ದಾವಣಗೆರೆ, ಮೇ 10- ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ. 77.20 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳೆದ ಬಾರಿ ಶೇ.75.59 ರಷ್ಟು ಮತದಾನವಾಗಿದ್ದರೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ.75.98ರಷ್ಟು ಮತದಾನವಾಗಿತ್ತು.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಇದಕ್ಕೂ ಮುನ್ನ ಮತಗಟ್ಟೆಗಳಲ್ಲಿ ಅಣಕು ಮತದಾನ ನಡೆಯಿತು. ಬೆಳಿಗ್ಗೆಯಿಂದಲೇ ಮತದಾರರು ಸರದಿ ಸಾಲಿನಲ್ಲಿ ನಿಂತು ಹುರುಪಿನಿಂದ ಮತ ಚಲಾಯಿಸಿದರು. ಕೆಲವರು ಕಾರ್ಡ್ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ನಿರಾಶೆಯಿಂದ ಮನೆ ಕಡೆ ಹೆಜ್ಜೆ ಹಾಕಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ 7,21,964 ಪುರುಷ, 7,20,004 ಮಹಿಳೆಯರು, 118 ಇತರೆ ಸೇರಿ 14,42,086 ಮತದಾರರಲ್ಲಿ 5,64,256 ಪುರುಷ, 5,49,115 ಮಹಿಳೆಯರು ಹಾಗೂ 23 ಇತರೆ ಮತದಾರರು ಸೇರಿ ಒಟ್ಟು 11,13,394 ಜನರು ಮತದಾನ ಮಾಡಿದ್ದಾರೆ.
ಹೊನ್ನಾಳಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.83.78. ದಾವಣಗೆರೆ ದಕ್ಷಿಣದಲ್ಲಿ ಅತಿ ಕಡಿಮೆ ಶೇ.66.32 ಮತದಾನ
ಮೇ 13ರತ್ತ ಎಲ್ಲರ ಚಿತ್ತ
ಜಿಲ್ಲೆಯಲ್ಲಿ ಮತದಾನ ಮುಕ್ತಾಯವಾಗಿದ್ದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಎಲ್ಲರ ಚಿತ್ತ ಮೇ 13 ರಂದು ನಡೆಯುವ ಮತ ಎಣಿಕೆಯತ್ತ ನೆಟ್ಟಿದೆ. ಜಯದ ಮಾಲೆ ಯಾರ ಪಾಲಾಗಲಿದೆ ಎಂಬ ನಿರೀಕ್ಷೆ ಮತದಾರ ಪ್ರಭುಗಳದ್ದಾಗಿದೆ.
ರಾತ್ರಿ ಹಣದ ಹೊಳೆ
ಮಂಗಳವಾರ ರಾತ್ರಿ ದಾವಣಗೆರೆ ನಗರದಲ್ಲಿ ಹಣದ ಹೊಳೆಯೇ ಹರಿದೆ ಎನ್ನಲಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಸ್ಪರ್ಧೆಗಿಳಿದವರಂತೆ ಹಣ ಹಂಚಿರುವ ಬಗ್ಗೆ ಮತದಾರರೇ ಮಾತನಾಡಿಕೊಳ್ಳುತ್ತಿದ್ದರು.
ಒಂದು ಪಕ್ಷ ಪ್ರತಿ ಮನೆಗೆ ಇಷ್ಟು ಸಾವಿರ ರೂ. ಎಂದು ಹಂಚಿದ್ದರೆ, ಮತ್ತೊಂದು ಪಕ್ಷ ಪ್ರತಿ ಮತಕ್ಕೆ ಇಂತಿಷ್ಟು ಸಾವಿರ ಎಂದು ಹಂಚಿದೆ ಎಂಬ ಮಾತುಗಳು ಹರಿದಾಡಿದವು.
ಇನ್ನು ಕೆಲವರು ನಮ್ಮ ಮನೆಯಲ್ಲಿ ಇಷ್ಟು ಓಟುಗಳಿವೆ ಎಂದು ಹೇಳಿ ತಾವೇ ಅಲ್ಲಿನ ಸ್ಥಳೀಯ ಮುಖಂಡರ ಬಳಿ ಹಣ ಪಡೆದಿದ್ದಾರೆ.
ತಿಂಗಳು ಗಟ್ಟಲೆ ಅಬ್ಬರದ ಪ್ರಚಾರ ನಡೆಸಿದರೂ, ಮತದಾನದ ಹಿಂದಿನ ರಾತ್ರಿ ಹಣ ಹಂಚುವಿಕೆಯೂ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಸ್ವತಃ ಪಕ್ಷಗಳ ಅನಿಸಿಕೆಯೂ ಹೌದು.
ಊಟಕ್ಕೆ-ಓಡಾಟಕ್ಕೆ ಪರದಾಟ
ಬುಧವಾರ ಮತದಾನ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಗರ ಭಾಗಶಃ ಸ್ತಬ್ಧವಾದಂತಿತ್ತು. ವಾಹನಗಳ ಓಡಾಟ ಕಡಿಮೆಯಾಗಿತ್ತು. ಬಹುತೇಕ ಹೋಟೆಲ್ಗಳು ಮುಚ್ಚಲ್ಪಟ್ಟಿದ್ದವು. ಮಾರುಕಟ್ಟೆ ಪ್ರದೇಶದಲ್ಲಿ ವ್ಯವಹಾರ ವಿರಳವಾಗಿತ್ತು.
ಸಾಕಷ್ಟು ಬಸ್ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾದವರೂ, ಬರಬೇಕಾದವರು ಬಸ್ಗಳಿಲ್ಲದೆ ಪರದಾಡಬೇಕಾಯಿತು. ಇನ್ನು ಆಟೋಗಳ ಓಡಾಟವೂ ಕಡಿಮೆಯಾಗಿತ್ತು.
ಜಗಳೂರು ಕ್ಷೇತ್ರದಲ್ಲಿ ಶೇ.80.17, ಹರಿಹರ ಶೇ.79.78, ದಾವಣಗೆರೆ ಉತ್ತರ ಶೇ.67.49, ದಾವಣಗೆರೆ ದಕ್ಷಿಣ ಶೇ. 66.32, ಮಾಯಕೊಂಡ ಶೇ.83.89, ಚನ್ನಗಿರಿ ಶೇ. 81.94 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಶೇ 83.78 ರಷ್ಟು ಮತದಾನವಾಗಿದೆ.
ಬೆಳಗ್ಗೆ 9 ಗಂಟೆಯ ವೇಳೆಗೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 100792 ಮತದಾರರು ಮತದಾನ ಮಾಡಿ ಶೇ 6.99 ಮತದಾನವಾಗಿತ್ತು.
ಮತದಾನ ದಿನ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ ರಜೆ ಮತ್ತು ಸಾರ್ವಜನಿಕ, ಖಾಸಗಿ ಕೈಗಾರಿಕೆಗಳಿಗೆ ಹಾಗೂ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ರಜೆ ನೀಡಿದ್ದರಿಂದ ಕುಟುಂಬ ಸಮೇತರಾಗಿ ಬೆಳಗಿನ ಉಪಹಾರ ಮುಗಿಸಿ ಮತದಾನ ಕೇಂದ್ರದತ್ತ ಹೆಜ್ಜೆ ಹಾಕಿದರು.
ಮಧ್ಯಾಹ್ನ 11 ಗಂಟೆಯ ವೇಳೆಗೆ 2,99,670 ಜನರು ಮತದಾನ ಮಾಡಿ ಶೇ20.78 ಕ್ಕೆ ತಲುಪಿತು. ಮಧ್ಯಾಹ್ನ 1 ಗಂಟೆಯ ವೇಳೆ 5,57,261 ಜನರು ಮತದಾನ ಮಾಡಿ ಶೇ.38.64 ಕ್ಕೆ ತಲುಪಿತು.
ಸಂಜೆ 5 ಗಂಟೆಯ ವೇಳೆಗೆ 10,18,309 ಮತದಾರರು ಮತದಾನ ಮಾಡಿದ್ದರು. ಪ್ರಮಾಣ ಶೇ.70.61 ಕ್ಕೆ ತಲು ಪಿತು. ಅಂತಿಮವಾಗಿ ಶೇ.77.20ರಷ್ಟು ಮತದಾನವಾಯಿತು.