ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿನ ಶ್ರೀರಕ್ಷೆ: ರಾಮಚಂದ್ರ

ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿನ ಶ್ರೀರಕ್ಷೆ: ರಾಮಚಂದ್ರ

ಜಗಳೂರಿನಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ನಾಮಪತ್ರ ಸಲ್ಲಿಕೆ

ಜಗಳೂರು, ಏ.16- ಬಿಜೆಪಿ  ಅಧಿಕೃತ ಅಭ್ಯರ್ಥಿಯಾಗಿ ಬಿ ಫಾರಂನೊಂದಿಗೆ ಸೋಮವಾರ ನಾಮಪತ್ರ ಸಲ್ಲಿಸಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು. 

ಪಟ್ಟಣದಲ್ಲಿನ ಅವರ ನಿವಾಸದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀ ರಕ್ಷೆ ಎಂದರು.

ನನ್ನ ಆಡಳಿತಾವಧಿಯಲ್ಲಿ ನನ್ನ ಅಭಿವೃದ್ದಿ ಕಾಮಗಾರಿ ಮನಗಂಡು ವರಿಷ್ಠರು ನನಗೆ  ಟಿಕೆಟ್ ನೀಡಿದ್ದಾರೆ. ಕ್ಷೇತ್ರದ ಜನತೆಯ ಆಶೀರ್ವಾದ ನನ್ನ ಮೇಲಿದೆ.  ಈಗಾಗಲೇ ಮೂರು ಬಾರಿ ಗೆದ್ದಿದ್ದೇನೆ. ನಾಲ್ಕನೇ ಬಾರಿ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗುವೆ ಎಂದು ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಆಡಳಿತಾವಧಿಯಲ್ಲಿ ಬಿಜೆಪಿ ಸರ್ಕಾರದ ಸಹಕಾರದಿಂದ  ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸಾಕಾರಗೊಂಡು, 45 ಸಾವಿರ ಎಕರೆ ಜಮೀನು ಹನಿ ನೀರಾವರಿ ಪ್ರದೇಶವಾಗಲಿದೆ. ಬಹುಗ್ರಾಮ ಕುಡಿಯುವ ನೀರಿ‌ನ ಯೋಜನೆ ಸಂತೆಮುದ್ದಾಪುರದಿಂದ 164 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಕ್ಷೇತ್ರದಲ್ಲಿ 190 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿ ಸಲಾಗಿದೆ. ಪಟ್ಟಣದಲ್ಲಿ ಎರಡು ವಾಲ್ಮೀಕಿ ಸಮುದಾಯ ಭವನ, ತಲಾ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವೆ. ಕೆರೆ ಅಭಿವೃದ್ದಿ, ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು, ವಸತಿ ರಹಿತ 4078 ಫಲಾನುಭವಿಗಳಿಗೆ ಸೂರು  ಕಲ್ಪಿಸಲಾಗಿದೆ. ಸ್ವಯಂ ಉದ್ಯೋಗ, ಆರ್ಥಿಕ ಸಂಪನ್ಮೂಲ, 150 ಪರಿಶಿಷ್ಠ ಸಮುದಾಯಗಳ ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಾಯ ಧನ, ಅಲೆಮಾರಿ ಸಮುದಾಯಕ್ಕೆ ಸೂರಿನ ವ್ಯವಸ್ಥೆ ಕಲ್ಪಿಸಿರುವೆ. ಮೂರು ಸಾವಿರದ ಐದುನೂರು ಕೋಟಿ ಅನುದಾನ ತಂದಿರುವೆ.

ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಮಚಂದ್ರ, ಪಕ್ಷದ ಟಿಕೆಟ್ ತಪ್ಪಿದ್ದರಿಂದ ಹತಾಶರಾಗಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅದ್ದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಮುಖಂಡರಾದ ಡಿ.ವಿ.ನಾಗಪ್ಪ, ಸೊಕ್ಕೆ ನಾಗರಾಜ್, ಶಶಿಧರ್, ಎಸ್.ಕೆ.ಮಂಜುನಾಥ್, ಭೀಮಾನಾಯಕ, ಸಿದ್ದೇಶ್, ಮಂಜಣ್ಣ  ಉಪಸ್ಥಿತರಿದ್ದರು.

error: Content is protected !!