ವಿದ್ಯಾರ್ಥಿಗಳಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ
ದಾವಣಗೆರೆ, ಜೂ.9- ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾ ಗಿದ್ದ ಎಆರ್‌ಜಿ – ವೈಭವ 2023 ರ ಎರಡನೇ ದಿನದ ಆರೋಗ್ಯ ಪರಂಪರೆಯ ಆಹಾರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಸ್. ಕೇರ್ ಟ್ರಸ್ಟ್ ಅಧ್ಯಕ್ಷರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಇತ್ತೀಚಿನ ಒತ್ತಡದ ಜೀವನ ಮತ್ತು ಆರೋಗ್ಯ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದ ಅವರು ಆಂತರಿಕ, ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿಗಳ ಕಡೆ ಹೆಚ್ಚು ಗಮನಹರಿಸಲು ತಿಳಿಸಿ, ಕುಟುಂಬ ಮತ್ತು ಪ್ರಕೃತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವ ಅಭ್ಯಾಸ ಬೆಳೆಸಿಕೊಳ್ಳಲು ತಿಳಿಸಿದ ಅವರು ಶಿಕ್ಷಕರಿಗೆ ಗೌರವಿಸಬೇಕು ಹಾಗೂ ಪೋಷಕರನ್ನು ಪ್ರೀತಿಸಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಬಾಪೂಜಿ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಂ.ಜಿ ಈಶ್ವರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಆರೋಗ್ಯ ಪದ್ಧತಿ ಹಾಗೂ ಜೀವನ ಪದ್ಧತಿಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಜಿ.ಬಿ. ಬೋರಯ್ಯ ವಹಿಸಿದ್ದರು. ಸಭೆಯಲ್ಲಿ ಪದವಿ ಪೂರ್ವ ಪ್ರಾಂಶುಪಾಲ ಬೊಮ್ಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.