ನಾಗರಿಕ ಸಮಾಜ ನಿರ್ಮಾಣದತ್ತ ಮೌಲ್ಯ ಶಿಕ್ಷಣ

ನಾಗರಿಕ ಸಮಾಜ ನಿರ್ಮಾಣದತ್ತ ಮೌಲ್ಯ ಶಿಕ್ಷಣ

ಇದು 4ಜಿ, 5ಜಿ ಯುಗ, ವಿಶ್ವ ಬದಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ ನಿರೀಕ್ಷೆ ಮೀರಿ ಬೆಳೆಯುತ್ತಾ ಇವೆ. ಪ್ರಾಚೀನ ಯುಗದಲ್ಲಿ Virtue is Power ಸದ್ಗುಣವೇ ಶಕ್ತಿಯಾಗಿತ್ತು. ಇಂದು Knowledge is Power ಜ್ಞಾನವೇ ಶಕ್ತಿ. ಜಾಗತೀಕರಣ, ಉದಾರೀಕರಣ ಮತ್ತು ಕಾರ್ಪೊರೇಟ್‌ ವ್ಯವಸ್ಥೆಗೆ ಸರಿಹೊಂದುವ ಶಿಕ್ಷಣ ನೀಡಲು ಶಿಕ್ಷಣ ಪದ್ಧತಿಯಲ್ಲಿ ಮತ್ತು ಪಠ್ಯವಸ್ತುವಿನಲ್ಲಿನ ರೋಚಕ ಬದಲಾವಣೆಗಳಾಗಿವೆ. ಇಂದು ಶಿಕ್ಷಣ ನಾಲ್ಕು ಗೋಡೆಗೆ ಸೀಮಿತವಾಗಿಲ್ಲ. ಇದರ ವ್ಯಾಪ್ತಿ ವಿಸ್ತಾರವಾಗಿದೆ. ವಿಜ್ಞಾನ-ತಂತ್ರಜ್ಞಾನದ ಅಬ್ಬರ, ಮೊಬೈಲ್‌, ಕಂಪ್ಯೂಟರ್‌, ಮಾಹಿತಿ ತಂತ್ರಜ್ಞಾನದ ಬಳಕೆಯಾಗಿ ವಿದ್ಯಾರ್ಥಿಗಳು ಊಹಿಸಲಾರದಷ್ಟು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಸೃಷ್ಠಿಸಿದ್ದಾರೆ. ಯುವಶಕ್ತಿ ನಮ್ಮ ದೇಶದ ಶಕ್ತಿ, ನವಭಾರತದ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ ಸ್ಮರಣೀಯ. ಯುವ ಶಕ್ತಿಗೆ ಇನ್ನಷ್ಟು ಸಾಮಾಜಿಕ ಮೌಲ್ಯಗಳನ್ನು, ತತ್ವಾದರ್ಶ ಗಳನ್ನು ಸೇರಿಸಿದರೆ ಭಾರತದ ಭವಿಷ್ಯವನ್ನು ಅದ್ಭುತವಾಗಿ ಬದಲಾಯಿಸಬಲ್ಲದು.

ಮಗುವಿನ ಶಿಕ್ಷಣ ಕಲಿಕೆಯಲ್ಲಿ “ಅವಶ್ಯಕತೆಯ ನಿಯಮ ವ್ಯಾಪಕವಾಗಿದೆ. ಚಳಿಗಾಲದಲ್ಲಿ ಯಾವ ಸೂರ್ಯನ ನಿರೀಕ್ಷೆ ಇರುತ್ತೋ ಅದೇ ಸೂರ್ಯನಿಗೆ ಬೇಸಿಗೆ ಕಾಲದಲ್ಲಿ ತಿರಸ್ಕಾರ ವಿರುತ್ತೆ”. ಮೊಬೈಲ್‌ನಿಂದ ದೂರವಿಡಬೇಕೆಂದು ಹೇಳುತ್ತಿದ್ದ ಶಾಲೆಗಳೇ ಮೊಬೈಲ್‌ ಮೂಲಕ ಆನ್‌ಲೈನ್‌ ಶಿಕ್ಷಣವನ್ನು ನೀಡುತ್ತಿವೆ. ಇದು `ಕುರುಡನ ಮೇಲೆ ಕುಳಿತುಕೊಂಡು ಪಯಣಿಸಿದಂತಿದೆ’ ನಮ್ಮ ಅಂತರ್ಜಾಲ ಶಿಕ್ಷಣ. ಮಕ್ಕಳು ಕಲಿಕಾ ಸಾಧನವಾಗಿ ಮೊಬೈಲ್‌, ಇ-ಮೇಲ್‌, ಕಂಪ್ಯೂಟರ್‌ ಬಳಸುವುದರಿಂದ ಅನೇಕ ಸಾಮಾಜಿಕ ಜಾಲತಾಣಗಳು, ನೂರಾರು App ಗಳು ಯುವ ಪೀಳಿಗೆಯನ್ನು ಮರಳು ಮಾಡಿ, ಘಾತಕ ಪ್ರಪಂಚಕ್ಕೆ ತಳ್ಳುತ್ತಿವೆ. ಮೊಬೈಲ್‌ ಗೇಮ್‌, ಮಿಷಿನ್‌ ಗನ್‌, ಶೂಟಿಂಗ್‌ನಂತಹ ಆಟಗಳು ಮಕ್ಕಳಲ್ಲಿ ಕ್ರೌರ್ಯ ತುಂಬಿ, ಸಮಾಜ ದ್ರೋಹಿಗಳಾಗಿ ಕ್ರಿಮಿನಲ್‌ಗಳಾಗಿ, ನಕ್ಸಲೈಟ್‌ಗಳಾಗುತ್ತಾರೆ. ಪ್ರಸ್ತುತ ಕಳ್ಳರು, ಕೊಲೆಗಾರರು, ಅತ್ಯಾಚಾರಿಗಳು, ಕೋಮು ವಾದಿಗಳು, ಡ್ರಗ್‌ ವ್ಯಸನಿಗಳು ಬಹುತೇಕ ಯುವ ಪದವೀಧರರು. ಅವರೆಲ್ಲರೂ ಸುಶಿಕ್ಷಿ ತರೇ ವಿನಃ ಸುಸಂಸ್ಕೃತರಲ್ಲ. ಅವರೆಲ್ಲರೂ ಭಯವಿಲ್ಲದ ಭಯೋತ್ಪಾದಕರಾಗಿದ್ದಾರೆ. ಇನ್ನೊಂದೆಡೆ ಅವಿಭಕ್ತ ಕುಟುಂಬಗಳ ಕಣ್ಮರೆ, ಮಾರುಕಟ್ಟೆಯ ಸಂಸ್ಕೃತಿ, ಸಾಮಾಜಿಕ ಮೌಲ್ಯಗಳು ಮತ್ತು ನಾಗರಿಕ ಸೂಕ್ಷ್ಮತೆಗಳ ಅವನತಿ, ಕೌಟುಂಬಿಕ ಕ್ರೌರ್ಯ ಹೆಚ್ಚಳ ದಿಂದಾಗಿ ಸಮಾಜವು ಅಸಹನೆ, ಅಸಂತೃ ಪ್ತಿಯ ಹಾದಿಯುಲ್ಲಿ ಸಾಗುತ್ತಿರುವುದಕ್ಕೆ ನೈತಿಕ ಮೌಲ್ಯಗಳ ಕೊರತೆಯೇ ಕಾರಣ.

ಆಧುನಿಕ ಜಗತ್ತು ಭೌತಿಕ ಅಭಿವೃದ್ಧಿಗೆ ಆದ್ಯತೆ ನೀಡಿ, ಆತ್ಮಸಾಕ್ಷಿಯನ್ನು ಧಿಕ್ಕರಿಸಿ ಪ್ರಜ್ಞಾ ರಹಿತ ಬುದ್ಧಿವಂತಿಕೆಯತ್ತ ಸಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನ ನಿರೀಕ್ಷೆ ಮೀರಿ ಬೆಳೆಯುತ್ತಾ ಇದೆ. ಇವುಗಳ ಜೊತೆ ಜೊತೆಯಾಗಿ ನೈತಿಕತೆ ಬೆಳೆಯಬೇಕು. ಈಗಾಗಲೇ ಭಾರತೀಯ ತಾಂತ್ರಿಕ ಶಿಕ್ಷಣ ಸಮಿತಿ ಎಐಟಿಯುಇ ಇಂಜಿನಿಯರಿಂಗ್‌ ಪದವಿ ಹಂತದ ಶಿಕ್ಷಣದಲ್ಲಿ “ಜಾಗತಿಕ ಮಾನವೀಯ ಮೌಲ್ಯಗಳು” (Universal Human Values) ಎಂಬ ವಿಷಯವನ್ನು ವಿದ್ಯಾರ್ಥಿಗಳಿಗೆ ಸತ್ಯ, ಪ್ರೀತಿ, ಸಹಾನುಭೂತಿಯ ತಳಹದಿಯ ಮೇಲೆ ಬೋಧಿಸುವುದನ್ನು ಕಡ್ಡಾಯಗೊಳಿಸಿದೆ. 

ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ದಿನಾಂಕ 09.01.2023 ರಂದು ವರ್ತಮಾನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಕಾರ್ಯಸೂಚಿಯ ಜಾರಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಶಿಕ್ಷಣ ತಜ್ಞರು, ವಿವಿಧ ಮಠಾಧೀಶರು ನೀಡಿದ ಸಲಹೆ, ಮಕ್ಕಳ ಜೊತೆಗೆ ಶಿಕ್ಷಕರಿಗೂ ನೈತಿಕ ಶಿಕ್ಷಣ ಬೇಕು ಎಂಬುದು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದಲೇ ನೈತಿಕ ಮೌಲ್ಯಗಳ ಶಿಕ್ಷಣ ನೀಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರತಿಪಾದಿಸಿದ್ದಾರೆ. ಇದೊಂದು ಪ್ರಶಂಸನೀಯ. ಸಿ.ಸಿ. ಕ್ಯಾಮರಾಗಳು ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳ ಪ್ರಾಮಾಣಿಕತೆಯನ್ನು, ಕಛೇರಿಗಳ Bio Matric ಯಂತ್ರವು ಶಿಕ್ಷಕ ಮತ್ತು ಸಿಬ್ಬಂದಿಯ ಸಮಯ ಪಾಲನೆಯನ್ನು ನಿರ್ಧರಿಸುವುದಾದರೆ ನಮ್ಮ ವ್ಯಕ್ತಿತ್ವದ ಅಪರಿಪೂರ್ಣತೆ ಮತ್ತು ನೈತಿಕ ಪ್ರಜ್ಞೆ ನಮಗೆ ಅರ್ಥವಾಗಬೇಕು. ಉಷ್ಞತೆಯನ್ನು ಥರ್ಮಾಮೀಟರ್‌ನಿಂದ, ವಾಯು ಭಾರವನ್ನು ಟ್ಯಾರೋ ಮೀಟರ್‌ನಿಂದ, ಹಾಲಿನ ಕೊಬ್ಬಿನಾಂಶವನ್ನು ಲ್ಯಾಕ್ಟೋ ಮೀಟರ್‌ನಿಂದ ಹಾಗೆ ಮನುಷ್ಯನನ್ನು ಅವನ ನೈತಿಕ ಮಟ್ಟದಿಂದ ಅಳೆಯಲಾಗುತ್ತಿದೆ. ಪ್ರತಿಯೊಂದು ವಸ್ತುವಿಗೆ ಮೌಲ್ಯವನ್ನು ಕಟ್ಟುವ ನಾವು ನಮ್ಮ ನೈತಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ.

ಶಿಕ್ಷಣದ ಆಶಯ ಜೀವನ ಪ್ರಜ್ಞೆಯನ್ನು ಅರಳಿಸುವುದು, ಶೀಲವಂತಿಕೆಯ ಗುರಿ. ಶಿಕ್ಷಣವೆಂದರೆ ಕೇವಲ ಮಗುವಿನ ತಲೆಗೆ ತುಂಬುವ ಮಾಹಿತಿಗಳು ಮಾತ್ರವಲ್ಲ. ಅದು ಜೀವನ ನಿರ್ಮಾಣ, ಮನುಷ್ಯ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣ ಮತ್ತು ಚಾರಿತ್ರ್ಯ ನಿರ್ಮಾಣ ಮಾಡುವಂತದ್ದು. ಬಾಲ್ಯದಲ್ಲಿ ಮೌಲ್ಯಯುತ ಶಿಕ್ಷಣ ದೊರೆತಾಗ ಸುಸಂಸ್ಕೃತ ಯುವ ಜನಾಂಗ ಉತ್ತಮ ಸಮಾಜ, ಬಲಿಷ್ಟ ರಾಷ್ಟ್ರ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಭವಿಷ್ಯತ್ತಿನ ನೇತಾರರಾದ ವಿದ್ಯಾರ್ಥಿಗಳಿಗೆ ಜ್ಞಾನ ಸಂಪತ್ತಿನ ಜೊತೆಗೆ ನೈತಿಕ, ಧಾರ್ಮಿಕ ಶಿಕ್ಷಣವನ್ನು ನೀಡಿ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ತುಂಬಾ ಇದೆ. ಇಲ್ಲದೇ ಹೋದರೆ ವಿದ್ಯಾರ್ಥಿಗಳನ್ನು ಕೇವಲ ನಡೆದಾಡುವ ಗ್ರಂಥಾಲಯಗಳನ್ನಾಗಿ ಸೃಷ್ಟಿಸಿದಂತಾಗುತ್ತದೆ. ಇದರಿಂದ ಏನು ಪ್ರಯೋಜನ. ನೈತಿಕತೆಯಿಲ್ಲದ ಮಗು ಮಾನವ ಜಗತ್ತಿನಲ್ಲಿ ಅಡ್ಡಾಡುತ್ತಿರುವ ಒಂದು ಕಾಡು ಮೃಗನಾಗುತ್ತಾನೆ. ಇಂದು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ ವಿಶ್ವ ಬೆರಗಾಗುವಂತೆ ಸಾಧನೆಗೈಯ್ಯುವಲ್ಲಿ ಶಿಕ್ಷಕನ ಗುರುತರವಾದ ಜವಾಬ್ದಾರಿ ಇದೆ. ಸಹೋದರಿ ನಿವೇದಿತಾ ನುಡಿಯತ್ತಾಳೆ. ನನಗೆ ಪಾಠ ಕಲಿಸಿದ ಕೆಲವು ಶಿಕ್ಷಕರ ನಡೆ-ನುಡಿಗಳೇ ನನ್ನ ವ್ಯಕ್ತಿತ್ವದ ಪಾಲಿಗೆ ಪಾಠಗಳೆಂದು ಮಹಾತ್ಮ ಗಾಂಧೀಜಿಯವರು `ವಿದ್ಯಾರ್ಥಿ ಪೂರ್ಣ ಪಠ್ಯಪುಸ್ತಕವೇ ಶಿಕ್ಷಕನೆಂದು’ ಪ್ರತಿಪಾದಿಸುತ್ತಾರೆ. ಅಲೆಗ್ಸಾಂಡರ್‌ `ನನ್ನ ತಂದೆ, ನನಗೆ ಜನ್ಮ ನೀಡಿದ ಆದರೆ ಗುರು ನನಗೆ ಸರ್ವಶ್ರೇಷ್ಠ ಬದುಕನ್ನು ನೀಡಿದ’ ಎಂದಿದ್ದಾನೆ. ರಾಷ್ಟ್ರಕವಿ ಜಿ.ಎಸ್‌.ಎಸ್‌. ತನ್ನ ಗುರುಗಳಾದ ಕುವೆಂಪುರವರನ್ನು ಕುರಿತು `ನಿಶ್ಯಬ್ದದಲ್ಲಿ ನಿಂತು ನಿಮ್ಮನ್ನು ನೆನೆಯುತ್ತೇನೆ, ಇನ್ನೊಬ್ಬರ ಎದುರು ತಲೆ ಎತ್ತಿ ನಿಲ್ಲುವುದನ್ನು ಕಲಿಸಿದಿರಿ. ನನಗೆ ಎಂದು ಅಭಿಮಾನದಿಂದ ನುಡಿದಿದ್ದಾರೆ. ಆದ್ದರಿಂದ ಮೊದಲು ಶಿಕ್ಷಕ ಚಾರಿತ್ರ್ಯವಂತನಾಗಿರಬೇಕು ಮತ್ತು ಶಿಕ್ಷಕರಿಗೆ ನಿನ್ನೆಯ ಅನುಭವ, ಇಂದಿನ ಪ್ರಜ್ಞೆ, ನಾಳಿನ ಪರಿಕಲ್ಪನೆಯಿದ್ದಾಗ ಮಾತ್ರ ವಿದ್ಯಾರ್ಥಿಗಳಿಗೆ ದಾರಿದೀಪವಾಗಲು ಸಾಧ್ಯ.

ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮೂಲ ತಳಹದಿ, ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಆಯೋಗ (ಕೊಠಾರಿ ಆಯೋಗ 1964) ಸಮಾನತೆ, ನೈತಿಕ ಪ್ರಜ್ಞೆ, ಸಾಮಾಜಿಕ ಸಾಮರಸ್ಯ, ಒಗ್ಗಟ್ಟು, ರಾಷ್ಟ್ರೀಯ ಐಕ್ಯತೆ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮಹತ್ವ ನೀಡಿತು. ನಂತರ 1986 ರ ಎರಡನೆಯ ರಾಷ್ಟ್ರೀಯ ಶಿಕ್ಷಣ ನೀತಿ’ ರಾಷ್ಟ್ರೀಯ ಶಿಕ್ಷಣ ಪರಿಕಲ್ಪನೆಯ ಅರ್ಥದಲ್ಲಿ ಎಲ್ಲಾ ವಿದ್ಯಾರ್ಥಿ ಗಳು ಜಾತಿ, ಮತ, ಲಿಂಗ ಭೇದಗಳಿಲ್ಲದೆ ಸಮಾನ ರೂಪದ ಶಿಕ್ಷಣವನ್ನು ಒಂದು ಹಂತ ದವರೆಗೆ ನೀಡಲು ಶಿಫಾರಸ್ಸು ಮಾಡಿತ್ತು. 2020 ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಪೊರೇಟ್‌ ಜಗತ್ತಿಗೆ ಅಗತ್ಯವಾದ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ ಮಾರುಕಟ್ಟೆ ಸಂಸ್ಕೃತಿಗೆ ಪೂರಕವಾಗಿದೆ.

ಪ್ರಸ್ತುತ ಮನುಕುಲ ಆಧುನಿಕ ಜೀವನ ಶೈಲಿಗೆ ಒಳಗಾಗಿ ಅತಿಯಾದ ತಂತ್ರಜ್ಞಾನದ ಬಳಕೆಯಿಂದ ಭಾವನಾತ್ಮಕ ಸಂಬಂಧವನ್ನು ಕಳೆದುಕೊಂಡು ಮೂರ್ಖನಾಗುತ್ತಿದ್ದಾನೆ. ಇದರಿಂದಾಗಿ ಮೌಲ್ಯವರ್ಧನೆಗಿಂತ ಮೌಲ್ಯಗಳು ಮುಕ್ಕಾಗುವ ಸಾಧ್ಯತೆಗಳೇ ಹೆಚ್ಚು. ಇಂದು ಮೌಲ್ಯಗಳು ಆಚರಣೆಗೆ ಬಾರದ ವಿಷಯಗಳಾಗಿವೆ. ಭಾರತೀಯರ ನೈತಿಕತೆಯ ಕಂಪು ವಿದೇಶದಲ್ಲಿ ಹರಡಿತ್ತು. ಚೀನಾ ದೇಶದ ಪ್ರವಾಸಿ ಹ್ಯುಯನ್‌ತ್ಸಾಂಗ್‌ ಮತ್ತು ಗ್ರೀಕರ ರಾಯಭಾರಿ ಮೆಗಸ್ತಾನೀಸ್‌ ಇಲ್ಲಿಗೆ ಬಂದಾಗ ಇಲ್ಲಿನ ಸಂಪತ್ತನ್ನು ಮತ್ತು ಮನೆಗಳಿಗೆ ಬೀಗ ಇಲ್ಲದಿರುವುದನ್ನು ನೋಡಿ ಅಚ್ಚರಿಪಟ್ಟಿದ್ದರು. ಆದರೆ ಇಂದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ನೈೃತಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮನುಕುಲದ ಒಳಿತಿಗಾಗಿ `ಹೊಸ ನೈತಿಕ ಜಗತ್ತಿನ ಹೊಸ ಆದರ್ಶ ಸಾಮಾಜಿಕ ವ್ಯವಸ್ಥೆಯ’ ನಿರ್ಮಾಣಕ್ಕಾಗಿ ನೈತಿಕ ಮೌಲ್ಯಗಳನ್ನು ಪಠ್ಯವಸ್ತುವಿನಲ್ಲಿ ಅಳವಡಿಸುವುದು ಪ್ರಸ್ತುತ ಮತ್ತು ಸಕಾಲಿಕ.


ನಾಗರಿಕ ಸಮಾಜ ನಿರ್ಮಾಣದತ್ತ ಮೌಲ್ಯ ಶಿಕ್ಷಣ - Janathavani– ಡಾ. ಹೆಚ್‌.ಎಸ್. ಮಂಜುನಾಥ ಕುರ್ಕಿ

error: Content is protected !!