ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಇಂದು ಎಸ್ಸೆಸ್ಸೆಂ ಚಾಲನೆ, ಸಿಂಗಾರಗೊಂಡಿವೆ ಸಾರಿಗೆ ಬಸ್ಗಳು
ದಾವಣಗೆರೆ, ಜು.10- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸುವ `ಶಕ್ತಿ’ ಯೋಜನೆಗೆ ಇಂದು 12.30ಗಂಟೆಗೆ ಹೈಸ್ಕೂಲ್ ಮೈದಾನದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ಶೂನ್ಯದರದ ಟಿಕೆಟ್ ನೀಡುವ ಮೂಲಕ ಈ ಯೋಜನೆಗೆ ಚಾಲನೆ ದೊರೆಯಲಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಮಹಾನಗರ ಪಾಲಿಕೆ ಮಹಾಪೌರರು, ಉಪಮಹಾಪೌರರು, ಗಣ್ಯರು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
`ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇದಿಕೆ ಸಮಾರಂಭಕ್ಕಾಗಿ ನಗರದ ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪೆಂಡಾಲ್ ಹಾಕಿ, ವೇದಿಕೆ ನಿರ್ಮಿಸಿ, ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಶಕ್ತಿ ಯೋಜನೆ ಚಾಲನೆಗಾಗಿ ಸಾರಿಗೆ ಸಂಸ್ಥೆ ಬಸ್ಗಳನ್ನು ಸ್ವಚ್ಛಗೊಳಿಸಿ, ಹೂಗಳಿಂದ ಸಿಂಗರಿಸಲಾಗುತ್ತಿದೆ. ನಿಲ್ದಾಣದ ಬಳಿ ಅಲ್ಲಲ್ಲಿ ಶಕ್ತಿ ಯೋಜನೆಯ ಬ್ಯಾನರ್, ಫ್ಲೆಕ್ಸ್ಗಳನ್ನು ಅಳವಡಿಸಿ ಯೋಜನೆಯ ಪ್ರಚಾರ ಮಾಡಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಧ್ಯಾಹ್ನ 1ಗಂಟೆ ಬಳಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ದಾವಣಗೆರೆ ವಿಭಾಗದಲ್ಲಿ ಒಟ್ಟು 368 ಬಸ್ ಮಾರ್ಗಗಳಿದ್ದು ಇವುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ವಿಲ್ಲದ 62 ಬಸ್ ಮಾರ್ಗಗಳನ್ನು ಹೊರತು ಪಡಿಸಿ ಉಳಿದ ಎಲ್ಲ 306 ಮಾರ್ಗಗಳ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಇ. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.
ಶಕ್ತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ನಂತರ ಸಚಿವರು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣಕ್ಕೂ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ.