ಹರಿಹರದಲ್ಲಿ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆ
ಹರಿಹರ, ಮೇ 2 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ ಸಮಾವೇಶಗಳಲ್ಲಿ ಕೇವಲ ತಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಭಾಷಣಗಳಲ್ಲಿ ಶೇ.30ರಷ್ಟಾದರೂ ರಾಜ್ಯದ ಜನರ, ಮಹಿಳೆಯರ, ಯುವಕರ ಹಾಗೂ ರೈತರ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಕಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾನು ಕಾಂಗ್ರೆಸ್ ನಾಯಕರ ಬಗ್ಗೆ ಪ್ರಸ್ತಾಪಿಸುತ್ತೇನೆ. ಆದರೆ, ಪ್ರಧಾನಿ ಮೋದಿ ತಮ್ಮ ಭಾಷಣಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಪ್ರಸ್ತಾಪಿಸುವುದಿಲ್ಲ. ಕೇವಲ ತಮ್ಮ ಬಗ್ಗೆ ಮಾತ್ರ ಮಾತನಾಡಿಕೊಳ್ಳುತ್ತಾರೆ. ಕಾಂಗ್ರೆಸ್ 91 ಬಾರಿ ವಾಗ್ದಾಳಿ ನಡೆಸಿದೆ ಎಂದು ಹೇಳುತ್ತಾರೆ. ಪ್ರಧಾನಿಯವರೇ ಈ ಚುನಾವಣೆ ನಿಮ್ಮ ಬಗ್ಗೆ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರಧಾನಿ ಮೋದಿಯವರಿಗೆ ತಮ್ಮ ಬಗ್ಗೆ ಹೇಳಿಕೊಳ್ಳುವುದು ಬಹಳ ಇಷ್ಟ. ಎಲ್ಲೇ ಹೋದರೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ಶೇ.70ರಷ್ಟು ನಿಮ್ಮ ಬಗ್ಗೆಯೇ ಮನಃಪೂರ್ತಿ ಮಾತನಾಡಿಕೊಳ್ಳಿ. ಆದರೆ, ಕನಿಷ್ಠ ಶೇ.30ರಷ್ಟಾದರೂ ಜನತೆಯ ಬಗ್ಗೆ ಮಾತನಾಡಿ. ಯಾವ ತಪ್ಪುಗಳಾಗಿವೆ ಎಂಬುದನ್ನು ತಿಳಿಸಿ ಎಂದು ರಾಹುಲ್ ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಶೇ.40 ಕಮೀಷನ್ ಬಗ್ಗೆ ಪ್ರಧಾನಿ ಮುಂದಿನ ಭಾಷಣಗಳಲ್ಲಿ ಮಾತನಾಡಲಿ. ಭ್ರಷ್ಟಾಚಾರದ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ಜನರಿಗೆ ತಿಳಿಸಲಿ ಎಂದವರು ಸವಾಲು ಹಾಕಿದರು.
ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ, ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳಲ್ಲಿ ಶೇ.60ರಷ್ಟನ್ನೂ ಈಡೇರಿಸಿಲ್ಲ. ರಾಜ್ಯದಲ್ಲಿ ಪ್ರವಾಹ ಬಂದಾಗ ನೆರವಾಗಲಿಲ್ಲ. ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲು ಕೊಡಿಸಲಿಲ್ಲ. ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿ ಆದ ಹಿಂಸೆಯ ಬಗ್ಗೆ ಮಾತನಾಡಿಲ್ಲ. ಕಳೆದ ಮೂರು ವರ್ಷಗಳಲ್ಲಿ ಪ್ರತಿಯೊಂದು ವಿಷಯದಲ್ಲೂ 40 ಪರ್ಸೆಂಟ್ ಕಮೀಷನ್ ನಡೆದಿರುವ ಬಗ್ಗೆ ಮಾತನಾಡಿಲ್ಲ ಎಂದು ರಾಹುಲ್ ತರಾಟೆಗೆ ತೆಗೆದುಕೊಂಡರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿತ್ತು. ಆದರೆ, ಬಿಜೆಪಿ ಜನಾದೇಶದ ಕಳ್ಳತನ ಮಾಡಿತು. ಭ್ರಷ್ಟಾಚಾರದ ಹಣದಿಂದ ಶಾಸಕರನ್ನು ಸೆಳೆಯಿತು. ನಂತರ 40 ಪರ್ಸೆಂಟ್ ಸರ್ಕಾರ ನಡೆಸಿತು ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಜನರಿಂದ ಹಣ ಲೂಟಿ ಮಾಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಜನರಿಗೆ ಹಣ ಕೊಡಲಿದೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ನಿರುದ್ಯೋಗ ಭತ್ಯೆಯ ಐದು ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ಜಾರಿಗೆ ತರಲಾಗುವುದು ಎಂದವರು ಭರವಸೆ ನೀಡಿದರು.
ಬಿಜೆಪಿಗೆ 40 ಅಂಕಿ ಬಹಳ ಇಷ್ಟ. ಎಲ್ಲಿ ಹೋದರೂ 40 ಅನ್ನುತ್ತಿರುತ್ತಾರೆ. ಕಾಲೇಜು ಪ್ರವೇಶ, ಸರ್ಕಾರಿ ಕೆಲಸ, ಸಬ್ ಇನ್ಸ್‌ಪೆಕ್ಟರ್ ಉದ್ಯೋಗ ಹಾಗೂ ಗುತ್ತಿಗೆ ಸೇರಿದಂತೆ ಎಲ್ಲೆಡೆ 40 ಪರ್ಸೆಂಟ್ ಕಮೀಷನ್ ಪಡೆಯುತ್ತಿದ್ದಾರೆ. ಕಳೆದ ಮೂರು ವರ್ಷ ಇದೇ 40 ಎನ್ನುತ್ತಾ ಪೀಡಿಸಿದ್ದಾರೆ. ಈ ಬಾರಿ ಜನತೆ ಬಿಜೆಪಿಗೆ 40 ಸೀಟು ಕೊಡಿ. ಕಾಂಗ್ರೆಸ್‌ಗೆ ಕನಿಷ್ಠ 150 ಸೀಟು ಕೊಡಿ ಎಂದು ರಾಹುಲ್ ಗಾಂಧಿ ಕರೆ ನೀಡಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ದೇಶದ ಜನರ ಒಳಿತಿಗಾಗಿ ರಾಹುಲ್ ಗಾಂಧಿಯವರು 4 ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ಇಂತಹ ಗಂಡೆದೆಯ ನಾಯಕ ಬಿಜೆಪಿ ಪಕ್ಷದಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲ ಎಂದರು.
ವೇದಿಕೆಯ ಮೇಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ಪಾಂಡೆ, ಕಾಂಗ್ರೆಸ್ ಅಭ್ಯರ್ಥಿಗಳಾದ ಎಸ್.ಎಸ್. ಮಲ್ಲಿಕಾರ್ಜುನ್, ನಂದಿಗಾವಿ ಶ್ರೀನಿವಾಸ್, ಡಿ.ಜಿ. ಶಾಂತನಗೌಡ, ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಮುಖಂಡರಾದ ಸಂಸದ ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಮುಖಂಡರಾದ ಜಲಜಾನಾಯ್ಕ, ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ಶಂಕರ್ ಖಟಾವ್ಕರ್, ಎಸ್.ಎಂ. ವಸಂತ್, ಶಾಹಿನಾಭಾನು ದಾದಾಪೀರ್, ಎಂ. ಎಸ್. ಬಾಬುಲಾಲ್, ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಕೃಷ್ಣ ಸಾ ಭೂತೆ, ಜಿಲ್ಲಾ ಯುವ ಘಟಕದ ನಿಕಿಲ್ ಕೊಂಡಜ್ಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಾಟೀಲ್, ಜಿಪಂ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ಜಿಪಂ ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಮಲೇಬೆನ್ನೂರು, ಎಂ.ಬಿ. ಅಣ್ಣಪ್ಪ, ಹಳ್ಳಳ್ಳಿ ಬಸಪ್ಪ, ಕೆ. ಜಡಿಯಪ್ಪ, ನಗರಸಭೆ ಮಾಜಿ ಸದಸ್ಯರಾದ ಬಿ.ಕೆ. ಸೈಯದ್ ರೆಹಮಾನ್, ಜಿಗಳಿ ಆನಂದಪ್ಪ, ಎಂ. ಬಿ. ಅಭಿದಾಲಿ, ಹನುಮಂತಪ್ಪ, ಕಿರಣ್ ಭೂತೆ, ಸಂತೋಷ ಮತ್ತಿತರರು ಉಪಸ್ಥಿತರಿದ್ದರು.