ದಾವಣಗೆರೆ, ಜ. 29 – ಈಡಿಗ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಬೇಕು, ಕುಲ ಕಸುಬನ್ನು ಮರಳಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ಸಮಾಜದ ಕುಲಗುರು ಡಾ. ಪ್ರಣವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಜಿಲ್ಲೆಯ ಮಾವಿನಕಟ್ಟೆ ಗ್ರಾಮಕ್ಕೆ ಶುಕ್ರವಾರ ಪ್ರವೇಶಿಸಿತು.ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ ಮೇಲೆ ಸರ್ಕಾರ ನಡೆಸುತ್ತಿರುವ ಸ್ಥಿತಿಸ್ಥಾಪಕತ್ವ ನಿಲ್ಲಿಸಬೇಕು ಹಾಗೂ
ಬ್ರಹ್ಮಶ್ರೀ ನಾರಾಯಣ ಗುರು ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌದ ಮುಂದೆ ಸ್ಥಾಪಿಸಬೇಕು ಎಂಬುದು ಸೇರಿದಂತೆ, ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಮಂಗಳೂರಿನಿಂದ ಬೆಂಗಳೂರಿನವರೆಗೆ ಪ್ರಾರಂಭಿಸಿದ ಪಾದಯಾತ್ರೆ ಈಗಾಗಲೇ 22ನೇ ದಿನಕ್ಕೆ ಕಾಲಿಟ್ಟಿದ್ದು, ಈಡಿಗ ಸಮುದಾಯದ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸಿದರೆ ಫೆಬ್ರವರಿ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಪ್ರಣವಾನಂದಶ್ರೀ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀನಿವಾಸ, ಸುನೀಲ್, ಹೊನ್ನಪ್ಪ ಶಿವಮೊಗ್ಗ, ಸತೀಶ್, ಅಶೋಕ್, ತಾಲ್ಲೂಕು ಅಧ್ಯಕ್ಷ ಗಂಗಾಧರಪ್ಪ ಮತ್ತಿತರರಿದ್ದರು.