ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಯುವಕನನ್ನು ಗೆಲ್ಲಿಸಿ, ಅವಕಾಶ ಕೊಡಬೇಕೆಂಬ ಬಯಕೆ ಮತದಾರರ ಮನದಲ್ಲಿದೆ . ನೂರಕ್ಕೆ ನೂರರಷ್ಟು ಬಿಜೆಪಿ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಹೇಳಿದರು. ಮಹಾನಗರ ಪಾಲಿಕೆ ಸದಸ್ಯನಾಗಿ, ಮೇಯರ್ ಆಗಿ ಮಾಡಿದ ಕೆಲಸ ಕಾರ್ಯಗಳನ್ನು ಗುರುತಿಸಿದ್ದಾರೆ. ದಕ್ಷಿಣ ಕ್ಷೇತ್ರದ ಮಗನಾಗಿ ಸೇವೆ ಮಾಡಲು ಅವಕಾಶ ನೀಡಿ ಎಂದು ಮತ ಯಾಚಿಸುತ್ತೇನೆ ಎಂದರು. ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತಿದ್ದು, ಏ.20ರಂದು ಬೃಹತ್ ಮೆರವಣಿಗೆ ಮೂಲಕ ಪಕ್ಷದ ವರಿಷ್ಠರು, ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸುವುದಾಗಿ ಅಜಯ್ ಕುಮಾರ್ ಹೇಳಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಸಾಕಷ್ಟಿದ್ದು, ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸುವ ಚಿಂತನೆ ನನಗಿದೆ ಎಂದು ಸದಾಶಯ ವ್ಯಕ್ತಪಡಿಸಿದರು.
ತಮ್ಮ ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ರು ತಮಗೆ ಏಕೆ ಈ ಒಂದು ಅವಕಾಶ ಸಿಕ್ಕಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಜಯ್ ಕುಮಾರ್, ಪಕ್ಷದ ವರಿಷ್ಠರ ತೀರ್ಮಾನದಂತೆ ನನಗೊಂದು ಅವಕಾಶ ಸಿಕ್ಕಿದ್ದು, ಇದಕ್ಕೆ ದಾವಣಗೆರೆ ಜಿಲ್ಲೆಯ ನಾಯಕರು, ಮುಖಂಡರುಗಳ ಬೆಂಬಲವು ಸಹ ಇದೆ. ಇದಕ್ಕೆ ನಾನು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಅಜಯ್ ಕುಮಾರ್ ಅವರ ಧರ್ಮಪತ್ನಿ ಮಂಗಳ ಅಜಯ್ ಕುಮಾರ್, ಪುತ್ರ ಭರತ್, ಮುಖಂಡರುಗಳಾದ ಕೆ.ಬಿ. ಶಂಕರ್ ನಾರಾಯಣ, ವೈ. ಮಲ್ಲೇಶ್, ಸೂಚಕರಾದ ಕೊಳ್ಳೇನಳ್ಳಿ ಸತೀಶ್, ಧನರಾಜ್, ಶಿವಮೊಗ್ಗದ ಸಿದ್ದರಾಮಣ್ಣ, ವಕೀಲರಾದ ಹನುಮಂತ ಇದ್ದರು.