ಅಪಾರ ಬೆಂಬಲಿಗರೊಂದಿಗೆ ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಬಸವರಾಜ್ ನಾಮಪತ್ರ ಸಲ್ಲಿಕೆ

ಅಪಾರ ಬೆಂಬಲಿಗರೊಂದಿಗೆ ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಬಸವರಾಜ್ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ. 20- ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಬಸವರಾಜ್ ಅದ್ದೂರಿ ಮೆರವಣಿಗೆ ಮೂಲಕ ತೆರಳಿ ಬುಧವಾರ ನಾಮಪತ್ರ  ಸಲ್ಲಿಸಿದರು.

ನಗರದ ಪಿ.ಬಿ. ರಸ್ತೆಯಲ್ಲಿರುವ ಶ್ರೀ ಬೀರೇಶ್ವರ ದೇವಸ್ಥಾನದ ಮೈದಾನದಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆ ಆರಂಭಿಸಿದ ಅವರು, ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಬಸವರಾಜ್, ಕಾಂಗ್ರೆಸ್ ಬಡವರ, ದೀನ-ದಲಿತರ, ಮಹಿಳೆಯರ ಪರವಾಗಿರುವ ಪಕ್ಷವಾಗಿದ್ದು, 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ , ಪ್ರತಿ ಮನೆಯ ಒಡತಿಗೆ 2 ಸಾವಿರ ರೂ., ನಿರುದ್ಯೋಗಿ ಪದವೀಧ ರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ಭತ್ಯೆ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ ಎಂದರು.

2018 ರಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಪರಾಜಿತನಾಗಿರುವ ನಾನು, ಅಂದಿನಿಂದಲೂ ಕೂಡ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ಪ್ರತಿ ಹಳ್ಳಿಗಳಿಗೂ ತೆರಳಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ತೃಪ್ತಿ ನನಗಿದೆ. ನನ್ನ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದು, ಜನರ ಪ್ರೀತಿ, ವಿಶ್ವಾಸ ಗಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಮಸ್ಯೆಗಳನ್ನು ಆಲಿಸುವ ಮೂಲಕ ಸಾಧ್ಯವಾದಷ್ಟು ಪರಿಹರಿಸುವ ಪ್ರಯತ್ನವನ್ನೂ ಮಾಡಿದ್ದೇನೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ವೇಳೆ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಹಿರಿಯ ಮುಖಂಡರೂ, ವಕೀಲರೂ ಆದ ಜಯದೇವನಾಯ್ಕ, ರಾಘವೇಂದ್ರನಾಯ್ಕ, ಮುಖಂಡರಾದ ಗೋವಿಂದಸ್ವಾಮಿ, ಹೊದಿಗೆರೆ ರಮೇಶ, ಕತ್ತಲಗೆರೆ ತಿಪ್ಪಣ್ಣ, ಮಾಯಕೊಂಡ ವೆಂಕಟೇಶ್, ತ್ಯಾವಣಗಿ ಹನುಮಂತಪ್ಪ, ವೀರೇಶ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಸಾಹಿತಿ ಪ್ರೊ. ಎ.ಬಿ. ರಾಮಚಂದ್ರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!