ಮಧುರ ಕಂಠ ಸಿರಿಯ – ಗಾನ ಸುಧೆಯ ರಸ ರೋಮಾಂಚನ…

ಅಂತಹ ರಸ ರೋಮಾಂಚನದ ಘಳಿಗೆಗೆ ಬೆಣ್ಣೆ ನಗರಿಯ ಜನ ಸಾಕ್ಷಿಯಾಗಿದ್ದು, ದಾವಣಗೆರೆಯ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಸಂಗೀತ ಶಾರದೆಯ ಮುಕುಟ ಮಣಿಯಾಗಿ, ಸಂಗೀತ ಪ್ರಿಯರ ಹೃದಯ ಸಾಮ್ರಾಜ್ಯದ ಅಧಿಪತಿಯಾಗಿ ರಾರಾಜಿಸಿದ ಡಾ. ಎಸ್.ಪಿ.ಬಾಲಸುಬ್ರಮಣ್ಯಂ ಅವರು ಇದೇ ವರ್ಷಾರಂಭದಲ್ಲಿ ಜನವರಿ 12 ರಂದು ನಡೆದ ಸಂಗೀತೋತ್ಸವ ಸಮಾರಂಭಕ್ಕೆ ನಮ್ಮ ಸಂಸ್ಥೆಯ ಪ್ರೀತಿಯ ಆತ್ಮೀಯ ಕರೆಗೆ ಓಗೊಟ್ಟು ದಾವಣಗೆರೆಗೆ ಜನವರಿ 11 ರಂದೇ ಆಗಮಿಸಿ, ನಮ್ಮ ಆತಿಥ್ಯವನ್ನು ಸ್ವೀಕರಿಸಿದ್ದರು. 

ಸಾಮಾನ್ಯವಾಗಿ ಸಂಗೀತ ದಿಗ್ಗಜರೆಂದರೆ ಆಡಂಬರ, ಅದ್ಧೂರಿತನ, ಬಿಗುಮಾನ ಇವುಗಳಿಗೆ ವೈಪರೀತ್ಯವಾಗಿ ಸರಳ ಮತ್ತು ವಿನಮ್ರ ವ್ಯಕ್ತಿತ್ವದ ಎಸ್.ಪಿ.ಬಿ ಅವರನ್ನು ನೋಡಿದಾಗ ಪ್ರೀತ್ಯಾದರಾ ಗಳಿಂದ ಮನ ಅರಳುವಂತಿತ್ತು. 

ಸಂಗೀತ ಸಾಧಕ ರದರೂ ನಾನು ಇನ್ನು ವಿದ್ಯಾರ್ಥಿ ಎಂದು ಅಭ್ಯಾಸ ನಿರತರಾಗಿರುವುದು, ಮಿತ ಭಾಷಿಗಳಾದರೂ ಅವರ ಹೃದಯ ಶ್ರೀಮಂತಿಕೆ ನಡವಳಿಕೆ, ಊಟ ಉಪಹಾ ರದ ಮೊದಲು ಮರೆಯದೇ ವಿಭೂತಿ ಧರಿಸುವ ದೈವ ಭಕ್ತಿ, ಆತಿಥ್ಯವನ್ನು ಮನಸ್ಪೂರ್ತಿಯಾಗಿ ಆಸ್ವಾದಿಸುವ ಹಿರಿತನ. ಮಕ್ಕಳು,  ಯುವಕರು, ಹಿರಿಯರಾದಿಯಾಗಿ ಅಪಾರ ಅಭಿಮಾನಿ ಬಳಗವನ್ನು ಪ್ರೀತಿಯಿಂದ ಕಾಣುವ ಸೌಜನ್ಯತೆ. ಅವರ ಭಾಷಾ ಸಂಪತ್ತು, ವಿಷಯ ಸಂಪತ್ತು, ಜ್ಞಾನ ಸಂಪತ್ತು ಇವೆಲ್ಲವುಗಳಲ್ಲಿ ಅವರಿಗೆ ಅವರೇ ಸಾಟಿ. 

ಕಾರ್ಯಕ್ರಮದ ಮುನ್ನ ಅಭಿಮಾನಿಗಳ ಭೇಟಿ ಮತ್ತು ತಯಾರಿಯ ನಡುವೆಯೂ ಹಿಮೋಫಿಲಿಯಾ ಸೊಸೈಟಿಗೆ ಭೇಟಿ ನೀಡಿ, ಅವರ ಅಹವಾಲನ್ನು ಆಲಿಸಿದ್ದು, ಅವರಿಗಿದ್ದ ಸಾಮಾಜಿಕ ಕಳಕಳಿಗೆ ಸಾಕ್ಷಿಯೆಂದರೆ ತಪ್ಪಾಗಲಾರದು. 

ದಿನಾಂಕ 12ರ ಜನವರಿಯ ಸುಂದರ ಸಂಜೆಯ ಸೋಮೇಶ್ವರೋತ್ಸವದ ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿ ಸಂಗೀತ ದಿಗ್ಗಜ ರಾದ ಎಸ್.ಪಿ.ಬಿ  ಯವರು ಪ್ರತ್ಯಕ್ಷರಾದಾಗ ದಾವಣಗೆರೆಯ ಜನತೆ ರೋಮಾಂಚನದಿಂದ ಹರ್ಷತ ರ್ಪಣಗೈದಿದ್ದರು. ನಂತರದ ಸತತ 3 ಗಂಟೆಯಲ್ಲಿ ಅವರ ಕಂಠದಿಂದ ಉಣಬಡಿಸಿದ ಸಂಗೀತದ ಔತಣದಿಂದ ನಮ್ಮೆಲ್ಲರ ಮನ ಪುಳಕಿತರಾಗಿದ್ದಂತು ನಿಜ. ಅಂದು ಅವರು ಆಯ್ದು ಕೊಂಡ ಹಾಡುಗಳನ್ನು ಕೇಳಿದವರು ಭಕ್ತಿಯ ಅಲೆಯಲ್ಲಿ ತೇಲಿದ ವರೆಷ್ಟೋ… ಹಾಡಿಗೆ ತಾಳ ಹಾಕಿದವರೆಷ್ಟೋ… ನೆನಪಿನ ಅಲೆಯಲ್ಲಿ ಮುಳಿಗೆದ್ದವರೆಷ್ಟೋ… ಭಾವ ತನ್ಮಯತೆಯಲ್ಲಿ ಮಿಂದು ಕಣ್ಣೀರಿಟ್ಟವರೆಷ್ಟೋ. ಇನ್ನು ನಮ್ಮೆಲ್ಲರ ಮನದಲ್ಲಿ ಅಚ್ಚ ಹಸಿರಾಗಿರುವಾಗಲೇ ವಿಧಿ ತನ್ನ ಆಟವನ್ನು ಆಡಿಯೇ ಬಿಟ್ಟಿತು! 

ಸತತ ಒಂದು ತಿಂಗಳ ಅನಾರೋಗ್ಯದ ಬವಣೆಯಿಂದ ಹೊರಬರಲು ಆಗದೆ, ಪ್ರೀತಿಯ ಅಭಿಮಾನಿಗಳ ಪ್ರಾರ್ಥನೆ, ಹಾರೈಕೆಗಳನ್ನು ಕಿವಿಗೆ ಹಾಕಿಕೊಳ್ಳದೆ, ಡಾ. ಎಸ್.ಪಿ.ಬಿ ಯಂತಹ ಅಮೂಲ್ಯ ರತ್ನದ ಮೇಲೆ ಆ ದೇವರಿಗೂ ಮುಚ್ಚಟೆಯಾಗಿ ತನಗೆ ಬೇಕೇ ಬೇಕು ಎಂದು ಕರೆಸಿಕೊಂಡು ಬಿಟ್ಟ. ಆದರೆ, ಅವರ ಸಂಗೀತ ಸೇವೆಯ ಮೂಲಕ ಅವರು ಸದಾ ಜೀವಂತ. ಅವರೆಂದೂ ನಮ್ಮ ನಿಮ್ಮೆಲ್ಲರ ಎಸ್.ಪಿ.ಬಿ.


ಎನ್. ಪ್ರಭಾವತಿ
ಪ್ರಾಂಶುಪಾಲರು
ಶ್ರೀ ಸೋಮೇಶ್ವರ ವಿದ್ಯಾಲಯ

error: Content is protected !!