ಪ್ರಮಾಣ ವಚನದ ವೇಳೆ ವ್ಯಕ್ತಿ, ದೈವ ನಿಷ್ಠೆ ಪ್ರದರ್ಶನ

ಪ್ರಮಾಣ ವಚನದ ವೇಳೆ ವ್ಯಕ್ತಿ, ದೈವ ನಿಷ್ಠೆ ಪ್ರದರ್ಶನ

ಪ್ರಮಾಣ ವಚನದ ವೇಳೆ ವ್ಯಕ್ತಿ, ದೈವ ನಿಷ್ಠೆ ಪ್ರದರ್ಶನ - Janathavani

ದಾವಣಗೆರೆ ಜಿಲ್ಲೆಯ ನೂತನ ಶಾಸಕರುಗಳಾದ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಎಸ್. ಬಸವಂತಪ್ಪ, ದೇವೇಂದ್ರಪ್ಪ, ಶಿವಗಂಗಾ ಬಸವರಾಜ್, ಬಿ.ಪಿ. ಹರೀಶ್ ಪ್ರಮಾಣ ವಚನ ಸ್ವೀಕರಿಸಿದರು.

ಕಲ್ಲೇಶ್ವರ ದೇವರ ಹೆಸರಿನಲ್ಲಿ ಎಸ್ಸೆಸ್, ‘ಆರಾಧ್ಯ ದೈವ ಡಿ.ಕೆ.ಶಿವಕುಮಾರ್’ ಹೆಸರಿನಲ್ಲಿ ಶಿವಗಂಗಾ ಪ್ರಮಾಣ ವಚನ

ಬೆಂಗಳೂರು, ಮೇ 22- ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ನೂತನ ಶಾಸಕರು ವ್ಯಕ್ತಿ ಹಾಗೂ ಕುಲದೇವರಿಂದ ಹಿಡಿದು ಗೋಮಾತೆಯವರೆಗೆ ತಮ್ಮ ನಿಷ್ಠೆ ಪ್ರದರ್ಶಿಸಿದ್ದಾರೆ.

ಪ್ರಮಾಣ ವಚನದ ವೇಳೆ ದೇವರು, ಇಲ್ಲವೇ ಸಂವಿಧಾನದ ಹೆಸರಿನಲ್ಲಿ ಮಾತ್ರ ಪ್ರಮಾಣ ವಚನ ಸ್ವೀಕರಿಸುವಂತೆ ಹಂಗಾಮಿ ವಿಧಾನಸಭಾಧ್ಯಕ್ಷ ಆರ್.ವಿ. ದೇಶಪಾಂಡೆ ತಿಳಿಸಿದ್ದರು.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಪ್ರಮಾಣ ವಚನ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನಂತರ ಶಾಸಕರು ತಮಗೆ ಇಷ್ಟವಾದ ದೇವರು ಹಾಗೂ ನಾಯಕರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು.

ಹಸಿರು ಶಾಲು ಧರಿಸಿದ್ದ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು, ಭಗವಂತ ಹಾಗೂ ನನ್ನ ಆರಾಧ್ಯ ದೈವ ಡಿ.ಕೆ. ಶಿವಕುಮಾರ್ ಸಾಹೇಬರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳುವ ಮೂಲಕ ಸದನದ ಹುಬ್ಬೇರುವಂತೆ ಮಾಡಿದ್ದರು.

ಸದನದ ಅತ್ಯಂತ ಹಿರಿಯ ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪ ಅವರು ಕಲ್ಲೇಶ್ವರ ಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಶಾಸಕ ಹೆಚ್.ಡಿ. ರಂಗನಾಥ್ ಅವರೂ ಸಹ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದರು. ಆಗ ಮಧ್ಯ ಪ್ರದೇಶಿಸಿದ ಸದನದ ಕಾರ್ಯದರ್ಶಿ, ಭಗವಂತ ಇಲ್ಲವೇ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸದೇ ಇದ್ದರೆ ಅಸಿಂಧುವಾಗುತ್ತದೆ ಎಂದು ಹೇಳಿದರು. ನಂತರ ರಂಗನಾಥ್ ಅವರು ಭಗವಂತ ಹಾಗೂ ರೈತನ ಹೆಸರಿನಲ್ಲಿ ಪ್ರಮಾಣ ವಚನ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಮತದಾರರು ಹಾಗೂ ಮನೆ ದೇವರಾದ ಸತ್ಯಸಾರಾಮಣಿ ಮತ್ತು ಸತ್ಯಪದನಾದಿ ಅಮ್ಮ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದರು. ಇದಕ್ಕೆ ಸದನದಲ್ಲಿ ಕೆಲವರು ಆಕ್ಷೇಪಿಸಿದರು. ಆಗ ಮುರುಳ್ಯ ಬೆಂಬಲಕ್ಕೆ ಬಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಪದ್ಧತಿ ಮೊದಲು ಆರಂಭಿಸಿದ್ದು ಯಾರು? ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಪ್ರಸ್ತಾಪಿಸಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದುತ್ವ ಹಾಗೂ ಗೋಮಾತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

ಕಾಂಗ್ರೆಸ್‌ನ ಶಿವಾನಂದ ಪಾಟೀಲ ಅಣ್ಣ ಬಸವಣ್ಣ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜಿ.ಟಿ. ದೇವೇಗೌಡ ಅವರು ಚಾಮುಂಡೇಶ್ವರಿ ದೇವಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿ ಜನತೆ ಮತ್ತು ಆಂಜನಾದ್ರಿ ಹನುಮಂತನ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು. ಕಾಂಗ್ರೆಸ್‌ ಖಲೀಜ್ ಫಾತೀಮಾ ಅಲ್ಲಾ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣ ಸ್ವೀಕರಿಸಿದರು.

ಇದಕ್ಕೂ ಮುಂಚೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿ ಗಾಣಿಗ ಸೋಮವಾರ ಎತ್ತಿನ ಬಂಡಿಯಲ್ಲಿ ಬೆಂಗಳೂರಿನ ವಿಧಾನಸೌಧಕ್ಕೆ ಆಗಮಿಸುವ ಮೂಲಕ ಗಮನ ಸೆಳೆದರು.

error: Content is protected !!