ಸಂಗೀತಾಸಕ್ತರು ಹೆಚ್ಚಾಗಿರುವುದು ದಾವಣಗೆರೆ ವಿಶೇಷತೆ

ಸಂಗೀತಾಸಕ್ತರು ಹೆಚ್ಚಾಗಿರುವುದು ದಾವಣಗೆರೆ ವಿಶೇಷತೆ

`ನಿನಾದ-8′ ಸಂಗೀತ ಶಿಬಿರ ಉದ್ಘಾಟಿಸಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಆನಂದ್ ರಾವ್ ಪಾಟೀಲ್

ದಾವಣಗೆರೆ, ಏ.16- ಚಿಕ್ಕ ಮಕ್ಕಳಿಂದ ವೃದ್ಧರಾದಿಯಾಗಿ ಸಂಗೀತ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸುವುದು ದಾವಣಗೆರೆಯ ವಿಶೇಷತೆ ಎಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಆನಂದ್ ರಾವ್ ಪಾಟೀಲ್ ಹೇಳಿದರು.

ಸುಶ್ರಾವ್ಯ ಸಂಗೀತ ವಿದ್ಯಾಲಯ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಭಾನುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಗೀತ ಗಾಯನ ತರಬೇತಿ ಶಿಬಿರ `ನಿನಾದ-8′ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ನಗರಿಯಾಗಿದ್ದ ದಾವಣಗೆರೆ ಇಂದು ವಿದ್ಯಾಕಾಶಿಯಾಗಿ ಬೆಳೆಯುತ್ತಿದೆ. ಸಂಗೀತದ ಆಸಕ್ತರೂ ಇಲ್ಲಿ ಹೆಚ್ಚಾಗಿದ್ದಾರೆ. ಕಲೆ, ಸಾಹಿತ್ಯ, ಸಂಗೀತವನ್ನು ಪ್ರೋತ್ಸಾಹಿಸುವವರು ಇದ್ದಾರೆ ಎಂದು ಹೇಳಿದರು.

 ನಗರದಲ್ಲಿ ಸಂಗೀತ ಕ್ಷೇತ್ರದಲ್ಲಿ ಯಶಾ ದಿನೇಶ್ ಅವರ ಕೊಡುಗೆ ಹೆಚ್ಚಾಗಿದೆ. ಇಂತಹ ಶಿಬಿರಗಳನ್ನು ಏರ್ಪಡಿಸಿ, ಸಂಗೀತ ಕಲಿಸುತ್ತಾ ಕವಿಗಳನ್ನೂ ಪರಿಚಯಿಸುವ ಮೂಲಕ ಅವರು ಕಲೆ ಉಳಿಸಲು ಬದ್ಧರಾಗಿದ್ದಾರೆ ಎಂದು ಅವರು ಶ್ಲ್ಯಾಘಿಸಿದರು.

ಹೆಚ್.ಎಸ್. ವೆಂಕಟೇಶಮೂರ್ತಿ ಅವರ `ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಹಾಡು ಹೇಳಿದ ಆನಂದ್ ರಾವ್ ಅವರು, ವೆಂಕಟೇಶ ಮೂರ್ತಿ ಅವರು ರಚಿಸಿರುವ ಹಲವಾರು ಹಾಡುಗಳು ಜನಪ್ರಿಯವಾಗಿವೆ. ಅವರೊಬ್ಬ ಅದ್ಭುತ ಕವಿಯಾಗಿದ್ದಾರೆ. ಅವರ ಕುರಿತು ಇಂದು ತಿಳಿದುಕೊಳ್ಳುತ್ತಿರುವ ಎಲ್ಲರೂ ಭಾಗ್ಯವಂತರು ಎಂದರು.

ಸುಶ್ರಾವ್ಯ ಸಂಗೀತ ವಿದ್ಯಾಲಯದ ನಿರ್ದೇಶಕರಾದ ಶ್ರೀಮತಿ ಯಶಾ ದಿನೇಶ್ ಮಾತನಾಡುತ್ತಾ, ಸಂಗೀತ ಕಲಿಸುವ ಜೊತೆಗೆ ಕವಿಗಳನ್ನು ಪರಿಚಯಿಸಿ ಜ್ಞಾನ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ನಿನಾದ ಶಿಬಿರ ಆರಂಭಿಸಲಾಗುತ್ತಿದೆ. ಇದು 8ನೇ ಶಿಬಿರವಾಗಿದ್ದು, ಪ್ರತಿ ಶಿಬಿರದಲ್ಲೂ ಒಬ್ಬ ಕವಿಯ ಪರಿಚಯ ಹಾಗೂ ಅವರ 10 ಹಾಡುಗಳನ್ನು ಕಲಿಸಲಾಗುತ್ತದೆ ಎಂದರು.

ಸುಗಮ ಸಂಗೀತ ಕ್ಷೇತ್ರವು ಸಿನಿಮಾ ಕ್ಷೇತ್ರದಷ್ಟೇ ಪ್ರಸಿದ್ಧವಾಗಿರುವುದು ಕರ್ನಾಟಕದಲ್ಲಿ ಮಾತ್ರ. ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡುವ, ಭಾವಗೀತೆಗಳನ್ನು ಪ್ರೀತಿಸುವುದು ನಮ್ಮ ರಾಜ್ಯದಲ್ಲಷ್ಟೇ ಎಂದು ಯಶಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ರಜೆಗಳಲ್ಲಿ ಟಿವಿ ಹಾಗೂ ಮೊಬೈಲ್‌ಗಳಿಂದ ಮಕ್ಕಳನ್ನು ದೂರ ಇಡಲು ಪೋಷಕರು ಬೇಸಿಗೆ ಶಿಬಿರಗಳ ಮೊರೆ ಹೋಗುತ್ತಾರೆ. ಆದರೆ ಇಂತಹ ಸಂಗೀತ ಶಿಬಿರ ಪೋಷಕರ ಉತ್ತಮ ಆಯ್ಕೆ ಎಂದರು.

ಸುಜಾತ ಬಸವರಾಜ್, ಸುಮಾ ಗುರುಬಸಪ್ಪ ಉಪಸ್ಥಿತರಿದ್ದರು. ಚಂದ್ರಿಕಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರೆ, ವಿಜಯ ಚಂದ್ರಶೇಖರ್ ವಂದಿಸಿದರು.

error: Content is protected !!