ಹೃದಯಕ್ಕಾಗಿ ಹೃದಯವಂತಿಕೆಯಿಂದ ನಮ್ಮ ಹೃದಯವನ್ನು ಗೆಲ್ಲೋಣ

ಹೃದ್ರೋಗವು ವಿಶ್ವದಲ್ಲಿ ಸಂಭವಿಸುವ ಸಾವಿನ ಪ್ರಮುಖ ಕಾರಣವಾಗಿದೆ. ಧೂಮಪಾನ, ಮಧುಮೇಹ, ಹೈಪರ್ ಟೆನ್ಷನ್, ಬೊಜ್ಜು ಮತ್ತು ವಾಯು ಮಾಲಿನ್ಯ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಕೋವಿಡ್-19 ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಸಿವಿಡಿ (Cardiovascular Diseases) ರೋಗಿಗಳು ಎರಡು ಅಲುಗಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ತಮ್ಮ ಹೃದಯದ ಆರೈಕೆಗೆ ತೆರಳಲು ಭಯಪಡುತ್ತಾರೆ.

ಆರೋಗ್ಯಕರ ಹೃದಯವನ್ನು ಹೊಂದಲು ಮತ್ತು ಆ ಜ್ಞಾನಕ್ಕೆ ಅನುಗುಣವಾಗಿ ನಡೆದುಕೊಳ್ಳಲು ನಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ. ಈ ಮೂಲಕ ಉತ್ತಮ ಗುಣಮಟ್ಟದ ಜೀವನವನ್ನು ಈಗ ಹಾಗೂ ಭವಿಷ್ಯದಲ್ಲಿ ಹೊಂದಬಹುದಾಗಿದೆ.

B ವ್ಯಕ್ತಿಗಳಾಗಿ ನಾವು ನಮ್ಮ ಪ್ರೀತಿ ಪಾತ್ರರಿಗೆ ನಾವು ನಿದರ್ಶನವನ್ನು ತೋರಿಸಿಕೊಡಬೇಕು

B ಆರೋಗ್ಯಸೇವಾ ವೃತ್ತಿಪರರಾಗಿ ನಮ್ಮ ರೋಗಿಗಳಿಗೆ ಅವರ ಹೃದಯ ಆರೋಗ್ಯಕ್ಕಾಗಿ ಧನಾತ್ಮಕ ಬದಲಾವಣೆಗಳನ್ನು ತರಲು ನೆರವಾಗಬೇಕು.

B ಒಬ್ಬ ಉದ್ಯೋಗದಾತರಾಗಿ ತಮ್ಮ ಉದ್ಯೋಗಿಗಳ ಹೃದಯ ಆರೋಗ್ಯದ ಮೇಲೆ ಹೂಡಿಕೆ ಮಾಡಬೇಕು.

B ನೀತಿ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವ ಸರ್ಕಾರವಾಗಿ, ಸಮಾಜದ ಹೃದಯ ಆರೋಗ್ಯವನ್ನು ಉತ್ತಮಪಡಿಸಲು ಸಕ್ಕರೆ ತೆರಿಗೆ, ಧೂಮಪಾನ ನಿಷೇಧ ಹಾಗೂ ಮಾಲಿನ್ಯ ಕಡಿಮೆ ಮಾಡುವತ್ತ ಗಮನ ಹರಿಸಬೇಕು.

ನಮ್ಮ ಸ್ವಾರ್ಥದಿಂದಾಚೆಗೆ ದೃಷ್ಟಿ ಹರಿಸಬೇಕು ಮತ್ತು ಸಮಾಜದಲ್ಲಿ ತೀರಾ ದುರ್ಬಲರಾದವರಿಗೆ ಬೆಂಬಲ ನೀಡುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ -19 ಕಾಲಘಟ್ಟದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿರುವವರಿಗೆ ಅಪಾಯ ಸಾಧ್ಯತೆ ಹೆಚ್ಚು.

ಉತ್ತಮ ಆಯ್ಕೆಗಳಿಗಾಗಿ ಹೃದಯ ಬಳಸಿ  : ಆರೋಗ್ಯಕರ ಆಹಾರ ಸೇವನೆ, ತಂಬಾಕು ತ್ಯಜಿಸುವುದು, ಮದ್ಯಪಾನ ಚಟಕ್ಕೆ ಅಂಟಿಕೊಳ್ಳದಿರುವುದು, ನಮ್ಮ ಮಕ್ಕಳು ಹಾಗೂ ಪ್ರೀತಿ ಪಾತ್ರರಿಗೆ ಉತ್ತಮ ನಿದರ್ಶನವಾಗಿ ಸಾಕಷ್ಟು ವ್ಯಾಯಾ ಮವನ್ನು ಮಾಡುವುದು. ಹೀಗೆ ನಾವೆಲ್ಲರೂ ನಮ್ಮ ಹೃದಯ ವನ್ನು ನೋಡಿಕೊಂಡು ಮತ್ತು ಸಿವಿಡಿ (Cardiovascular Diseases) ಯನ್ನು ತಡೆಯಲು ನೆರವಾಗಬೇಕು.

ನಿಮ್ಮ ಹೃದಯವನ್ನು ಆಲಿಸಲು ಹೃದಯ ಬಳಸಿ 

ಹೃದ್ರೋಗ, ಹೃದಯ ವೈಫಲ್ಯ, ಮಧುಮೇಹ, ಅಧಿಕ ರಕ್ತದ ಒತ್ತಡ ಮತ್ತು ಬೊಜ್ಜಿನಂಥ ಸಮಸ್ಯೆಗಳಿದ್ದಲ್ಲಿ, ನಿಮ್ಮ ನಿಯಮಿತವಾದ ಆರೋಗ್ಯ ತಪಾಸಣೆಗೆ ಹಾಜರಾಗುವುದಕ್ಕೆ ಕೋವಿಡ್ -19 ಅಡ್ಡಿಯಾಗಬಾರದು. ಅಗತ್ಯವಿದ್ದಲ್ಲಿ ತುರ್ತು ಸೇವೆಗಳನ್ನು ಎಂದೂ ತಪ್ಪಿಸಿಕೊಳ್ಳಬೇಡಿ. ಅದು ಸುರಕ್ಷಿತ ಹಾಗೂ ವೈದ್ಯರು ನಿಮಗಾಗಿ ಇರುತ್ತಾರೆ. 

ಸಮಾಜಕ್ಕಾಗಿ, ನಿಮ್ಮ ಪ್ರೀತಿ ಪಾತ್ರರಿಗಾಗಿ & ನಿಮಗಾಗಿ ನಿಮ್ಮ ಹೃದಯ ಬಳಸಿ : ವ್ಯಕ್ತಿಗಳು, ಸಮುದಾಯಗಳು ಮತ್ತು ವ್ಯಾಪಾರಸ್ಥರು ನಂಬಲಸಾಧ್ಯ ವಿಧಾನದ ಮೂಲಕ ಸಾಂಕ್ರಾಮಿಕದ ಅವಧಿಯಲ್ಲಿ ಸ್ಪಂದಿಸಬೇಕು. ವೃತ್ತಿಪರರು ಮತ್ತು ಸಮಾಜದ ದುರ್ಬಲರು ಪರಸ್ಪರ ನೆರವಾಗಬೇಕು. ವೈಯಕ್ತಿಕ ಮಟ್ಟದಿಂದ ಹಿಡಿದು ನಮ್ಮ ದೈನಂದಿನ ಆಯ್ಕೆಗಳ ಹಂತದವರೆಗೆ ಉತ್ತಮ ಆಯ್ಕೆಗಳನ್ನು ಮಾಡಬೇಕು. ನೀತಿಗಳಿಗೆ ಅನುಸಾರ ಆಯ್ಕೆಗಳನ್ನು ಸರ್ಕಾರ ಸ್ವೀಕರಿಸುತ್ತದೆ.

ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ನಿಮ್ಮ ಹೃದಯ ಬಳಸಿ ಮತ್ತು ಪಾಲ್ಗೊಳ್ಳಲು ಹೃದಯ ಬಳಸಿ : 2020ರ ವಿಶ್ವ ಹೃದಯ ದಿನಾಚರಣೆ ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಲು ನಮಗೆ ನೆರವಾಗಿ, ಇದು ಜನ ದೀರ್ಘಾಯುಷಿಗಳಾಗಲು, ಉತ್ತಮ ಆರೋಗ್ಯಕರ ಜೀವನ ಸಾಗಿಸುವಂತೆ ಧನಾತ್ಮಕ ಬದಲಾವಣೆಗಳಿಗೆ ಇದು ಪ್ರಭಾವಿ ವೇದಿಕೆ. ಇವೆಲ್ಲವೂ ಸಾಧಾರಣವಾಗಿ ನಾವು ಮಾಡಬೇಕಾದ ಸಾಧನೆಗಳು.

ಹಾಗಾದರೆ ನಾವು ರೋಗ ರಹಿತವಾಗಿ ಜೀವಿಸಲು ಸಾಧ್ಯವೇ ? ಎಂಬ ಪ್ರಶ್ನೆಗೆ 12ನೇ ಶತಮಾನದಲ್ಲೇ ನಮ್ಮ ಬಸವಾದಿ ಶರಣರು ಹೇಳಿದ್ದಾರೆ. ವೈದ್ಯ ಸಂಗಣ್ಣನವರು, ತಾಯಿ ಅಕ್ಕಮಹಾದೇವಿಯವರು ತಮ್ಮ ವಚನಗಳಲ್ಲಿ ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸುವ ಹಾಗೂ ರೋಗರಹಿತ ಜೀವನವನ್ನು ನಿರ್ವಹಿಸುವ ಮಹತ್ವವಾದ ವಿಚಾರವನ್ನು ತಿಳಿಸಿದ್ದಾರೆ. ಆದರೆ, ಅವರು ಹೇಳಿರುವ ಮಾತನ್ನು ಪಾಲಿಸುವುದು ಸುಲಭವಲ್ಲ, ಕಷ್ಟಸಾಧ್ಯ. ಪ್ರಯತ್ನ ಮತ್ತು ಶ್ರದ್ದೆ ಎಂಬ ಆಯುಧಗಳಿಂದ ಇದನ್ನು ಗೆಲ್ಲಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲರಿಗು ಸಂಪತ್ತನ್ನು ಗಳಿಸುವುದೇ ದೊಡ್ಡ ಕೆಲಸವಾಗಿದೆ. ಸಿರಿಗರ ಹೊಡೆದವನ ಹೇಗೆ ಎಚ್ಚರಿಸುವುದು. ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ಸಕಲ ಜೀವರಾಶಿಗಳಿಗೆ ಒಳ್ಳೆಯದನ್ನೇ ಬಯಸುತ್ತಾ, ಎಲ್ಲ ರನ್ನು ತನ್ನಂತೆ ಕಂಡು, ಎಲ್ಲರಲ್ಲಿ ವಿನಯದಿಂದ ವರ್ತಿಸುತ್ತಾ ಮತ್ತು ಪಾರಮಾರ್ಥದ ಹಾದಿಯಲ್ಲಿ ನಡೆಯಬೇಕು. ಆಗ ಆ ಮಹಾಶಕ್ತಿಯಾದ ಸಕಲ ಚೈತನ್ಯಾತ್ಮಕ ಸೃಷ್ಟಿಕರ್ತನಾದ ಆ ದೇವರ ಕರುಣೆಯಿಂದ ತಾನು ತನ್ನವರು ಎಲ್ಲರು ಸುಖ ಮಯವಾದ, ರೋಗವಿಲ್ಲದ (ದೈಹಿಕವಲ್ಲ ಮಾನಸಿಕ ರೋಗ ದಿಂದ ಕೂಡಾ ಹೊರಬಂದು) ಶಾಶ್ವತವಾದ ಜೀವನವನ್ನು ನಡೆಸಬಹುದು ಎಂಬ ಮಾತನ್ನು ಅಕ್ಕಮಹಾದೇವಿಯವರ ವಚನದಲ್ಲಿ ಸುಂದರವಾಗಿ ವಿವರಿಸಿದ್ದಾರೆ. 

ಕೊನೆಗೆ ಚನ್ನಮಲ್ಲಿಕಾರ್ಜುನನೊಲಿಸುವ ಈ ದೇಹವನ್ನು ಕೆಡದಂತೆ ಕಾಪಾಡಿಕೊಳ್ಳುವ ವಿಧಾನವನ್ನು ತಿಳಿಸಿದ್ದಾರೆ. ಆದರೆ ಎಲ್ಲರು ಬರಿ ದೇಹದಿಂದಲೇ ನಡೆಯುವ ಕಾರ್ಯಗಳಿಗೆ ತುತ್ತಾಗುತ್ತಾರೆ. ಮುಖ್ಯವಾಗಿ ಮಾನಸಿಕವಾಗಿ, ಭಾವನಾತ್ಮಕವಾಗಿ ಯಾರೂ ಜೀವನವನ್ನು ನಡೆಸುವುದಿಲ್ಲ. ಎಲ್ಲವು ತನ್ನದೇ, ತನಗಾಗಿಯೇ ಆಗಬೇಕು, ಹೇಗಾದರು ಸರಿಯೇ ಎಂಬ ದುರಾಸೆಯಿಂದ, ಅಹಂಕಾರದಿಂದ ವರ್ತಿಸುತ್ತಾ ಮತ್ತೆ ಈ ಭವರೋಗಕ್ಕೆ ತುತ್ತಾಗುತ್ತಾರೆ.

ಇದರಲ್ಲಿ ಮುಖ್ಯವಾಗಿ ಈಗಿನ ವಿದ್ಯಾಭ್ಯಾಸವು ಕೂಡ ನಮ್ಮನ್ನು ಚೆನ್ನಾಗಿ ಸಂಪಾದಿಸಲು ಕಲಿಸುತ್ತದೆ, ಆದರೆ ಹೇಗೆ ನಿರೋಗದಿಂದ ಬದುಕಬೇಕು ಎಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿಲ್ಲ ಹಾಗೂ ಶಾಲೆಗಳಲ್ಲಿ ಹೆಚ್ಚಾಗಿ ದೈವತ್ವದ ಕಡೆ ಗಮನಹರಿಸಿ ಎಲ್ಲರು ಎಲ್ಲ ಮಾನವರನ್ನು ದೇವರನ್ನಾಗಿಸುವ ಪರಿಯನ್ನು ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳುವ ಹಾಗೆ ಮಾಡಬೇಕು. ಅದಕ್ಕೆ ನಮ್ಮ ಉಪಾಧ್ಯಾಯರುಗಳು  ಮೊದಲು ಆ ಭಾವನೆಯಲ್ಲಿದ್ದು, ಅದರಂತೆ ಮಕ್ಕಳು ನಡೆದುಕೊಳ್ಳುವ ಹಾಗೆ ಮಾಡಬೇಕು.

ನಮ್ಮ ಶಾಲಾ – ಕಾಲೇಜುಗಳಲ್ಲಿ ಸಂಪತ್ತು ಗಳಿಸುವುದೇ ಮುಖ್ಯವಲ್ಲ, ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗೆ ಮಾನವೀಯ ಮೌಲ್ಯಗಳಿಂದ ಬದುಕುತ್ತಾನೆ ಮತ್ತು ಎಲ್ಲರನ್ನು ಹೇಗೆ ಕಾಣಬೇಕು ಅನ್ನುವುದು ಮುಖ್ಯ, ಅದನ್ನು ಮನವರಿಕೆ ಮಾಡಿಕೊಡಬೇಕು

ಆದ್ದರಿಂದ ಸ್ನೇಹಿತರೆ, ಎಲ್ಲರು ಎಲ್ಲರನ್ನು ಗೌರವಿಸಿ, ಆನಂದದಿಂದ ಬದುಕಲು ಕಲಿತರೆ, ಮನಸ್ಸು, ಭಾವನೆಗಳು ಆನಂದಮಯವಾಗಿ ನಾವು ಯಾವ ರೋಗಗಳಿಗೂ ತುತ್ತಾಗುವುದಿಲ್ಲ. ಇದರಿಂದ ನಮ್ಮ ಕುಟುಂಬ, ಸಮಾಜ ಮತ್ತು ದೇಶ ಎಲ್ಲವು ಆರೋಗ್ಯಕರವಾಗಿ ಎಲ್ಲರ ವಿಕಾಸಕ್ಕೆ ಕಾರಣವಾಗುತ್ತದೆ. ಎಲ್ಲರು ಇದಕ್ಕಾಗಿ ಪ್ರಯತ್ನಿಸೋಣ, ಈಗಾಗಲೇ ಅನಾರೋಗ್ಯದಿಂದ್ದವರು ವೈದ್ಯರಿಂದ ಸಲಹೆ ಪಡೆದು, ಔಷಧ ಸೇವನೆ ಮತ್ತು ತಮ್ಮ ಜೀವನದ ವೈಖರಿ ಮತ್ತು ಭಾವನೆಗಳನ್ನು ತಿದ್ದಿಕೊಂಡು ಅವರು ಸಹ ಆರೋಗ್ಯವಂತರಾಗಲಿ ಎಂದು ನಾನು ಹಾರೈಸುತ್ತೇನೆ. ಈ ಜಾಗತಿಕ ಹೃದಯ ದಿನಾಚರಣೆಯ ದಿನದಂದು ತಮ್ಮೆಲ್ಲರಿಗೂ ಹೃದಯಪೂರಕ ಶುಭಾಶಯಗಳು.

ನಾವೆಲ್ಲರು ನಮ್ಮ ಹೃದಯವನ್ನು ಹೃದಯಕ್ಕಾಗಿ ಹೃದಯವಂತಿಕೆಯಿಂದ ಗೆಲ್ಲೋಣ…


ಹೃದಯಕ್ಕಾಗಿ ಹೃದಯವಂತಿಕೆಯಿಂದ ನಮ್ಮ ಹೃದಯವನ್ನು ಗೆಲ್ಲೋಣ - Janathavaniಡಾ|| ಪ್ರಕಾಶ್ ಹಿರೇಮಠ್
ಹಿರಿಯ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರು,
ಎಸ್. ಎಸ್. ನಾರಾಯಣ
ಹಾರ್ಟ್ ಸೆಂಟರ್, ದಾವಣಗೆರೆ.
ಮೊ. 99864-43042

 

error: Content is protected !!