ದೇಶದಲ್ಲಿ ನರ್ಸ್‌ಗಳ ಸಂಖ್ಯೆ ಕಡಿಮೆ

ದೇಶದಲ್ಲಿ ನರ್ಸ್‌ಗಳ ಸಂಖ್ಯೆ ಕಡಿಮೆ

ಅನುಭವಿ ನರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ : ಪ್ರಭಾ ಮಲ್ಲಿಕಾರ್ಜುನ್‌

ದಾವಣಗೆರೆ ಮೇ 26 – ವೈದ್ಯಕೀಯ ವಲಯದಲ್ಲಿ ನರ್ಸ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸೂಕ್ತ ಕೌಶಲ್ಯ ಹಾಗೂ ಅನುಭವ ಪಡೆದುಕೊಳ್ಳುವ ಮೂಲಕ ನರ್ಸಿಂಗ್ ವಿದ್ಯಾರ್ಥಿಗಳು ಉತ್ತಮ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ ವತಿಯಿಂದ ಎಸ್.ಎಸ್.ಐ.ಎಂ.ಎಸ್. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದೀಪ ಬೆಳಗುವ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿಶ್ವ ಆರೋಗ್ಯ ಸಂಘಟನೆಯ ಮಾನದಂಡಗಳ ಪ್ರಕಾರ ಪ್ರತಿ ಸಾವಿರ ಜನರಿಗೆ ಮೂರು ನರ್ಸ್‌ಗಳ ಅಗತ್ಯವಿದೆ. ಆದರೆ, ಭಾರತದಲ್ಲಿ ಸಾವಿರಕ್ಕೆ 1.7ರಷ್ಟು ನರ್ಸ್‌ಗಳು ಮಾತ್ರ ಇದ್ದಾರೆ ಎಂದವರು ಹೇಳಿದರು.

ಹೀಗಾಗಿ ಭಾರತವಷ್ಟೇ ಅಲ್ಲದೇ, ವಿದೇಶಗಳಲ್ಲೂ ಕುಶಲ ಹಾಗೂ ಅನುಭವಿ ನರ್ಸ್‌ಗಳಿಗೆ ಅಪಾರ ಬೇಡಿಕೆ ಇದೆ. ನರ್ಸಿಂಗ್ ವಿದ್ಯಾರ್ಥಿಗಳು ಕುಶಲಿಗಳಾಗಬೇಕು. ಆಸ್ಪತ್ರೆಗಳಿಂದ ಹಿಡಿದು ಪುನರ್ವಸತಿ ಕೇಂದ್ರಗಳವರೆಗೆ ಎಲ್ಲೆಡೆ ಕಾರ್ಯನಿರ್ವಹಿಸಲು ಅಗತ್ಯ ತರಬೇತಿ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ರೋಗಿಗಳ ಕಾಳಜಿ ಹಾಗೂ ಚಿಕಿತ್ಸೆಯ ಜೊತೆಗೆ ಸೇವೆ, ಶಿಸ್ತು, ಸಮಯ ಪಾಲನೆ, ವೃತ್ತಿಯಲ್ಲಿ ನೈತಿಕತೆಯಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಡೆದಿರುವ ಉತ್ತಮ ಮೌಲ್ಯಗಳನ್ನು ವೃತ್ತಿಗೂ ತರಬೇಕು ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನರ್ಸಿಂಗ್ ವೃತ್ತಿಯಲ್ಲಿ ಕಲಿಕೆ ನಿರಂತರವಾಗಿರುತ್ತದೆ. ಹೀಗಾಗಿ ಇಂದು ಸ್ವೀಕರಿಸುವ ಪ್ರತಿಜ್ಞಾ ವಿಧಿಯನ್ನು ಜೀವನವಿಡೀ ನೆನಪಿಟ್ಟುಕೊಂಡು ಪಾಲಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯರಾದ ಡಾ. ಎಂ. ಸಿದ್ದೇಶ್, ನರ್ಸ್‌ಗಳು ರೋಗಿಯ ಖಾಸಗಿತನ ಹಕ್ಕು, ಗೌರವ, ಗೌಪ್ಯತೆಗಳ ಬಗ್ಗೆ ಕಾಳಜಿ ವಹಿಸಬೇಕು. ಹೊಸ ವಿಚಾರಗಳನ್ನು ಕಲಿಯುವುದಷ್ಟೇ ಅಲ್ಲದೇ, ಸಹೋದ್ಯೋಗಿಗಳ ಜೊತೆ ಹಂಚಿಕೊಳ್ಳಬೇಕು ಎಂದು ತಿಳಿಸಿದರು.

ವೇದಿಕೆಯ ಮೇಲೆ ಎಸ್.ಎಸ್.ಐ.ಎಂ.ಎಸ್.ನ ವೈದ್ಯಕೀಯ ನಿರ್ದೇಶಕ ಡಾ. ಅರುಣ್‌ಕುಮಾರ್ ಅಜ್ಜಪ್ಪ, ಬಾಪೂಜಿ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಪ್ರಭಾ ಕಲಸ್, ಎಸ್.ಎಸ್. ನರ್ಸಿಂಗ್ ಸೈನ್ಸಸ್‌ನ ಪ್ರಾಂಶುಪಾಲ ವಿ.ಬಿ. ವೀರೇಶ್ ಉಪಸ್ಥಿತರಿದ್ದರು.

ವರ್ಶಿಣಿ ಪ್ರಾರ್ಥಿಸಿದರೆ, ಎಂ. ಮಮತಾ ಸ್ವಾಗತಿಸಿದರು.

error: Content is protected !!