ಜಿಲ್ಲೆಯ ವಿವಿದೆಡೆ ವಿಶೇಷ ಮತಗಟ್ಟೆಗಳ ಆಕರ್ಷಣೆ

ಜಿಲ್ಲೆಯ ವಿವಿದೆಡೆ ವಿಶೇಷ ಮತಗಟ್ಟೆಗಳ ಆಕರ್ಷಣೆ

ಮತದಾರರ ಸೆಳೆಯಲು ಸಖಿ, ವಿಶೇಷಚೇತನ, ಪಾರಂಪರಿಕ, ಯುವ, ವಿಷಯಾಧಾರಿತ ಮತಗಟ್ಟೆ 

ದಾವಣಗೆರೆ, ಮೇ 9- ಜಿಲ್ಲೆಯಾದ್ಯಂತ ವಿಧಾನಸಭಾ  ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತದಾನ ನಡೆಯಲಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮತದಾರರನ್ನು ಆಕರ್ಷಿಸಲು ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಲಾಗಿದೆ. ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಕರೆಯುತ್ತಿವೆ. 

ವಿಶೇಷಚೇತನರ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅವರಿಗಾಗಿ ವಿಶೇಷಚೇತನರ ಮತಗಟ್ಟೆ ಸ್ಥಾಪಿಸಲಾಗಿದೆ. ವಿಶೇಷಚೇತನರ ಮತಗಟ್ಟೆಗಳನ್ನು ಆಕರ್ಷಣೀಯವಾಗಿ ಸಿಂಗರಿಸಲಾಗಿದೆ. ವಿಶೇಷ ಚೇತನರ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಯಿಂದ ಎಲ್ಲಾ ಸಿಬ್ಬಂದಿಗಳು ವಿಶೇಷಚೇತನರಾಗಿರುತ್ತಾರೆ. ಇವರಿಂದಲೇ ಮತಗಟ್ಟೆಯನ್ನು ನಿರ್ವಹಿಸಲಾಗುತ್ತದೆ. 

ಮಹಿಳಾ ಮತದಾರಿಗಾಗಿ ತೆರೆಯಲಾಗಿರುವ ಸಖಿ ಮತಗಟ್ಟೆ ಗಳು ತಳಿರು-ತೋರಣ, ಪಿಂಕ್ ಬಲೂನ್‍ಗಳ ಅಲಂಕಾರ ದೊಂದಿಗೆ ಸಿಂಗಾರಗೊಂಡು ಮತದಾರರನ್ನು ಸ್ವಾಗತಿಸುತ್ತಿವೆ.  ಯುವ ಮತದಾರರನ್ನು ಆಕರ್ಷಿಸಲು ಯುವ ಮತಗಟ್ಟೆ ಸ್ಥಾಪಿಸಲಾಗಿದೆ. ಪಾರಂಪರಿಕ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ. 

ಸಖಿ, ವಿಶೇಷಚೇತನರ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ; ಚನ್ನಗಿರಿ ಕ್ಷೇತ್ರದ ಸಂತೇಬೆನ್ನೂರಿನ ಮತಗಟ್ಟೆ ಸಂಖ್ಯೆ 34 ರಲ್ಲಿ ಸಖಿ ಮತಗಟ್ಟೆ ಮತ್ತು 36 ರಲ್ಲಿ ವಿಶೇಷಚೇತನರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಪರಿಶೀಲಿಸಿದರು. 

ಈ ವೇಳೆ ಮಾತನಾಡಿದ ಅವರು, ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು ಎಲ್ಲಾ ಮಹಿಳಾ ಸಿಬ್ಬಂದಿಗಳಿಂದಲೇ ಸಖಿ ಮತಗಟ್ಟೆಯನ್ನು ನಿರ್ವಹಿಸಲಾಗುತ್ತಿದೆ ಹಾಗೂ ವಿಶೇಷ ಚೇತನರ ಮತಗಟ್ಟೆಯಲ್ಲಿ ವಿಶೇಷಚೇತನ ಸಿಬ್ಬಂದಿಯಿಂದಲೇ ನಿರ್ವಹಿಸಲಾಗುತ್ತಿದ್ದು ಇವರ ಸಹಾಯಕ್ಕೆ ಬೇಕಾದ ಸಿಬ್ಬಂದಿ ನೆರವು ನೀಡಲು ಸೂಚನೆ ನೀಡಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಹಾಗೂ ವಿವಿಧ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

error: Content is protected !!