ಮಲೇಬೆನ್ನೂರು, ಮೇ 29 – ದೇವರ ಬೆಳಕೆರೆ ಪಿಕಪ್ ಜಲಾಶಯಕ್ಕೆ ಮತ್ತೆ ಜಲಸಸ್ಯ ರಾಶಿ ಹರಿದು ಬರುತ್ತಿದ್ದು, ಜಲಾಶಯದ ಹಿನ್ನೀರು ಹೆಚ್ಚಾಗಿ ಸಂಕ್ಲಿಪೀರ ಮತ್ತಿತರೆ ಗ್ರಾಮಗಳ ರೈತರ ಬೆಳೆಗಳು ನೀರಿನಲ್ಲಿ ಮುಳುಗುವ ಭೀತಿ ಎದುರಾಗಿದೆ. ಜಲಾಶಯದ ಕ್ರೆಸ್ಟ್‌ಗೇಟ್‌ಗಳಿಗೆ ಅಡ್ಡಲಾಗಿ ಜಲಸಸ್ಯ ರಾಶಿ ಸಿಲುಕಿಹಾಕಿಕೊಂಡಿರುವುದಕ್ಕೆ ಗೇಟ್ ತೆರವು ಕಾಮಗಾರಿ ವಿಳಂಬ ಆಗಿರುವುದೇ ಪ್ರಮುಖ ಕಾರಣ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಪ್ರವಾಹದಿಂದ ಜಲಸಸ್ಯ ಬಹಳಷ್ಟು ಬಂದಿದ್ದರಿಂದ ಹೆಚ್ಚುವರಿ ನೀರು ಹೋಗದೆ ಜಲಾಶಯದ ಹಿನ್ನೀರು ನುಗ್ಗಿ ತೋಟ, ಭತ್ತದ ಗದ್ದೆಗಳು ಮತ್ತು ರಸ್ತೆ ಮುಳುಗಿದಾಗ ಭೇಟಿ ನೀಡಿದ್ದ ಅಧಿಕಾರಿಗಳು, ಎಂಜಿನಿಯರ್‌ಗಳು ನೀಡಿದ್ದ ಭರವಸೆ ಇದುವರೆಗೂ ಈಡೇರಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೇಟ್ ಬದಲಿಸಲು ಹಣ ಮಂಜೂರಾಗಿತ್ತು. ಈವರೆಗೂ ಟೆಂಡರ್ ಪ್ರಕ್ರಿಯೆ ಎಲ್ಲಿಗೆ ಬಂದಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಎಸ್ಇ ಒಮ್ಮೆ ಭೇಟಿ ನೀಡಿದ್ದು ಬಿಟ್ಟರೆ ಮತ್ಯಾರು ಇತ್ತ ಸುಳಿದಿಲ್ಲ.
ಯೋಜನೆಗೆ ಹಣ ಮಂಜೂರಾಗಿದೆ ಆದರೆ ಕೆಲಸ ಪ್ರಾರಂಭವಾಗಿಲ್ಲ. ಹೊಸದಾಗಿ ಗೇಟ್ ಅಳವಡಿಸುವ ಬದಲು ಮೊದಲು ಜಲಸಸ್ಯ ತಡೆದು ನಿಲ್ಲುವುದು ತಪ್ಪಿಸಲು ಹಾಲಿ ಇರುವ ಗೇಟ್ ತೆರವು ಮಾಡಿಕೊಟ್ಟರೆ ಸಾಕು ಎನ್ನುತ್ತಾರೆ ಗುಳದಹಳ್ಳಿ, ಸಂಕ್ಲೀಪುರದ ರೈತರು.
ಜಲಸಸ್ಯ ತೆರವು ಮಾಡಲು ರಸ್ತೆ ಬದಿಯ ಮೆಟಲ್ ಗಾರ್ಡ್ ಕಿತ್ತು ಹಾಕಿ ಅರೆಬರೆ ಕಾಮಗಾರಿ ಮಾಡಿದ ಕಾರಣ ಅಣೆಕಟ್ಟು ಮುಖ್ಯ ಭಾಗ ಅಪಾಯಕಾರಿ ವಲಯವಾಗಿದೆ. ಸೇತುವೆ ಶಿಥಿಲವಾಗಿದೆ, ಕೆಂಪು ಪಟ್ಟಿಯನ್ನು ಕೂಡ ಕಟ್ಟಿಲ್ಲ ಎಂದು ದೇವರಬೆಳೆಕೆರೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಮುಗಿದಿದೆ. ಹೊಸ ಸರ್ಕಾರ ರಚನೆ ಆಗಿದೆ. ಜಿಲ್ಲೆಗೆ ಸಚಿವರು ನೇಮಕಗೊಂಡಿದ್ದಾರೆ. ಅಣೆಕಟ್ಟೆಯಲ್ಲಿ ಮುಳಗಡೆಯಾದ ಬೂದಿಹಾಳು ಗ್ರಾಮದವರೇ ಆದ ಬಿ.ಪಿ. ಹರೀಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗೇಟ್ ಬದಲಿಸಲು ಅಥವಾ ದುರಸ್ತಿಗೆ ಇದು ಸಕಾಲವಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ತುರ್ತಾಗಿ ಗಮನ ಹರಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು.
ಈಗಲೂ ಕಾಲಹರಣ ಮಾಡಿದರೆ ಮಲೇಬೆನ್ನೂರಿನ ನೀರಾವರಿ ನಿಗಮದ ಎದುರು ಧರಣಿ, ಪ್ರತಿಭಟನೆ, ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆಯನ್ನು ರೈತ ಮುಖಂಡ ಸಂಕ್ಲೀಪುರದ ನಾಗೇಂದ್ರಪ್ಪ ನೀಡಿ ದ್ದಾರೆ. ಮೈಸೂರಿನ ತಜ್ಞರ ತಂಡ ಜಲ ಸಸ್ಯದ ಸಮಸ್ಯೆ, ಹಿನ್ನೀರು ಜಮೀನಿಗೆ ನುಗ್ಗುವುದನ್ನು ತಪ್ಪಿಸಲು ಗೇಟ್ ತೆರವು ಮಾಡುವ ಕುರಿತು ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ವರದಿ ಹಿರಿಯ ಎಂಜಿನಿಯರುಗಳ ಮುಂದಿದೆ. ಹೊಸ ಆಧುನಿಕ ಗೇಟ್ ಅಳವಡಿಸಲು ಅಣೆಕಟ್ಟು ಸುರಕ್ಷತಾ ಸಮಿತಿ ಭೇಟಿ ನೀಡಿ ವರದಿ ನೀಡಬೇಕಿದೆ ಎಂದು ಎಇಇ ಚಂದ್ರಕಾಂತ್ ಮಾಹಿತಿ ನೀಡಿದರು.