ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಲಯನ್. ಸಿ.ಹೆಚ್.ದೇವರಾಜ್
ದಾವಣಗೆರೆ, ಜೂ.9- ಯಾವುದೇ ಅಹಂ ಇಲ್ಲದೇ ದಾಸೋಹ ಭಾವನೆಯಿಂದ ಸೇವಾ ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ಅದು ಸಾರ್ಥಕ್ಯವಾಗುತ್ತದೆ ಎಂದು ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸಿ.ಹೆಚ್.ದೇವರಾಜ್ ಹೇಳಿದರು.
ವಿದ್ಯಾನಗರ ಲಯನ್ಸ್ ಕ್ಲಬ್‍ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 2023-24 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಪದಗ್ರಹಣಗೊಂಡು ಅವರು ಮಾತನಾಡಿದರು.
ಕೊಟ್ಟೆವು ಎಂಬ ಭಾವ ದಾನ ಮಾಡಿದವರಲ್ಲಿರಬಾರದು. ತಗೆದುಕೊಂಡೆವಲ್ಲ ಎನ್ನುವ ದೈನೇಸಿ ಭಾವನೆ ದಾನ ತೆಗೆದುಕೊಂಡವರಲ್ಲಿರಬಾರದು. ಹೀಗಾದಾಗ ಮಾತ್ರ ದಾನ ಧರ್ಮಕ್ಕೆ ಅರ್ಥ ಬರುತ್ತದೆ ಎಂದು ಅವರು ಹೇಳಿದರು.
ಪ್ರಪಂಚದಲ್ಲಿ ಸುಮಾರು 48 ಸಾವಿರ ಹಾಗೂ ದೇಶದಲ್ಲಿ ಸುಮಾರು 6500 ಲಯನ್ಸ್ ಶಾಖೆಗಳಿವೆ. ಇಂತಹ ಶಾಖೆಗಳಲ್ಲಿ ವಿದ್ಯಾನಗರ ಲಯನ್ಸ್ ಕ್ಲಬ್ ಕೂಡಾ ಒಂದಾಗಿದೆ. ಇಂತಹ ಪ್ರತಿಷ್ಟಿತ ಕ್ಲಬ್ಬಿನ ಅಧ್ಯಕ್ಷನನ್ನಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಕ್ಲಬ್ಬಿನ ಎಲ್ಲಾ ಸದಸ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಏನೂ ಇಲ್ಲದಿದ್ದರೂ ಯಾವ ರೀತಿ ಸೇವಾ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಬಿಜಾಪುರದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳು ಹಾಗೂ ಎಲ್ಲವೂ ಇದ್ದಾಗ್ಯೂ ಕೂಡ ಯಾವ ರೀತಿ ಅನ್ಯರಿಗೆ ಗೊತ್ತಾಗದ ರೀತಿ ದಾನ, ಧರ್ಮಗಳನ್ನು ಕೈಗೊಂಡ ದಿ.ಪುನೀತ್ ರಾಜಕುಮಾರ್ ತೋರಿಸಿಕೊಟ್ಟಿದ್ದಾರೆ. ಇವರನ್ನು ಆದರ್ಶವಾಗಿಟ್ಟುಕೊಂಡು ಮುಂಬರುವ ವರ್ಷಗಳಲ್ಲಿ ನಮ್ಮ ಕ್ಲಬ್ಬಿನ ವತಿಯಿಂದ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನೂತನ ತಂಡವನ್ನು ಪ್ರತಿಷ್ಠಾಪಿಸಿ ಮಾತನಾಡಿದ ಜಿಲ್ಲಾ ಗೌರ್ನರ್ ಡಾ.ಎಂ.ಕೆ.ಭಟ್ ಮಾತನಾಡಿ, ಲಯನ್ಸ್ ಕ್ಲಬ್ ಇತರೆ ಕ್ಲಬ್‍ಗಳಂತೆ ಮನೋರಂಜನಾ ತಾಣಗಳಲ್ಲ. ಇದು ಸೇವಾ ಮಾಧ್ಯಮ ಇರುವವರ ಮತ್ತು ಇಲ್ಲದವರ ನಡುವೆ ಸಂಪರ್ಕ ಸೇತುವೆಯಾಗಿ ಲಯನ್ಸ್ ಕ್ಲಬ್‍ಗಳು ಕೆಲಸ ಮಾಡಲಿವೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ದೇವರಾಜ್ ಅವರು ಎರಡು ಹೊಲಿಗೆ ಯಂತ್ರಗಳನ್ನು ಶ್ರೀಮತಿ ಶಶಿಕಲಾ ಹಾಲೇಶ್ ಹಾಗೂ ಶ್ರೀಮತಿ ಆಶಾ ಮುರುಗೇಶ್ ಅವರುಗಳಿಗೆ ಕೊಡುಗೆಯಾಗಿ ನೀಡಿದರು. ಕುಡಿಯುವ ನೀರಿನ ಯಂತ್ರ, ಶಾಲಾ ಮಕ್ಕಳಿಗೆ ಪುಸ್ತಕ, ಬೆಡ್‍ಶೀಟ್‍ಗಳನ್ನು ಇತರೆ ಸದಸ್ಯರು ಕೊಡುಗೆಯಾಗಿ ನೀಡಿದರು.
ಬಿ.ದಿಳ್ಳೆಪ್ಪ, ಹೆಚ್.ಎನ್. ಶಿವಕುಮಾರ್, ಎ.ಆರ್.ಉಜ್ಜಿನೆಪ್ಪ, ಡಾ.ಶಿವಲಿಂಗಪ್ಪ, ಓಂಕಾರಪ್ಪ, ಓ.ಜಿ.ರುದ್ರಗೌಡ್ರು, ಬಸವರಾಜಪ್ಪ, ಎಲ್.ಎಸ್.ಪ್ರಭುದೇವ್ ಉಪಸ್ಥಿತರಿದ್ದರು. ಆಸರೆ ಕ್ಲಬ್ ಅಧ್ಯಕ್ಷ ಮೌನೇಶ್ ನಿರೂಪಿಸಿದರು. ಸುಲೋಚನವಮ್ಮ ಧ್ವಜ ವಂದನೆ ನೆರವೇರಿಸಿದರು.