ರಂಭಾಪುರಿ ಪೀಠದಲ್ಲಿ ನಾಳೆ ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ರಂಭಾಪುರಿ ಪೀಠದಲ್ಲಿ ನಾಳೆ ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು), ಮಾ.1- ನಾಡಿದ್ದು ದಿನಾಂಕ 3 ರಿಂದ 7ರ ವರೆಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮ ಗಳಲ್ಲಿ ದಿನಾಂಕ 4 ರಂದು ಸಂಜೆ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ ಹಾಗೂ ಜಾನಪದ ಹಬ್ಬವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸುವರು.  

ದಿನಾಂಕ 5ರ ಬೆಳಿಗ್ಗೆ ಜರುಗುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಹಾಗೂ ಶಿವಾದ್ವೈತ ಧರ್ಮ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರದ ರೈತ ಕಲ್ಯಾಣ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸುವರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ: 2023ರ ಶ್ರೀ ಪೀಠದ ಅತ್ಯುನ್ನತ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ಯನ್ನು ಮಾಜಿ ಮುಖ್ಯಮಂತ್ರಿ-ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರದಾನ ಮಾಡಲಾಗುವುದು. `ರಂಭಾಪುರಿ ಬೆಳಗು’ ಮಾಸ ಪತ್ರಿಕೆಯನ್ನು ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಇಲಾಖೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಿಡುಗಡೆ ಮಾಡುವರು. 

ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು, ಹಂಪಸಾಗರದ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ನುಡಿಯುವರು. ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡುವರು. 

ಇದಕ್ಕೂ ಮುನ್ನ ಶ್ರೀ ಪೀಠದಲ್ಲಿ ನಿರ್ಮಾಣಗೊಳ್ಳಲಿರುವ 51 ಅಡಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಕಾರ್ಯಾರಂಭದ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೂಲ ಪೀಠದ ನವೀಕರಣದ ಶಿಲಾನ್ಯಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸುವರು. 

ದಿನಾಂಕ 6ರ ಸಂಜೆ ‘ನೇಗಿಲ ಯೋಗಿಯ ನೆನಹು’ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ‘ಡಾ.ಗುರುದೇವ ಶಿವಾಚಾರ್ಯ ಜೀವನ ದರ್ಶನ’ ಕೃತಿಯನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡುವರು.  ದಿನಾಂಕ 3 ರಂದು ಬೆಳಿಗ್ಗೆ ಧ್ವಜಾರೋಹಣ ಹರಿದ್ರಾಲೇಪನ ನಂತರ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ-ಗುಗ್ಗುಳ ಮಹೋತ್ಸವ ಹೂಲಿಯ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಬಸವರಾಜ ನ್ಯಾಮತಿ ಇವರ ಉಸ್ತುವಾರಿಯಲ್ಲಿ ಜರುಗುವುದು. 

ದಿನಾಂಕ 4ರ ಬೆಳಿಗ್ಗೆ ದೀಪೋತ್ಸವ-ಕುಂಕುಮೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ಜರುಗಲಿದ್ದು, ಸಂಜೆ 5 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುವುದು. 

ದಿನಾಂಕ 5ರ ಬೆಳಿಗ್ಗೆ ಶಿವದೀಕ್ಷಾ-ಅಯ್ಯಾಚಾರ ನೆರವೇರಲಿದ್ದು, ಅಪೇಕ್ಷಿತರು ಎರಡು ದಿನ ಮೊದಲು ತಮ್ಮ ಹೆಸರನ್ನು ಶ್ರೀ ಪೀಠದ ಕಾರ್ಯಾಲಯದಲ್ಲಿ ನೋಂದಾಯಿಸಬೇಕು. ಅಂದು ರಾತ್ರಿ 8-30 ಗಂಟೆಗೆ ಗಾನಗಂಧರ್ವ ಗುರುಸ್ವಾಮಿ ಕಲಕೇರಿ ಗದಗ ಸಂಗಡಿಗರಿಂದ ಭಕ್ತಿ ಗೀತೆಗಳ ಗಾನ ತರಂಗ ಏರ್ಪಡಿಸಲಾಗಿದೆ.  

ದಿನಾಂಕ 6 ರಂದು ಶಯನೋತ್ಸವ, ಶ್ರೀ ಜಗದ್ಗುರು ಶಿವಾನಂದ ಎಸ್ಟೇಟ್‌ನಲ್ಲಿ ಪೂಜಾ ಪ್ರಸಾದ ವಿನಿಯೋಗ ಸಂಜೆ ಬಸವನಕೋವಿಯಲ್ಲಿ ಕೆಂಡಾರ್ಚನೆ ಜರುಗುವುದು. 

ದಿನಾಂಕ 7ರಂದು ವಸಂತೋತ್ಸವ ಮತ್ತು ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ ನಡೆಯುವುದು.

error: Content is protected !!