ಜಗಳೂರು, ಮೇ 22- ತಾಲ್ಲೂಕಿನಾದ್ಯಂತ ನಿನ್ನೆ ಸಂಜೆ, ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವ್ಯಾಪಕ ಪ್ರಮಾಣದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.
ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ನೇತೃತ್ವದ ಅಧಿಕಾರಿಗಳು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಅಂದಾಜು 20 ಲಕ್ಷ ರೂ ಗಿಂತ ಹೆಚ್ಚು ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಕಸಬಾ ಹೋಬಳಿಯಲ್ಲಿ 9 ಮನೆಗಳಿಗೆ ಹಾನಿಯಾಗಿದೆ. ಎರಡು ಹೆಕ್ಟೇರ್ ಅಡಿಕೆ ಬೆಳೆ ನಾಶವಾಗಿದೆ. ಬಿಳಿಚೋಡು ಹೋಬಳಿಯಲ್ಲಿ ಬಾಳೆ 2 ಹೆಕ್ಟೇರ್, ಪಪ್ಪಾಯ 1 ಹೆಕ್ಟೇರ್, 2 ಮನೆಗಳಿಗೆ ಹಾನಿಯಾಗಿದೆ. ಸೊಕ್ಕೆ ಹೋಬಳಿ ಯಲ್ಲಿ ಅಡಿಕೆ 2 ಹೆಕ್ಟೇರ್, ಬಾಳೆ 5 ಹೆಕ್ಟೇರ್, ಪಪ್ಪಾಯ ಹತ್ತು ಹೆಕ್ಟೇರ್ ನಾಶವಾಗಿದೆ.
ಸಿಡಿಲು ಬಡಿದು ಎತ್ತು ಸಾವು; ತಾಲ್ಲೂಕಿನ ಚಿಕ್ಕ ಉಜ್ಜಿನಿ ಗ್ರಾಮದ ಚಂದ್ರಶೇಖರ್ ಸ್ವಾಮಿ ಎಂಬ ರೈತನ ಎತ್ತು ಸಿಡಿಲು ಬಡಿದು ಮೃತ ಪಟ್ಟಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಮಾಹಿತಿ ನೀಡಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳ ಭೇಟಿ: ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ವಿಶ್ವನಾಥ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ಮೂರ್ತಿ, ಸಹಾಯಕ ತೋಟಗಾರಿಕೆ ಅಧಿಕಾರಿ ವೆಂಕಟೇಶ್ ನಾಯ್ಕ್ ನೇತೃತ್ವದ ತಂಡ ತಾಲ್ಲೂಕಿನ ಮಠದ ದ್ಯಾಮೇನಹಳ್ಳಿ ಗ್ರಾಮದ ಎಂ.ಪಿ.ತಿಪ್ಪೇಸ್ವಾಮಿ ಸೇರಿದಂತೆ, ನಷ್ಟ ಅನುಭವಿಸುತ್ತಿರುವ ರೈತರ ತೋಟಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ರೈತ ಎಂ.ಪಿ.ತಿಪ್ಪೇಸ್ವಾಮಿ ಮಳೆಯಿಂದ ಆದ ನಷ್ಟದ ಬಗ್ಗೆ ವಿವರಿಸಿದರು. ಕಷ್ಟಪಟ್ಟು ಬೆಳೆದ ಬಾಳೆ ಬಿರುಗಾಳಿಗೆ ತರಗೆಲೆಯಂತೆ ನೆಲಕ್ಕೆ ಅಪ್ಪಳಿಸಿದೆ. ಅಕಾಲಿಕ ಮಳೆಯಿಂದ ಆದ ನಷ್ಟ ಹೇಳತೀರದಾಗಿದೆ. ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಸೊಕ್ಕೆ, ಗುರುಸಿದ್ದಾಪುರ, ಮಲೆ ಮಾಚಿಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಆದ ನಷ್ಟದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದರು.