ದಾವಣಗೆರೆ, ಏ.10- ನ್ಯಾ.ಸದಾಶಿವ ಆಯೋಗದ ವರದಿ ರದ್ದುಗೊಳಿಸುವಂತೆ ಹಾಗೂ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲಾತಿ ಹಂಚಿಕೆ ಮಾಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ, ಸೋಮವಾರ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿ ಭಟನೆ ನಡೆಸುವ ಮೂಲಕ ಉಪವಿಭಾಗಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ. ನ್ಯಾ.ಸದಾಶಿವ ಆಯೋಗದ ವರದಿ ಒಪ್ಪಿಲ್ಲ ಎನ್ನುತ್ತಲೇ ವರದಿ ಆಧರಿಸಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂಕೋರ್ಟ್ನ ತೀರ್ಪಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲಾತಿ ಹಂಚಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವುದನ್ನು ತಡೆಹಿಡಿಯಬೇಕು. ಒಳಮೀಸಲಾತಿಯೇ ಅಸಂವಿಧಾನಿಕ ಆಗಿರುವಾಗ ಗುಂಪು ಮೂರರ ಹೆಸರಿನಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಅವೈಜ್ಞಾನಿಕವಾಗಿದ್ದು, ನಮ್ಮ ಸಮುದಾಯಗಳಿಗೆ ಮಾಡಿದ ಮಹಾದ್ರೋಹ ಎಂದು ಕಿಡಿಕಾರಿದರು.
ಈ ವೇಳೆ ಬಂಜಾರ ಸಮಾಜದ ಮುಖಂಡ ಚಿನ್ನಸಮುದ್ರ ಶೇಖರನಾಯ್ಕ್ ಮಾತನಾಡಿ, ಸಚಿವ ಜೆ.ಸಿ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿಯು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಹೋದರ ಸಮುದಾಯಗಳ ಕುರಿತು ವಸ್ತುನಿಷ್ಠ ಅಧ್ಯಯನ ಮಾಡದೆ, ಈ ಉಪ ಸಮಿತಿಯ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯದಲ್ಲಿನ ಐಕ್ಯತೆ ಹಾಳು ಮಾಡಲು ಸ್ಪೃಶ್ಯರು, ಅಸ್ಪೃಶ್ಯರು, ಎಲ್ಲಾ ಸೌಲಭ್ಯ ಪಡೆದವರು, ಮುಂದುವರೆದವರು, ಅಭಿವೃದ್ಧಿ ಆಗಿರುವವರು, ಎಡಗೈ, ಬಲಗೈ, ಸಂವಿಧಾನದ ಆರ್ಟಿಕಲ್ 341(2), 341(3) ಪ್ರಸ್ತಾಪ ಇತ್ಯಾದಿ ಅಂಶಗಳನ್ನು ಪ್ರಸ್ತಾಪಿಸುವ ಮೂಲಕ ವಿಭಜಿಸಲಾಗಿದೆ. ಹೀಗೆ ಅವಾಸ್ತವಿಕ ಅಂಶಗಳ ಮುಖಾಂತರ ಪರಿಶಿಷ್ಟ ಸಹೋದರ ಸಮುದಾಯಗಳ ನಡುವಿನ ಐಕ್ಯತೆ ಛಿದ್ರಗೊಳಿಸುವ ಉಪ ಸಮಿತಿಯ ವರದಿ ತಿರಸ್ಕರಿಸುವಂತೆ ಒತ್ತಾಯಿಸಿದರು.
ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿಗಳ ಪಟ್ಟಿಗೆ ಯಾವುದೇ ಜಾತಿಗಳನ್ನು ಸೇರ್ಪಡೆಗೊಳಿಸಲು ಅಥವಾ ತೆಗೆದು ಹಾಕಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ಆದರೆ, ರಾಜ್ಯ ಸರ್ಕಾರವು ಅನಗತ್ಯ ಹಸ್ತಕ್ಷೇಪ ಮಾಡದಿರುವಂತೆ ಸೂಚಿಸಬೇಕು ಮತ್ತು ಒಳ ಮೀಸಲಾತಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೊಟ್ರೇಶ್ನಾಯ್ಕ್, ನಂಜಾ ನಾಯ್ಕ್, ಲಕ್ಷ್ಮಣ್ ನಾಯ್ಕ್, ಮಂಜಾನಾಯ್ಕ್, ಡಿ.ಬಸವರಾಜ್, ಹನುಮಂತಪ್ಪ, ಮಂಜುನಾಥ್, ಚಂದ್ರಪ್ಪ, ಶ್ರೀನಿವಾಸ, ರಾಮಪ್ಪ, ಎಸ್. ಬಸವ ರಾಜ್ ನಾಯ್ಕ್ ಸೇರಿದಂತೆ ಬಂಜಾರ, ಭೋವಿ, ಕೊರಚ, ಕೊರಮ ಸಮಾಜದ ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತಿತರರಿದ್ದರು.