ದಾವಣಗೆರೆ, ಏ. 10- ಸೋಮವಾರ ದಂದು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಪೂರ್ವಸಿದ್ಧತೆ ಪರಿಶೀಲಿಸಲು ಮಾಕ್ ಡ್ರಿಲ್ ನಡೆಸಲಾಯಿತು.
ದೇಶದ ಹಲವೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಕ್ ಡ್ರಿಲ್ ನಡೆಸಲು ರಾಜ್ಯ ಸರ್ಕಾರ ಸೂಚನೆ ನೀಡಿತ್ತು.
ಅದರಂತೆ ಜಿಲ್ಲಾ ಚಿಗಟೇರಿ ಆಸ್ಪತ್ರೆ ಯಿಂದ ಹಿಡಿದು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕೊರೊ ನಾಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, 79 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 11 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 4 ಸಮುದಾಯ ಆರೋಗ್ಯ ಕೇಂದ್ರಗಳು, 4 ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲಾಯಿತು. ಒಟ್ಟು ನೂರು ಸರ್ಕಾರಿ ಆಸ್ಪತ್ರೆಗಳ ಜೊತೆಗೆ, ಒಂಭತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಯಿತು ಎಂದರು.
ಕೊರೊನಾ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಪರಿಶೀಲನೆಗಾಗಿ ಮಾಕ್ ಡ್ರಿಲ್ ನಡೆಸಲಾಯಿತು. ಈ ಸಂದರ್ಭದಲ್ಲಿ ಲಭ್ಯವಿರುವ ವಾರ್ಡುಗಳು, ಸೋಂಕಿತರ ಪತ್ತೆ, ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ, ಬೆಡ್‌ಗಳ ಲಭ್ಯತೆ, ಆಕ್ಸಿಜನ್ – ಐಸಿಯು ಮತ್ತಿತರೆ ಸೌಲಭ್ಯಗಳ ಬಗ್ಗೆ ಪರಿಶೀಲಿಸಲಾಯಿತು.
ಔಷಧ, ಮಾಸ್ಕ್, ಪಿಪಿಇ ಕಿಟ್ ಇತ್ಯಾದಿಗಳ ಲಭ್ಯತೆಯ ಬಗ್ಗೆ ಪರಿಶೀಲಿಸಲಾಯಿತು. ಆಕ್ಸಿಜನ್ ನಿರ್ವಹಣೆ, ಕಾನ್ಸಂಟ್ರೇಟರ್ ಲಭ್ಯತೆ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಉತ್ಪಾದನಾ ಘಟಕಗಳ ಕಾರ್ಯನಿರ್ವಹಣೆ, ಆಂಬ್ಯುಲೆನ್ಸ್‌ಗಳ ಲಭ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಈ ಎಲ್ಲ ಮಾಹಿತಿಯನ್ನು ನಾಳೆ ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ರಾಘವನ್ ಹೇಳಿದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಮಾಕ್‌ಡ್ರಿಲ್ ನಡೆಸಿದ ಬಗ್ಗೆ ಮಾಹಿತಿ ನೀಡಿರುವ ಪ್ರಭಾರಿ ಜಿಲ್ಲಾ ಸರ್ಜನ್ ಡಾ. ಸುಭಾಷ್ ಚಂದ್ರ, ಆಸ್ಪತ್ರೆಯಲ್ಲಿ 20 ಬೆಡ್, 10 ಎಂ.ಐ.ಸಿ.ಯು ಹಾಗೂ 5 ವೆಂಟಿಲೇಟರ್‌ಗಳನ್ನು ಕೊರೊನಾ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗ 58 ಸಕ್ರಿಯ ಸೋಂಕಿತರಿದ್ದಾರೆ. ದಾವಣಗೆರೆಯಲ್ಲಿ 14, ಚನ್ನಗಿರಿಯಲ್ಲಿ 5, ಹರಿಹರದಲ್ಲಿ 1, ಹೊನ್ನಾಳಿಯಲ್ಲಿ 8 ಹಾಗೂ ಜಗಳೂರಿನಲ್ಲಿ 30 ಸೋಂಕಿತರಿದ್ದಾರೆ. ಇವರಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಎಲ್ಲರೂ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ರಾಘವನ್ ತಿಳಿಸಿದ್ದಾರೆ.