ಸೂರ್ಯ ಸಿದ್ಧಾಂತ ರೀತ್ಯಾ ಭಗವಂತನಾದ ಚತುರ್ಮುಖ ಬ್ರಹ್ಮನ ಪರಮಾಯುಷ್ಯ 100 ವರ್ಷ. ಇದರಲ್ಲಿ ಬ್ರಹ್ಮಮಾನದಿಂದ ಈಗಿರುವ ಚತುರ್ಮುಖ ಬ್ರಹ್ಮನ ಪರಮಾಯುಷ್ಯ ಐವತ್ತು ವರ್ಷ ಕಳೆದಿದ್ದು (ಇದನ್ನು ಪ್ರಥಮ ಪರಾರ್ಧ ಎನ್ನುತ್ತಾರೆ). ಈಗ 51ನೇ ವರ್ಷ ಪ್ರಾರಂಭವಾಗಿದೆ. (ಇದನ್ನು ದ್ವಿತೀಯ ಪರಾರ್ಧ ಎನ್ನುತ್ತಾರೆ). 1ನೇ ತಿಂಗಳು, 1ನೇ ದಿನ, ಸೂರ್ಯೋದಯ ನಂತರ 13 ಘಳಿಗೆ, 46 ವಿಘಳಿಗೆ ಕಳೆದು 47ನೇ ವಿಘಳಿಗೆ ನಡೆಯುತ್ತಿದೆ. ಈಗ ನಡೆಯುತ್ತಿರುವ ಏಳನೇ ವೈವಸ್ವತ ಮನ್ವಂತರದಲ್ಲಿ 28ನೇ ಕಲಿಯುಗವು ನಡೆಯುತ್ತಿದ್ದು, ಕಲಿಯುಗ ಪ್ರಮಾಣ 4,32,000 ವರ್ಷ. ಕಲಿಯುಗ ಆರಂಭವಾಗಿ 5,125, ವರ್ಷ ಕಳೆದು, 5126ನೇ ವರ್ಷದ ಶ್ರೀ ವಿಶ್ವಾವಸುನಾಮ ಸಂವತ್ಸರವನ್ನು ಹೀಗೆ ವಿಶ್ಲೇಷಿಸಬಹುದು. ಶ್ರೀ ವಿಶ್ವಾವಸುನಾಮ ಸಂವತ್ಸರವು, ಶ್ರೀಮನೃಪ ಶಾಲಿವಾಹನ ಶಕೆ, 1947ನೇ, ರೇವತಿ ನಕ್ಷತ್ರ, ಐಂದ್ರ ಯೋಗ, ಬವಕರಣ, ಸಿಂಹ ಲಗ್ನದಲ್ಲಿ ದಿನಾಂಕ : 30.03.2025ನೇ ಭಾನುವಾರದಂದು ಆರಂಭವಾಗಲಿದೆ. ಇದಕ್ಕೆ ಅನುಗುಣವಾಗಿ ಈ ಸಂವತ್ಸರವನ್ನು ಹೀಗೆ ವಿಶ್ಲೇಷಿಸಬಹುದು.
ಸಿಂಹ ಲಗ್ನ, ಮೀನದಲ್ಲಿ ರವಿ, ಚಂದ್ರ, ಬುಧ, ರಾಹು, ವೃಷಭದಲ್ಲಿ ಗುರು, ಮಿಥುನದಲ್ಲಿ ಕುಜ, ಕನ್ಯಾ ದಲ್ಲಿ ಕೇತು, ಕುಂಭದಲ್ಲಿ ಶನಿ.
ಶ್ರೀ ವಿಶ್ವಾವಸುನಾಮ ಸಂವತ್ಸರದ ಫಲವನ್ನು ಹೀಗೆ ಪರಾಮರ್ಶಿಸಬಹುದು.
ಈ ಸಂವತ್ಸರದಲ್ಲಿ ಮಳೆ-ಬೆಳೆಗಳು ಮಧ್ಯಮಸ್ಥರದಲ್ಲಿ ಉಂಟಾಗಲಿದೆ. ಕಳ್ಳಕಾಕರ ಉಪಟಳ ಜೋರಾಗಲಿದ್ದು, ಅನೇಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳಲಿವೆ. ದೇಶದ ಆರ್ಥಿಕ ಸಂಪತ್ತು ಹೇರಳವಾಗಿದ್ದರೂ, ಆಳುವ ಪ್ರಭುಗಳ ಜಿಪುಣತನದಿಂದಾಗಿ ಹಾಗೂ ಸ್ವಾರ್ಥದಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲಿವೆ. ಪ್ರಜೆಗಳ ಸ್ವಾತಂತ್ರ್ಯವು ಕಡಿಮೆಯಾಗಲಿದ್ದು, ಸಮುದ್ರ ತೀರ ಪ್ರದೇಶಗಳಲ್ಲಿ ಬಿಸಿಗಾಳಿಯು ಹೆಚ್ಚಿನ ಪ್ರಮಾಣದಲ್ಲಿ ಬೀಸಲಿದೆ. ದೇಶದ ಉತ್ತರ ಭಾಗಗಳಲ್ಲಿ ಹಲವು ನದಿಗಳು ಬತ್ತಿ ಹೋಗಲಿವೆ, ಜೊತೆಗೆ ನಾನಾ ವಿಧವಾದ ಅಪಮೃತ್ಯುಗಳು ಸಂಭವಿಸಲಿವೆ, ಚಿನ್ನ ಮೊದಲಾದ ಅಮೂಲ್ಯ ಲೋಹಗಳ ಮಿತಿ-ಮೀರಿದ ತೇಜಿಯಿಂದಾಗಿ ವ್ಯವಹಾರ ಕಡಿಮೆಯಾಗಲಿದೆ. ಮುಂಗಾರು ಬೆಳೆ ಸಮೃದ್ಧಿಯಾಗಿದ್ದರೂ, ಹಿಂಗಾರಿನಲ್ಲಿ ಹಿನ್ನಡೆಯಾಗಲಿದೆ. ದೇಶದ ಕೆಲವು ಭಾಗಗಳಲ್ಲಿ ಜಲ, ಗೋ ಸಂಪತ್ತು ಹಾಗೂ ವಸ್ತ್ರ ವ್ಯಾಪಾರಗಳು ಹೆಚ್ಚಾಗಲಿವೆ. ವಿದ್ಯಾಸಂಸ್ಥೆಗಳಲ್ಲಿ ಉದಾಸೀನತೆ ತೋರಲಿವೆ. ಸರಕು ಸಾಗಾಣಿಕೆ ಹೆಚ್ಚಿ ಜನರ ಆದಾಯದಲ್ಲಿ ಅಭಿವೃದ್ಧಿ ಕಾಣುವುದು, ಕೆಲವು ಯೋಜನೆಗಳು ಪ್ರಜೆಗಳ ಪ್ರಯೋಜಕ್ಕೆ ಬಾರದೇ ಹೋಗಲಿವೆ. ಯಜ್ಞ ಯಾಗಾದಿಗಳು ವಿಶೇಷವಾಗಿ ನಡೆಯಲಿವೆ, ಒಟ್ಟಿನಲ್ಲಿ ಈ ಸಂವತ್ಸರವು ಜನರ ವಿಶ್ವಾಸವನ್ನು ಸಾಧಾರಣವಾಗಿ ಗಳಿಸಲಿದೆ.
ಶ್ರೀ ವಿಶ್ವಾವಸು ನಾಮ ಸಂವತ್ಸರದ
ನವ ನಾಯಕರು ಮತ್ತು ಅವರ ಫಲಾಫಲ :
ರಾಜ-ರವಿ, ಮಂತ್ರಿ- ಚಂದ್ರ, ಸೇನಾಧಿಪ – ರವಿ, ಸಸ್ಯಾಧಿಪ –ಗುರು, ಧಾನ್ಯಾಧಿಪ –ಕುಜ, ಅರ್ಘಧಿಪ –ರವಿ, ಮೇಘಾಧಿಪ –ರವಿ, ರಸಾಧಿಪ- ಶನಿ, ನೀರಸಾಧಿಪ-ಬುಧ, ಪಶುನಾಯಕ –ಯಮ.
* ರಾಜನಾದ ರವಿಯ ಫಲ :
ಈ ಸಂವತ್ಸರದಲ್ಲಿ ರವಿಯು ರಾಜನಾಗಿರುವುದರಿಂದ, ಆಳುವ ಮಂತ್ರಿ ಮಹೋದಯರಲ್ಲಿ ಪರಸ್ಪರ ವೈರತ್ವವುಂಟಾಗಲಿದೆ. ಮೋಡವು ಸರಿಯಾಗಿ ಮಳೇಗೆರೆಯದೆ, ಜಲಕ್ಷಾಮ ಉಂಟಾಗಲಿದೆ. ಜನರಿಗೆ ಆಳುವ ದೊರೆಗಳಿಂದ ಮಾತ್ರವಲ್ಲದೆ ಅಧಿಕಾರಿಗಳಿಂದಲೂ ಮತ್ತು ಶಸ್ತ್ರಾಸ್ತ್ರಗಳಿಂದಲೂ ಪೀಡೆಯುಂಟಾಗಲಿದೆ. ಅಗ್ನಿ ಬಾಧೆ ತಪ್ಪಿದ್ದಲ್ಲ.
* ಮಂತ್ರಿಯಾದ ಚಂದ್ರನ ಫಲ:
ಮಂತ್ರಿಯು ಚಂದ್ರನಾಗಿರುವುದರಿಂದ ಸಕಾಲದಲ್ಲಿ ಸಮೃದ್ಧಿಯಾಗಿ ಸಸ್ಯಗಳು ಉತ್ತಮ ಫಲ ಕೊಡಲಿವೆ. ಜನರು ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಿ ಆರೋಗ್ಯದಿಂದಿರುವರು. ಫಲ ನೀಡುವ ವೃಕ್ಷಗಳು ಹೆಚ್ಚು ಫಸಲು ನೀಡಲಿವೆ. ಔಷಧಿ ಸಸ್ಯಗಳಿಗೆ ಬೇಡಿಕೆ ಹೆಚ್ಚಲಿದೆ.
* ಸೇನಾಧಿಪತಿಯಾದ ರವಿಯ ಫಲವು :
ರವಿಯು ಸೇನಾಧಿಪತಿಯಾಗಿರುವ ಕಾಲದಲ್ಲಿ ರಾಜರುಗಳಲ್ಲಿ ಪರಸ್ಪರ ಅವಿಶ್ವಾಸವುಂಟಾಗಿ ಅವರಲ್ಲೇ ಆಂತರಿಕ ಮುಸುಕಿನ ಯುದ್ಧ ನಡೆಯಲಿದೆ, ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳಲಿದೆ. ಬಿರುಗಾಳಿಯ ಹೊಡೆತಕ್ಕೆ ಚದುರಿದ ಮೇಘಗಳಿಂದಾಗಿ ಮಳೆ ಸಾಧಾರಣವಾಗಲಿದೆ, ಕೆಂಪು ಧಾನ್ಯಗಳು ಹೆಚ್ಚು ಬೆಳೆಯುವುದು.
* ಸಸ್ಯಾಧಿಪ ಗುರುವಿನ ಫಲ : ಗುರುವು ಸಸ್ಯಾಧಿಪತಿಯಾಗಿರುವುದರಿಂದ ಕೆಲವು ಪದಾರ್ಥಗಳ ಬೆಲೆ ಕಡಿಮೆಯಾಗಲಿದೆ, ಪೈರು ಹೆಚ್ಚುವುದರಿಂದ ಆಹಾರ ಪದಾರ್ಥಗಳ ಕೊರತೆ ಕಡಿಮೆಯಾಗಲಿದೆ. ದೇಶದ ಹಲವು ಭಾಗಳಲ್ಲಿ ಕಡಿಮೆ ಬೆಳೆಯಾಗುವುದು. ಔಷಧಿಗಳ ಬೆಲೆಯಲ್ಲಿ ತೀವ್ರ ವ್ಯತ್ಯಾಸವಾಗಲಿದೆ.
* ಧಾನ್ಯಾಧಿಪತಿ ಕುಜನ ಫಲ :
ಧಾನ್ಯಾಧಿಪತಿ ಕುಜನಾಗಿದ್ದು, ಕೆಂಪು ಮಣ್ಣಿನ ಭೂಮಿಯಲ್ಲಿ ಉತ್ತಮ ಫಸಲಾಗಲಿದೆ, ಚೂಪು ತುದಿಯುಳ್ಳ ಧಾನ್ಯಗಳು ಹೆಚ್ಚುವುದು ಕುಷ್ಕಿ ಧಾನ್ಯಗಳು ಹೇರಳವಾಗಲಿದೆ.ರೈತಾಪಿ ಜನರು ಬೆಳೆಯುವ ತೊಗರಿ, ಕಡಲೆ ಮೊದಲಾದವುಗಳಿಗೆ ಮಾರುಕಟ್ಟೆಯಲ್ಲಿ ಬೆಂಬಲಿತ ಬೆಲೆ ದೊರೆಯಲಿದೆ.
* ಅರ್ಘಾಧಿಪತಿ ರವಿಯ ಫಲ :
ಈ ಸಂವತ್ಸರದಲ್ಲಿ ಅರ್ಘಾಧಿಪತಿ ರವಿಯೇ ಆಗಿರುವುದರಿಂದ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚುವುದು, ಕಡಿಮೆ ಮಳೆಯಾಗುವುದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚುವುದು. ಜೊತೆಗೆ ಜನರ ಹಸಿವಿನ ಬಾಧೆ ಹೆಚ್ಚಲಿದೆ. ಆಳುವ ದೊರೆಗಳು ಪರಸ್ಪರ ಮಾತ್ಸರ್ಯದಿಂದ ಪ್ರಜಾಪೀಡಕರಾಗುವರು.
* ಮೇಘಾಧಿಪತಿ ರವಿಯ ಫಲ :
ಮೇಘಾಧಿಪತಿಯೂ ಈ ಸಂವತ್ಸರದಲ್ಲಿ ರವಿಯೇ ಆಗಿರುವುದರಿಂದ, ಪ್ರಜೆಗಳು ಕಳ್ಳ ಕಾಕರಿಂದ ಭಯಭೀತರಾಗುವರು. ಬೆಳೆ ಕಡಿಮೆ ಬೆಲೆ ಜಾಸ್ತಿಯಾಗಲಿದೆ. ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದ್ದು, ಜಲಕ್ಷಾಮವುಂಟಾಗಲಿದೆ. ತೊಗರಿ ಮುಂತಾದ ಕೆಂಪು ಧಾನ್ಯಗಳು ಹೆಚ್ಚು ಬೆಳೆಯಲಿವೆ.
* ರಸಾಧಿಪತಿ ಶನಿಯ ಫಲ:
ರಸಾಧಿಪತಿಯು ಈ ಸಂವತ್ಸರದಲ್ಲಿ ಶನಿಯಾಗಿರುವುದರಿಂದ ಹಾಲು ಮೊದಲಾದ ರಸಪದಾರ್ಥಗಳ ಉತ್ಪಾದನೆ ಕ್ಷೀಣಿಸಲಿದೆ, ಜನರು ತಮ್ಮ ಸ್ವಂತ ಉದ್ಯೋಗ ಅಥವಾ ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುವರು, ಮಳೆಯೂ ಸಹ ಕಡಿಮೆಯಾಗಲಿದೆ. ಹಾಲು ಮೊಸರು ಮೊದಲಾವುಗಳ ಬೆಲೆ ಹೆಚ್ಚಲಿದೆ.
* ನೀರಸಾಧಿಪತಿ ಬುಧ :
ನೀರಸಾಧಿಪತಿ ಬುಧನಾಗಿರುವುದರಿಂದ ಬೆಳ್ಳಿ, ಬಂಗಾರ, ಮುತ್ತು, ರತ್ನ, ಮೊದಲಾದ ಅಮೂಲ್ಯ ವಸ್ತುಗಳ ಅಭಾವ ಹೆಚ್ಚಿನ ಮಟ್ಟದಲ್ಲಿ ಕಂಡುಬರಲಿದೆ, ಶ್ರೀಗಂಧ, ಬೆಳ್ಳಿ ಮೊದಲಾದವುಗಳು ಕ್ಷೀಣವಾದರೂ, ತಾಮ್ರ, ಸೀಸ ಹಾಗೂ ಕಬ್ಬಿಣಗಳು ಹೇರಳವಾಗಿ ದೊರೆಯಲಿದೆ, ಬೆಲೆಗಳಲ್ಲಿ ಮಂದಿ ಕಂಡುಬರಲಿದೆ.
* ಪಶುನಾಯಕ ಯಮನ ಫಲ :
ಈ ಸಂವತ್ಸರದಲ್ಲಿ ಯಮನು ಪಶುನಾಯಕನಾಗಿರುವುದರಿಂದ ಪಶುಗಳ ಆಹಾರ ಪದಾರ್ಥಗಳಾದ ಹುಲ್ಲು, ಹಿಂಡಿ ಮೊದಲಾದ ಪದಾರ್ಥಿಗಳ ಕೊರತೆ ಕಂಡುಬರಲಿದ್ದು, ಅವುಗಳ ಬೆಲೆಯೂ ಹೆಚ್ಚಲಿದೆ. ಆಹಾರ ಪದಾರ್ಥಗಳ ಕೊರೆತೆಯಿಂದಾಗಿ ಕಡಿಮೆ ಪ್ರಮಾಣದಲ್ಲಿ ಹಾಲು ಸಿಗುವುದು. ಪಶುಗಳಿಗೆ ಪೀಡೆಯುಂಟಾಗಲಿದೆ.
ಕಂದಾಯ ಫಲ : ಕಂದಾಯದ ಸಂಖ್ಯೆಯು ಹೆಚ್ಚಾದಷ್ಟೂ ಫಲ ಹೆಚ್ಚು, ಬೆಸನಾದರೆ ದ್ರವ್ಯಲಾಭ, ಸಮವಾದರೆ ಮಧ್ಯಮ, ಸೊನ್ನೆಯಾದರೆ ನಿಷ್ಫಲ,
ಮೊದಲ ಕಂದಾಯ ಸೊನ್ನೆಯಾದರೆ ರೋಗ ಭಯ, 2ನೇ ಕಂದಾಯ ಸೊನ್ನೆಯಾದರೆ ಮಹಾಭಯ.
3ನೇ ಕಂದಾಯ ಸೊನ್ನೆಯಾದರೆ ಧನಹಾನಿ, 3 ಸೊನ್ನೆಯಾದರೆ ಮಹಾಕಷ್ಟ. ಮೊದಲ ಕಂದಾಯ ಚೈತ್ರ, ವೈಶಾಖ, ಜೇಷ್ಠ, ಆಷಾಢಾದಿ ನಾಲ್ಕು ತಿಂಗಳುಗಳು, 2ನೇ ಕಂದಾಯ ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕಾದಿ ನಾಲ್ಕು ತಿಂಗಳುಗಳು, 3ನೇ ಕಂದಾಯ ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣಾದಿ ನಾಲ್ಕು ತಿಂಗಳುಗಳು ಫಲವನ್ನು ಕೊಡುತ್ತವೆ.
ಮೇಘ ವಿಚಾರ :
ಈ ಶ್ರೀ ವಿಶ್ವಾವಸು ನಾಮ ಸಂವತ್ಸರದಲ್ಲಿ ಕಾಲ ನಾಮಕ ಮೇಘವು ಮೇರು ಪರ್ವತದ ದಕ್ಷಿಣ ದಿಕ್ಕಿನಲ್ಲಿ ಹುಟ್ಟಿ, ಸುವೃಷ್ಠಿಯನ್ನುಂಟುಮಾಡಲಿದೆ.
ಮಧ್ಯ ದೇಶದಲ್ಲಿ ಹೆಚ್ಚು ಮಳೆ ಸುರಿಯಲಿದೆ. ಮಳೆ ಎರಡು ಕೊಳಗ, ಗಾಳಿ ನಾಲ್ಕು ಕೊಳಗ,
ಕೊಳಗವು ಅರವತ್ತು ಗಾವುದ ವಿಸ್ತೀರ್ಣವುಳ್ಳದ್ದಾಗಿಯೂ, ನೂರು ಗಾವುದ ಎತ್ತರವುಳ್ಳದ್ದಾಗಿರುತ್ತದೆ.
ಮಳೆ ಒಟ್ಟು ಇಪ್ಪತ್ತು ಭಾಗಗಳಲ್ಲಿ ಹತ್ತು ಭಾಗ ಸಮುದ್ರದಲ್ಲೂ, ಆರು ಭಾಗ ಪರ್ವತಗಳಲ್ಲೂ,
ಉಳಿದ ನಾಲ್ಕು ಭಾಗ ಭೂಮಿಯ ಮೇಲೂ ಬೀಳುತ್ತದೆ.
ಗ್ರಹಣದ ವಿಚಾರ : ಶ್ರೀ ಶಾಲಿವಾಹನ ಶಕೆ 1947ನೇ ಶ್ರೀ ವಿಶ್ವಾವಸು ನಾಮ ಸಂವತ್ಸರದ, ಬಾದ್ರಪದ ಶುದ್ಧ ಹುಣ್ಣಿಮೆ
* ದಿನಾಂಕ : 7.9.2025ನೇ ಭಾನುವಾರ ಶತಭಿಷಾ ಉಪದಿ ಪೂರ್ವಭಾದ್ರ ನಕ್ಷತ್ರವಿರುವಾಗ ಕುಂಭ ರಾಶಿಯಲ್ಲಿ ಚಂದ್ರಗ್ರಹಣವು ಗೋಚರಿಸಲಿದೆ.
ಸ್ಪರ್ಷ ಕಾಲ : ರಾತ್ರಿ 9.57ಕ್ಕೆ, ಮಧ್ಯಕಾಲ-11.45, ಮೋಕ್ಷಕಾಲ-ರಾತ್ರಿ 1.27ಕ್ಕೆ, ಆದ್ಯಂತ ಪುಣ್ಯಕಾಲ ಬೆಳಗಿನ ಜಾವ 3.31ಕ್ಕೆ.
* ದಿನಾಂಕ : 03.03.2026ನೇ ಮಂಗಳವಾರ ಪುಬ್ಬಾ ನಕ್ಷತ್ರ, ಸಿಂಹರಾಶಿಯಲ್ಲಿ ಗ್ರಸ್ತೋದಯ ಖಗ್ರಾಸ ಚಂದ್ರ ಗ್ರಹಣವು ಸಂಭವಿಸಲಿದೆ.
ಸ್ಪರ್ಷಕಾಲ : ಮಧ್ಯಾಹ್ನ 3.18ಕ್ಕೆ, ಮೋಕ್ಷ – ಸಾಯಂಕಾಲ 6.48ಕ್ಕೆ, ಇವುಗಳ ಹೊರತಾಗಿ ಬೇರೆ ಯಾವುದೇ ಗ್ರಹಣಗಳು ನಮ್ಮ ದೇಶದಲ್ಲಿ ಕಾಣದೇ ಇರುವುದರಿಂದ ಆಚರಣೆ ಇಲ್ಲ.
2025 ಶ್ರೀ ವಿಶ್ವಾವಸುನಾಮ ಸಂವತ್ಸರ ವರ್ಷದ ದ್ವಾದಶ ರಾಶಿಗಳ ಫಲಫಲಗಳ ವಿಮರ್ಶೆ
ಮೇಷ ರಾಶಿ :
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)
ಈ ರಾಶಿಯವರಿಗೆ ಗುರು ಗ್ರಹ ವೃಷಭ ರಾಶಿಯಲ್ಲಿ ಸಂಚರಿಸುವಾಗ ಅನೇಕ ಶುಭ ಫಲಗಳು ಉಂಟಾಗಲಿದ್ದು, ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಾಗಲಿದೆ. ಕೀರ್ತಿ ಹೆಚ್ಚುವುದಲ್ಲದೇ ಆರೋಗ್ಯದಲ್ಲೂ ಸಾಕಷ್ಟು ಸುಧಾರಣೆಯಾಗಲಿದ್ದು, ಧರ್ಮಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಇದೇ ಗುರು ಗ್ರಹವು ಕೆಲ ಕಾಲ ಕರ್ಕಾಟಕ ರಾಶಿಯಲ್ಲಿ ವಕ್ರಿಯಾಗಿ ಸಂಚರಿಸುವಾಗ ನಾನಾ ವಿಧವಾದ ಚಿಂತೆ, ಬಂಧು-ಮಿತ್ರರೊಂದಿಗೆ ವಿರೋಧ, ಜೊತೆಗೆ ವರ್ಷಾರಂಭದಿಂದಲೂ ಸಾಡೇಸಾತ್ ಪೂರ್ವ ಭಾಗದಲ್ಲಿರುವುದರಿಂದ ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯಲಿವೆ. ವೃಥಾ ತಿರುಗಾಟ, ಅರ್ಥವಿಲ್ಲದ ಖರ್ಚು-ವೆಚ್ಚಗಳು. ವಿರೋಧಿಗಳಿಂದ ಕಿರುಕುಳ ಉಂಟಾಗಲಿದೆ. ವ್ಯವಹಾರದಲ್ಲಿ ಬರಬೇಕಾಗಿರುವ ಲಾಭಾಂಶಗಳು ಕೈ ಸೇರದೆ ನೀವೇ ಸಾಲಗಾರರಾಗಬೇಕಾದೀತು.ಉದರ ಸಂಬಂಧಿ ವ್ಯಾದಿ ಕಾಣಿಸಿಕೊಳ್ಳಬಹುದು, ಆಗಬೇಕಾಗಿರುವ ಕೆಲಸಗಳಗೆ ವಿಘ್ನಗಳುಂಟಾಗಲಿವೆ. ವಿಷ್ಣು ಸಹಸ್ರನಾಮ ಪಠಿಸುವುದು ಮೇಲು.
ವೃಷಭ ರಾಶಿ :
(ಇ.ಉ.ಎ.ಒ.ವ.ವಿ.ವು.ವೆ.ವೋ)
ಗುರು ಗ್ರಹವು ಈ ರಾಶಿಯವರಿಗೆ ದ್ವಿತೀಯ ಸ್ಥಾನದಲ್ಲಿ ಸಂಚರಿಸಿ, ಕರ್ಕಾಟಕ ರಾಶಿಯಿಂದ ಪುನಃ ಮಿಥುನ ರಾಶಿಗೆ ಸಂಚರಿಸಲಿದ್ದು, ಈ ಸಂದರ್ಭದಲ್ಲಿ ಮನೆಯಲ್ಲಿ ನಡೆಯುವ ಅನೇಕ ಘಟನೆಗಳಿಗೆ ಮೂಕಸಾಕ್ಷಿಯಾಗಿರುವರು, ಅನೇಕ ಮೂಲಗಳಿಂದ ಧನ ಸಂಗ್ರಹವಾಗಲಿದ್ದು, ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರಲಿದೆ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವರು. ನಿಮ್ಮ ವಾಕ್ ಚಾತುರ್ಯದಿಂದಲೇ ಎಲ್ಲವನ್ನು ಸಾಧಿಸುವ ಕಲೆ ಕರಗತವಾಗಲಿದೆ. ಶತ್ರುಗಳು ತಾವಾಗಿಯೇ ಶರಣಾಗತರಾಗಿ ಕ್ಷಮೆ ಕೋರುವರು. ಲಾಭ ಸ್ಥಾನದಲ್ಲಿರುವ ಶನಿಗ್ರಹವು ಆಸ್ತಿ ಸಂಪಾದನೆಗೆ ದಾರಿ ತೊರುವುದಲ್ಲದೇ, ಹಿಡಿದ ಕಾರ್ಯವನ್ನು ಸಾಧಿಸಿಯೇ ತೀರುವನು. ನೂತನ ಉದ್ಯಮಿಗಳಿಗೆ ಸರ್ಕಾರದಿಂದ ನೆರವಾಗಲಿದೆ. ಮತ್ತೊಬ್ಬರ ವಾಹನಗಳನ್ನು ಚಲಾಯಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ, ಇದರಿಂದ ಅಪಾಯ ತಪ್ಪಿದ್ದಲ್ಲ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಸರ್ಕಾರದಿಂದ ಸನ್ಮಾನವಾಗಲಿದೆ. ನ್ಯಾಯಾಲಯದ ಮುದ್ದತ್ತು ನಿಮ್ಮಂತಾಗಲಿದೆ.
ಮಿಥುನ ರಾಶಿ :
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)
ಈ ರಾಶಿಯವರಿಗೆ ಗುರುವು ಜನ್ಮಸ್ಥನಾಗಿದ್ದು, ಕರ್ಕಾಟಕ ರಾಶಿಗೆ ಪ್ರವೇಶಿಸಿ ಪುನಃ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದು, ಸಂಪಾದನೆ ಎಷ್ಟೇ ಚೆನ್ನಾಗಿದ್ದರೂ ಕೈಯಲ್ಲಿ ಉಳಿಯುವುದು ದೂರದ ಮಾತಾಗಲಿದೆ. ಸರ್ಕಾರಿ ನೌಕರರಿಗೆ ಅನಿರೀಕ್ಷಿತವಾಗಿ ಸ್ಥಾನಕ್ಕೆ ಚ್ಯುತಿ ಬರಲಿದೆ. ನೀವು ನಂಬಿದ ಮಿತ್ರರಿಂದಲೇ ವಂಚನೆಗೊಳಗಾಗುವಿರಿ, ಮಾನಸಿಕ ವ್ಯಥೆ ಬಾಧಿಸಲಿದೆ, ಬಹಳ ಕಾಲದಿಂದ ಪೀಡಿಸುತ್ತಿದ್ದ ರೋಗ-ರುಜಿನಿಗಳಿಂದ ಮುಕ್ತರಾಗುವಿರಿ, ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಬರದೇ ಹೋಗಬಹುದು, ಹಿರಿಯರ ಆರೈಕೆಗಾಗಿ ಹೆಚ್ಚಿನ ವೆಚ್ಚವಾಗಲಿದೆ. ಮತ್ತು ಕರ್ಮಸ್ಥಾನದಲ್ಲಿ ಅಂದರೆ ದಶಮ ಸ್ಥಾನದಲ್ಲಿರುವ ಶನಿಯು ವರ್ಷ ಪೂರ್ತಿ ಅಲ್ಲಿಯೇ ಇರುವುದರಿಂದ ಮಾಡಿದ ಕೆಲಸಗಳಿಗೆ ಪ್ರತಿಫಲ ಸಂಪೂರ್ಣ ಸಿಗದೇ ಹೊಗಲಿದೆ, ರಾಜಕಾರಣಿಗಳಿಗೆ ಅನೇಕ ಹಗರಣಗಳು ಸುತ್ತಿಕೊಳ್ಳಲಿದ್ದು, ಜನಾಪವಾದವನ್ನು ಎದುರಿಸಬೇಕಾಗುತ್ತದೆ, ಅವ್ಯವಹಾರ ಎಸಗಿದ ಸರ್ಕಾರಿ ಮೇಲಾಧಿಕಾರಿಗಳು ಮುದ್ದತ್ತುಗಳನ್ನು ನ್ಯಾಯಾಲಯದಲ್ಲಿ ಎದುರಿಸಬೇಕಾಗುತ್ತದೆ.
ಕರ್ಕಾಟಕ ರಾಶಿ :
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)
ಲಾಭ ಸ್ಥಾನದಲ್ಲಿ ಕೆಲಕಾಲವಿದ್ದು, ಮುಂದೆ ವ್ಯಯಸ್ಥಾನದಲ್ಲಿ ಈ ವರ್ಷ ಪೂರ್ತಿ ದೇವಾಚಾರ್ಯನಾದ ಗುರುವು ಸಂಚರಿಸಲಿದ್ದು, ಕೆಲಕಾಲ ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿ ಕಂಡು ಬರಲಿದೆ. ನಿಮ್ಮ ಹೊಸ ಹೊಸ ಯೋಜನೆಗಳಿಗೆ ಬಂಧುಗಳಿಂದ ಮನ್ನಣೆ ದೊರೆಯಲಿದೆ. ಸತ್ಕರ್ಮಗಳಲ್ಲಿ ಶ್ರದ್ಧೆಯುಂಟಾಗಲಿದ್ದು, ಹಲವು ಶುಭ ಕಾರ್ಯಗಳು ನಿಮ್ಮಿಂದ ನೆರವೇರಲಿವೆ. ಅದೇ ಗುರುವು ವಕ್ರಿಯಾಗಿ ಸಂಚರಿಸುವಾಗ ವೃಥಾ ಧನ ವ್ಯಯವಾಗಲಿದೆ, ಎಷ್ಟೇ ಛಲದಿಂದ ಮುನ್ನಡೆದರೂ ಹಿಡಿದ ಕಾರ್ಯವು ಹಿನ್ನಡೆಯಲಿದೆ, ನೆರೆ-ಹೊರೆಯವರೊಂದಿಗೆ ವಿನಾಕಾರಣ ವ್ಯಾಜ್ಯವುಂಟಾಗಲಿದೆ. ಮನೆಯಲ್ಲಿರುವ ಸದಸ್ಯರ ಆರೋಗ್ಯ ನಿಮಿತ್ತವಾಗಿ ಅಪಾರ ಹಣ ವ್ಯಯವಾಗಲಿದೆ, ವಿದೇಶದಲ್ಲಿರುವವರಿಗೆ ಗಡೀ ಪಾರಿನ ಶಿಕ್ಷೆ ಅನುಭವಿಸಬೇಕಾದಿತು, ನವಮ ಸ್ಥಾನದಲ್ಲಿರುವ ಶನಿಯು ಸರ್ಕಾರೀ ವ್ಯಾಜ್ಯಗಳಲ್ಲಿ ಅಪಜಯವನ್ನುಂಟು ಮಾಡುವನು, ಮಡದಿ ಮಕ್ಕಳಿಂದ ವಿರೋಧ ಅನಿವಾರ್ಯವಾಗಲಿದೆ, ಋಣಬಾಧೆ ನಿಮ್ಮನ್ನು ಹೈರಾಣಾಗಿಸಲಿದೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ತುಸು ಹಿನ್ನಡೆಯಾಗಲಿದೆ.
ಸಿಂಹ ರಾಶಿ :
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)
ಈ ರಾಶಿಯವರಿಗೆ ಗುರು ಗ್ರಹವು ವೃಷಭ-ಕರ್ಕಾಟಕ ರಾಶಿಯಲ್ಲಿ ಸಂಚರಿಸುವಾಗ ಕೆಲವು ಅಶುಭ ಫಲಗಳನ್ನು ಕೊಡುವನು, ಕಾರ್ಯಸಾಧನೆಗಾಗಿ ಹತ್ತು ಹಲವು ಜನರ ಮನೆಯ ಮುಂದೆ ಕಾಯಬೇಕಾಗಬಹುದು, ರೈತಾಪಿ ಜನರಿಗೆ ಕೃಷಿಯಲ್ಲಿ ಹೆಚ್ಚಿನ ಲಾಭಕಾಣಿಸದು, ನಂಬಿದ ಮಿತ್ರರು ಅಸಹಕಾರ ತೋರುವರು. ಖಾಸಗಿ ಕಂಪನಿ ನೌಕರರಿಗೆ ಸ್ಥಾನ ಬದಲಾವಣೆ ಅನಿವಾರ್ಯವಾಗಲಿದೆ, ಅದೇ ಗುರು ಗ್ರಹವು ಮಿಥುನದಲ್ಲಿ ಸಂಚರಿಸುವಾಗ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಜೀವನದಲ್ಲಿ ಲವಲವಿಕೆ ಕಂಡುಬರಲಿದೆ, ಮನೆಯಲ್ಲಿ ನಿಂತುಹೋಗಿದ್ದ ಮದುವೆ ಕಾರ್ಯಕ್ಕೆ ಮತ್ತೆ ಚಾಲನೆ ಬರಲಿದೆ, ರಾಜಕಾರಣಿಗಳಿಂದ ನಿಮ್ಮ ಕೆಲಸ, ಕಾರ್ಯಗಳಿಗೆ ಅಭಯ ಹಸ್ತ ಸಿಗಲಿದೆ. ಬಹಳ ಕಾಲದಿಂದ ಸಂತಾನಾಪೇಕ್ಷಿಗಳಿಗೆ ಶುಭ ಸಮಾಚಾರವು ಈ ವರ್ಷ ಕೇಳಿ ಬರಲಿದೆ, ಆದರೆ ಅಷ್ಟಮಭಾವದಲ್ಲಿ ಶನಿಯ ಸಂಚಾರದಿಂದಾಗಿ ವೃಥಾ ತಿರುಗಾಟ, ಬಂಧು-ಮಿತ್ರರಿಂದಲೇ ಅವಮಾನ, ಹಣಕಾಸಿನ ಅಡಚಣೆ ಸಾಕು ಪ್ರಾಣಿಗಳ ಸಾವು, ಪ್ರಯಾಣಗಳಲ್ಲಿ ವಿಘ್ನ ಮಾನಸಿಕ ಭಯವುಂಟಾಗಲಿದೆ.
ಕನ್ಯಾ ರಾಶಿ :
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)
ಗುರುಗ್ರಹವು ವೃಷಭ ಕರ್ಕಾಟಕ ರಾಶಿಗಳಲ್ಲಿ ಸಂಚರಿಸುವಾಗ ಶುಭ ಫಲದಾಯಕನಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ದಿನಗಳಾಗಲಿವೆ, ಪರೀಕ್ಷೆಯಲ್ಲಿ ಪಡೆದ ಉತ್ತಮ ಫಲಿತಾಂಶ ಅವರ ಭವಿಷ್ಯಕ್ಕೆ ಪೂರಕವಾಗಲಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಧನ ಲಾಭವಾಗಲಿದೆ, ಅನಿರಿಕ್ಷಿತವಾಗಿ ಪುಣ್ಯಕ್ಷೇತ್ರಗಳ ಸಂದರ್ಶನ ಮಾಡುವಿರಿ, ರೈತಾಪಿ ಜನರಿಗೆ ಕೃಷಿಯಿಂದ ಹೇರಳ ಲಾಭವಾಗಲಿದೆ. ಗುರುವು ಮಿಥುನ ರಾಶಿಯಲ್ಲಿರುವಾಗ ಅರ್ಥವಿಲ್ಲದ ವ್ಯರ್ಥ ತಿರುಗಾಟ, ಹೂಡಿದ ಬಂಡವಾಳಕ್ಕೆ ನಿರೀಕ್ಷಿತ ಲಾಭ ಬರದೆ ನಿರಾಶರಾಗುವಿರಿ, ಯುವಜನರು ವ್ಯವಹಾರ ಜ್ಞಾನವಿಲ್ಲದೇ ಹೂಡಿಕೆ ಮಾಡಲು ಹೋಗಿ ನಷ್ಟವನ್ನು ಅನುಭವಿಸುವರು, ಸರ್ಕಾರೀ ನೌಕರರಿಗೆ ಆರೋಪಗಳು ಕೇಳಿಬರಲಿದ್ದು, ಅಪಮಾನದಿಂದ ಕುಗ್ಗಿ ಹೋಗುವ ಸಂಭವವಿದೆ, ಮುಂದೆ ಸಪ್ತಮ ಭಾವದಲ್ಲಿರುವ ಶನಿಯು ವರ್ಷಪೂರ್ತಿ ಭ್ರಮಣ ಮಾಡುವುದರಿಂದ ಸಜ್ಜನರ ವಿರೋಧ ಕಟ್ಟಿಕೊಳ್ಳಬೇಕಾದೀತು, ದಂಪತಿಗಳಲ್ಲಿ ಅನ್ಯೋನ್ಯತೆಗೆ ಕೊರತೆ ಬರಲಿದೆ, ಶತ್ರುನಾಶದಿಂದಾಗಿ ಕಾರ್ಯಸಿದ್ಧಿಯಾಗಲಿದೆ. ಕ್ರೀಡೆಯಲ್ಲಿ ಜಯ.
ತುಲಾ ರಾಶಿ :
(ರ.ರಿ.ರು.ರೆ.ರೊ.ತ.ತಿ.ತು.ತೆ.)
ಗುರು ಗ್ರಹವು ಮಿಥುನ ರಾಶಿಯಲ್ಲಿ ಸಂಚರಿಸುವ ಮೊದಲು ವೃಷಭ, ಕರ್ಕಾಟಕ ರಾಶಿಗಳಲ್ಲಿ ಸಂಚರಿಸುವಾಗ ಅಗ್ನಿಭಯ, ಕಳ್ಳಕಾಕರ ಭಯ, ಜೊತೆಗೆ ಬಂಧು-ಮಿತ್ರರೊಂದಿಗೆ ವಿರಸ ಉಂಟಾಗಲಿದೆ, ಜೊತೆಗೆ ಮಾನಸಿಕ ನೆಮ್ಮದಿ ದೂರವಾಗಲಿದ್ದು, ದುರ್ಜನರ ಸಹವಾಸ ಹಾಗೂ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಹೈರಾಣಾಗಿಸಲಿದೆ, ಅಲ್ಪ ಆದಾಯ, ಅಧಿಕ ಖರ್ಚು ಅನಿವಾರ್ಯವಾಗಲಿದೆ, ಅದೇ ಗುರು ಗ್ರಹವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ನೆರವಿನ ಹರವು ಹಲವು ದಿಕ್ಕುಗಳಿಂದ ಹರಿದು ಬರಲಿವೆ, ಮನೆಯಲ್ಲಿ ಸುಖ-ಶಾಂತಿ ನೆಮ್ಮದಿಯು ವೃದ್ಧಿಸಲಿದೆ. ಸಂತತಿ ಹೀನರಿಗೆ ಶುಭ ಸಮಾಚಾರ ಕೇಳಿ ಬರಲಿದ್ದು, ಹಿರಿಯರಿಗೆ ನೆಮ್ಮದಿ ಕೊಡಲಿದೆ, ಆಸ್ತಿ ಕೊಳ್ಳುವ ವಿಚಾರವಿದ್ದಲ್ಲಿ ಈಗ ಮುಂದುವರೆಯಲು ಸಕಾಲವಾಗಿದೆ, ಷಷ್ಠ ಭಾವದಲ್ಲಿ ಶನಿಗ್ರಹದ ಸಂಚಾರದಿಂದಾಗಿ ಋಣ ಮುಕ್ತರಾಗಿ ಹೊಸಮನೆ ಕಟ್ಟಲು ಉತ್ಸುಕರಾಗುವಿರಿ, ಆಕಸ್ಮಿಕ ಧನಲಾಭ ನಿಮಗೆ ಅಚ್ಚರಿಯನ್ನುಂಟು ಮಾಡಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿದೆ. ದುಶ್ಚಟಗಳಿಂದ ದೂರವಿರುವುದು ಲೇಸು, ಗುರುಗಳ ಸೇವೆ ಮಾಡಿ.
ವೃಶ್ಚಿಕ ರಾಶಿ :
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)
ಉದ್ಯೋಗದಲ್ಲಿ ಪ್ರಗತಿ, ಅಲ್ಪ ಪ್ರಯತ್ನಕ್ಕೆ ಕಾರ್ಯಸಿದ್ಧಿಯಾಗಲಿದೆ, ಹಣಕಾಸಿನ ಪರಿಸ್ಥಿತಿ ಹೆಚ್ಚಿನ ಮಟ್ಟದಲ್ಲಿ ಸುಧಾರಿಸಲಿದೆ, ಸತ್ಕರ್ಮಗಳಲ್ಲಿ ದಿನೇ ದಿನೇ ಆಸಕ್ತಿ ಮೂಡಿಬರಲಿದೆ, ಇವೆಲ್ಲಾ ಫಲಗಳು ಗುರು ಗ್ರಹವು ವೃಷಭ-ಕರ್ಕಾಟ ರಾಶಿಯಲ್ಲಿ ಸಂಭವಿಸಲಿವೆ, ಆದರೆ ಅದೇ ಗುರುವು ಅಷ್ಟಮ ಭಾವವಾದ ಮಿಥುನ ರಾಶಿಯಲ್ಲಿ ಸಂಚರಿಸುವಾಗ ಅಷ್ಟ ವಿಧವಾದ ಕಷ್ಟಗಳು ಬಂದರೂ ಅಚ್ಚರಿಯಿಲ್ಲ, ದೈಹಿಕ ಆರೋಗ್ಯದಲ್ಲಿ ವಿಪರೀತ ವ್ಯತ್ಯಾಸ ಕಂಡುಬರಲಿದ್ದು, ಮಾನಸಿಕ ಚಿಂತೆಯಾಗಲಿದೆ. ಪ್ರಯಾಣ ಮಧ್ಯದಲ್ಲಿ ವಾಹನಗಳ ತೊಂದರೆಯುಂಟಾಗಬಹುದು, ಬಂಧುಗಳೊಂದಿಗೆ ವಿರಸವುಂಟಾಗಲಿದೆ, ವಿದ್ಯಾರ್ಥಿಗಳ ಅಧ್ಯಯನಕ್ಕೆ ತುಸು ಹಿನ್ನಡೆಯಾಗಲಿದೆ, ಪಂಚಮ ಸ್ಥಾನದಲ್ಲಿ ಶನಿಗ್ರಹದ ಸಂಚಾರವಿರುವಾಗ ಆಗಬೇಕಾಗಿರುವ ಕೆಲಸಗಳು ಸಕಾಲದಲ್ಲಿಯಾಗದೆ, ಚಿಂತೆ ಬಾಧಿಸಲಿದೆ, ಪ್ರಾಯಕ್ಕೆ ಬಂದ ಪುತ್ರರಿಂದಲೇ ವಿರೋಧ ಕಂಡು ಬರಲಿದೆ, ಸ್ವಜನರೊಂದಿಗೆ ನಿತ್ಯಕಲಹ, ಮಡದಿಯ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸಿನ ಕೊರತೆ, ಸ್ತ್ರೀ ನಿಮಿತ್ತ ಅಪಮಾನವಾಗಲಿದೆ. ಪುಣ್ಯ ನದಿ ಸ್ನಾನ ಮಾಡುವಿರಿ.
ಧನು ರಾಶಿ :
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)
ಹಣಕಾಸಿನ ಕೊರತೆ ತೀವ್ರವಾಗಿ ಕಾಡಲಿದ್ದು, ವಿನಾಕಾರಣ ಸಾಲಗಾರರಾಗಬೇಕಾದಿತು, ಬೇಡವೆಂದರೂ ಕೆಲವೊಮ್ಮೆ ದುರ್ಜನರ ಸಹವಾಸ ಅನಿವಾರ್ಯವಾಗಲಿದೆ. ರಾಜಕಾರಣಿಗಳಿಂದ ಬರೀ ಭರವಸೆಯ ಮಾತನ್ನು ಕೇಳಿ ಕೇಳಿ ಬೇಸತ್ತು ಹೋಗುವಿರಿ, ಮಿತ್ರರೊಂದಿಗೆ ಮನಸ್ತಾಪ ಒಂದು ಕಡೆಯಾದರೆ, ಅನಾರೋಗ್ಯದ ಸಮಸ್ಯೆ ಮತ್ತೊಂದು ಕಡೆ ಕಾಡಲಿದೆ. ಇವೆಲ್ಲವೂ ಗುರು ಗ್ರಹವು ವೃಷಭ, ಕರ್ಕಾಟಕ ರಾಶಿಯಲ್ಲಿ ಸಂಚರಿಸುವಾಗ ನಡೆಯಬಹುದಾದ ಫಲಗಳಾಗಿದ್ದು, ಅದೇ ಗುರುವು ಮಿಥುನ ರಾಶಿಯಲ್ಲಿರುವಾಗ ಉದ್ಯೋಗದಲ್ಲಿ ಮುಂಬಡ್ತಿಯೊಂದಿಗೆ ವೇತನದಲ್ಲಿ ಹೆಚ್ಚಳವಾಗಲಿದೆ, ಹಣಕಾಸಿನ ಸಮಸ್ಯೆಯು ಪರಿಹಾರವಾಗಲಿದೆ, ನವದಂಪತಿಗಳಲ್ಲಿ ಮೂಡುತಿದ್ದ ವಿರಸವು ಸರಸವಾಗಿ ಸುಖಾಂತ್ಯಗೊಳ್ಳಲಿದೆ, ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಲಿದ್ದು, ಮನೆಯಲ್ಲಿ ಮದುವೆ ಮುಂತಾದ ಮಂಗಳ ಕಾರ್ಯಗಳು ನಡೆಯಲಿವೆ. ಆದರೆ ಮೀನ ರಾಶಿಯಲ್ಲಿ ಶನಿಗ್ರಹವು ಸಂಚರಿಸುವಾಗ ಆಗಬೇಕಾಗಿರುವ ಕಾರ್ಯಗಳಿಗೆ ವಿಘ್ನಗಳೇ ಹೆಚ್ಚು. ಊಟೋಪಚಾರದ ವಿಷಯದಲ್ಲಿ ಜಾಗ್ರತರಾಗಿರುವುದು ಮೇಲು.
ಮಕರ ರಾಶಿ :
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)
ಗುರು ಗ್ರಹದ ಸಂಚಾರವು ವೃಷಭ ಕರ್ಕಾಟಕ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕನಾಗಿದ್ದು, ಸಜ್ಜನರ ಸಹವಾಸದಿಂದಾಗಿ ಸಾಮಾಜಿಕ ಸ್ಥಾನ-ಮಾನ ಹೆಚ್ಚಲಿದೆ, ಹದಗೆಟ್ಟ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಮನಸ್ಸಿಗೆ ನೆಮ್ಮದಿ ಮೂಡಲಿದೆ, ಹಣಕಾಸಿನ ಕೊರತೆ ನಿವಾರಣೆಯಾಗಲಿದ್ದು, ಉಳಿತಾಯದ ಬಗ್ಗೆ ತುಸು ಯೋಚಿಸಬಹುದು.ಮನೆಯಲ್ಲಿ ಮದುವೆಮುಂತಾದ ಮಂಗಳ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿವೆ.ಗುರು-ಹಿರಿಯರ ಆಶಿರ್ವಾದ ಪಡೆಯುವ ಭಾಗ್ಯ ನಿಮ್ಮದದಾಗಲಿದೆ. ಗುರುವು ಮಿಥುನ ರಾಶಿಯಲ್ಲಿ ಸಂರಿಸುವಾಗ, ಆನಾರೋಗ್ಯ ಸಮಸ್ಯೆ ಕಾಡಲಿದೆ, ಆದರೆ ಅದು ಕೆಲಕಾಲ ಮಾತ್ರ ಎಂಬುದು ನೆನಪಿರಲಿ. ಆಕಸ್ಮಿಕ ಎಂಬಂತೆ ಕೆಲವೊಮ್ಮೆ ಸಾಲಮಾಡ ಬೇಕಾದೀತು, ಮುಂದೆ ಶನಿಗ್ರಹವು ತೃತೀಯ ಸ್ಥಾನದಲ್ಲಿರುವುದರಿಂದ ಶುಭದಾಯಕನಾದ ಅವನು ಸಣ್ಣ-ಪುಟ್ಟ ಅಧಿಕಾರ ಗ್ರಹಣ ಮಾಡಿಸುವನು, ಶತ್ರುಗಳ ಕಾಟದಿಂದ ಮುಕ್ತಿ ದೊರೆಯಲಿದೆ, ನಿಮ್ಮ ಸಮಯೋಚಿತ ಪ್ರಜ್ಞೆ ಉತ್ತಮ ಫಲ ಕೊಡಲಿದೆ. ಸ್ಥಿರ ಆಸ್ತಿಕೊಳ್ಳಲು ಆರ್ಥಿಕ ನೆರವು ದೊರೆಯುವುದು, ಗುರುಗಳನ್ನು ಆರಾಧಿಸಿ.
ಕುಂಭ ರಾಶಿ :
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)
ನೀವು ಎಷ್ಟೇ ಪ್ರಾಮಾಣಿಕರಾಗಿದ್ದರೂ, ಮೇಲಾಧಿಕಾರಿಗಳಿಂದ ಉಪದ್ರವ ತಪ್ಪಿದ್ದಲ್ಲ. ಉದ್ಯೋಗ ನಿಮಿತ್ತ ಕೆಲಕಾಲ ಮನೆಯಿಂದ ತುಂಬಾ ದೂರದೂರಿನಲ್ಲಿ ವಾಸ ಮಾಡಬೇಕಾದಿತು, ಅಧಿಕಾರ ರೂಢರಾದ ಮಂತ್ರಿ ಮಹೋದಯರಿಗೆ ವಿರೋಧಿಗಳಿಂದ ಆಧಾರ ರಹಿತ ಆಪಾದನೆಗಳು ಕೇಳಿಬರಲಿವೆ. ಜೊತೆಗೆ ಕುಟುಂಬದ ಸದಸ್ಯರೊಂದಿಗೆ ವಿನಾಕಾರಣ ವಾಗ್ವಾದ ನಡೆಯಲಿದೆ, ಇವೆಲ್ಲಾ ಗುರು ಗ್ರಹದ ವೃಷಭ, ಕರ್ಕಾಟಕ ರಾಶಿ ಸಂಚಾರದ ಫಲವಾದರೆ, ಮಿಥುನ ರಾಶಿಯಲ್ಲಿ ಸಂಚರಿಸುವಾಗ ನಡೆಯಬಹುದಾದ ಫಲಾ-ಫಲಗಳು ಹೀಗಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಕುಟುಂಬದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ, ನವ ದಂಪತಿಗಳಿಗೆ ಸಂತಾನ ಭಾಗ್ಯ ಯೋಗ ಬರಲಿದೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಸಜ್ಜನರ ಸಹವಾಸ ಮಾನಸಿಕ ನೆಮ್ಮದಿಯನ್ನು ಕೊಡಲಿದೆ. ಶನಿಗ್ರಹವು ದ್ವಿತೀಯ ಸ್ಥಾನದಲ್ಲಿ ಇರುವಾಗ ಇಲ್ಲಸಲ್ಲದ ಆಪಾದನೆಗಳಿಗೆ ಗುರಿಯಾಗಬೇಕಾದೀತು, ಹೈನುಗಾರಿಕೆ ನಿರೀಕ್ಷಿತ ಫಲ ನೀಡದೇ ನಷ್ಟವುಂಟಾಗಬಹುದು, ದಾಯಾದಿಗಳೊಂದಿಗೆ ಕಲಹವುಂಟಾಗಲಿದೆ.
ಮೀನಾ ರಾಶಿ :
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)
ಗುರು ಗ್ರಹ ವೃಷಭ-ಮಿಥುನ ರಾಶಿ ಸಂಚಾರದ ಫಲವಾಗಿ ಮೊದಲೇ ಇಲ್ಲಸಲ್ಲದ ಚಿಂತೆ ಮಾಡುವ ನಿಮಗೆ ಮತ್ತೆ ಹತ್ತು ಹಲವಾರು ಚಿಂತೆ ಕಾಡಲಿವೆ. ನೀವು ನಂಬಿದ ಅಧಿಕಾರಿ ಅಥವಾ ರಾಜಕಾರಣಿಗಳಿಂದಲೇ ಕೆಲಸ, ಕಾರ್ಯಗಳಿಗೆ ಅಡ್ಡಿಯಾಗಲಿದೆ. ಪೂರ್ವ ನಿರ್ದಿಷ್ಟ ಮಂಗಳ ಕಾರ್ಯಗಳು ಅನಿರ್ದಿಷ್ಟಾವಧಿಯವರೆಗೆ ಮುಂದೆ ಹೋಗಲಿದೆ. ಶತ್ರುಗಳ ತಂತ್ರವರಿಯದೇ ಮೋಸ ಹೋಗುವಿರಿ, ಸಂಪಾದಿಸಿದ ಹಣ ಅಪವ್ಯಯವಾಗಲಿದೆ. ಮುಂದೆ ಕರ್ಕಾಟಕ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯದಲ್ಲಿ ಸ್ಥಿರತೆ ಕಂಡು ಬರಲಿದೆ. ಜೊತೆಗೆ ಆಕಸ್ಮಿಕ ಧನ ಲಾಭವಾಗಲಿದೆ, ಆರಂಭಿಸಿರುವ ಉದ್ಯಮದಲ್ಲಿ ಹೆಚ್ಚಿನ ಲಾಭಾಂಶ ಕಂಡುಬರಲಿದೆ, ನವದಂಪತಿಗಳಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ ದೂರವಾಗಿ ಸಂಸಾರದಲ್ಲಿ ಸುಖ-ಶಾಂತಿ ಮೂಡಲಿದೆ, ಶನಿಗ್ರಹವು ಜನ್ಮಸ್ಥವಾಗಿರುವುದ ರಿಂದ, ದೈಹಿಕ ಶ್ರಮ ಹೆಚ್ಚಾಗುವುದಲ್ಲದೇ, ಮಾನಸಿಕ ಕಷ್ಟಗಳು ಹೆಚ್ಚಲಿವೆ. ರಾಜಕಾರಣಿಗಳಿಗೆ ತಮ್ಮ ಪಕ್ಷದ ವರಿಷ್ಠರಿಂದಲೇ ಮುಖ ಭಂಗವಾಗಬಹುದು. ನದಿ, ಸಮುದ್ರ ಮುಂತಾದ ಕಡೆ ಜಾಗ್ರತರಾಗಿರಿ.
(ವಿ.ಸೂ. ಮೇಲ್ಕಂಡ ದ್ವಾದಶರಾಶಿಗಳ ಫಲಾಫಲಗಳೆಲ್ಲವೂ ಸರ್ವೇಸಾಧಾರಣವಾಗಿದ್ದು, ಕೆಲವೊಮ್ಮೆ ಅವರವರ ಜಾತಕಗಳಲ್ಲಿ ಕಂಡುಬರಲಿರುವ ದಶಾಭುಕ್ತಿಗಳಿಗನುಸಾರವಾಗಿ ಫಲಾಫಲಗಳಲ್ಲಿ ವ್ಯತ್ಯಾಸ ಕಂಡುಬರಲಿರುವುದರಿಂದ ನಿಮ್ಮ ವಿಶ್ವಸನೀಯ ಜೋತಿಷ್ಕರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಿ)
ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678
Click here to change this text