ಶಿಕ್ಷಣ ಶಿಲ್ಪಿ ಶಿವಣ್ಣ ಅವರಿಗೆ ಗೌರವ ಡಾಕ್ಟರೇಟ್

ಶಿಕ್ಷಣ ಶಿಲ್ಪಿ ಶಿವಣ್ಣ ಅವರಿಗೆ ಗೌರವ ಡಾಕ್ಟರೇಟ್

ಶಿಕ್ಷಣವೆಂದರೆ ಮಕ್ಕಳಿಗೆ ಪಾಠ ಹೇಳುವುದಲ್ಲ. ಅದೊಂದು ಸಾಕ್ಷಿ ಪ್ರಜ್ಞೆ, ದೇಶ ಸೇವೆ ಎಂದು ನಂಬಿ ಕರ್ತವ್ಯ ನಿರ್ವಹಿಸಿದ ಸಿದ್ಧಗಂಗಾ ಸಂಸ್ಥೆಯ ಶಿವಣ್ಣ ಅವರು ಉನ್ನತ ಚಿಂತನೆ, ಉದಾತ್ತ ಪರಿಕಲ್ಪನೆಗಳನ್ನು ಸಾಕಾರಗೊಳಿಸಿದ ಚೇತನ, ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ಪಾಠ ಹೇಳುತ್ತಾ, ಅವರ ಭವಿಷ್ಯಕ್ಕೊಂದು ಹೆದ್ದಾರಿ ರೂಪಿಸಿದವರು. ಸ್ವತಃ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳಿ, ಶಾಲೆಯನ್ನು ಕಟ್ಟಿ ಬೆಳೆಸಿದ ಶಿವಣ್ಣ ಅವರು ಸರಳ ಸಜ್ಜನಿಕೆಯ ವ್ಯಕ್ತಿ, ಅವರ ನೇರ ನಿಷ್ಠೂರ ನಡೆ ನುಡಿಗಳು, ಸತ್ಯದ ಪರವಾದ ನಿಲುವು, ತ್ಯಾಗ ಜೀವನವೇ ವಿದ್ಯಾರ್ಥಿಗಳಿಗೆ ಅನುಭವದ ಪಾಠವಿದ್ದಂತೆ. ಸಿದ್ಧಗಂಗಾ ಶ್ರೀಗಳ ಶಿಷ್ಯರಾಗಿ, ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು, ಸಾಧನೆಗೆ ಪ್ರೇರಕ ಶಕ್ತಿಯಾಗಿ ಹೊಸತನ್ನು ರೂಪಿಸುವ ಸಂವಾಹಕರಾಗಿ ಚಲನಶೀಲರಾಗಿದ್ದಾರೆ. ದಾವಣಗೆರೆ ಯಲ್ಲಿ ಅವರು ಕಟ್ಟಿದ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ನೀಡಿದರೆ, ನೂರಾರು ಕುಟುಂಬಗಳಿಗೆ ಆಶ್ರಯ ತಾಣವಾಗಿದೆ.

ಸಾಕಷ್ಟು ಸಮಸ್ಯೆಗಳಿದ್ದರೂ ಶಿಕ್ಷಕನಾಗಬೇಕೆಂಬ ಹಂಬಲವನ್ನು ಅವರನ್ನು ಬಿಡಲಿಲ್ಲ. ಮಕ್ಕಳಿಗೆ ಮನೆ ಪಾಠ ಮಾಡಿದರು. ಹೊಸತನ್ನು ಕಲಿಯುತ್ತಾ, ಮಕ್ಕಳಿಗೆ ವಿಭಿನ್ನ ರೀತಿಯಲ್ಲಿ ಅರ್ಥವಾಗುವ ಶೈಲಿಯಲ್ಲಿ ಪಾಠ ಮಾಡುತ್ತಿದ್ದರು. ‘ಬಂದಾಗ ಏನೂ ತಂದಿರಲಿಲ್ಲ. ಹೋಗುವಾಗಲೂ ಏನೂ ಒಯ್ಯಲಿಲ್ಲ. ಬಂದು ಹೋಗುವ ನಡುವೆ ಏನಾದರೂ ಸೇವೆ ಮಾಡಬೇಕು’ ಎಂಬ ಮಹತ್ವಾಕಾಂಕ್ಷೆಯಿಂದ ಪ್ರಾಮಾಣಿಕವಾಗಿ ದುಡಿದ ಶಿವಣ್ಣ ಅವರು. ತಮ್ಮ ಮಕ್ಕಳಿಗೂ ಇದೇ ಪಾಠವನ್ನು ಹೇಳಿ ಕೊಟ್ಟಿದ್ದಾರೆ. ಮಕ್ಕಳಲ್ಲಿ ಮಾನವೀಯ ಶಿಕ್ಷಣದ ಮೂಲಕ ಸದೃಢ ಸಮಾಜ ನಿರ್ಮಾಣದ ಮೌಲ್ಯಗಳನ್ನು ಬಿತ್ತಿದ್ದಾರೆ.’ ಸಮಸ್ಯೆಗೊಂದು ಪರಿಹಾರ ಇದ್ದೇ ಇರುತ್ತದೆ. ಅದನ್ನು ಹುಡುಕುವ ಮನಸ್ಸು ಬೇಕು’ ಎಂಬ ಧೈರ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗೆ ಶ್ರಮಿಸಿದ್ದಾರೆ. 

ಸ್ವಂತ ಶಾಲೆ ತೆರೆದು ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಶಾಲೆ ಆರಂಭವಾದಾಗ ಎದುರಾಗಿದ್ದು ನೂರಾರು ಅಡೆತಡೆಗಳು. ಆದರೆ ಅವುಗಳನ್ನೆಲ್ಲ ಧೈರ್ಯವಾಗಿ, ಆತ್ಮವಿಶ್ವಾಸದಿಂದ ಮೆಟ್ಟಿ ಮುಂದಡಿ ಇಟ್ಟರು. ಅಂದು ಅವರು ಕೆಲವೇ ಮಕ್ಕಳೊಂದಿಗೆ ಕಟ್ಟಿದ ಶಾಲೆ ಗೂಡು ಇಂದು ಹೆಮ್ಮರವಾಗಿ ಬೆಳೆದಿದೆ. ಸುಮಾರು 6000 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಿಕ್ಷಣ ಗುಣಮಟ್ಟ, ಸ್ವಚ್ಛತೆ, ಶಿಸ್ತು, ಸಂಸ್ಕಾರ ಮತ್ತು ಅಧ್ಯಯನಶೀಲ ತತ್ವಗಳು ಸಂಸ್ಥೆಯ ಧ್ಯೇಯೋದ್ದೇಶ. ಸರಳ ವ್ಯಕ್ತಿತ್ವ, ಉನ್ನತ ಆಲೋಚನೆ ಗಳನ್ನು ಹೊತ್ತಿದ್ದ ಶಿವಣ್ಣ ಅವರಿಗೆ ಮಕ್ಕಳಿಗೆ ಅತ್ಯುತ್ತಮ ಭವಿಷ್ಯ ರೂಪಿಸಬೇಕು. ದೇಶದ ಸತ್ಪ್ರಜೆಯನ್ನಾಗಿ ಮಾಡಬೇಕು ಎಂಬುದಷ್ಟೇ ಗುರಿಯಾಗಿತ್ತು. ಆಸ್ತಿ, ಅಂತಸ್ತು, ಐಶ್ವರ್ಯಕ್ಕಾಗಿ ಎಂದೂ ಆಸೆಪಡಲಿಲ್ಲ. ಮಕ್ಕಳಿಗಾಗಿಯೇ ಶಾಲೆ ಆವರಣದಲ್ಲಿ ಮನೆ ಕಟ್ಟಿಕೊಂಡು ದಿನವಹಿ ನಿಗಾ ವಹಿಸುತ್ತಾ, ತಮ್ಮ ಮಕ್ಕಳಂತೆ ಪಾಲನೆ, ಪೋಷಣೆ ಮಾಡಿದ್ದಾರೆ. ಅವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಾಜದ ಸೇವೆ ಮಾಡುತ್ತಿದ್ದಾರೆ.

ಸಮಾಜದ ಋಣ ನನ್ನ ಮೇಲಿದೆ. ಅದನ್ನು ತೀರಿಸಲಾಗದು. ಆದರೆ ಸಮಾಜದಲ್ಲಿದ್ದು ಏನಾದರೂ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು ಎಂಬ ಸಂಕಲ್ಪದ ಉದ್ಧೇಶ ಈಡೇರಿಕೆಗಾಗಿ ಶಿವಣ್ಣ ಅವರು ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣವನ್ನು, ಸಿದ್ಧಗಂಗಾ ಶ್ರೀಗಳ ಸಲಹೆಯಂತೆ ಕಲಿತ ವಿದ್ಯೆಯನ್ನು ಮಕ್ಕಳಿಗೆ ಉಣಬಡಿಸಿದರು. ಶಿಕ್ಷಣ ದಾಸೋಹದ ಮೂಲಕ ಆರಂಭಿಸಿದ ಕಾಯಕ ಬದುಕಿಗೆ ಹೊಸ ಅರ್ಥ ನೀಡಿತು. ವಿದ್ಯಾರ್ಥಿಗಳ ಮೂಲಕ ಸದೃಢ, ಸುಸಂಸ್ಕೃತ ಮತ್ತು ಸುಂದರ ಸಮಾಜ ಕಟ್ಟಿದರು. ಕಲೆ, ಸಾಹಿತ್ಯ, ಸಂಸ್ಕೃತಿಯ ಪೋಷಣೆಗೆ ಕೈಜೋಡಿಸಿದರು. ಪತ್ರಕರ್ತರಾಗಿ, ಇತಿಹಾಸದ ರಕ್ಷಕರಾಗಿ, ಆರ್ಥಿಕ ಸಮನ್ವಯಕಾರರಾಗಿ, ಧಾರ್ಮಿಕ ತತ್ವ, ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿ, ಎಲ್ಲವನ್ನೂ ಸಮನ್ವಯಗೊಳಿ ಸುವ ಕೆಲಸ ಮಾಡಿದರು. ಅದರ ಪ್ರತಿಫಲವಾಗಿ ಸಾವಿರಾರು ವಿದ್ಯಾರ್ಥಿಗಳು ಇಂದಿಗೂ ಸಂಸ್ಥೆಯ ಶಿಸ್ತಿನ ವಿದ್ಯಾರ್ಥಿ ಗಳಾಗಿದ್ದಾರೆ. ತಮ್ಮ ಬದುಕಿನದಲ್ಲಿ ಆ ಶಿಸ್ತು, ತಾಳ್ಮೆ, ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ.

ಸಿದ್ಧಗಂಗಾ ಶಾಲೆಯು ಗುರುಕುಲ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಗುರು-ಶಿಷ್ಯರ ನಡುವೆ ಮಧುರವಾದ, ಆತ್ಮೀಯ ವಾದ ಸಂಸ್ಕಾರದ ಸಂಬಂಧವಿದೆ. ಓದು ಮುಗಿದ ನಂತರವೂ ನಂಟು ಬೆಳೆಸಿಕೊಂಡು, ಶಾಲೆಯ ಎಲ್ಲಾ ಕಾರ್ಯ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳುವ ಸಂಪ್ರದಾಯ ಇಲ್ಲಿದೆ. ಗುರು ಭಕ್ತಿ, ಶಿಷ್ಯ ಪ್ರೇಮ, ಸಮುದಾಯ ಸ್ಪಂದನೆ ಇಲ್ಲಿಯ ಮೂಲ ದ್ರವ್ಯ. ಅದು ಸಂಸ್ಥೆಯ ಏಳೆಗೆ, ಶೈಕ್ಷಣಿಕ ಉನ್ನತಿಗೆ ನೆರವಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ಕಲಿಯುವ, ಕಲಿಸುವ ಶಿಕ್ಷಕರ ಸೇವಾ ಮನೋಭಾವ, ಸಂಸ್ಕೃತಿ ಯನ್ನು ಅಳವಡಿಸಲಾಗಿದೆ. ಲಾಭ ಅಥವಾ ಪ್ರತಿಷ್ಠೆಗಿಂತ ಮಕ್ಕಳ ಭವಿಷ್ಯಕ್ಕಾಗಿ ದಿನವಿಡೀ ಕೆಲಸ ಮಾಡುವ ಪದ್ಧತಿಯನ್ನು ಇಲ್ಲಿ ರೂಢಿಸಲಾಗಿದೆ. ಸಿದ್ಧಗಂಗಾ ಮಠದಲ್ಲಿ ಶಿವಣ್ಣ ಅವರು ಕಂಡುಂಡ ಅನುಭವದ ಸಾರವನ್ನು ಇಲ್ಲಿ ಧಾರೆ ಎರೆದಿದ್ದಾರೆ. ಸಿದ್ಧಗಂಗಾ ಶ್ರೀಗಳ ಆಶೀರ್ವಾದ, ಸಲಹೆಗಳಂತೆ ಇಲ್ಲಿ ಶೈಕ್ಷಣಿಕ ಕಾರ್ಯಗಳು ಜರುಗುತ್ತಿವೆ.

ಶಿವಣ್ಣ ಅವರ ಸೇವೆಯನ್ನು ಗುರುತಿಸಿ, ಹಲವಾರು ಸಂಘ- ಸಂಸ್ಥೆಗಳು, ಸಮಾಜದ ಪ್ರತಿಷ್ಠಿತ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿವೆ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರ, ಸಿದ್ಧಗಂಗಾ ಮಠವೂ ಸನ್ಮಾನಿಸಿದೆ. ಹಲವಾರು ಧಾರ್ಮಿಕ ಕೇಂದ್ರಗಳೂ ಇವರನ್ನು ಸನ್ಮಾನಿಸಿವೆ. ಇವುಗಳಿಗಿಂತ ಹೆಚ್ಚಾಗಿ ಶಿವಣ್ಣ ಅವರ ಶಿಷ್ಯ ಬಳಗ ಎಲ್ಲೆಡೆಯೂ ಹರಡಿದೆ. ಮಧ್ಯ ಕರ್ನಾಟಕದ ಭಾಗದ ಹಳ್ಳಿಹಳ್ಳಿಗಳಲ್ಲೂ ಶಿಷ್ಯ ಪಡೆಯನ್ನು ಶಿವಣ್ಣ ಅವರು ಹೊಂದಿದ್ದಾರೆ. ಗುರುಭಕ್ತಿ ಸಮರ್ಪಣೆಗಾಗಿ ಶಿಷ್ಯರೇ ಶಿವಣ್ಣ ಅವರ ದೇವಸ್ಥಾನವನ್ನು ನಿರ್ಮಿಸಿದ್ದಾರೆ. `ಒಬ್ಬ ಶಿಕ್ಷಕನಿಗೆ ತನ್ನ ಶಿಷ್ಯರ ಸಾಧನೆಯ ಮುಂದೆ ಯಾವುದೇ ಆಸ್ತಿ ಐಶ್ವರ್ಯವೂ ತೃಣ ಸಮಾನ’ ಎಂಬ ಮಾತು ಶಿವಣ್ಣ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ಇವರಿಗೆ ದಾವಣಗೆರೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಅವರ ಶಿಷ್ಯಕೋಟಿಯನ್ನು ಕೃತಾರ್ಥಗೊಳಿಸಿದೆ. 

– ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ, ದಾವಣಗೆರೆ.

error: Content is protected !!