ಸ್ವಚ್ಛತೆ ಇಲ್ಲದೆ ಸೊರಗುತ್ತಿದೆ ಗಾಜಿನ ಮನೆ

ಸ್ವಚ್ಛತೆ ಇಲ್ಲದೆ ಸೊರಗುತ್ತಿದೆ ಗಾಜಿನ ಮನೆ

ದಾವಣಗೆರೆ, ಏ.10- ರಾಜ್ಯದಲ್ಲಿಯೇ ಅತಿ ದೊಡ್ಡದು ಎಂಬ ಖ್ಯಾತಿ ಹೊಂದಿರುವ ದಾವಣಗೆರೆ ಗಾಜಿನ ಮನೆ ಆವರಣದಲ್ಲಿ ಸ್ವಚ್ಛತೆಯ ಕೊರತೆ ಕಾಣುತ್ತಿದೆ.

ತೋಟಗಾರಿಕೆ ಇಲಾಖೆಯಿಂದ  ಕುಂದುವಾಡ ಬಳಿಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡು ಬೃಹತ್‌ ಗಾಜಿನ ಮನೆ ಜಿಲ್ಲೆಗೊಂದು ಹೆಗ್ಗಳಿಕೆಯಾಗಿತ್ತು. ದಾವಣಗೆರೆಗೆ ಬಂದವರು ಗಾಜಿನ ಮನೆಗೊಮ್ಮೆ ಭೇಟಿ ಕೊಟ್ಟೇ ಹೋಗಬೇಕು ಎನ್ನುತ್ತಿದ್ದರು. ಆದರೆ ಇದೀಗ ಅಲ್ಲಿಗೆ ಬಂದವರಿಗೆ ಕಸದ ರಾಶಿಯ ದರುಶನ ಭಾಗ್ಯವೂ ಲಭ್ಯವಿದೆ. 

ಬೇಸಿಗೆ ರಜೆ ಆರಂಭವಾಗಿದೆ. ಗಾಜಿನ ಮನೆ ನೋಡಲು ಜನತೆ ಕುಟುಂಬ ಸಹಿತ ಆಗಮಿಸ ಲಾರಂಭಿಸಿದೆ. ಗಾಜಿನ ಮನೆ ಆವರಣದಲ್ಲಿ ಮಕ್ಕಳಿಗಾಗಿ ಉಯ್ಯಾಲೆ, ಜಾರುಬಂಡಿ ಮೊದಲಾದ ಆಟಿಕೆಗಳಿವೆ. ತುಸು ಹೊತ್ತು ಗಾಜಿನ ಮನೆ ನೋಡಿದ ನಂತರ ಮಕ್ಕಳಿಗಾಗಿ ಆಟಿಕೆಗಳು, ವ್ಯಾಮಾಮ ಪರಿಕರಗಳತ್ತ ಓಡುತ್ತಾರೆ.

ಆದರೆ ಆ ಸ್ಥಳದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಐಸ್‌ ಕ್ರೀಂ ಕವರ್‌ಗಳು, ಚಾಕೋಲೇಟ್ ಕವರ್‌ಗಳು, ನೀರು ಹಾಗೂ ಜ್ಯೂಸ್ ಬಾಟಲ್‌ಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಇನ್ನು ಸನಿಹದಲ್ಲಿಯೇ ನೀರಿನ ಬಾಟಲ್‌ಗಳ ರಾಶಿ ಕಾಣುತ್ತಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಗಾಜಿನ ಮನೆ ನಿರ್ಮಿಸಿ, ಪ್ರತಿ ವ್ಯಕ್ತಿಗೆ 20 ರೂ. ಶುಲ್ಕ ವಿಧಿಸುವ ತೋಟಗಾರಿಕೆ ಇಲಾಖೆ ಸ್ವಚ್ಛತೆಗೆ ಏಕೆ ನಿರ್ಲಕ್ಷ್ಯ ವಹಿಸುತ್ತಿದೆ? ಎಂದು ಸಾರ್ವಜನಿಕರು ಪ್ರಶ್ನಿಸಲಾರಂಭಿಸಿದ್ದಾರೆ.

error: Content is protected !!