ಪಿ. ಆರ್. ತಿಪ್ಪೇಸ್ವಾಮಿ ಕಲಾ ಸಂಭ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ
ದಾವಣಗೆರೆ, ಏ. 18- ನಗರದ ವಿಶ್ವ ವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾವಿದ ದಿ. ಪಿ.ಆರ್. ತಿಪ್ಪೇಸ್ವಾಮಿ ಅಧ್ಯಯನ ಪೀಠ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಸರ್ಕಾರದ ಕಡೆ ಮುಖ ಮಾಡದೇ ಮಹಾವಿದ್ಯಾಲಯ ಮತ್ತು ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದ ವತಿಯಿಂದಲೇ ಆರಂಭಿಸಿ ನಂತರ ದಾನಿಗಳು, ಸರ್ಕಾರದ ನೆರವು ಪಡೆಯಲು ಮುಂದಾಗುವಂತೆ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಿ.ಆರ್. ತಿಪ್ಪೇಸ್ವಾಮಿ ಕಲಾ ಸಂಭ್ರಮ, ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತಿಪ್ಪೇಸ್ವಾಮಿಯವರು ಕಾಲದ ಸದುಪಯೋಗ ಪಡೆದುಕೊಳ್ಳುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದವರು. ಅವರ ಸಾಧನೆ ಬಹುದೊಡ್ಡದು. ಚಿತ್ರಕಲೆ ಮಾತ್ರವಲ್ಲದೇ ಸಾಹಿತಿಯಾಗಿ, ಸಂಸ್ಕೃತಿಯ ಹರಿಕಾರರಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಅಂತಃಕರಣ ಉಳ್ಳವರಾಗಿ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡವರು ತಿಪ್ಪೇಸ್ವಾಮಿ ಎಂದು ಹೇಳಿದರು.
ಸಜ್ಜನರು, ಸಾತ್ವಿಕರು, ಸಮಾಜಮುಖಿ ಚಿಂತಕರನ್ನು ಬೇಗ ಮರೆಯುತ್ತೇವೆ. ಇದು ನಮ್ಮ ನಾಡಿನ ದುರಂತವೇ ಸರಿ. ನಕಾರಾತ್ಮಕ ಚಿಂತನೆ ಬದಲು ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಎಲ್ಲಿ ಒಳ್ಳೆಯದು ಇದೆಯೋ ಅದನ್ನು ಮೆಚ್ಚುವ, ಪ್ರೋತ್ಸಾಹಿಸುವ, ಸಾಧ್ಯವಾದಷ್ಟು ಅದಕ್ಕೆ ಮಾನ್ಯತೆ ಕೊಡುವಂತಹ ಕಾರ್ಯವನ್ನು ಮಾಡಿದಾಗ ಅಂತಹ ಹತ್ತಾರು ತಿಪ್ಪೇಸ್ವಾಮಿಗಳು ಹುಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ತಿಪ್ಪೇಸ್ವಾಮಿ ಅವರು ನಾನು ಮಾಡಿದೇ ಎಂಬ ಭಾವನೆ ಬೆಳೆಸಿಕೊಳ್ಳದೇ ಬದಲಾಗಿ ಸೇವೆಗಾಗಿ ಭಗವಂತ ಅವಕಾಶ ಕಲ್ಪಿಸಿಕೊಟ್ಟನಲ್ಲಾ ಎನ್ನುವ ಭಾವನೆ ಮೈಗೂಡಿಸಿಕೊಂಡವರು. ಅಂತವರ ಸ್ಮರಣೆ ಕಾರ್ಯ ಮಾಡುತ್ತಿರುವ ಪ್ರತಿಷ್ಠಾನದ ಕಾರ್ಯ ಶ್ಲ್ಯಾಘನೀಯ ಎಂದು ಹೇಳಿದರು.
ಬೆಂಗಳೂರಿನ ಹಿರಿಯ ಕಲಾವಿದ ಚಿ.ಸು. ಕೃಷ್ಣಶೆಟ್ಟಿ ಪಿಆರ್‌ಟಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಚಿತ್ರಕಲಾವಿದ ತಿಪ್ಪೇಸ್ವಾಮಿ ಅವರು ಮಾನವೀಯ ನೆಲೆಗಟ್ಟಿನ ಮೇಲೆ ಬದುಕು ಕಟ್ಟಿಕೊಂಡವರು. ಮಾನವ ಸಂಬಂಧವನ್ನು ಬೆಸೆಯುವ ಕೆಲಸವನ್ನು ಮಾಡುತ್ತಾ ಬಂದವರು. ಅವರೊಬ್ಬ ಅಜಾತ ಶತ್ರು, ಅವರ ವ್ಯಕ್ತಿತ್ವದಿಂದಲೇ ಅವರು ಜೀವನದಲ್ಲಿ ಉತ್ತುಂಗಕ್ಕೆ ಏರಿದ ಮಹಾನ್ ಕಲಾವಿದ. ನಿಸರ್ಗ ಚಿತ್ರಗಳನ್ನು ರಚಿಸುವ ಮೂಲಕ ಚಿತ್ರಕಲಾ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದರು.
ಇತ್ತೀಚಿನ ದಿನಗಳಲ್ಲಿ ಚಿತ್ರಕಲೆ ಜನಮಾನಸದಿಂದ ದೂರ ಆಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಜನ ಸಾಮಾನ್ಯರನ್ನು ತಲುಪುವಲ್ಲಿ ಚಿತ್ರಕಲೆ ಹಿಂದೆ ಬಿದ್ದಿದೆ. ಚಿತ್ರಕಲಾ ಕ್ಷೇತ್ರದ ಮುಂದೆ ಅನೇಕ ಸವಾಲುಗಳು ಎದುರಾಗಿವೆ. ಅವೆಲ್ಲವುಗಳನ್ನು ಮೆಟ್ಟಿ ನಿಂತು ಚಿತ್ರಕಲಾ ಕ್ಷೇತ್ರವನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ಹೇಳಿದರು.
ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿವಿ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪಿ.ಆರ್. ತಿಪ್ಪೇಸ್ವಾಮಿ ಅಧ್ಯಯನ ಪೀಠವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ಅಗತ್ಯ. ಸರ್ಕಾರದ ಅನುದಾನ ಪಡೆಯಲು ಪ್ರಯತ್ನ ಮಾಡಬೇಕಾಗಿದೆ ಎಂದ ಅವರು, ಕಾಲೇಜು ಇನ್ನೂ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು.
ಪಿಆರ್‌ಟಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಚಿತ್ರಕಲಾವಿದ ಅಶೋಕ್ ವಿ. ಭಂಡಾರೆ ಹಾಗೂ ಚೌಡಕಿ ಪದ ಕಲಾವಿದೆ ರಾಧಾಬಾಯಿ ಮಾರುತಿ ಮಾದಾರ ಇವರಿಗೆ 25 ಸಾವಿರ ರೂ. ನಗದು, ಸ್ಮರಣಿಕೆಯೊಂದಿಗೆ `ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆ. ರಂಗನಾಥ್ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಸಿ. ಮಹದೇವಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ, ದತ್ತಾತ್ರೇಯ ಭಟ್ ಮತ್ತಿತರರು ಉಪಸ್ಥಿತರಿದ್ದರು.