉಚಿತ ವಿದ್ಯುತ್ ಸೇರಿದಂತೆ ಎಲ್ಲಾ ಗ್ಯಾರಂಟಿಗಳೂ ಶೀಘ್ರವೇ ಅನುಷ್ಠಾನಕ್ಕೆ ಬರಲಿವೆ ಎಂದರು.

ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆಯೇ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಬೀದಿಗೆ ಬಂದಿದ್ದಾರೆ. ವಿದೇಶಗಳಲ್ಲಿ ಶೇ.1 ರಿಂದ 1.5ರಷ್ಟು ಮಾತ್ರ ನಿರುದ್ಯೋಗಿಗಳಿರುತ್ತಾರೆ. ಅದಕ್ಕಿಂತ ಹೆಚ್ಚಾಗಲು ಬಿಡುವುದಿಲ್ಲ. ಹಾಗೆಯೇ ರಾಜ್ಯದಲ್ಲೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುತ್ತಿದೆ. ಎರಡು ವರ್ಷ ನಿರುದ್ಯೋಗ ಭತ್ಯೆ ನೀಡಿದರೆ ಅದರಿಂದ ಅವರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಹದಿಮೂರು ವರ್ಷ ಹಣಕಾಸು ಸಚಿವರಾಗಿ ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲವನ್ನು ಯೋಚಿಸಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಹಿಂದಿನ ಕಾಮಗಾರಿಗಳ ತನಿಖೆಗೆ ಸೂಚನೆ: ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಅವಧಿಯಲ್ಲಿ ನಗರದಲ್ಲಿ ಮಾಡಲಾದ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಬಜೆಟ್‍ನಲ್ಲಿ ಅನುಮೋದನೆ ನೀಡಲಾದ ಕೆಲ ಪ್ರಮುಖ ಕಾಮಗಾರಿಗಳನ್ನು ಕೈ ಬಿಡಲಾಗಿತ್ತು. ಕೆರೆ ತುಂಬಿಸುವ ಯೋಜನೆ, ಚಿಗಟೇರಿ ಆಸ್ಪತ್ರೆಯಲ್ಲಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ.

ರೈಲ್ವೆ ಅಂಡರ್‍ಪಾಸ್‍ಗಳನ್ನು ನಿರ್ಮಾಣ ಮಾಡುವಾಗ ಅವೈಜ್ಞಾನಿಕವಾಗಿ ನಿರ್ಮಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಇಲ್ಲಿ ರಾತ್ರೋ ರಾತ್ರಿ ತಾತ್ಕಾಲಿಕ ಬಸ್ ನಿಲ್ದಾಣ ಕಟ್ಟಲಾಯಿತು. ಹಳೇ ಬಸ್ ನಿಲ್ದಾಣವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅದರಲ್ಲೂ  ಶೇ.40ರಷ್ಟು ಕಮೀಷನ್ ತಗೆದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು. ಇವರು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ನಮಗೆ ಐದು ವರ್ಷಗಳೇ ಬೇಕಾಗಬಹುದು ಎಂದರು.

ಮಾಯಕೊಂಡ ಶಾಸಕ  ಕೆ.ಎಸ್.ಬಸವಂತಪ್ಪ  ಮಾತನಾಡಿ, ಉಚಿತ ಎಂದು ಅನಗತ್ಯವಾಗಿ ಪ್ರಯಾಣ ಮಾಡಬಾರದು.  ಯೋಜನೆಯನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು.   ಯೋಜನೆಯ ಫಲಾನುಭವಿಗಳಾದ ಶ್ರೀಮತಿ ಮಮತಾ ಹಾಗೂ ಕು.ಅನಿತಾ ಅನಿಸಿಕೆಗಳನ್ನು ಹಂಚಿಕೊಂಡರು. ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಸಿ.ಇ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ರಾಜಪ್ಪನವರ ಮಗಳು ಸುಕೃತ ಜಿ.ಆರ್. ಇವರು ರಾಷ್ಟ್ರೀಯ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಹಿನ್ನೆಲೆಯಲ್ಲಿ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಉಪ ವಿಭಾಗಾಧಿಕಾರಿ ಶ್ರೀಮತಿ ದುರ್ಗಾಶ್ರೀ, ಮುಖಂಡರುಗಳಾದ ಅಯೂಬ್ ಪೈಲ್ವಾನ್ ಸೇರಿದಂತೆ  ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು. ರುದ್ರಾಕ್ಷಿಬಾಯಿ ನಾಡಗೀತೆ ಹಾಡಿದರು.

ಪತ್ರಕರ್ತರ ಜಾಗದಲ್ಲಿ ಕಾಂಗ್ರೆಸ್ ಮುಖಂಡರು: ಕಾರ್ಯಕ್ರಮದ ವೇದಿಕೆ ಮುಂಭಾಗ ಪತ್ರಕರ್ತರಿಗಾಗಿ ಕಾಯ್ದಿರಿಸಿದ್ದ ಆಸನಗಳಲ್ಲಿ ಕಾಂಗ್ರೆಸ್ ಮುಖಂಡರು ಕುಳಿತಿದ್ದರು. ಆಸನ ಬಿಟ್ಟುಕೊಡುವಂತೆ ಮೈಕ್ ಮೂಲಕ ಕೋರಲಾಯಿತಾದರೂ, ಕ್ಯಾರೇ  ಎನ್ನಲಿಲ್ಲ. ಪರಿಣಾಮ ಕೆಲವು ಪತ್ರಕರ್ತರು ನಿಂತುಕೊಂಡೇ ವರದಿ ಮಾಡಬೇಕಾಯಿತು.

error: Content is protected !!