ಬೆಂಗಳೂರು, ಫೆ. 16- ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ, ಜಾರ್ಖಂಡ್ ಹಾಗೂ ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಎಂ. ರಾಮ ಜೋಯಿಸ್ ಇಂದು ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕಾನೂನು ವಿದ್ವಾಂಸರಾಗಿದ್ದ ಅವರು ಸಂವಿಧಾನ ತಜ್ಞರಾಗಿದ್ದರು, ಭಾರತದ ಹಲವು ಹೈಕೋರ್ಟ್ಗಳಲ್ಲಿ ನ್ಯಾಯಾಧೀಶರಾಗಿ, ಮುಖ್ಯ ನ್ಯಾಯಾಧೀಶರಾಗಿ ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ ಗೌರವ ಇವರದ್ದಾಗಿದೆ.
ನ್ಯಾಯಮೂರ್ತಿ ಜೋಯಿಸ್ ರಾಜ್ಯಸಭೆ ಸದಸ್ಯರಾಗಿ ಮೇಲ್ಮನೆಯ ಗೌರವವನ್ನು ಹೆಚ್ಚಿಸಿದ್ದರಲ್ಲದೆ, ಪ್ರಾಚೀನ ಭಾರತದ ನ್ಯಾಯಿಕ ವ್ಯವಸ್ಥೆ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಅವರು, ಸದನದಲ್ಲಿ ಭಾರತೀಯ ಗ್ರಂಥಗಳಲ್ಲಿನ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ಅರ್ಥ ಹೇಳುತ್ತಿದ್ದರು.
ಅಧ್ಯಯನಶೀಲರೂ ಆಗಿದ್ದ ನ್ಯಾಯಮೂರ್ತಿ ಜೋಯಿಸ್, `ಧರ್ಮ ದಿ ಗ್ಲೋಬಲ್ ಎಥಿಕ್’, `ಲೀಗಲ್ ಅಂಡ್ ಕಾನ್ಸ್ಟಿಟ್ಯೂಶನಲ್ ಹಿಸ್ಟರಿ ಆಫ್ ಇಂಡಿಯಾ’, `ಹಿಸ್ಟಾರಿಕಲ್ ಬ್ಯಾಟಲ್’, `ನೀಡ್ ಫಾರ್ ಅಮೆಂಡಿಂಗ್ ಕಾನ್ಸ್ಟಿಟ್ಯೂಶನಲ್’, §ಕೋಡ್ ಆಫ್ ಕಂಡೆಕ್ಟ್ ಫಾರ್ ರೂಲರ್ಸ್’ ಮುಂತಾದ ಪುಸ್ತಕಗಳನ್ನು ಬರೆದಿದ್ದರು.
ನ್ಯಾಯಮೂರ್ತಿ ಜೋಯಿಸ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದು, ತಾವು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಹಲವು ಬಾರಿ ನ್ಯಾಯಮೂರ್ತಿ ಜೋಯಿಸ್ ಅವರಿಂದ ಕಾನೂನು ಸಲಹೆ ಪಡೆದಿದ್ದಾಗಿ ಸ್ಮರಿಸಿದ್ದಾರೆ.
ನ್ಯಾಯಮೂರ್ತಿ ಜೋಯಿಸ್ ಅವರ ನಿಧನದಿಂದ ನ್ಯಾಯ-ನೀತಿಯ ಪ್ರತಿಪಾದಕರೊಬ್ಬರನ್ನು ಸಮಾಜ ಕಳೆದುಕೊಂಡಂತಾಗಿದೆ ಎಂದಿದ್ದಾರೆ.