ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗಳೂರು ಶಾಸಕ ಬಿ.ದೇವೇಂದ್ರಪ್ಪ
ಜಗಳೂರು, ಮೇ 29- ಪತ್ರಕರ್ತರು ಬಂಗಾರದ ಕತ್ತರಿಯಾಗದೆ, ಸಮಾಜ ಒಗ್ಗೂಡಿಸುವ ಸೂಜಿಯಾಗಲಿ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ, ನಂತರ ಪತ್ರಕರ್ತರ ಭವನ ಕಟ್ಟಡದ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ದಿಗೆ ಸದಾ ಸಿದ್ದನಾಗಿರುವೆ. ಕ್ಷೇತ್ರದ ಅಭಿವೃದ್ದಿಯೇ ನನ್ನ ಮಂತ್ರ. ತಮ್ಮ ಸಹಕಾರ, ಸಲಹೆ ಅಗತ್ಯ. ನಾನು ಜನ ಸೇವಕನಾಗಿ ಸೇವೆಗೈಯ್ಯುವೆ. ಅಲ್ಲದೆ ಶಾಶ್ವತ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುವೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ ಗೆದ್ದಲು ಕಟ್ಟಿದ ಹುತ್ತವಲ್ಲ
ಜಗಳೂರು, ಮೇ 29- ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಇತಿಹಾಸವಿದೆ. ಅದು ಗೆದ್ದಲು ಹುಳದ ಹುತ್ತವಲ್ಲ. ನಾನು ಸೇರಿಕೊಂಡ ಹಾವಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿಕೆಗೆ ತಿರುಗೇಟು ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 1885ರಲ್ಲಿ ಎ.ಓ.ಹ್ಯೂಮ್ ಅವರು ಹಾಗೂ ಅನೇಕ ಮಹಾನ್ ನಾಯಕರುಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪಕ್ಷ ಕಟ್ಟಿದರು. ಅದು ಇಂದು ಹೆಮ್ಮರವಾಗಿ ಬೆಳೆದು, ದೇಶದಲ್ಲಿ ತನ್ನದೇ ಆಡಳಿತದ ಛಾಪು ಮೂಡಿಸಿದೆ. ಪಕ್ಷದಿಂದ ಆಯ್ಕೆಯಾಗಿ ತಮ್ಮ ಸ್ವಾರ್ಥಕ್ಕಾಗಿ ಪಕ್ಷ ತೊರೆದ ಯಾರೊಬ್ಬರೂ ಪಕ್ಷ ದ್ರೋಹ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಅಂದು ಹಾವಾಗಿದ್ದರೇ? : 2011ರಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವೈ.ದೇವೇಂದ್ರಪ್ಪ ಅರಸಿಕೆರೆ ಅವರು ನನ್ನ ಹೆಸರಿನವರು. ಅಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ನಂತರ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ, ಶಾಸಕರಾಗಿ ಆಯ್ಕೆಯಾದರು. ಹಾಗಾದರೆ ಅಂದು ಅವರೂ ಕೂಡ ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವಾಗಿದ್ದರೆ? ಎಂದು ಪ್ರಶ್ನಿಸಿದರು.
ಶಿಷ್ಟಾಚಾರದ ಹೆಸರಿನಲ್ಲಿ ಮಾಜಿ ಶಾಸಕರುಗಳಾದ ಗುರುಸಿದ್ದನಗೌಡ್ರು, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ಸೇರಿದಂತೆ ಯಾರೊಬ್ಬರ ಹೆಸರನ್ನೂ ತಿರಸ್ಕರಿಸುವುದಿಲ್ಲ. ಎಲ್ಲರ ಸಲಹೆಗಳನ್ನು ಸ್ವೀಕರಿಸುವೆ. ಕ್ಷೇತ್ರಕ್ಕೆ ಅವರದ್ದೇ ಆದ ಕೊಡುಗೆ ಇದೆ ಎಂದು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಸಿ.ತಿಪ್ಪೇಸ್ವಾಮಿ, ಮಹಮದ್ ಗೌಸ್, ಕೊರಟಕೆರೆ ಗುರುಸಿದ್ದನಗೌಡ, ಗಿರೀಶ್, ತಿಮ್ಮಣ್ಣ ಮುಂತಾದವರು ಇದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ. ಈ ಅವಧಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿರುವುದು ನನ್ನ ಭಾಗ್ಯ. ಇದರಿಂದ ಕ್ಷೇತ್ರದ ಅಭಿವೃದ್ದಿ ಪರ್ವಕ್ಕೆ ನಾಂದಿಯಾಗಲಿದೆ ಎಂದು ಹೇಳಿದರು.
ಪತ್ರಕರ್ತರ ಮನೆಗೆ ಕಳಿಸುವೆ: ಪಟ್ಟಣದಲ್ಲಿ ಪತ್ರಕರ್ತರ ಭವನದ ಕಟ್ಟಡ ನಿರ್ಮಾಣ ಅಪೂರ್ಣಗೊಂಡಿದೆ. ನಾನು ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿ ಶೀಘ್ರ ಪತ್ರಕರ್ತರ ಭವನ ಪೂರ್ಣ ಗೊಳಿಸಿ ನಿಮ್ಮ ಮನೆಗೆ ಅಂದರೆ ಭವನಕ್ಕೆ ಕಳುಹಿಸುವೆ ಎಂದು ಶಾಸಕರು ಭರವಸೆ ವ್ಯಕ್ತಪಡಿಸಿದರು.
ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಅಣಬೂರು ಕೊಟ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ.ಶ್ರೀನಿವಾಸ್, ಜಿಲ್ಲಾ ಸಮಿತಿ ಸದಸ್ಯ ಬಿ.ಪಿ.ಸುಭಾನ್, ತಾಲ್ಲೂಕು ಅಧ್ಯಕ್ಷ ಚಿದಾನಂದ, ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.