ಭಾರತದಲ್ಲಿ ವಾಸಿಸುವ ಅಂದಾಜು 270 ಪ್ರಭೇದಗಳ ಹಾವುಗಳಲ್ಲಿ ಕೇವಲ ನಾಲ್ಕು ಮಾತ್ರ ತಮ್ಮ ವಿಷದಿಂದ ಮನುಷ್ಯನ ಸಾವಿಗೆ ಕಾರಣವಾಗಬಹುದು ಎಂದು ಗುರುತಿಸಲ್ಪಟ್ಟಿವೆ. ಮನುಷ್ಯನ ವಸತಿ ಪ್ರದೇಶ ಅಥವಾ ಕೃಷಿ ಭೂಮಿಗಳಲ್ಲಿ ಇವು ಕಂಡು ಬರುವುದರಿಂದ ಮನುಷ್ಯನಿಗೆ ಹಾವು ಕಡಿತದ ಸಂಭವ ಹೆಚ್ಚು. ಅಂತಹ ಒಂದು ವಿಷಯುಕ್ತ ಪ್ರಭೇದವೆಂದರೆ ಕಟ್ಟು ಹಾವು (Common Krait). ಇದರ ಗುಣಲಕ್ಷಣಗಳನ್ನು ಅವಲೋಕಿಸಿದರೆ ನಯವಾದ ಹುರುಪೆಗಳು, ಕುತ್ತಿಗೆಗಿಂತ ಸ್ವಲ್ಪ ಅಗಲವಾಗಿರುವ ತಲೆ ಕಾಣುತ್ತದೆ. ಸಂಪೂರ್ಣ ಕಪ್ಪಗಿರುವ ಕಣ್ಣುಗಳಲ್ಲಿ ದುಂಡಗಿರುವ ಪಾಪೆಗಳು. ಕಪ್ಪು, ನೀಲಿ-ಮಿಶ್ರಿತ ಬೂದು ಅಥವಾ ಕಂದು-ಮಿಶ್ರಿತ ಕಪ್ಪು ಬಣ್ಣಗಳಲ್ಲಿ ಕಾಣಸಿಗುತ್ತದೆ. ಮೈಮೇಲೆ ಸಣ್ಣದಾದ ಕೆಲವು ಸಲ ಜೊತೆಯಲ್ಲಿರುವ ಬಿಳಿಯ ಸುಮಾರು 38 ರಿಂದ 60 ಅಡ್ಡಗೆರೆಗಳು ಬಾಲದ ತುದಿಯವರೆಗೆ ಗೋಚರಿಸುತ್ತವೆ. ಆದರೆ ಈ ರೀತಿಯ ಗೆರೆಗಳು ದೇಹದ ಮುಂಭಾಗ ಮತ್ತು ತಲೆಯ ಭಾಗದಲ್ಲಿ ಕಾಣುವುದಿಲ್ಲ. ಕೆಲವೊಮ್ಮೆ ಈ ಭಾಗಗಳಲ್ಲಿ ಬಿಳಿ ಚುಕ್ಕೆಗಳನ್ನು ಕಾಣಬಹುದು. ತಲೆಯಿಂದ ಬಾಲದವರೆಗೆ ದೇಹದ ಮಧ್ಯ ಭಾಗದಲ್ಲಿ ದೊಡ್ಡದಾದ ಚತುಷ್ಕೋನದ ಹುರುಪೆಗಳಿರುತ್ತವೆ. ದೇಹದ ಕೆಳಭಾಗವು ಹೊಳೆಯುವ ಬಿಳಿ ಬಣ್ಣ ಅಥವಾ ತಿಳಿ ಹಳದಿ ಬಣ್ಣದ್ದಾಗಿರುತ್ತದೆ.
ನಿಶಾಚರಿ – ರಾತ್ರಿಯ ಹೊತ್ತು ಬಹಳ ಚುರುಕಾಗಿ ಮತ್ತು ಚಟುವಟಿಕೆಯಿಂದಿರುವ ಹಾವು. ಬೆಳಗಾದಂತೆ ಹುತ್ತದಲ್ಲಿ, ಕಲ್ಲು-ಬಂಡೆಗಳ ಕೆಳಗೆ ವಿಶ್ರಮಿಸುತ್ತವೆ. ಉದ್ಯಾನವನಗಳಲ್ಲಿ ಮತ್ತು ಕೃಷಿ ಭೂಮಿಯಲ್ಲಿ ನೀರಿರುವ ಕಡೆ ಕಂಡು ಬರುತ್ತದೆ. ಆಹಾರಕ್ಕಾಗಿ ಕಪ್ಪೆ, ಹಲ್ಲಿ, ಇಲಿ ಮುಂತಾದವುಗಳನ್ನು ಬೇಟೆಯಾಡುತ್ತದೆ. ಕೆಲವೊಮ್ಮೆ ಸ್ವಜಾತಿ ಭಕ್ಷಕನೂ ಹೌದು. ಸಂತಾನಾಭಿವೃದ್ಧಿ ಸಮಯ ಮಾರ್ಚಿನಿಂದ ಏಪ್ರಿಲ್‍ವರೆಗೆ. ಹೆಣ್ಣು ಹಾವು ಒಂದು ಸಲಕ್ಕೆ 8 ರಿಂದ 12 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ಮರಿಗಳಾಗಿ ಹೊರ ಬರಲು 60 ದಿನಗಳು ಬೇಕಾಗುತ್ತವೆ. ಮೊಟ್ಟೆಯಿಟ್ಟ ತಾಯಿ ಹಾವು ಸ್ವಲ್ಪ ಸಮಯ ಮೊಟ್ಟೆಗಳ ರಕ್ಷಣೆ ಮಾಡುತ್ತದೆ. ಮರಿಗಳು ಹುಟ್ಟುವಾಗ 25 ರಿಂದ 28 ಸೆಂ.ಮೀ ಇದ್ದು ವಯಸ್ಕನಾದಾಗ ಒಂದು ಮೀಟರ್‌ವರೆಗೆ ಬೆಳೆಯಬಲ್ಲದು. ಜೀವಿತಾವಧಿ 15 ರಿಂದ 20 ವರ್ಷಗಳು. ದಾವಣಗೆರೆಯಲ್ಲಿ ಕಾಣಸಿಗುವ ಹಾವುಗಳಲ್ಲಿ ಇದೂ ಸಹ ಒಂದು. ಕಟ್ಟು ಹಾವುಗಳಂತೆ ಕಾಣುವ ಇತರೆ ನಿರುಪ್ರದವಿ ಹಾವುಗಳು ಸಹ ಮಾಹಿತಿ ಕೊರತೆಯ ಕಾರಣ ಕೊಲ್ಲಲ್ಪಡುತ್ತವೆ.
ಭಾರತದ ನೆಲದಲ್ಲಿರುವ ವಿಷಯುಕ್ತ ಹಾವುಗಳಲ್ಲಿ ಕಟ್ಟು ಹಾವು ಅತ್ಯಂತ ತೀಕ್ಷ್ಣ ವಿಷವನ್ನು ಉತ್ಪಾದಿಸುತ್ತದೆ. ಗಾಬರಿಯಾದಾಗ ಅಥವಾ ಹಿಡಿದಾಗ ತಪ್ಪಿಸಿಕೊಳ್ಳಲು ತನ್ನ ವಿಶೇಷ ಗ್ರಂಥಿಯಿಂದ ದುರ್ವಾಸನೆ ಸೂಸುತ್ತದೆ. ತೀಕ್ಷ್ಣ ವಿಷವಿದ್ದರೂ ಸೌಮ್ಯ ಸ್ವಭಾವದ ಹಾವು. ರಾತ್ರಿ ಹೊತ್ತು ಆಕಸ್ಮಿಕವಾಗಿ ಕಚ್ಚಿದರೆ ಯಾವುದೇ ನೋವಿನ ಅನುಭವವಾಗದೆ ಸಾವು ಸಂಭವಿಸಬಹುದು. ವಿಷವು ತನ್ನ ಮಿಕದ ನರವ್ಯೂಹವನ್ನು ನಿಶ್ಚೇತಗೊಳಿಸಿ ಕೊಲ್ಲುತ್ತದೆ. ಭಾರತದಲ್ಲಿ ಇದರ ವಿಷಕ್ಕೆ ಪ್ರತಿವಿಷ (Antivenom) ಲಭ್ಯವಿದೆ. ಇದರ ವಿಷವನ್ನು ಹಲವಾರು ಔಷಧಿ ತಯಾರಿಕೆಯಲ್ಲಿ ಬಳಸುವರು.
ಜೀವಿಗಳ ವಿಕಾಸದ ಹಾದಿಯಲ್ಲಿ ಸರಿಸೃಪಗಳದ್ದೇ ಒಂದು ವಿಶೇಷತೆ. ಅದರಲ್ಲೂ ಹಾವುಗಳು ತಯಾರಿಸುವ ವಿಷ ರಾಸಾಯನಿಕವಾಗಿ ಒಂದು ನಿಸರ್ಗದ ಸೋಜಿಗ. ಯಾವುದೇ ರಾಸಾಯನಿಕ ಪ್ರಯೋಗ ಶಾಲೆಗಳಲ್ಲಿ ಈ ರೀತಿಯ ವಿಷವನ್ನು ತಯಾರು ಮಾಡಲಾಗದು. ಇಂತಹ ವಿಶಿಷ್ಟ ಗುಣಗಳಿರುವ ಹಾವುಗಳು ಮನುಷ್ಯನ ಭಯ/ಸ್ವಾರ್ಥ/ಮೂಢನಂಬಿಕೆ/ದುರಾಸೆಗೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ.
ಪ್ರಕೃತಿಯ ಆಹಾರ ಸರಪಳಿಯಲ್ಲಿ ತನ್ನದೇ ಸ್ಥಳವನ್ನು ಗುರುತಿಸಿಕೊಂಡಿದ್ದು ಪರಿಸರ ಸಮತೋಲನಕ್ಕೆ ಕೊಡುಗೆ ನೀಡುತ್ತಿರುವ ಇಂತಹ ಪ್ರಾಣಿಗಳ ಉಳಿವು ಭೂಮಿಯಲ್ಲಿ ಮನುಷ್ಯನ ಉಳಿವಿಗೆ ಅಗತ್ಯ.
ಮಾನವರಲ್ಲಿ ಪರಿಸರ ಜ್ಞಾನ ಮತ್ತು ಕಾಳಜಿ ಇಂದಿನ ಅವಶ್ಯಕತೆ. ಸರ್ವೇಜನ ಸುಖಿಃನೋ ಭವಂತು.
ಡಾ. ಎಸ್. ಶಿಶುಪಾಲ, ಸೂಕ್ಷ್ಮಜೀವಿಶಾಸ್ತ್ರ ವಿಭಾಗ,
ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ.,
[email protected]