ದಾವಣಗೆರೆ, ಮೇ 5- ಇದೇ ಮೇ 10 ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 10,130 ಮತದಾನ ಸಿಬ್ಬಂದಿಗೆ ಅಂತಿಮ ಹಂತದ ತರಬೇತಿಯನ್ನು ನಗರದ ವಿವಿಧೆಡೆ ನೀಡಲಾಯಿತು.
ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ 1685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆ ಅಧಿಕಾರಿ ಹಾಗೂ ನಾಲ್ಕನೇ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿದಂತೆ 5 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
1685 ಮತಗಟ್ಟೆಗಳಿಗೆ ಮತ್ತು ಹೆಚ್ಚುವರಿ ಸಿಬ್ಬಂದಿಯಾಗಿ ಒಟ್ಟು 10130 ಮತದಾನ ಸಿಬ್ಬಂದಿಗಳಿಗೆ ಎಲ್ಲಾ ತಾಲ್ಲೂಕುಗಳಲ್ಲಿ ಇಂದು ತರಬೇತಿ ನೀಡಲಾಯಿತು.
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮತಗಟ್ಟೆ ಸಿಬ್ಬಂದಿಗಳು ಮಾರ್ಗಸೂಚಿಗಳನ್ನು ಸರಿಯಾಗಿ ತಿಳಿದುಕೊಂಡು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಯಾವುದೇ ಆತುರಕ್ಕೆ ಒಳಗಾಗದೇ ಸಮಚಿತ್ತರಾಗಿ ತರಬೇತಿ ಪಡೆಯುವ ಮೂಲಕ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು ಎಂದರು.
ತರಬೇತಿಯಲ್ಲಿ ದಾವಣಗೆರೆ ಉತ್ತರ ಚುನಾವಣಾಧಿಕಾರಿ ಶ್ರೀನಿವಾಸ್, ದಕ್ಷಿಣದ ಚುನಾವಣಾಧಿಕಾರಿ ರೇಣುಕಾ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.