ಮಾಯಕೊಂಡ ಕ್ಷೇತ್ರಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ : ಎಸಿ ದುರ್ಗಾಶ್ರೀ
ದಾವಣಗೆರೆ, ಏ. 12- ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಳೆ ದಿನಾಂಕ 13ರಿಂದ ತಹಶೀಲ್ದಾರ್ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಬಹುದಾಗಿದೆ ಎಂದು ಉಪ ವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಶ್ರೀಮತಿ ಎನ್. ದುರ್ಗಶ್ರೀ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಾಮಪತ್ರ ಸಲ್ಲಿಸಲು ಏ.20 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಲಾಗಿದೆ. ಆದಾಗ್ಯೂ ಕಚೇರಿ ಮುಂಭಾಗ ಒಂದು ಕೌಂಟರ್ ತೆರೆದು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಜೊತೆಗೆ ನಾಲ್ವರಿಗೆ ಮಾತ್ರ ಅವಕಾಶವಿರುತ್ತದೆ. ಕಚೇರಿಯ 100 ಮೀಟರ್ ಒಳಗಡೆ ಮೂರು ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ ಎಂದವರು ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ಅಂತಿಮವಾಗಿ 1,87,672 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 18 ರಿಂದ 19 ವರ್ಷದೊಳಗಿನವರು 4229 ಮತದಾರರಿದ್ದಾರೆ. 240 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 2570 ವಿಕಲಚೇತನ ಮತದಾರರಿದ್ದಾರೆ. 3816 ಮತದಾರರು 80 ವರ್ಷಕ್ಕೂ ಹೆಚ್ಚಿನವರಾಗಿದ್ದಾರೆ. ಇವರೆಲ್ಲರಿಗೂ ಮನೆಯಲ್ಲಿಯೇ ಮತ ಚಲಾಯಿಸಲು 12ಡಿ ಫಾರಂ ನೀಡಲಾಗಿದೆ. ಇವರ ಪೈಕಿ ಬಹುತೇಕರು ಮತಗಟ್ಟೆಗೇ ಬಂದು ಮತ ಚಲಾಯಿಸುವ ಉತ್ಸುಕತೆಯಲ್ಲಿದ್ದಾರೆ ಎಂದು ಹೇಳಿದರು.
5 ಪಿಂಕ್ ಬೂತ್ ಸ್ಥಾಪನೆ
ಮಾಯಕೊಂಡ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿರುವ ಕಡೆ 5 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾಧಿಕಾರಿ ದುರ್ಗಶ್ರೀ ಹೇಳಿದರುತೋಳಹುಣಸೆಯ ಯಲ್ಲಮ್ಮ ನಗರ, ಆನಗೋಡು, ಚಿಕ್ಕತೊಗಲೇರಿ, ಮಲ್ಲೇನಹಳ್ಳಿ ಹಾಗೂ ಹೊನ್ನಮರಡಿಯಲ್ಲಿ ಪಿಂಕ್ ಬೂತ್ ಸ್ಥಾಪಿಸಲಾಗುವುದು ಎಂದು ಹೇಳಿದರು.ಬಾಡಾ ಹಾಗೂ ಲೋಕಿಕೆರೆಯಲ್ಲಿ ಯುವ ಬೂತ್ಗಳನ್ನು ಹಾಗೂ ಗಿರಿಯಾಪುರ ದಲ್ಲಿ ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಹೆಬ್ಬಾಳು ಟೋಲ್‌ಗೇಟ್, ಕಾರಿಗನೂರು ಕ್ರಾಸ್ ಹಾಗೂ ಹೆಚ್.ಬಸಾಪುರದ ಬಳಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಹೆಬ್ಬಾಳು ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 39 ಕೆ.ಜಿ. ಬೆಳ್ಳಿ ವಶ ಪಡಿಸಿಕೊಳ್ಳಲಾಗಿತ್ತು ಎಂದು ಹೇಳಿದರು.
ಮತದಾನ ಕೇಂದ್ರದಲ್ಲಿ ನಾಲ್ಕು ಕೊಠಡಿಗಳಿದ್ದರೆ ಅಲ್ಲಿ ಒಂದು ಕೊಠಡಿಯನ್ನು ವಿಶ್ರಾಂತಿ ಕೊಠಡಿಯ ನ್ನಾಗಿ ಮಾಡಲಾಗುವುದು. ಮತದಾನ ಕೇಂದ್ರದಲ್ಲಿ ಶೌಚಾಲಯಗಳು ಸರಿ ಇಲ್ಲದಿದ್ದರೆ ದುರಸ್ತಿಪಡಿಸ ಲಾಗುವುದು. ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ಮಾತನಾಡಿ, ಮಾಯಕೊಂಡವನ್ನು ಪ್ರತ್ಯೇಕ ತಾಲ್ಲೂಕು ಕೇಂದ್ರವನ್ನಾಗಿಸುವಂತೆ ಒತ್ತಾಯಿಸಿ ಮತದಾನ ಬಹಿಷ್ಕರಿಸಲಾಗುವುದು ಎಂದು ಅಲ್ಲಿನ ಗ್ರಾಮಸ್ಥರು ಹೇಳಿದ್ದರು. ಆದರೆ ಸ್ಥಳಕ್ಕೆ ಭೇಟಿ ನೀಡಿ ಜನರ ಮತ ಒಲಿಸಲಾಗಿದೆ ಎಂದು ಹೇಳಿದರು.