ಇವತ್ತು ವಿಕಾಸ ಪಥಕ್ಕೆ ಐವತ್ತು

ಇವತ್ತು ವಿಕಾಸ ಪಥಕ್ಕೆ ಐವತ್ತು

ಜನತಾವಾಣಿ ಸಂಪಾದಕ ಎಂ.ಎಸ್. ವಿಕಾಸ್‌ಗೆ ಇಂದು 50ನೇ ಜನ್ಮ ದಿನ. ಓರ್ವ ವ್ಯಕ್ತಿಯ ಜನ್ಮ ದಿನವನ್ನು ಆಚರಿಸುವಾಗ ವಸಂತ ಕಾಲದ ನೆನಪು ಬರುವುದು ಸಹಜ. ಇದೀಗ 50ನೇ ವಸಂತ ಕಾಣುತ್ತಿ ರುವ ವಿಕಾಸ್ ಹುಟ್ಟಿರುವುದೂ ವಸಂತ ಮಾಸದಲ್ಲೇ. 

ಸುಮಾರು 29 ವರ್ಷದ ಪತ್ರಿಕೋದ್ಯಮದ ಅನುಭವ ದೊಂದಿಗೆ ಸಂಪಾದಕರು 50 ವಸಂತಗಳನ್ನು ಪೂರೈಸುತ್ತಿದ್ದಾರೆ. ಇದು ಜನತಾವಾಣಿ ಪತ್ರಿಕೆಯ ಪಯಣದಲ್ಲಿ ದೊಡ್ಡ ಮೈಲಿಗಲ್ಲು. ಈ ಸಂದರ್ಭ ತಾವು ನಡೆದು ಬಂದ ದಾರಿಯನ್ನು ಒಮ್ಮೆ ಹಿಂದಿರುಗಿ ನೋಡುವಂತೆ ಮಾಡಿದೆ.

ಎಂ.ಎಸ್. ವಿಕಾಸ್ ಪತ್ರಿಕೋದ್ಯಮಕ್ಕೆ ಬಂದದ್ದು ಆಕಸ್ಮಿಕವೇನೂ ಅಲ್ಲ. ತಂದೆ ಹೆಚ್.ಎನ್. ಷಡಾಕ್ಷರಪ್ಪ ಜನತಾವಾಣಿಯನ್ನು ಹುಟ್ಟುಹಾಕಿ ಬೆಳೆಸಿದ್ದನ್ನು ಮುಂದುವರೆಸಿಕೊಂಡು ಹೋಗಲು ತಮ್ಮ ಮಗನಿಂದ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. 

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ವಿಕಾಸ್‌ಗೆ, 1995ರಲ್ಲಿ ಜನತಾವಾಣಿ ಪತ್ರಿಕೆಯ ಜವಾಬ್ದಾರಿ ಕೈ ಬೀಸಿ ಕರೆಯಿತು. ಪತ್ರಿಕೆಯ ಮಾಲೀಕನಿಗೆ ಪತ್ರಿಕೋದ್ಯಮ ಪದವಿಗಿಂತ, ಪ್ರಾಯೋಗಿಕ ಅನುಭವವೇ ಮುಖ್ಯ ಎಂದು ಅವರಿಗೆ ಅದಾಗಲೇ ತಿಳಿದಿತ್ತು. 

ದಾವಣಗೆರೆಯಲ್ಲಿ ಜನತಾವಾಣಿ ಪತ್ರಿಕೆ ಪ್ರಾರಂಭವಾದದ್ದು 1974ರಲ್ಲಿ ಅಂದರೆ ಇನ್ನೊಂದು ವರ್ಷಕ್ಕೆ ಜನತಾವಾಣಿ 50 ವರ್ಷ ಪೂರೈಸುತ್ತದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳಿಗೆ ಹೊಸ ರೂಪ ಕೊಟ್ಟು ಅವು ನಿರ್ದಿಷ್ಟ ಅಸ್ತಿತ್ವ ಗಳಿಸಿಕೊಂಡು ದೃಢವಾಗಿ ನಿಲ್ಲಬಲ್ಲವು ಎಂಬುದನ್ನು ತೋರಿಸಿಕೊಟ್ಟವರು ಹೆಚ್.ಎನ್. ಷಡಾಕ್ಷರಪ್ಪ. ಪತ್ರಿಕಾ ಪ್ರಪಂಚದಲ್ಲಿ ಸಣ್ಣದಾಗಿ ಕಾಲಿಟ್ಟು ಸ್ಥಳೀಯವಾಗಿ ರೈತ ಪರ ಧೋರಣೆ ಹಾಗೂ ಕಾಲಘಟ್ಟದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಮಧ್ಯ ಕರ್ನಾಟಕದಲ್ಲಿ ಆಪ್ತ ಒಡನಾಡಿಯಾಗಿ ಬೆಳೆದು ಬಂದದ್ದು ಒಂದು ಅಧ್ಯಾಯವಾದರೆ, ಪತ್ರಿಕೆ ಗಳ ಬೆಲೆ ಪೈಪೋಟಿ ಎದುರಿಸುವುದು ಹಾಗೂ ಮುದ್ರಣ ತಂತ್ರಜ್ಞಾನದ ಸವಾಲನ್ನು ಎದುರಿ ಸಿದ್ದು ಮತ್ತೊಂದು ಅಧ್ಯಾಯ. ಈ ಅಧ್ಯಾಯ ಪ್ರಾರಂಭವಾಗುವುದೇ ವಿಕಾಸ್ ಅವರಿಂದ.

ಪ್ರಸಾರದಲ್ಲಿ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಇದ್ದ ಅಶಿಸ್ತಿನಿಂದಾಗಿ ಲಾಭವನ್ನೇ  ಕಾಣದಿದ್ದ ಪತ್ರಿಕೆಗೆ ಉದ್ಯಮದ `ಟಚ್’ ನೀಡಿದ ಫಲವಾಗಿ ಪತ್ರಿಕೆಯು ಜನಪ್ರಿಯತೆಯ ಜೊತೆಗೆ ಸ್ಥಿರತೆಯನ್ನು ಕಾಣುವಂತಾ ಯಿತು. ವಿಕಾಸ್ ವೃತ್ತಿಯಲ್ಲಿ ಪತ್ರಿಕೋದ್ಯಮಿಯಾದರೂ, ಅಂತರಂಗದಲ್ಲೊಬ್ಬ ಟೆಕಿ ಅವರಲ್ಲಿ ಸದಾ ಜೀವಂತ. ಸ್ಥಳೀಯ ಮಾಧ್ಯಮ ಒತ್ತಟ್ಟಿಗಿರಲಿ, ರಾಜ್ಯ ಮಟ್ಟದ ಪತ್ರಿಕೆಗಳಿಗೂ ದುರ್ಲಭವಾದ ತಂತ್ರಜ್ಞಾನಗಳನ್ನು ಜನತಾವಾಣಿಗೆ ಅಳವಡಿಸಲು ಅವರು ಸದಾ ಪ್ರಯೋಗಶೀಲರು. ಅವರ ಸಾರಥ್ಯದಲ್ಲಿ, 2019ರಲ್ಲಿ ಜನತಾವಾಣಿ ಪತ್ರಿಕೆ ಹದಡಿ ರಸ್ತೆಯಲ್ಲಿ ನೂತನ ಕಚೇರಿ ಹಾಗೂ ಮುದ್ರಣ ವ್ಯವಸ್ಥೆಗೆ ಸ್ಥಳಾಂತರಗೊಂಡಿತು. ಮುದ್ರಣ ಪುಟಗಳ ವಿಸ್ತಾರವೂ ಹೆಚ್ಚಾಯಿತು. 

1996 ರಲ್ಲಿ ಸಹ ಸಂಪಾದಕರು ಹಾಗೂ 2011ರಲ್ಲಿ ಸಂಪಾದಕರಾದ ವಿಕಾಸ್, ಪತ್ರಿಕೆಗೆ ಸೇರಿದ ಆರಂಭದ ದಿನಗಳಲ್ಲಿನ ಉತ್ಸಾಹವನ್ನು ಇಂದಿಗೂ ಅದೇ ಸ್ತರದಲ್ಲಿ ಉಳಿಸಿಕೊಂಡಿದ್ದಾರೆ. ದೇಹಕ್ಕೆ 50 ಆಗಿದ್ದರೂ ಮನಸ್ಸಿನಲ್ಲಿ ಈಗಲೂ 1995ರಲ್ಲಿ ಪತ್ರಿಕೆಯ ಮೊದಲ ಹೆಜ್ಜೆ ಇರಿಸಿದ ಯುವಕನೇ ಆಗಿದ್ದಾರೆ. ಹೊಸತನ್ನು ನಿತ್ಯ ಕಲಿಯುವ ಹಾಗೂ ಕಲಿತಿದ್ದನ್ನು ಪತ್ರಿಕೆಯ ಮೂಲಕ ತಲುಪಿಸುವ ನಿರಂತರ ತುಡಿತವಿದೆ.

ವಿಕಾಸ್, ಜೀವನದಲ್ಲಿ ಎಂದಿಗೂ ಯಥಾಸ್ಥಿತಿ ವಾದಿಯಾಗಿ ನಿಂತವರಲ್ಲ. ನಿತ್ಯ ಹೊಸ ಸವಾಲುಗಳಿದ್ದರೇನೇ ಜೀವನ ಚಂದ ಎಂಬುದೇ ಅವರ `ವಿಕಾಸ’ವಾದ. ಹೀಗಾಗಿಯೇ ಪತ್ರಿಕೋದ್ಯಮದ ಸವಾಲುಗಳು ಅವರನ್ನು ಕಂಗೆಡಿಸಲಿಲ್ಲ, ಬದಲಿಗೆ ಕಂಗೊಳಿಸಿದವು. ಸವಾಲುಗಳಿಗೆ ಅವರು ಸಂಯಮದ ಮೂಲಕ ಉತ್ತರಗಳನ್ನು ಕಂಡುಕೊಂಡರು. ಒತ್ತಡದ ನಡುವಿನ ಅವರ ಸಮಾಧಾನದ ಗುಟ್ಟು ಅವರ ನಿಕಟವರ್ತಿಗಳಿಗೂ ಚಿದಂಬರ ರಹಸ್ಯವಾಗಿದೆ.

ಸಾಮಾನ್ಯವಾಗಿ ಸ್ಥಳೀಯ ಪತ್ರಿಕೆಗಳು ಸಂಪಾದಕರನ್ನೇ ಅತಿಯಾಗಿ ಅವಲಂಬಿಸಿರುತ್ತವೆ. ಆದರೆ, ಜನತಾವಾಣಿ ಪತ್ರಿಕೆ ಆ ರೀತಿ ಆಗಬಾರದು ಎಂಬುದು ವಿಕಾಸ್ ಅವರ ದೃಢ ನಿಲುವು. ಹೀಗಾಗಿಯೇ ಅವರು ತಾವು ಪತ್ರಿಕೋದ್ಯಮದಲ್ಲಿ ತಿಳಿದ ತಾಂತ್ರಿಕ ಅಂಶಗಳಿಂದ ಹಿಡಿದು ಬರವಣಿಗೆ, ಮುದ್ರಣದಿಂದ ಹಿಡಿದು ವಹಿವಾಟಿನವರೆಗೆ ಎಲ್ಲ ವಿಷಯಗಳಲ್ಲಿ ಸಿಬ್ಬಂದಿಯನ್ನು ಸಜ್ಜುಗೊಳಿಸುತ್ತಾರೆ.

ಪತ್ರಿಕೋದ್ಯಮ ಜೀವನಕ್ಕಾದರೆ, ಜೀವಂತಿಕೆಗೆ ಅವರು ಕಂಡುಕೊಂಡಿದ್ದು ಕೃಷಿ. ಪತ್ರಿಕೆಯ ಸವಾಲನ್ನು ಮಗನ ಹೆಗಲಿಗೆ ಹಾಕಿದ್ದ ಹೆಚ್ಚೆನ್ನೆಸ್, ಬರಡಾಗಿದ್ದ ಜಮೀನನ್ನು ಹಸಿರಾಗಿಸುವ ಸವಾಲನ್ನೂ ಒಡ್ಡಿದರು. 2005ರ ಸಮಯದಲ್ಲಿ ಆಲೂರಿನ ಬಳಿ ಬರಡಾಗಿದ್ದ ತಿಟ್ಟನ್ನು ಹಚ್ಚ ಹಸಿರಾಗಿ ಮಾಡಿ ಸೈ ಎನಿಸಿಕೊಂಡರು.  ಅವಸರದ ಜಗತ್ತಿನ ಪತ್ರಿಕೋದ್ಯಮ, ಪ್ರಶಾಂತ ಚಲ ನೆಯ ಕೃಷಿ ಎರಡಕ್ಕೂ ಒಗ್ಗಿಕೊಳ್ಳುವ ಗುಣ ಅವರದ್ದು.

ಜನಸಂಪರ್ಕದಲ್ಲಿ ಸ್ವಲ್ಪಮಟ್ಟಿಗೆ `ರಿಸರ್ವ್’ ಎನಿಸಿದರೂ ಆಪ್ತರ ಒಡನಾಟದಲ್ಲಿ ವಿಚಾರಗಳ ಸರಪಳಿಯನ್ನೇ ಬಿಚ್ಚುವರು. ಪತ್ರಿಕೆಗಳಿಗೆ ಬರುವ ಸುದ್ದಿಯಾಗಲೀ, ಸಾರ್ವಜನಿಕವಾಗಿ ಚರ್ಚಿತವಾಗುವ ಸಂಗತಿಗಳನ್ನಾಗಲೀ ಚಿಕಿತ್ಸಕ ದೃಷ್ಟಿಯಿಂದ ನೋಡುವುದು, ಧರ್ಮಸೂಕ್ಷ್ಮಗಳನ್ನು ಗೌರವಿಸುವ ಜಾಯಮಾನ ಮೊದಲಿನಿಂದಲೂ ಇದ್ದದ್ದೇ.

ಅದೃಷ್ಟ, ಯಶಸ್ಸು ಎರಡೂ ಕಂಡಿರುವ ವಿಕಾಸ್ ತುಂಬು ಕುಟುಂಬ ಜೀವಿ. ತಾಯಿ ಜಯಶೀಲಾ ಷಡಾಕ್ಷರಪ್ಪ, ಪತ್ನಿ ಶ್ರೀಮತಿ ನೀತಾ ವಿಕಾಸ್‌, ಮಕ್ಕಳಾದ ಜಯಧರ ಹಾಗೂ ಪ್ರೇರಣ ಇರುವ ಮುದ್ದಿನ ಸಂಸಾರ. ಸಂಪಾದಕರ ಸಾರ್ಥಕ ಜೀವನಕ್ಕೆ ಕುಟುಂಬದ ಬೆಂಬಲವೂ ಅಪಾರ.

ಜೀವನದ ಯಶಸ್ಸು ಇತರರ ದೃಷ್ಟಿಯಲ್ಲಿ ಇರುತ್ತದೆ. ಏಕೆಂದರೆ ಯಶಸ್ಸು ಎನ್ನುವುದು ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಇರುತ್ತದೆ. ಒಬ್ಬರಿಗೆ ಹಣ ಸಂಪಾದನೆಯೇ ಒಂದು ಸಾಧನೆಯಾದರೆ, ಮತ್ತೊಬ್ಬರಿಗೆ ಅಧಿಕಾರ, ಕೀರ್ತಿ ಹೀಗೆಲ್ಲಾ ದೃಷ್ಟಿಗಳಿವೆ. ಯಶಸ್ವಿ ಜೀವನಕ್ಕಿಂತ ಸಂತೃಪ್ತ ಜೀವನವೇ ಮುಖ್ಯ ಎನ್ನುವುದು ವಿಕಾಸವಾದ.

ಅವರ ಸಾಧನೆಯ ಉತ್ತುಂಗ ಇನ್ನೂ ದೂರವಿದೆ. ಸಾಧನೆಯ ಮೆಟ್ಟಿಲುಗಳು ಕಾಯುತ್ತಿವೆ. ಜೀವನದ ವಿಕಾಸ ಎಂದೂ ನಿಲ್ಲದ ರೀತಿಯಲ್ಲೇ, ವಿಕಾಸ್ ಸಹ ನಿಲ್ಲದೇ ಮುನ್ನಡೆಯಲಿ ಎಂಬುದು ನಮ್ಮೆಲ್ಲರ ಹಾರೈಕೆ.


– ಎಂ.ಎಸ್. ಶರಣ್

error: Content is protected !!