ಹೆಣ್ಣು ಸಂಸಾರದ ಕಣ್ಣು : ರುದ್ರಮುನಿ ಹಿರೇಮಠ

ಹೆಣ್ಣು ಸಂಸಾರದ ಕಣ್ಣು : ರುದ್ರಮುನಿ ಹಿರೇಮಠ

ಹೊಸ ಬೆಳವನೂರಿನಲ್ಲಿ ತಾಲ್ಲೂಕು ಕ.ಸಾ.ಪ.ದಿಂದ ದತ್ತಿ ಉಪನ್ಯಾಸ

ದಾವಣಗೆರೆ, ಮೇ 26 – ತಾಲ್ಲೂಕಿನ ಹೊಸ ಬೆಳವನೂರಿನಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಬೆಳವನೂರಿನ ಸ್ತ್ರೀಶಕ್ತಿ ಸಂಘಗಳು ಹಾಗೂ ದಾವಣಗೆರೆಯ ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗದಲ್ಲಿ ಶಾಲಾ-ಕಾಲೇಜುಗಳ ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ಹೊಸ ಬೆಳವನೂರಿನ ಸರ್ಕಾರಿ ಕುವೆಂಪು ಮಾದರಿ ಶಾಲೆ ಆವರಣದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಅಶು ಟಿ.ಎ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಮಹಾಂತೇಶ್ ದೀಪ ಬೆಳಗಿಸಿ ನೆರವೇರಿಸಿದರು.

ತಾಲ್ಲೂಕು ಕ.ಸಾಪ. ನಿರ್ದೇಶಕ ಎಂ. ಷಡಕ್ಷ ರಪ್ಪ ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ದಾವಣಗೆರೆಯ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರುದ್ರಮುನಿ ಹಿರೇಮಠ ಅವರು ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ವಿಷಯ ಆಧರಿಸಿ ಉಪನ್ಯಾಸ ನೀಡಿ, ಕುಟುಂಬ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಸಮಾಜ ಚೆನ್ನಾಗಿದ್ದರೆ ನಮ್ಮ ದೇಶ ಚೆನ್ನಾಗಿರುತ್ತದೆ. ಕುಟುಂಬ ವ್ಯವಸ್ಥೆ ದುರ್ಬಲವಾಗದಂತೆ ತಾಯಂದಿರು ಇಡೀ ಮನೆತನದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದರಲ್ಲಿ ಹಿರಿಯ ನಾಗರಿಕರನ್ನು ಆರೈಕೆ ಮಾಡುವುದು ಸೇರಿದಂತೆ ತಮ್ಮ ಕುಟುಂಬದ ಎಲ್ಲಾ ಸದಸ್ಯರನ್ನು ಉತ್ತಮವಾದ ಸ್ಥಿತಿಯಲ್ಲಿಡಲು ಸಮಾಜದಲ್ಲಿ ತಮ್ಮ ಮನೆತನದ ಮತ್ತು ಕುಟುಂಬದ ಸದಸ್ಯರನ್ನು ಗೌರವದಿಂದ ಬದುಕಿ ಬಾಳುವಂತೆ ನೋಡಿಕೊಳ್ಳುವುದರಿಂದ `ಹೆಣ್ಣು ಸಂಸಾರದ ಕಣ್ಣು’ ಎಂದೇ ಭಾವಿಸಲಾಗುತ್ತದೆ. 

ಕವಿ ಸರ್ವಜ್ಞನ ಮಾತಿನಂತೆ `ಹೆಣ್ಣಿನಿಂದಲೇ ಇಹವು ಹೆಣ್ಣಿನಿಂದಲೇ ಪರವು’ ಎಂಬ ಮಾತು ಅಕ್ಷರ ಸಹ ಸತ್ಯವಾಗಿದೆ. ತಾಯಂದಿರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಪ್ರಯತ್ನಿಸುತ್ತಾರೆ. ತಮ್ಮ ಜೀವವನ್ನೇ ಮಕ್ಕಳಿಗಾಗಿ ಸವೆಸುವ ತಾಯಂದಿರು ಮಕ್ಕಳು ಸಮಾಜಮುಖಿಯಾಗಿ ಬದುಕಿ ಒಳ್ಳೆಯ ಹೆಸರನ್ನು ಪಡೆದು ಕೀರ್ತಿವಂತರಾಗಬೇಕೆಂದು ಬಯಸುತ್ತಾರೆ. 

ಸುಸ್ಥಿರ ಅಭಿವೃದ್ಧಿ, ಗುಣಮಟ್ಟದ ಜೀವನ ನಿರ್ವಹಣೆಗಾಗಿ ತಾಯಂದಿರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಭ್ರೂಣಾವಸ್ಥೆಯಲ್ಲಿರುವ ಮಗು ನವಮಾಸಗಳು ತುಂಬಿ ಹೆರಿಗೆ ಆಗುವವರೆಗೂ ಸಂಕಟ, ನೋವನ್ನು ಅನುಭವಿಸಿ ತಾಯಿ ಆಗುತ್ತಾಳೆ. ಮಗುವಿಗೆ ಅವಳೇ ಮೊದಲ ಶಿಕ್ಷಕಿ, ಗುರು ಆಗಿರುತ್ತಾಳೆ. ತನ್ನತನ ಮರೆತು ಮಗುವಿನೊಂದಿಗೆ ಮಗು ಆಗುತ್ತಾಳೆ. ಮಗುವಿನ ಲಾಲನೆ-ಪಾಲನೆ ಯೊಂದಿಗೆ ಮನೆಯ ನಿರ್ವಹಣೆಯಲ್ಲಿ ಶಿಸ್ತು, ದಕ್ಷತೆ, ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿ, ಎಲ್ಲರ ಸುಖ ಸಂತೋಷಕ್ಕೆ ಕಾರಣಳಾಗು ತ್ತಾಳೆ. ಹಿರಿಯ, ಕಿರಿಯರ ಅಗತ್ಯತೆ ಯನ್ನು ನೋಡಿ ಕೊಂಡು ಕುಟುಂಬಕ್ಕೆ ಧನಾತ್ಮಕ ವಾದ ಕೊಡುಗೆ ನೀಡುತ್ತಾಳೆ. ಪುರುಷನಿಗೆ ಸಂಗಾತಿಯಾಗಿ ನೈತಿಕತೆ ಯಿಂದ ಬದುಕಿ, ಮನೆಯಲ್ಲಿ ಶಾಂತಿ, ನೆಮ್ಮದಿ ತರುತ್ತಾಳೆ. ಒಟ್ಟಿನಲ್ಲಿ ಹೆಂಡತಿಯಾಗಿ, ಮಕ್ಕಳ ಸಾಮಾಜಿಕ, ಸಾಂಸ್ಕೃತಿಕ, ದೈಹಿಕ, ಮಾನಸಿಕ, ಸಂವೇಗಾತ್ಮಕ, ಶೈಕ್ಷಣಿಕ ಬೆಳವಣಿಗೆಗೆ ತನ್ನ ಸರ್ವಸ್ವ ವನ್ನು ತ್ಯಾಗ ಮಾಡುತ್ತಾಳೆ ಎಂದು ಎಳೆಎಳೆಯಾಗಿ ತಿಳಿಸಿ ಎಲ್ಲರ ಗಮನ ಸೆಳೆದರು.

ಹಿರಿಯ ನಾಗರಿಕರ ಸಹಾಯವಾಣಿಯ ಸಂಯೋಜಕ ನವೀನ್ ಕುಮಾರ್ ಮಾತನಾಡಿದರು.  ಮುಖ್ಯ ಅಥಿತಿಗಳಾಗಿ ಪಿಡಿಓ ಕು|| ರೇವತಿ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷೆ ಸುಮತಿ ಜಯಪ್ಪ  ಪ್ರಾಸ್ತಾವಿಕ ಭಾಷಣ ಮಾಡಿದರು. ಕಸಾಪ ನಿರ್ದೇಶಕಿ ಕಲ್ಪನಾ ಸ್ವಾಗತಿಸಿದರು.

error: Content is protected !!