ಸಾಹಿತಿ ಮಲ್ಲಿಕಾರ್ಜುನ ಕಡಕೋಳ
ದಾವಣಗೆರೆ, ಏ.18- ದೇಶ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದುಕು ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು ಮಾತನಾಡಬೇಕಾಗುತ್ತದೆ ಎಂದು ಹಿರಿಯ ಸಾಹಿತಿ, ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೃಶ್ಯಕಲಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ, ನಗರದ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣ ದಲ್ಲಿ ಮಂಗಳವಾರ `ಪಿ.ಆರ್. ತಿಪ್ಪೇಸ್ವಾಮಿ ಕಲಾ ಸಂಭ್ರಮ-2023′ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸಂಕಟದಲ್ಲಿದ್ದ ಸಂದರ್ಭದಲ್ಲಿ ಕಲಾವಿದರು, ಸಾಹಿತಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅವರು ಕೃತಿಗಳು ಕಾದಂಬರಿಗಳು, ಕಥೆಗಳ ಮೂಲಕ ಮಾತನಾಡಬೇಕಾಗುತ್ತದೆ. ಸಾಹಿತಿಗಳು ಮಾತನಾಡುತ್ತಿದ್ದಾರೆ. ವ್ಯಂಗ್ಯ ಚಿತ್ರದ ಮೂಲಕ ಕೆಲ ಕಲಾವಿದರು ವ್ಯವಸ್ಥೆಯ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ಹಿರಿಯ ಚಿತ್ರ ಕಲಾವಿದರು ಮೌನ ವಹಿಸಿರುವುದು ಆತಂಕಕಾರಿ ಎಂದರು.
ಮನುಷ್ಯನನ್ನು ಜಾತಿ, ಧರ್ಮದ ಹಿನ್ನೆಲೆಯಲ್ಲಿ ಗುರುತಿಸುವ ಸ್ಥಿತಿ ನಿರ್ಮಾಣವಾಗಿದೆ. ಸಂಸ್ಕೃತಿಯೊಳಗೆ ಧರ್ಮದ ಪ್ರವೇಶ ನಡೆಯುತ್ತಿದೆ. ಸಂಸ್ಕೃತಿ ಅಪ್ಪಟ ಸಂಸ್ಕೃತಿಯಾಗಿ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ನಿರ್ಣಾಯಕ ಘಟ್ಟದಲ್ಲಿ ನಾವಿದ್ದೇವೆ. ಕೋಮು ಶಕ್ತಿಗಳು, ಕಾರ್ಪೊರೇಟ್ ಶಕ್ತಿಗಳು ಹೊಂಚು ಹಾಕಿ ಕುಳಿತಿರುವ ವೇಳೆ ಸುಮ್ಮನಿದ್ದು, ಎಲ್ಲಾ ಮುಗಿದ ಮೇಲೆ ಭಾಷಣ ಮಾಡುವುದಕ್ಕಿಂತ, ಬೇಜವಾಬ್ದಾರಿ ತನ ಬದಿಗಿಟ್ಟು ಹೊಸ ಬದಲಾವಣೆಯ ಹಂತದಲ್ಲಿಯೇ ಪಕ್ಷಾತೀತವಾಗಿ, ಮನುಷ್ಯ ಸಂವೇದನೆ ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
2024ನೇ ವರ್ಷಕ್ಕೆ ದೃಶ್ಯಕಲಾ ಮಹಾವಿದ್ಯಾಲಯಕ್ಕೆ 60 ವರ್ಷಗಳು ತುಂಬುತ್ತವೆ. ಇಷ್ಟೊತ್ತಿಗೆ ಈ ಕಾಲೇಜು ಅಖಿಲ ಭಾರತ ಮಟ್ಟದಲ್ಲಿ ಮಾನ್ಯತೆ ಪಡೆಯಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ವ್ಯವಸ್ಥಿತ ಕಾರ್ಯಕ್ರಮವೊಂದನ್ನು ನಡೆಸಿ, ಕಾಲೇಜಿನ ಒಟ್ಟು ಚಿತ್ರಣವನ್ನು ಬದಲಿಸಬೇಕಿದೆ ಎಂದು ಅಭಿಪ್ರಾಯಿಸಿದರು.
ರಂಗಕರ್ಮಿ, ಕೆಬಿಆರ್ ನಾಟಕ ಕಂಪನಿ ಮಾಲೀಕ ಚಿಂದೋಡಿ ಚಂದ್ರಧರ್ ಮಾತನಾಡಿ, ಕಲಾ ಸಮೂಹ ಜಾತ್ಯತೀತ, ಭಾಷಾತೀತವಾದದ್ದು. ನಿಜವಾದ ಜಾತ್ಯತೀತತೆ ಇರುವುದು ಕಲಾ ಪ್ರಕಾರಗಳಲ್ಲಿ ಮಾತ್ರ. ಕಲಾ ಶಾಲೆಗಳು ನೈತಿಕತೆ ಹೇಳಿಕೊಡುವ ಶಾಲೆಗಳಾಗಿವೆ ಎಂದರು.
ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ, ಹಿರಿಯ ಕಲಾವಿದ ನಾ.ರೇವಣಸಿದ್ದಪ್ಪ, ಚಿತ್ರಕಲಾ ಪರಿಷತ್ ಅಧ್ಯಕ್ಷ ಸದಾನಂದ ಹೆಗಡೆ, ಕಲಾ ಪರಿಷತ್ ಅಧ್ಯಕ್ಷ ಎ.ಮಹಾಲಿಂಗಪ್ಪ, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ನಾಗರಾಜ್ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಮುರಳಿ ಕೃಷ್ಣ ಪ್ರಾರ್ಥಿಸಿದರು. ಪಿ.ಆರ್.ಟಿ. ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಸಿ. ಮಹದೇವ ಶೆಟ್ಟಿ ಸ್ವಾಗತಿಸಿದರು. ಸಿ.ಚಿಕ್ಕಣ್ಣ ನಿರೂಪಿಸಿದರು. ಡಾ. ಮೈಲಳ್ಳಿ ರೇವಣ್ಣ ವಂದಿಸಿದರು.