ಜಿಲ್ಲೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಜಿಲ್ಲೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಪೊಲೀಸ್ ಭದ್ರತೆಯಲ್ಲಿ 1,685 ಮತಗಟ್ಟೆಗಳಿಗೆ ಮತ ಯಂತ್ರ, ಸಿಬ್ಬಂದಿ ರವಾನೆ

ದಾವಣಗೆರೆ, ಮೇ 9 – ಜಿಲ್ಲೆಯ 14.42 ಲಕ್ಷ ಮತದಾರರು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಮಾಡುವ ಮೂಲಕ, ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ.

ಮಂಗಳವಾರದಂದು ಮಸ್ಟರಿಂಗ್ ಕೇಂದ್ರಗಳಿಂದ ಮತ ಯಂತ್ರಗಳು ಹಾಗೂ ಸಂಬಂಧಿಸಿದ ಇತರೆ ಉಪಕರಣಗಳನ್ನು ಅಧಿಕಾರಿಗಳು ತೆಗೆದುಕೊಂಡು ಮತಗಟ್ಟೆಗಳಿಗೆ ರವಾನೆಯಾಗಿದ್ದಾರೆ.

ಮತದಾನದ ಸಿದ್ಧತೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲೆಯಲ್ಲಿ 1,685 ಮತಗಟ್ಟೆಗಳಿದ್ದು, 8,050 ಮತಗಟ್ಟೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರಿಗೆ ಮೂರು ಹಂತದ ಸಂಪೂರ್ಣ ತರಬೇತಿ ನೀಡಲಾಗಿದೆ ಎಂದರು.

ಎಂ3 ಮಾಡೆಲ್‌ನ ಹೊಸ ಮತ ಯಂತ್ರಗಳು ಬಂದಿವೆ. ಅವುಗಳ ಬಳಕೆ, ಮಾಕ್‌ಪೋಲ್‌, ವಿವಿಪ್ಯಾಟ್ ಬಳಕೆ, ಸುರಕ್ಷಿತ ಸಾಗಣೆ ಸೇರಿದಂತೆ, ಎಲ್ಲ ಅಗತ್ಯ ಮಾಹಿತಿ ನೀಡಲಾಗಿದೆ. ಮತಯಂತ್ರಗಳ ಸಾಗಾಟದ ವೇಳೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯ ಭದ್ರತೆ ಇರಲಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 16 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7 ಸಖಿ, 7 ವಿಶೇಷ ಚೇತನ, ಒಂದು ಬಂಜಾರ ಸಂಸ್ಕೃತಿ ಬಿಂಬಿಸುವ ಹಾಗೂ ಇನ್ನೊಂದು ಯುವ ಅಧಿಕಾರಿಗಳೇ ನಿರ್ವಹಿಸುವ ಮತಗಟ್ಟೆ ಇದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 338 ಕ್ರಿಟಿಕಲ್ ಬೂತ್‌ಗಳನ್ನು ಗುರುತಿಸಲಾಗಿದ್ದು, ಇಲ್ಲಿಗೆ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಕಾಪಶಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಮಾತನಾಡಿ, 7 ವಿಧಾನಸಭಾ ಕ್ಷೇತ್ರಗಳಲ್ಲಿ 4,099 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಿವಿಲ್ ಪೊಲೀಸರು, ಕೆಎಸ್‌ಆರ್‌ಪಿ, ಕೇಂದ್ರೀಯ ಸಶಸ್ತ್ರ ಪಡೆಗಳೂ ಇದರಲ್ಲಿ ಸೇರಿವೆ ಎಂದರು.

144ನೇ ಸೆಕ್ಷನ್ ಕಠಿಣವಾಗಿ ಜಾರಿಗೆ ತರಲಾಗಿದೆ. ಸಂಪೂರ್ಣ ಸುರಕ್ಷಿತ ಹಾಗೂ ಮುಕ್ತ ಮತದಾನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದರು.

ಮತಗಟ್ಟೆಗಳ ಕಡೆ ಸಿಬ್ಬಂದಿ ರವಾನೆ

ಏಳು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಗಳಿಗೆ ಮಂಗಳವಾರ ಅಗತ್ಯ ಉಪಕರಣಗಳೊಂ ದಿಗೆ ಚುನಾವಣಾ ಸಿಬ್ಬಂದಿ ರವಾನೆಯಾಗಿದ್ದಾರೆ.

ದಾವಣಗೆರೆ ನಗರದಲ್ಲಿ ಮೋತಿ ವೀರಪ್ಪ ಪಿ.ಯು. ಕಾಲೇಜಿನಿಂದ ಮಾಯಕೊಂಡ ಕ್ಷೇತ್ರಕ್ಕೆ, ಹೈಸ್ಕೂಲ್‌ ಮೈದಾನದ ಶಾಲೆಯಿಂದ ದಾವಣಗೆರೆ ದಕ್ಷಿಣ ಹಾಗೂ ಡಿ.ಆರ್.ಆರ್. ಶಾಲೆಯಿಂದ ದಾವಣಗೆರೆ ಉತ್ತರಕ್ಕೆ ಸಿಬ್ಬಂದಿ ರವಾನೆಯಾಗಿದ್ದಾರೆ.

ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರದ ಸೇಂಟ್‌ ಮೇರೀಸ್‌ ಕಾನ್ವೆಂಟ್ ಸ್ಕೂಲ್‌, ಚನ್ನಗಿರಿಯ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೊನ್ನಾಳಿಯ ಗಂಗಮ್ಮ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಮಸ್ಟರಿಂಗ್ ಕೇಂದ್ರಗಳಾಗಿ ಬಳಸಿಕೊಳ್ಳಲಾಗಿತ್ತು.

ಬಿರು ಬಿಸಿಲಿನಲ್ಲಿ ಸಿಬ್ಬಂದಿ ಮತ ಯಂತ್ರ, ನಿಯಂತ್ರಣ ಯಂತ್ರ, ವಿವಿಪ್ಯಾಟ್, ಮತ ಪತ್ರಗಳ ಲಕೋಟೆ, ಭೂತ ಕನ್ನಡಿ ಇಂಕ್‌ ಪ್ಯಾಡ್, ಮೆಡಿಕಲ್ ಕಿಟ್ ಇತ್ಯಾದಿಗಳನ್ನು ಹೊತ್ತು ನಡೆದರು. ನಗರದಲ್ಲಿ ಸಂಜೆ ಸುರಿದ ಮಳೆ ತುಸು ತಂಪೆರೆಯಿತು.

ಮಸ್ಟರಿಂಗ್ ಕೇಂದ್ರಗಳಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ರುಚಿಯಾಗಿರಲಿಲ್ಲ ಎಂಬ ಆರೋಪಗಳು ಸಿಬ್ಬಂದಿಗಳಿಂದ ಕೇಳಿ ಬಂತು.

error: Content is protected !!