ಸೌಲಭ್ಯಗಳ ದುರುಪಯೋಗ ಆಗಬಾರದು: ಶಾಸಕ ಹರೀಶ್

ಸೌಲಭ್ಯಗಳ ದುರುಪಯೋಗ ಆಗಬಾರದು: ಶಾಸಕ ಹರೀಶ್

ಹರಿಹರ, ಜು. 11 – ಸರ್ಕಾರದ ಯಾವುದೇ ಯೋಜನೆಗಳನ್ನು ಸಾರ್ವಜನಿಕರು ದುರುಪಯೋಗಪಡಿಸಿಕೊಳ್ಳದೇ ಸದುಪಯೋಗ ಪಡಿಸಿಕೊಂಡಲ್ಲಿ, ಇನ್ನೂ ಹೊಸ ಯೋಜನೆಗಳನ್ನು ನೀಡಲು ಸರ್ಕಾರ ಮನಸ್ಸು ಮಾಡುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡಲು ಸರ್ಕಾರಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಉಚಿತ ಸೌಲಭ್ಯ ಇದೆ ಎಂದು ಅವಶ್ಯಕತೆ ಇಲ್ಲದವರು ಬಸ್ ಪ್ರಯಾಣ ಮಾಡುವುದರಿಂದ ಇನ್ನೊಬ್ಬರಿಗೆ ತೊಂದರೆ ಕೊಟ್ಟಂತೆ ಆಗುತ್ತದೆ. ಆಗ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಯೋಜನೆ ರೂಪಿಸಲು ಹಿಂದೇಟು ಹಾಕುತ್ತದೆ ಎಂದರು.

ಸರ್ಕಾರದ ಹೊಸ ಯೋಜನೆಗಳನ್ನು ಜಾರಿಗೆ ತರುವಲ್ಲಿ ಇಲಾಖೆಯ ಜವಾಬ್ದಾರಿಯೂ ಪ್ರಮುಖವಾಗಿದೆ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು. ತಾಲ್ಲೂಕಿನ ದೊಡ್ಡ ಗ್ರಾಮಗಳಿಗೆ ನೆರವಾಗಲು ಜನಸಂಖ್ಯೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಬಸ್ ಉಸ್ತುವಾರಿ ಆಡಳಿತ ಅಧಿಕಾರಿ ರಾಜಶೇಖರ ಕುಂಬಾರ ಪ್ರಾಸ್ತಾವಿಕವಾಗಿ  ಮಾತನಾಡಿ, ಹರಿಹರ ಬಸ್ ನಿಲ್ದಾಣದಿಂದ ದಿನನಿತ್ಯ 1396 ವಾಹನಗಳು ಓಡಾಡುತ್ತವೆ ಎಂದು ತಿಳಿಸಿದರು.

ಈ ವೇಳೆ ತಹಶಿಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ರಾಮಪ್ಪ, ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕಾರ್, ಕೆ.ಜಿ. ಸಿದ್ದೇಶ್, ಮುಜಾಮಿಲ್, ಅಬ್ದುಲ್ ಅಲಿಂ, ಸುಮಿತ್ರಾ ಮರಿದೆವ, ಎಂ. ಎಸ್. ಬಾಬುಲಾಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಟಿ. ಜೆ. ಮುರುಗೇಶಪ್ಪ, ಬಿ.ಕೆ. ಸೈಯದ್ ರೆಹೆಮಾನ್, ಹನುಮಂತಪ್ಪ, ಅಭಿದಾಲಿ, ಅರುಣ್ ಬೊಂಗಾಳೆ, ಜಿಗಳಿ ಆನಂದಪ್ಪ,  ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಸಂದೀಪ್ ಇತರರು ಹಾಜರಿದ್ದರು. 

ಡಿಪೊ ವ್ಯವಸ್ಥಾಪಕ ಸಂದೀಪ್ ಸ್ವಾಗತಿಸಿದರೆ,  ನಳಿನಾ ನಿರೂಪಿಸಿದರು. 

error: Content is protected !!