ಹರಿಹರ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಲೆಕ್ಕಾಧಿಕಾರಿ ಸೌಮ್ಯಶ್ರೀ
ಹರಿಹರ, ಜೂ. 6 – ಸರ್ಕಾರದ ಯೋಜನೆಗಳನ್ನು ರೈತರಿಗೆ, ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕವಾಗಿ ಮುಟ್ಟಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿಷ್ಠೆಯಿಂದ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಲು ಮುಂದಾಗಬೇಕು. ನಿರ್ಲಕ್ಷ್ಯ ತೋರಿಸಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿ ಸಿ.ಪಿ. ಸೌಮ್ಯಶ್ರೀ ಎಚ್ಚರಿಸಿದರು.
ನಗರದ ತಾ.ಪಂ. ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಸಾರ್ವಜನಿಕರು ನೆಮ್ಮದಿ ಜೀವನ ನಡೆಸುವ ಸಲುವಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡದೇ ಹೋದರೆ ಸಾರ್ವಜನಿಕರಿಂದ ದೂರು ಬರುತ್ತವೆ. ಆ ರೀತಿ ದೂರು ಬಂದರೆ, ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮುಂಗಾರು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಬೇಕಾಗುವ ತಾಡಪಾಲು, ಸಾಮಗ್ರಿಗಳು, ಯಂತ್ರಗಳು, ಜೊತೆಗೆ ಗೊಬ್ಬರ ಬಿತ್ತನೆ ಬೀಜ ದಾಸ್ತಾನು ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಜಲಜೀವನ್ ಮಿಷನ್ ಅಡಿಯಲ್ಲಿ ಕೈಗೊಳ್ಳಲಾದ ನೀರು ಪೂರೈಕೆ ಯೋಜನೆ ಬಗ್ಗೆ ಕೆಲವೆಡೆ ಆಕ್ಷೇಪಗಳಿವೆ. ಮಳೆಗಾಲದಲ್ಲಿ ನೀರಿನಲ್ಲಿ ಮಣ್ಣು ಬರುತ್ತಿದೆ ಎಂದು ಬೆಳ್ಳೂಡಿ, ಹಲಸಬಾಳು, ಹುಲುಗಿನಹೊಳೆ, ನಾಗೇನಹಳ್ಳಿ, ಎಳೆಹೊಳೆ ಗ್ರಾಮದ ಜನರು ದೂರಿದ್ದಾರೆ. ಶುದ್ಧ ನೀರು ಕೊಡಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಬೇಕು. ಸೋರುವ ಕೊಠಡಿಗಳನ್ನು ದುರಸ್ತಿ ಪಡಿಸಬೇಕು. ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಸಬೇಕು ಎಂದು ತಿಳಿಸಿದರು.
ತಾಲ್ಲೂಕಿನ ಧೂಳೆಹೊಳೆ ಸೇರಿದಂತೆ ಮೂರು ಕಡೆಗಳಲ್ಲಿ ಸುಮಾರು 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಲೋಪಗಳಾಗಿರುವ ದೂರುಗಳಿವೆ. ಸ್ಥಳಕ್ಕೆ ಭೇಟಿ ಕೊಟ್ಟು ಆಗಿರುವ ಲೋಪಗಳನ್ನು ಸರಿಪಡಿಸಲು ಸೂಚನೆ ನೀಡಿದರು.
ಕೃಷಿ ಇಲಾಖೆಯ ನಾಗನಗೌಡ್ರು ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 32 ಸಾವಿರ ಹೆಕ್ಟೇರ್ ಜಮೀನು ಇದೆ. ಶೇ. 61 ರಷ್ಟು ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಮಳೆಗೆ ಬೇಕಾಗುವ ಗೊಬ್ಬರ, ಬಿತ್ತನೆ ಬೀಜಗಳು ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ವ್ಯವಸ್ಥೆಯನ್ನು ಇಲಾಖೆ ಮಾಡಿಕೊಂಡಿದೆ ಎಂದು ಹೇಳಿದರು.
ಬೆಸ್ಕಾಂ ಇಲಾಖೆಯ ರಮೇಶ್ ನಾಯ್ಕ್ ಮಾತನಾಡಿ, ಈ ಬಾರಿ ಲೋಡ್ ಶೆಡ್ಡಿಂಗ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕೆ ಪೂರಕವಾಗಿ ವ್ಯವಸ್ಥೆ ಮಾಡುವುದಕ್ಕೆ ಈಗಾಗಲೇ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿ ನಾಗರಾಜ್ ಮಾತನಾಡಿ, ಜಲಜೀವನ್ ಮಿಷನ್ ಅಡಿಯಲ್ಲಿ ಆರು ಗ್ರಾಮಗಳಲ್ಲಿ ಕಾಮಗಾರಿ ನಡೆದಿಲ್ಲ. ಆ ಗ್ರಾಮಸ್ಥರ ಬಳಿ ಹಲವಾರು ಬಾರಿ ಸಭೆ ಮಾಡಿದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಹೀಗಾಗಿ ಟೆಂಡರ್ ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಬಿಇಓ ಹನುಮಂತಪ್ಪ ಮಾತನಾಡಿ ಎಸ್.ಎಸ್. ಎಲ್.ಸಿ. ಪರೀಕ್ಷೆ ಫಲಿತಾಂಶ ಈ ಬಾರಿ ತಾಲ್ಲೂಕಿನಲ್ಲಿ 14 ಶಾಲೆಗಳಲ್ಲಿ ಶೇ 100 ಕ್ಕೆ 100 ರಷ್ಟು ಬಂದಿದೆ. ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಗಿದೆ. 59 ಕೊಠಡಿ ದುರಸ್ತಿ ಮಾಡಲಾಗಿದೆ. 23 ಹೊಸ ಕೊಠಡಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ರೇಖಾ ಮಾತನಾಡಿ, ತಾಲ್ಲೂಕಿನಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮದ 100 ಎಕರೆ ವಿಳೇದೆಲೆ ಬೆಳೆ ಹಾನಿಯಾಗಿದೆ. ಒಬ್ಬ ರೈತರಿಗೆ 22 ಸಾವಿರದ 500 ರೂಪಾಯಿಯಂತೆ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ಹೇಳಿದರು.
ಪಶು ಇಲಾಖೆ ಅಧಿಕಾರಿ ಸಿದ್ದೇಶ್ ಮಾತನಾಡಿ, ತಾಲ್ಲೂಕಿನಲ್ಲಿ 900 ಹಸುಗಳಿಗೆ ಚರ್ಮ ಗಂಟು ರೋಗ ಬಂದಿದ್ದು ಅದರಲ್ಲಿ 276 ಹಸುಗಳು ಮರಣವನ್ನು ಹೊಂದಿವೆ. 270 ಹಸುಗಳಿಗೆ ವಿಮಾ ಮೊತ್ತವನ್ನು ಕೊಡಲಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ತಾಪಂ ಇಓ ರವಿ, ಆರೋಗ್ಯ ಇಲಾಖೆಯ ಡಾ ಹನುಮಾನಾಯ್ಕ್, ಡಾ ಚಂದ್ರಮೋಹನ್, ಸಿಡಿಪಿಓ ಇಲಾಖೆ ರಾಘವೇಂದ್ರ, ತಾಪಂ ಇಲಾಖೆ ಲೆಕ್ಕಾಧಿಕಾರಿ ಲಿಂಗಾರಾಜ್, ಪಶು ಇಲಾಖೆ ಸಿದ್ದೇಶ್, ಅಬಕಾರಿ ಇಲಾಖೆ ಅಧಿಕಾರಿ ಶೀಲಾ, ಅರಣ್ಯ ಇಲಾಖೆ ಶ್ವೇತಾ, ಸಮಾಜ ಕಲ್ಯಾಣ ಇಲಾಖೆ ನಾಸಿರ್ ಉದ್ದೀನ್, ಇತರರು ಹಾಜರಿದ್ದರು.
ಹತ್ತು ನಿಮಿಷವಷ್ಟೇ ಇದ್ದ ಹರೀಶ್ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಗೆ ಶಾಸಕ ಬಿ. ಪಿ. ಹರೀಶ್ ತಡವಾಗಿ ಆಗಮಿಸಿದರು. ಹತ್ತು ನಿಮಿಷಗಳ ಕಾಲ ಸಭೆಯಲ್ಲಿದ್ದು, ತಮ್ಮ ಕಚೇರಿ ಬಳಿ ಸಾರ್ವಜನಿಕರು ಕಾಯುತ್ತಿದ್ದಾರೆ ಎಂದು ಸಭೆಯಿಂದ ಹೊರಗಡೆ ನಡೆದರು. ಮತ್ತೆ ಸಾಮಾನ್ಯ ಸಭೆಗೆ ವಾಪಸ್ಸಾಗಲಿಲ್ಲ.