ನ್ಯಾಯಾಧೀಶರಿಗೆ ಜಿಲ್ಲಾ ವಕೀಲರ ಸಂಘದಿಂದ ಬೀಳ್ಕೊಡುಗೆ

ನ್ಯಾಯಾಧೀಶರಿಗೆ ಜಿಲ್ಲಾ ವಕೀಲರ ಸಂಘದಿಂದ ಬೀಳ್ಕೊಡುಗೆ

ದಾವಣಗೆರೆ, ಮೇ 11- ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವರ್ಗಾವಣೆಗೊಂಡ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರೂ, ಸಿಜಿಎಂನ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಸದ್ಗುರು ಸದರಜೋಶಿ , ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ ನಾಯಕ್ ಹಾಗೂ ವಯೋ ನಿವೃತ್ತಿಯಾದ ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಕೆ. ಕೆಂಚಪ್ಪ ಅವರನ್ನು ಜಿಲ್ಲಾ ವಕೀಲರ ಸಂಘದ ವತಿಯಿಂದ ಬೀಳ್ಕೊಡಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರಾದ ಪ್ರವೀಣ ನಾಯಕ್ ಮಾತನಾಡಿ, ಕರ್ನಾಟಕದ ಭೂಪಟವನ್ನು ಗಮನಿಸಿದಾಗ ಭೌಗೋಳಿಕವಾಗಿ ರಾಜ್ಯದ ಕೇಂದ್ರ ಬಿಂದು ದಾವಣಗೆರೆ ರಾಜಧಾನಿಯಾಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊರೊನಾ ಸಂದರ್ಭದಲ್ಲಿ ಒಂದು ವರ್ಷ ಕಾಲ ವಕೀಲರು ಮತ್ತು ನ್ಯಾಯಾಧೀಶರು ಪರಸ್ಪರ ನೋಡಲು, ಮಾತನಾಡಲು ಆಗದಂತಹ ವಾತಾವರಣ ನಿರ್ಮಾಣವಾಗಿತ್ತು. ನಂತರದ ದಿನಗಳಲ್ಲಿ ಆತ್ಮೀಯತೆ, ಪ್ರೀತಿ, ವಿಶ್ವಾಸದಿಂದ ವಕೀಲರೆಲ್ಲರೂ ಒಂದೇ ಕುಟುಂಬದ ಸದಸ್ಯರ ರೀತಿಯಲ್ಲಿ ನಡೆದುಕೊಂಡು ಬಂದಿದ್ದೇವೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿದ್ದ ಕಾರಣ ನ್ಯಾಯಾಲಯದಲ್ಲಿ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೂ ನನ್ನ ಪ್ರಾಮಾಣಿಕ ಸೇವೆಗೆ ತಾವು ತೋರಿದ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.

ಹಿರಿಯ ಸಿವಿಲ್ ಹಾಗೂ ಸಿಜೆಎಂ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಎಸ್. ಸದರಜೋಶಿ ಮಾತನಾಡಿ,
ರಾಜ್ಯದ ಯಾವುದೇ ಜಿಲ್ಲೆಗೆ ಹೋಗಲಿ ದಾವಣಗೆರೆಯನ್ನು ಹಾಗೂ ಇಲ್ಲಿನ ವಕೀಲರ ಸಮೂಹವನ್ನು ಮರೆಯಲು ಸಾಧ್ಯವಿಲ್ಲ. ನ್ಯಾಯಾಂಗ ಇಲಾಖೆಯಲ್ಲಿ ಉತ್ತಮ ಅನುಭವಗಳಾಗಿದ್ದು, ಸೇವೆ ಮಾಡಲು ಅವಕಾಶ ನೀಡಿರುವುದನ್ನು ಸ್ಮರಿಸಿದರು.

ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಟಿ.ಹೆಚ್. ಸಿದ್ಧಪ್ಪ ಲೋಕಿಕೆರೆ, ಡಿ.ಪಿ. ಬಸವರಾಜ್, ಆಂಜನೇಯ ಗುರೂಜಿ,  ರಿಜ್ವಿಖಾನ್, ಮಲ್ಲಿಕಾರ್ಜುನಪ್ಪ ಗುಮ್ಮನೂರು, ಎಸ್. ಪರಮೇಶ್ ಆವರಗೆರೆ, ಲಕ್ಕಪ್ಪ ಮತ್ತಿತರರು ವರ್ಗಾವಣೆಗೊಂಡ ನ್ಯಾಯಾಧೀಶರು ಮತ್ತು ನಿವೃತ್ತಿಯಾದ ಸರ್ಕಾರಿ ಅಭಿಯೋಜಕರ ಸೇವೆಯನ್ನು ಕೊಂಡಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್ ಕುಮಾರ್, ಮಲ್ಲಿಕಾರ್ಜುನ್, ನಾಝೀಯಾ ಕೌಸರ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್, ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಆರ್. ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!