ಕೊರೊನಾ ಸಮಯದಲ್ಲಿ ಉತ್ಪಾದನಾ ವಲಯಗಳಿಗೂ ಬೇಕಿದೆ ಬಡ್ಡಿ ವಿನಾಯ್ತಿ

ಕೊರೊನಾ ಕಾಲ ಹಲವಾರು ಹೊಸ ಹೊಸ ಪಾಠಗಳನ್ನು ಕಲಿಸುತ್ತಿದೆ. ಈಗ 2020 ಕಲಿಸುತ್ತಿರುವ ಹೊಸ ಪಾಠ ಎಂದರೆ ಕೈಗಾರಿಕೆಗಳು – ನಗರಗಳು ದೇಶದ §ಬೆನ್ನೆಲುಬು’ ಎಂಬುದು! 

ಏಕೆಂದರೆ 2020ರಲ್ಲಿ ಕೃಷಿ ವಲಯ ಬೆಳವಣಿಗೆ ಕಂಡಿದೆ. ಆದರೆ, ಉಳಿದೆಲ್ಲ ವಲಯಗಳು ಹಿನ್ನಡೆ ಕಂಡಿವೆ. ಕೃಷಿ ದೇಶದ ಬೆನ್ನೆಲುಬಾಗಿದ್ದರೆ ಅಥವಾ ಕೃಷಿ ಒಂದರಿಂದಲೇ ದೇಶ ಆತ್ಮನಿರ್ಭರ ಆಗಲು ಸಾಧ್ಯವಿದ್ದಿದ್ದರೆ, ದೇಶದ ಜಿಡಿಪಿ ಹೆಚ್ಚಳ ಕಾಣಬೇಕಿತ್ತು. ಆದರೆ, ಅದಾಗದೇ ದೇಶದ ಜಿಡಿಪಿ ಏಪ್ರಿಲ್ – ಜೂನ್ ಚತುರ್ಥದಲ್ಲಿ ಶೇ.23ರ ಕುಸಿತ ಕಂಡಿದೆ.

ಕಳೆದ ಐದು ಚತುರ್ಥಗಳಲ್ಲಿ ಕೃಷಿ ವಲಯ ಬೆಳವಣಿಗೆ ಕಾಣುತ್ತಾ ಬಂದಿದೆ. ಆದರೆ, ದೇಶದ ಉಳಿದ ವಲಯಗಳ ಏರುಪೇರಿನಿಂದಾಗಿ ಜಿಡಿಪಿ ಹಿನ್ನಡೆ ಕಾಣುತ್ತಲೇ ಬಂದಿದೆ. ಇದು ದೇಶದಲ್ಲಿ ಕೃಷಿಯೇತರ ವಲಯಗಳ ಕಡೆ ಹೆಚ್ಚಿನ ಒತ್ತು ನೀಡಬೇಕಾಗಿರುವುದನ್ನು ತೋರಿಸುತ್ತದೆ.

ಆದರೆ, ವಾಸ್ತವದಲ್ಲಿ ಆ ನಿರೀಕ್ಷಿತ ಬೆಂಬಲ ಸಿಗುತ್ತಿದೆಯೇ? ಬರ ಬಂದಾಗ, ಬೆಳೆ ಕೈ ಕೊಟ್ಟಾಗ ರೈತರಿಂದ ಸಾಲ – ಬಡ್ಡಿ ವಸೂಲಿ ಮಾಡಲು ಯಾರಾದರೂ ಮುಂದಾಗುತ್ತಾರೆಯೇ? ಇಲ್ಲ. ಹಾಗಾದರೆ ಅದೇ ಮಾನದಂಡ ಕೈಗಾರಿಕೆಗಳಿಗೆ, ಸೇವಾ ವಲಯ ಹಾಗೂ ಇತರೆ ವಲಯಗಳಿಗೆ ಕೊಡಬೇಕಲ್ಲವೇ? ಇತ್ತೀಚಿನ ದಶಕಗಳಲ್ಲಿ ಕಂಡು ಕೇಳರಿಯದ ಆರ್ಥಿಕ ಸಂಕಷ್ಟ ಈ ವರ್ಷ ಬಂದಿದೆ. ಆದರೆ, ಕೃಷಿಯೇತರ ವಲಯಗಳ ಸಾಲಗಳನ್ನಿರಲಿ, ಬಡ್ಡಿ ಇನ್ನೊಂದೆಡೆ ಇರಲಿ, ಬಡ್ಡಿಯ ಮೇಲಿನ ಬಡ್ಡಿ ಬಿಡುವ ಕ್ರಮ ತೆಗೆದುಕೊಳ್ಳಲೂ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ!

ಸಾಲದ ತಡವಾದ ಕಂತುಗಳ ಮೇಲಿನ ಬಡ್ಡಿ ಅಂದರೆ ಬಡ್ಡಿಯ ಮೇಲಿನ ಬಡ್ಡಿ ತಪ್ಪಿಸಲು ಇ.ಎಂ.ಐ. ಬಾಕಿದಾರರು ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿ ಗೋಳಾಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಹೊಣೆಯನ್ನು ಆರ್.ಬಿ.ಐ ಮೇಲೆ, ಆರ್.ಬಿ.ಐ. ಬ್ಯಾಂಕುಗಳ ಮೇಲೆ ಹಾಕುತ್ತಿದೆ.

ಇದೆಲ್ಲದರಿಂದ ಕಂಡು ಬರುವುದೇನೆಂದರೆ ದೇಶ ಎರಡು ರೀತಿಯ ಮಾನದಂಡಗಳನ್ನು ಹೊಂದಿದೆ. ದೇಶದ ಏಳ್ಗೆಗಾಗಿ ಪರಿಶ್ರಮಿಸುವ ವರ್ಗಗಳನ್ನು ಸಮಾಜ ಎರಡು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುತ್ತಿದೆ ಎಂಬುದು. ಅನುಮಾನವೇ? ಹಾಗಾದರೆ ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯದ ಎನ್.ಸಿ.ಆರ್.ಬಿ. ಪ್ರಕಟಿಸಿದ ಆತ್ಮಹತ್ಯೆ ದರದ ಬಗ್ಗೆ ಗಮನಿಸಿ. ಇದರ ಪ್ರಕಾರ ದಿನಗೂಲಿ ಉದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಶೇ.23.4ರಷ್ಟು ಅತಿ ಹೆಚ್ಚಾಗಿದೆ. ನಂತರದ ಸ್ಥಾನದಲ್ಲಿ ಶೇ.15.4ರಷ್ಟಿರುವ ಗೃಹಿಣಿಯರು. ಆನಂತರ ಶೇ.10.1ರಷ್ಟಿರುವ ನಿರುದ್ಯೋಗಿಗಳು, ಶೇ.9.1ರಷ್ಟಿರುವ ವೃತ್ತಿಪರರು ಹಾಗೂ ವೇತನದಾರರು ಬರುತ್ತಾರೆ. ನಂತರವೇ ಶೇ.7.4ರ ಪ್ರಮಾಣದ ಕೃಷಿ ವಲಯ ಬರುತ್ತದೆ.

ಇಷ್ಟಾದರೂ ಕೃಷಿ ವಲಯ ಹೊರತು ಪಡಿಸಿ ಉಳಿದ ಯಾವುದೇ ವಲಯದವರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರದಿಂದ ಪರಿಹಾರ ಸಿಗದು! ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 17,100 ಕೋಟಿ ರೂ. ಬಿಡುಗಡೆ ಮಾಡಿದರು. ಆದರೆ, ಸಂಕಷ್ಟದಲ್ಲಿರುವ ಇತರೆ ವಲಯದವರಿಗೆ? ರೈತರಿಗೆ ನೆರವು ನೀಡುವುದು ತಪ್ಪೇನಲ್ಲ. ಅದು ಸರ್ಕಾರ ಮಾಡಲೇ ಬೇಕಾದ ಕರ್ತವ್ಯ. ಆಹಾರ ಭದ್ರತೆಯಿಂದಲೇ ದೇಶದ ಭದ್ರತೆ ಸಾಧ್ಯ. ಆದರೆ, ಇತರೆ ವಲಯಗಳನ್ನೂ ಕೃಷಿಯಷ್ಟೇ ಸಮಾನವಾಗಿ ಪರಿಗಣಿಸಬೇಕಲ್ಲವೇ?

ಕೇಂದ್ರ ಸರ್ಕಾರವನ್ನು ಪ್ರತಿಪಕ್ಷಗಳು ಕೆಲವೊಮ್ಮೆ §ಸೂಟು ಬೂಟಿನ ಸರ್ಕಾರ’ ಎಂದು ಲೇವಡಿ ಮಾಡುತ್ತವೆ. ಆದರೆ, ದೇಶದ ಬೆಳವಣಿಗೆಗೆ ಈ ಸೂಟು – ಬೂಟುಗಳೂ ಎಷ್ಟು ಅಗತ್ಯ ಎಂಬುದನ್ನು 2020ರ ಕೊರೊನಾ ಬಿಕ್ಕಟ್ಟು ತೋರಿಸಿದೆ. ದೇಶ ಕಟ್ಟುವವರು ಸೂಟಾದರೂ ಹಾಕಿಕೊಳ್ಳಲಿ, ಪಂಚೆಯಾದರೂ ಕಟ್ಟಿಕೊಳ್ಳಲಿ, ಅದರಿಂದ ಏನೂ ಆಗಬೇಕಿಲ್ಲ. ಪ್ರಗತಿಗೆ ಎಲ್ಲರೂ ಬೇಕು – ಎಲ್ಲ ವರ್ಗದವರೂ ಬೇಕು.

ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಂದೋ, ಆತ್ಮನಿರ್ಭರ್ ಎಂದೋ ಹೇಳಿದರಷ್ಟೇ ಸಾಲದು, ವಾಸ್ತವವಾಗಿ ದೇಶದ ಆರ್ಥಿಕ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗಿದೆ. ಇಲ್ಲದಿದ್ದರೆ ಇನ್ನಷ್ಟು ಸಂಕಷ್ಟಗಳನ್ನು ಎದುರಿಸುವ ಕಾಲ ಬರುವ ದಿನಗಳು ದೂರವಿಲ್ಲ.


ಎಸ್.ಎ. ಶ್ರೀನಿವಾಸ್
[email protected]

error: Content is protected !!