`ಜೀವನವು ನಾವೆಲ್ಲರೂ ಹಂಚಿಕೊಳ್ಳುವ ಸಂಗಾತಿಯಾಗಿದೆ
ಗಾಳಿಯಲ್ಲಿ ಆಮ್ಲಜನಕದಂತೆಯೇ
ನಾವು ಅದನ್ನು ಹೇಗೆ ಬದುಕುತ್ತೇವೆ ಎಂಬುದು ನಮಗೆ ಬಿಟ್ಟದ್ದು
ಋಣಾತ್ಮಕ ಅಥವಾ ಪ್ಲಸ್ ನೊಂದಿಗೆ’.
ಕವಿಗಳ ಈ ವಾಣಿಯಂತೆ ಬದುಕುತ್ತಿರುವ ಜೀವವಿದು. ಮಾತು ಮಿತ…ಕೇಳಲು ಹಿತ. ಬಯಸುತ್ತಾರೆ ಜನ ಹಿತ. ಇವರು ನಿತ್ಯ ಪ್ರಕಟಿಸುವ ವಾಣಿಯು ನಮ್ಮ ಪ್ರಾಂತ್ಯದಲ್ಲಿ ಜನಜನಿತ. ಇಂದು ಐವತ್ತನೆಯ ಜನುಮ ದಿನವನ್ನು ಆಚರಿಸುತ್ತಿರುವ ವಿಕಾಸ್ ಮೆಳ್ಳೇಕಟ್ಟೆ ತಂದೆ ಹೆಚ್. ಎನ್. ಷಡಾಕ್ಷರಪ್ಪನವರು ಸ್ಥಾಪಿಸಿದ `ಜನತಾವಾಣಿ’ ಪತ್ರಿಕೆಯ ಸೂತ್ರಧಾರ. ಒಳ್ಳೆಯ ಹಾಸ್ಯ ಪ್ರಜ್ಞೆಯಿದೆ, ತುಸು ತುಂಟತನವಿದೆ ಇವೆಲ್ಲವನ್ನೂ ಮೀರಿಸುವ ಪ್ರಬುದ್ಧತೆಯಿದೆ. ಸಾಮಾಜಿಕ ಕಳಕಳಿಯಿದೆ. ಬಟ್ಟೆ-ಬಣ್ಣ, ಆಟ-ಊಟ, ಸಂಗೀತ-ಸಾಹಿತ್ಯ, ಸಾಂಸ್ಕೃತಿಕ ಸದಭಿರುಚಿಗಳಿವೆ. ಆಗಾಗ್ಗೆ ಪ್ರಬುದ್ಧ-ಪ್ರಖರ ಲೇಖನಗಳನ್ನು ಬರೆದಿದ್ದರೂ ಪತ್ರಿಕೆಯ ಸಮಗ್ರ ನಿರ್ವಹಣೆಯ ಕಡೆಗೆ ಹೆಚ್ಚು ಗಮನ. ಎಮೋಷನಲ್ ಆಗಿದ್ದರೂ ಯೋಚನೆಗಳು ಪ್ರಾಕ್ಟಿಕಲ್. ತಿರುಪತಿ ವೆಂಕಟೇಶನ ಭಕ್ತನಾದರೂ ಅಲ್ಲಮ ಪ್ರಭು, ಮರುಳ ಸಿದ್ಧರು, ಓಶೋ, ಜೆನ್ ಸಂತರ ಕುರಿತು ಸ್ಪಿರಿಚ್ಯುಯಲ್.
ಆನೆ ಜನತಾವಾಣಿಯ ಲಾಂಛನ. ಅದರಂತೆಯೇ ವಿಕಾಸ್ ನಡಿಗೆ. ದೈತ್ಯ ಬುದ್ದಿವಂತಿಕೆ ಇರುವ ಈ ವ್ಯಕ್ತಿ ಏನೇ ಹೆಜ್ಜೆ ಇಡುವ ಮುನ್ನ ಉಪಯೋಗಿಸುತ್ತಾರೆ ಯುಕ್ತಿ. ತಾಳ್ಮೆಯೇ ಈತನ ಶಕ್ತಿ. ಸುತ್ತಮುತ್ತಲಿನ ಬೊಗುಳುವಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಹಚರರೊಂದಿಗೆ ಸಮಾಲೋಚಿಸುತ್ತಾರೆ ಸೂಕ್ತವೆನಿಸಿದ್ದನ್ನು ಆಯ್ದುಕೊಳ್ಳುತ್ತಾರೆ. ಜವಾಬ್ದಾರಿಯ ಜಾಣ್ಮೆಯಿದೆ. 2009ರಲ್ಲಿ ದಾವಣಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸ್ಮರಣ ಸಂಚಿಕೆಯ ಸಂಪಾದಕರಾಗಿ ಅದನ್ನು ಮೌಲ್ಯಯುತವಾಗಿ ರೂಪಿಸಿದ್ದರು. ಸಿದ್ಧೇಶ್ವರ ಶ್ರೀಗಳ ಪ್ರವಚನ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ.
ನನ್ನಂತವರಲ್ಲಿ ಹಲವು ಪ್ರಭಾವಗಳನ್ನು ಬೀರಿರುವ ನೆಚ್ಚಿನ ಗೆಳೆಯ `ವಿಕ್ಕಿ’ ನಿಮಗೆ ಹುಟ್ಟುಹಬ್ಬದ ಶುಭಾಷಯಗಳು.
Stay Blessed
ಅರುಣ್ ಕುಮಾರ್ ಆರ್.ಟಿ
[email protected]