ಕೊಟ್ಟೂರಿನಲ್ಲಿಂದು ಶ್ರೀಗುರು ಬಸವೇಶ್ವರ ಸ್ವಾಮಿ ರಥೋತ್ಸವದ ವೈಭವ

ಕೊಟ್ಟೂರಿನಲ್ಲಿಂದು ಶ್ರೀಗುರು ಬಸವೇಶ್ವರ ಸ್ವಾಮಿ ರಥೋತ್ಸವದ ವೈಭವ

ಕಾಯಕ ಧರ್ಮ ಪಾಲಿಸಿ, ಶುದ್ಧ ಭಕ್ತಿಯಿಂದ ನಂಬಿ ಬರುವ ಭಕ್ತರನ್ನು ಕೈಹಿಡಿದು ಕಾಪಾಡುವ ಮಹಾಮಹಿಮ ಎಂದೇ ಹೆಸರಾದ ಕೊಟ್ಟೂರು  ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವವು  ನಾಳೆ (ಫೆ.16)  ಗುರುವಾರ ಸಂಜೆ ಮೂಲಾ ನಕ್ಷತ್ರದಲ್ಲಿ  ವೈಭವದಿಂದ ಜರುಗಲಿದೆ.  

ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳು ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ನೆಲೆಸಿರುವ ಸ್ವಾಮಿಯ ಭಕ್ತರೂ ಆಗಮಿಸುತ್ತಾರೆ. 

ಕೊಟ್ಟೂರೇಶ,  ಬಸವರಾಜ, ನಂದಿಲಿಂಗ, ವೃಷಭರಾಜೇಂದ್ರ, ಗುರು ಬಸವೇಶ್ವರ, ಹುಚ್ಚೇಶ್ವರ, ಬಸವರಾಜೇಂದ್ರ ಮತ್ತಿತರೆ ಹೆಸರುಗಳಿಂದಲೂ              ಕರೆಯಲ್ಪಡುವ ಸ್ವಾಮಿ, ಕೊಟ್ಟೂರಿನ ಹಿರೇಮಠ, ತೊಟ್ಟಿಲು ಮಠ, ಗಚ್ಚಿನ ಮಠ, ಮೂರುಕಲ್ಲು  ಮಠ ಸೇರಿದಂತೆ, ಮರಿ ಕೊಟ್ಟೂರೇಶನ ದೇವಸ್ಥಾನದಲ್ಲಿಯೂ  ಪೂಜಿಸಲ್ಪಡುತ್ತಾನೆ.  ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿ  ಇದ್ದು,  ಅಕ್ಬರ್ ಚಕ್ರವರ್ತಿ  ನೀಡಿರುವರೆನ್ನಲಾದ ಒಂದು ಮಣಿ ಮಂಚ ಮತ್ತು ರತ್ನ ಖಚಿತ ಖಡ್ಗ ಕೂಡ ಇದೆ. ಈ ಮಠವನ್ನು ಸೋಮಶೇಖರ ಪಾಳೇಗಾರ ಎಂಬಾತ ಕಟ್ಟಿಸಿದ್ದಾನೆ ಎಂದು ಹೇಳಲಾಗುತ್ತದೆ.   

ಭೂ ಲೋಕದಲ್ಲಿ ಅನಾಚಾರ ಹೆಚ್ಚಾಗಿ,  ದೈವ ಭಕ್ತಿ ಕಡಿಮೆ ಆಗಿರುವ ಸುದ್ದಿ  ನಾರದಮುನಿಗಳಿಂದ ತಿಳಿದುಕೊಂಡ ಶ್ರೀ ಪರಮೇಶ್ವರನು, ಧರ್ಮ ರಕ್ಷಣೆಗಾಗಿ  ಪಂಚ ಗಣಾಧೀಶರ ಜೊತೆಗೆ ತಾನೂ ಸಹ ಭೂಲೋಕಕ್ಕೆ ಬರುತ್ತಾನೆ. ನಂದೀಶನಿಲ್ಲದೇ ಶಿವನಿಲ್ಲ, ಶಿವನಿಲ್ಲದೆ ನಂದೀಶನಿಲ್ಲ ಎನ್ನುವ ಹಾಗೆ ನಂದೀಶನಿಗೂ ಮೊದಲು ಶಿವನೇ ಬರುತ್ತಾನಂತೆ.

 

ಗಣಾಧೀಶರಲ್ಲಿ ಅಗ್ರಗಣ್ಯರಾದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಜೊತೆಗೆ ಹರಪನಹಳ್ಳಿಯ ಶ್ರೀ ಗುರು ಕೆಂಪೇಶ್ವರ ಸ್ವಾಮಿ, ಅರಸಿಕೆರೆ  ಶ್ರೀ ಗುರು  ಕೋಲ ಶಾಂತೇಶ್ವರ ಸ್ವಾಮಿ, ನಾಯಕನಹಟ್ಟಿ  ಶ್ರೀ ಗುರು ತಿಪ್ಪೇರುದ್ರ ಸ್ವಾಮಿ, ಕೋಲಹಳ್ಳಿ  ಶ್ರೀ ಗುರು ಮದ್ದಾನ ಸ್ವಾಮಿ ಸಹ ಭೂಲೋಕಕ್ಕೆ  ಕಳುಹಿಸಲ್ಪಡುತ್ತಾರೆ ಎಂಬುದನ್ನು ಪುರಾಣಗಳು ತಿಳಿಸುತ್ತವೆ.

ಸತ್ಪುರಷ ಶಿವಯೋಗಿ ಬಸವರಾಜರು ಶಿಖಾಪುರಕ್ಕೆ ಬಂದಾಗ ಅವರ ವರ್ತನೆ ವಿಚಿತ್ರವಾಗಿತ್ತು.  ಕೆಲವು ಪೋಕರಿಗಳು ಹುಚ್ಚನೆಂದು ತಮಾಷೆ ಮಾಡುತ್ತಾರೆ, ಕಲ್ಲು ಎಸೆಯುತ್ತಾರೆ. ಆ ಕಲ್ಲುಗಳನ್ನೇ `ಲಿಂಗ’ವನ್ನಾಗಿಸಿ, ಸದಾ ಪರಶಿವನ ಧ್ಯಾನದಲ್ಲಿ ಇರುತ್ತಿದ್ದ ಅವರು ಸಜ್ಜನರ ರಕ್ಷಣೆ, ದುರ್ಜನರಿಗೆ ಶಿಕ್ಷೆ  ಎನ್ನುವ ರೀತಿಯಲ್ಲಿ ಇರುತ್ತಾರೆ.  ಗುರು ಬಸವರಾಜರ ಈ ಲೀಲೆ ಕಂಡು, ಈತ ಸಾಮಾನ್ಯನಲ್ಲ  ನಮ್ಮ ರಕ್ಷಣೆಗಾಗಿ ಬಂದಿರುವ  ಪುಣ್ಯಮೂರ್ತಿ, ಸದಾಶಿವನ  ಅವತಾರಿ ಎಂದು ಜನರು ಭಕ್ತಿಯಿಂದ ನಮಸ್ಕರಿಸಿ, ಪೂಜಿಸತೊಡಗುತ್ತಾರೆ.

ಕೊಟ್ಟೂರಿಗೆ ಮೊದಲು ಶಿಖಾಪುರ ಎಂಬ ಹೆಸರಿತ್ತು,  ಶ್ರೀ ಗುರು ಕೊಟ್ಟೂರೇಶ್ವರರು ಇಲ್ಲಿಗೆ ಆಗಮಿಸಿ  ಪವಾಡದ ರೀತಿಯಲ್ಲಿ ಸಹಾಯ ಮಾಡುತ್ತಿದ್ದುದರಿಂದಾಗಿ, ಶಿಖಾಪುರಕ್ಕೆ  `ಕೊಡುವ’ ಊರು `ಕೊಟ್ಟೂರು’ ಎಂಬ ಹೆಸರು ಬಂದಿತಂತೆ.

ಪರಶಿವನ ಶಕ್ತಿ ಸ್ವರೂಪನಾದ ಶ್ರೀ ಬಸವರಾಜ, ನಂಬಿಯಕ್ಕನ ಆಶ್ರಯಕ್ಕೆ ಬಂದು, ಕಾಯಕ ಧರ್ಮ ಪಾಲಿಸುತ್ತಾನೆ. ದನಕಾಯಲು ಹೋಗಿ ಭೋರ್ಗರೆದ ನೀರಿನಲ್ಲಿ  ಏಳು ದಿನ ಕಳೆದು ಜೀವಂತ ಬಂದದ್ದು, ಮೂರುಕಲ್ಲು ಮಠದಲ್ಲಿ ಬೆಂಕಿ ಪವಾಡ ಮೆರೆದದ್ದು ಭಕ್ತರನ್ನು ಆಶ್ಚರ್ಯಚಕಿತರಾಗುವಂತೆ ಮಾಡುತ್ತದೆ. ಕೊಟ್ಟೂರ ಮೇಲೆ ದಾಳಿ ನಡೆಸುವ  ವೈರಿ  ಪಡೆಗಳ ವಿರುದ್ಧ ಧರ್ಮ ಯುದ್ಧಮಾಡಿ ಜಯಿಸುತ್ತಾರೆ.

ಧರ್ಮದ ಮುಖ್ಯ ತತ್ವಗಳನ್ನು  ಜನರು ತಮ್ಮ ಜೀವನದಲ್ಲಿ ಅಳವಡಿ ಸಿಕೊಂಡು ನಡೆಯುವಂತೆ ಬೋಧಿಸುವ ಮೊದಲು, ಅವುಗಳನ್ನು ಸ್ವತಃ ತಾವೇ ಆಚರಿಸಿ ತೋರಿಸಲು ಅನೇಕ ಲೀಲಾ ವಿನೋದಗಳನ್ನು ಮಾಡುತ್ತಾರೆ. ಹಾಗಾಗಿ ಹುಚ್ಚನ ಹಾಗೆ, ಶಿವಭಕ್ತನ ರೂಪದಲ್ಲಿ, ಹಠವಾದಿಯಂತೆ ನಡೆದುಕೊಳ್ಳುತ್ತಾರೆ.


ಉತ್ತಂಗಿ ಕೊಟ್ರೇಶ್, [email protected]

error: Content is protected !!