ಶಾಸಕ ರಾಮಪ್ಪ ಅವರಿಗೆ ಕೈ ತಪ್ಪಿದ ಟಿಕೆಟ್ : ಅಭಿಮಾನಿಗಳಲ್ಲಿ ತೀವ್ರ ಬೇಸರ
ಮಲೇಬೆನ್ನೂರು, ಏ.18- ಕೊನೆಗೂ ಹರಿಹರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದ್ದು, ನಂದಿಗಾವಿ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.
ಕಾಂಗ್ರೆಸ್ ಪಕ್ಷ ಮಂಗಳವಾರ ರಾತ್ರಿ ಬಿಡುಗಡೆ ಮಾಡಿರುವ 4ನೇ ಪಟ್ಟಿಯಲ್ಲಿ ನಂದಿಗಾವಿ ಶ್ರೀನಿವಾಸ್ ಅವರ ಹೆಸರನ್ನು ಹರಿಹರಕ್ಕೆ ಘೋಷಣೆ ಮಾಡಿದ್ದು, ಇದರಿಂದ ಕಳೆದ 15 ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಹರಿಹರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ತೆರೆ ಬಿದ್ದಂತಾಯಿತು.
ಸ್ವಾಮೀಜಿಯೊಬ್ಬರ ಒತ್ತಡಕ್ಕೆ ಮಣಿದು ನಂದಿಗಾವಿ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ ಎನ್ನಲಾಗಿದೆ.
ಕಾಂಗ್ರೆಸ್ ಟಿಕೆಟ್ಗಾಗಿ ಕೊನೆಯ ಕ್ಷಣದವರೆಗೂ ಪ್ರಯತ್ನ ನಡೆಸಿದ ಶಾಸಕ ಎಸ್.ರಾಮಪ್ಪ ಅವರಿಗೆ ನಿರೀಕ್ಷೆಯಂತೆಯೇ ಟಿಕೆಟ್ ತಪ್ಪಿಸಲಾಗಿದೆ. ಇದರಿಂದಾಗಿ ರಾಮಪ್ಪ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಗಿದೆ.
ಜಿ.ಪಂ. ಮಾಜಿ ಸದಸ್ಯರೂ ಆದ ವಕೀಲ ಎಂ.ನಾಗೇಂದ್ರಪ್ಪ ಅವರೂ ಕೂಡಾ ಕಾಂಗ್ರೆಸ್ ಟಿಕೆಟ್ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಈ ಬಾರಿಯೂ ಟಿಕೆಟ್ ಮಿಸ್ ಆಗಿರುವು ದು ಅವರ ಅಭಿಮಾನಿಗಳಲ್ಲೂ ಬೇಸರ ತಂದಿದೆ.
ನಾಗೇಂದ್ರಪ್ಪ ಅವರು 2013 ಮತ್ತು 2018ರ ವಿಧಾನ ಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರ ಪ್ರಯತ್ನ ನಡೆಸಿದ್ದರು.
ಹರಿಹರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಶಾಸಕ ಎಸ್.ರಾಮಪ್ಪ, ಎಂ.ನಾಗೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್, ಡಾ. ಹೆಚ್.ಮಹೇಶಪ್ಪ, ನಂದಿಗಾವಿ ಗೋವಿಂದರೆಡ್ಡಿ, ಕುಣೆಬೆಳಕೆರೆ ದೇವೇಂದ್ರಪ್ಪ, ನಿಖಿಲ್ ಕೊಂಡಜ್ಜಿ, ಕೃಷ್ಣ ಸಾ ಭೂತೆ, ಎಂ.ಎಸ್.ಬಾಬುಲಾಲ್ ಸೇರಿ ಒಟ್ಟು 9 ಜನ ಆಕಾಂಕ್ಷಿಗಳಾಗಿದ್ದರು.
ನಂದಿಗಾವಿ ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಶಾಸಕ ರಾಮಪ್ಪ, ಜಿ.ಪಂ. ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಸೇರಿದಂತೆ ಉಳಿದ 8 ಆಕಾಂಕ್ಷಿಗಳು ಮುಂದೆ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.