ವಾಣಿಜ್ಯ ಬೆಳೆಗಳ ಬೆಲೆಯಿಂದಾಗಿ ಮುಂದೆ ಆಹಾರ ಬೆಳೆಗಳನ್ನು ಹೆಚ್ಚು ದರದಲ್ಲಿ ಕೊಂಡು ತಿನ್ನುವ ಪರಿಸ್ಥಿತಿ ಖಂಡಿತಾ ಬರುತ್ತದೆ. ಇದಕ್ಕೆ ಉದಾಹರಣೆ ಈಗಾಗಲೇ ಎಣ್ಣೆಕಾಳು ಬೆಳೆಗಳು, ದ್ವಿದಳ ಧಾನ್ಯ ಬೆಳೆಗಳು ಹಾಗೂ ಸಿರಿಧಾನ್ಯಗಳ ಬೆಲೆಗಳು ಗಗನಕ್ಕೇರಿರುವುದು.
ಕಳೆದೆರಡು ತಿಂಗಳಿನಿಂದ ಬೇಸಿಗೆಯ ಬಿರು ಬಿಸಿಲಿಗೆ ಬಸವಳಿದಿದ್ದಾರೆ ನಮ್ಮ ರೈತರು. ಹೋದ ವರ್ಷ ಸುರಿದ ಭಾರೀ ಮಳೆಯಿಂದ ಎಲ್ಲೆಡೆ ಕೆರೆ-ಕಟ್ಟೆಗಳು ತುಂಬಿ, ಭೂಮಿಯ ಒಡಲಲ್ಲಿ ಜಲಧಾರೆ ಶೇಖರಣೆಯಾಗಿದ್ದು, ಭತ್ತ ಮತ್ತು ಮೆಕ್ಕೆಜೋಳದ ಸ್ಥಳದಲ್ಲಿ ಈಗ ವಾಣಿಜ್ಯ ಬೆಳೆಗಳ ರಾಜ ಅಡಿಕೆಯದ್ದೇ ಕಾರು-ಬಾರು. ಜಿಲ್ಲೆಯ ಯಾವ ತಾಲ್ಲೂಕಿಗೆ ಹೋದರೂ ಹೊಸ ತೋಟಗಳು ನಿಮ್ಮನ್ನು ಕೈಬೀಸಿ ಕರೆಯುತ್ತಿವೆ. ಬರುವ ಐದು ವರ್ಷಗಳಲ್ಲಿ ಅಡಿಕೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ವಲ್ಪ ರೈತರು ಯೋಚಿಸುತ್ತಿದ್ದರೆ, ಕೆಲವೊಬ್ಬರು ಮುಂದೆ ಆಹಾರ ಬೆಳೆಗಳ ಬೆಲೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಇಂತಹ ಗೊಂದಲಮಯ ಸ್ಥಿತಿಗೆ ಇಂದು ರೈತರು ತಲುಪಿದ್ದಾರೆಂದರೆ ತಪ್ಪಾಗಲಾರದು.
ಇತ್ತೀಚಿಗೆ ರೈತರು ಕರೆ ಮಾಡುವಾಗ ಕೇಳುವ ಸಾಮಾನ್ಯ ಪ್ರಶ್ನೆ ಎಂದರೆ- ಮುಂದೆ ಹೇಗಿದೆ ಅಡಿಕೆ ಭವಿಷ್ಯ?. ನಮ್ಮ ಕೇಂದ್ರಕ್ಕೆ ಸಲಹೆಗೆ ಬರುವ ರೈತರಲ್ಲಿ ಶೇಕಡ 90ರಷ್ಟು ರೈತರು ಅಡಿಕೆಯ ರೈತರೇ. ನಾನು ಈಗಾಗಲೇ ಕೆಲವು ಬಾರಿ ನನ್ನ ಅನಿಸಿಕೆಯಲ್ಲಿ ಹೇಳಿದ ಹಾಗೆ ಯಾವುದೇ ಬೆಳೆಯ ವಿಸ್ತೀರ್ಣ ಹೆಚ್ಚಾದರೆ ಅದಕ್ಕೆ ಬರುವ ರೋಗ ಮತ್ತು ಕೀಟಗಳೂ ಸಹ ಹೆಚ್ಚುತ್ತವೆ. ಅದು ಹಾಗೆಯೇ ಆಗಿದೆ. 10 ವರ್ಷಗಳಲ್ಲಿ ಹಿಂದೆ ಗಮನಾರ್ಹವಲ್ಲದ ರೋಗ ಕೀಟಗಳು ಇಂದು ಮುಖ್ಯ ರೋಗ ಕೀಟಗಳಾಗಿವೆ. ಜೊತೆಗೆ ವಾತಾವರಣದ ವೈಪರೀತ್ಯವೂ ಬೇರೆ.
ಪ್ರಸ್ತುತ ಅಡಿಕೆ ಬೆಳೆಗಾರರ ಚರ್ಚೆಯಲ್ಲಿರುವ ವಿಷಯಗಳು ಎಂದರೆ- ಎಲೆ ಚುಕ್ಕಿ ರೋಗ, ಕಳೆದ ವರ್ಷದ ಅಡಿಕೆಯ ಫಸಲು, ಮುಂದಿನ ವರ್ಷದ ಅಂದಾಜು ಫಸಲು, ವಿದೇಶದಿಂದ ಅಡಿಕೆ ಆಮದು, ಪ್ರತಿ ವಾರ ಅಡಿಕೆಯ ಬೆಲೆ, ಹೊಸ ಕಂಪನಿಯ ಗೊಬ್ಬರ ಅಥವಾ ಔಷಧಿ, ಕುರಿ ಗೊಬ್ಬರ, ಕೆರೆ ಮಣ್ಣು, ಚುನಾವಣೆ ಆಗುವವರೆಗೆ ಅಡಿಕೆ ಬೆಲೆ, ಬೋರ್‌ವೆಲ್ ಲಾರಿ ಸಿಕ್ತಿಲ್ಲ, ಹೀಗೆ ಹಲವಾರು ವಿಷಯಗಳು ನಮ್ಮ ಬೆಳೆಗಾರರ ಅಂತರಂಗದಲ್ಲಿ ಪಸರಿಸುತ್ತಿರುವವು.
ಬಹಳಷ್ಟು ರೈತರು ಬಯಲು ಸೀಮೆಯಲ್ಲಿ ಅಡಿಕೆ ಬೆಳೆಯ ಭವಿಷ್ಯದ ಬಗ್ಗೆ ಆತಂಕ ಪಡುತ್ತಿ ದ್ದಾರೆ. ಅವರಿಗೆಲ್ಲ ನಾನು ಹೇಳುವ ಉತ್ತರ ಏನೆಂದರೆ, ತಾವ್ಯಾರೂ ಧೈರ್ಯ ಗೆಡುವ ಪ್ರಶ್ನೆಯೇ ಇಲ್ಲ. ಪ್ರಕೃತಿಯ ಆಶೀರ್ವಾದದಿಂದ ಬೆಳೆ ಮತ್ತು ಬೆಲೆ ಎಲ್ಲವೂ ಸಹ ಸಮತೋಲನ ವನ್ನು ಕಾಪಾಡಿಕೊಳ್ಳುತ್ತದೆ. ಈ ವಿಷಯವನ್ನು ರೈತರಿಗೆ ಮನದಟ್ಟು ಮಾಡಿಸುವುದು ಬಹಳ ಕಷ್ಟದ ವಿಷಯ. ಬಯಲು ಸೀಮೆಯ ಅಡಿಕೆ ಬೆಳೆಗಾರರು ಅದೃಷ್ಟದ ರೈತರು. ಅದೇ ಮಲೆನಾಡು ಪ್ರದೇಶದಲ್ಲಿ ಅಡಿಕೆ ಬೆಳೆಗಾರರನ್ನು ತಾವು ಒಮ್ಮೆ ಭೇಟಿ ನೀಡಿ ಮಾತನಾಡಿಸಿದರೆ, ಅವರ ಕಷ್ಟಗಳು ತಮಗೇ ಅರ್ಥವಾಗುತ್ತದೆ. ಮಲೆನಾಡು ಜಿಲ್ಲೆಗಳಲ್ಲಿ ಬರುವ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ ಮುಂತಾದವುಗಳಿಂದ ಆ ರೈತರಿಗೆ ಇಳುವರಿಯ ಜೊತೆಗೆ ಬೆಳೆಯೂ ನಾಶವಾಗುತ್ತದೆ. ವಿಸ್ತೀರ್ಣ ಗಣನೀಯವಾಗಿ ಕಡಿಮೆಯಾಗುತ್ತದೆ. ಆದರೆ ನಮ್ಮ ಬಯಲು ಸೀಮೆಯಲ್ಲಿ ರೋಗ ಅಥವಾ ಕೀಟ ಬಂದರೆ ಆ ವರ್ಷದ ಇಳುವರಿ ಹೋಗುವುದೇ ಹೊರತು ಬೆಳೆ ಹಾಳಾಗುವುದಿಲ್ಲ, ಹಾಗಾಗಿ ನಮ್ಮ ರೈತರು ಹೆದರುವ ಅಗತ್ಯವಿಲ್ಲ. ರೋಗ ಕೀಟ ಜಾಸ್ತಿ ಇರುತ್ತೆ, ಆದ್ರೆ ಅದಕ್ಕೆ ವೈಜ್ಞಾನಿಕವಾಗಿ ನಿಯಂತ್ರಣ ನಮ್ಮ ಬಳಿ ಇರುವುದರಿಂದ ಅದರ ಸುಧಾರಣೆ ಸಾಧ್ಯವಿದೆ.
ಮೊನ್ನೆ ಆತ್ಮೀಯ ರೈತ ಬಾಂಧವರೊಬ್ಬರು ಕರೆ ಮಾಡಿ ಹೇಳಿದ ಮಾತು, ಸರ್ ನಾನು ನಮ್ಮೂರಲ್ಲಿ ಗುಟುಕಾ ತಿನ್ನುವ ಹುಡುಗರಿಗೆ ಬೈಯ್ಯುವುದಿಲ್ಲ. ಏಕೆಂದರೆ ಅವರಿಂದಲೇ ಇಂದು ನಮ್ಮ ಅಡಿಕೆ ಬೆಲೆ ಸ್ಥಿರವಾಗಿರುವುದು ಎಂದು. ವಾಸ್ತವವಾಗಿ ಅವರು ಹೇಳಿದ ಮಾತು ನಿಜವೇ ಆದರೂ, ಪ್ರತಿ ವರ್ಷ ಒಂದು ಅಂದಾಜಿನ ಪ್ರಕಾರ ಶೇಕಡ ಹತ್ತರಷ್ಟು ಜನತೆ ಹೆಚ್ಚುವರಿಯಾಗಿ ಗುಟುಕಾದ ದಾಸರಾಗುತ್ತಿದ್ದಾರೆ. ಅಡಿಕೆಯ ಉಪ ಉತ್ಪನ್ನದ ಬಹುಪಾಲು ಸಹ ಗುಟ್ಕಾದ್ದೇ ಆಗಿದೆ. ಹೀಗಾಗಿ ಸಾಮಾಜಿಕವಾಗಿ ಆರೋಗ್ಯಕ್ಕೆ ಹಾನಿಕರವಾದರೂ ಅದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಿಕೆ ಬೆಳೆಯಲ್ಲಿ ಉಪ ಉತ್ಪನ್ನಗಳ ಕುರಿತು ಸಂಶೋಧನೆ ಅಗತ್ಯವಿದೆ. ಇಲ್ಲವಾದರೆ ನಮ್ಮ ಆರ್ಥಿಕ ಸ್ವಾರ್ಥಕ್ಕಾಗಿ ಯುವ ಜನತೆಯನ್ನು ಬಲಿ ಪಶು ಮಾಡಿದಂತಾಗುತ್ತದೆ.
ಇನ್ನು ಬೆಳೆ ವಿಸ್ತೀರ್ಣದ ವಿಷಯಕ್ಕೆ ಬಂದರೆ ನೀರಿನ ಲಭ್ಯತೆಗೆ ಅನುಗುಣವಾಗಿ ತೋಟವನ್ನು ಮಾಡಿಕೊಳ್ಳಿ. ಇದನ್ನು ರೈತರಿಗೆ ಮನಮುಟ್ಟುವಂತೆ ಹೇಳುವುದು ಕಷ್ಟ. ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದಾಗ ರೈತರ ಉತ್ತರ ಹೀಗಿತ್ತು, ಸರ್, ಇಂದು ಭತ್ತದಲ್ಲಿ ಕೂಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಬೆಳೆಯ ಖರ್ಚು ಹಾಗೂ ಬೆಲೆಯ ಏರಿಳಿತದಿಂದ ಇಂದು ಎಕರೆಗೆ 5 ರಿಂದ 10,000 ಲಾಭ ಸಿಕ್ಕರೆ ಹೆಚ್ಚು. ಮೆಕ್ಕೆಜೋಳ ಯಾವಾಗಲೂ ಮಳೆಯೊಂದಿಗೆ ಆಟವಾಡಿ ಬೆಳೆಯುವ ಬೆಳೆ. ಈ ಬೆಳೆಗೆ ಮಳೆ ಜಾಸ್ತಿ ಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ.
ಇನ್ನು ಹಳ್ಳಿ ಪ್ರದೇಶಗಳಲ್ಲಿ ಕಾಣುವ ಮತ್ತೊಂದು ಸಮಸ್ಯೆ ಎಂದರೆ ಕೃಷಿಗೆ ಯುವಕರು ಬೆನ್ನು ಮಾಡಿರುವುದು. ನಗರ ಪ್ರದೇಶದ ವಿಲಾಸಿ ಜೀವನಕ್ಕೆ ಮಾರುಹೋಗಿ ರುವ ಯುವಕರು, ಇಂದು ಕೃಷಿಯೆಡೆಗೆ ಆಸಕ್ತಿಯನ್ನು ಕಳೆದುಕೊಂಡಿರುವುದು ಪರಿಸ್ಥಿತಿ. ಕೃಷಿ ಪರಿಕರಗಳಾದ ಬೀಜ, ರಸಗೊಬ್ಬರ, ಔಷಧಿಯ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ನಮಗೆ ಕ್ವಿಂಟಾಲ್ ಗೆ ಇಪ್ಪತ್ತು ಸಾವಿರ ಸಿಕ್ಕರೂ ಸಾಕು ಅಡಿಕೆ ಬೆಳೆಯೇ ನಮ್ಮ ಆಶಾಭಾವನೆ ಎನ್ನುತ್ತಾರೆ ರೈತರು. ಅವರ ಭಾವನೆ ನಮಗೆ ಅರ್ಥವಾಗುತ್ತದೆ. ಆದರೆ ವಾಣಿಜ್ಯ ಬೆಳೆಗಳ ಬೆಲೆಯಿಂದ ಮುಂದೆ ಆಹಾರ ಬೆಳೆಗಳನ್ನು ಹೆಚ್ಚು ದರದಲ್ಲಿ ಕೊಂಡು ತಿನ್ನುವ ಪರಿಸ್ಥಿತಿ ಖಂಡಿತ ಬರುತ್ತದೆ. ಇದಕ್ಕೆ ಉದಾಹರಣೆ ಈಗಾಗಲೇ ಎಣ್ಣೆಕಾಳು ಬೆಳೆಗಳು, ದ್ವಿದಳ ಧಾನ್ಯ ಬೆಳೆಗಳು ಹಾಗೂ ಸಿರಿಧಾನ್ಯಗಳ ಬೆಲೆ ಹೆಚ್ಚಳವೇ ಸಾಕ್ಷಿ.
ಒಂದು ಅಂದಾಜಿನ ಪ್ರಕಾರ ನಮ್ಮ ಮಧ್ಯ ಕರ್ನಾಟಕ ಭಾಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಎಕರೆಯಷ್ಟು ಪ್ರದೇಶ ಅಡಿಕೆಯಲ್ಲಿ ವಿಸ್ತೀರ್ಣ ಜಾಸ್ತಿಯಾಗಿರುವುದು ಕಂಡುಬಂದಿದೆ. ಈಗಿರುವ ಭೂಮಿಯ ಅಂತರ್ಜಲ ಮತ್ತು ಮಳೆಯನ್ನು ಅವಲಂಬಿಸಿ ಈ ಬೆಳೆಯ ವಿಸ್ತೀರ್ಣ ಜಾಸ್ತಿ ಆಗಿರುವುದನ್ನು ನಾವು ಗಮನಿಸಿದರೆ, ಮುಂದೇನಾದರೂ ಎರಡು ವರ್ಷಗಳಲ್ಲಿ ನಮಗೆ ಮಳೆಯ ಕೊರತೆಯಾಗಿ ಅಂತರ್ಜಲ ಮಟ್ಟ ಕುಸಿದರೆ ಆ ಸನ್ನಿವೇಶವನ್ನು ನಾವು ಊಹೆ ಮಾಡಿಕೊಳ್ಳುವುದೂ ಅಸಾಧ್ಯ. ಪ್ರತಿ 10 ವರ್ಷಕ್ಕೊಮ್ಮೆ ಅಡಿಕೆ ತೋಟಗಳಲ್ಲಿ ಕಂಡುಬರುವ ಟ್ಯಾಂಕರ್ ನೀರಾವರಿ ಪದ್ಧತಿ ಮತ್ತೆಲ್ಲಿ ಬರುವುದೋ ಎಂಬ ಆತಂಕ ಮನೆ ಮಾಡಿದೆ. ಹಿರಿಯರು ಹೇಳುವ ಒಂದು ಗಾದೆಯಂತೆ ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎನ್ನುವಂತೆ ‘ನೀರಿದ್ದಷ್ಟು ತೋಟ ಮಾಡು’ ಎಂದು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕು.
ಹಾಗೆಯೇ ಹಳೆಯ ತೋಟಗಳಲ್ಲಿ ನಾವು ಇತರೆ ಅಂತರ ಬೆಳೆಗಳನ್ನು ಬೆಳೆಯುವುದರ ಬಗ್ಗೆ ಗಮನಹರಿಸಬೇಕು. ನಮ್ಮ ಭಾಗದಲ್ಲಿ ಕಾಳುಮೆಣಸು, ಜಾಯಿಕಾಯಿ, ಕೋಕೋ ಮುಂತಾದ ಅಂತರ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಬಹುದು. ಆದರೆ ಅವುಗಳ ಬೇಸಾಯ ಕ್ರಮಗಳಿಗೆ ಸ್ವಲ್ಪ ಮುತುವರ್ಜಿ ವಹಿಸಬೇಕಾದ ಅವಶ್ಯಕತೆ ಇದೆ. ಅಡಿಕೆ ಬೆಳೆಯ ಹಾಗೆ ನಾವು ಬೆಳೆದರೆ ಆಗುವ ನಷ್ಟ ಕಟ್ಟಿಟ್ಟ ಬುತ್ತಿ. ಹಾಗಾಗಿ ರೈತರು ಬರುವ ದಿನಗಳಲ್ಲಿ ಅಡಿಕೆಯ ಬೆಳೆ ಮತ್ತು ಬೆಲೆಯ ವೈಪರೀತ್ಯಕ್ಕೆ ಮಾನಸಿಕವಾಗಿ ಸಿದ್ದರಿರಬೇಕೆಂಬುದು ನಮ್ಮ ಸಲಹೆ.1
– ಬಸವನಗೌಡ ಎಂ ಜಿ., ತೋಟಗಾರಿಕೆ ವಿಜ್ಞಾನಿಗಳು, ಐಸಿಎಆರ್ , ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ.