ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ

ಒಂದು ಶುಭ ಕಾರ್ಯ ಪ್ರಾರಂಭವಾಗಬೇಕಾದರೆ `ಬೆಕ್ಕಿಗಿಂತ ಮುಂಚೆ ಅಡ್ಡಾಗಿ ಬರುವ ಈ ಸಮಾಜ ಬಾಂಧವರು. ಇಂತಹವರ ಮಧ್ಯೆ ಬಂದ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಯಶಸ್ವಿಯಾಗುವುದು ಸುಲಭದ ಮಾತಲ್ಲ, ಅದರಲ್ಲೂ ಪುರುಷ ಪ್ರಧಾನ ಈ ಸಮಾಜದಲ್ಲಿ ಮಹಿಳೆಯರು ಸಾಧನೆ ಮಾಡುವಾಗಿನ ವೇದನೆಯನ್ನು ಕುರಿತೇ ವೀರ ವಿರಾಗಿಣಿ, ಕನ್ನಡದ ಪ್ರಪ್ರಥಮ ಕವಿಯತ್ರಿ ಅಕ್ಕ ನವರು `ನೊಂದ ನೋವ  ನೋಯವರೆತ್ತ ಬಲ್ಲರೋ ಚನ್ನಮಲ್ಲಿಕಾರ್ಜುನ’ ಎಂದು 12ನೇ ಶತಮಾನದಲ್ಲಿ ನುಡಿದ ನುಡಿಗಳು 21ನೇ ಶತಮಾನದಲ್ಲಿಯೂ ಪ್ರಸ್ತುತ.

ಹೊತ್ತು ಹೊತ್ತಿಗೆ ತುತ್ತನ್ನಿಕ್ಕಿದಾಕೆ
ಮನೆಮನೆಯ ದೀಪ ಬೆಳಗಿದಾಕೆ
ನಿನಗೆ ಬೇರೆ ಹೆಸರು ಬೇಕೆ `ಸ್ತ್ರೀ’
ಎಂದರೆ ಅಷ್ಟೇ ಸಾಕೆ…?

`ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’  ಎಂಬ ಮಾತುಗಳನ್ನು ನಾವು ನೀವುಗಳೆಲ್ಲಾ ಕೇಳಿದ್ದೇವೆ. ಇಷ್ಟೆಲ್ಲಾ ಪೂಜ್ಯ ಭಾವನೆಯಿಂದ ಸುಸಂಸ್ಕೃತ ಸಮಾಜ ಸ್ತ್ರೀಯರನ್ನು ಗೌರವಿಸುತ್ತಾ ಬಂದಿದೆ ಹಾಗೂ ಸ್ತ್ರೀ ತರುಣಿಯಾಗಿ, ಮಡದಿಯಾಗಿ, ಮನೆ ಬೆಳಗುವ ಸೊಸೆಯಾಗಿ, ಬದಲಾದ ಕಾಲ ಘಟ್ಟದಲ್ಲಿ ದುಡಿಯುವ ಹೆಣ್ಣುಮಗಳಾಗಿ ಹಗಲಿರುಳೂ ಅವಿಶ್ರಾಂತವಾಗಿ ಹೊರ, ಒಳಗಿನ ಗುಟ್ಟುಗಳನ್ನು ಬಿಟ್ಟುಕೊಡದೆ. `ಸಂಸಾರ ಗುಟ್ಟು ವ್ಯಾಧಿ ರಟ್ಟು’ ಎಂಬುದನ್ನು ಅರಿತು ಆಚರಣೆಯಲ್ಲಿ ತಂದಿರುವವಳು, ತರುತ್ತಿರುವವಳು, ಮುಂದೆಯೂ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವವಳು ಎನ್ನುವುದರಲ್ಲಿ ಎರಡನೇ ಮಾತಿಲ್ಲ. 

ಹೇಮ ನಿನ್ನದಲ್ಲ, ಭೂಮಿ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ, `ಜ್ಞಾನರತ್ನವೆಂಬುದು ನಿನ್ನ ನಿಜದ ಒಡವೆ ಅದನ್ನು ಧರಿಸಿ ಸದಾ ನಿಶ್ಚಿಂತನಾಗಿರು’ ಎಂದು ಶೂನ್ಯ ಪೀಠಾಧ್ಯಕ್ಷರಾದ ಅಲ್ಲಮ ಪ್ರಭುದೇವರು ನುಡಿದಿದ್ದಾರೆ.

ಈ ದಿಸೆಯಲ್ಲಿ ಸುಮಾರು ಎರಡು ನೂರು ವರ್ಷಗಳ  ಹಿಂದೆಯೇ ಮಹಾ ರಾಷ್ಟ್ರದ ಸತಾರಾ ಜಿಲ್ಲೆಯ, ನೈಂಗಾನ್ ಎಂಬ ಗ್ರಾಮದ ಸಾವಿತ್ರಿ ಬಾಯಿ ಫುಲೆಯವರು ತುಳಿತಕ್ಕೊಳಗಾದ ಮಹಿಳೆಯರ ಎದೆಗೆ `ಅಕ್ಷರದ ಬೀಜವನ್ನು ಬಿತ್ತಿದ ಮಹಾನ್ ಚೇತನ’, ದೇವನೂರು ಮಹಾದೇವ ಅವರು ಹೇಳುವಂತೆ ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದೂ ಹುಸಿ ಹೋಗುವುದಿಲ್ಲ ಎಂಬುದನ್ನು ಸಾಧಿಸಿ, ಪರಿಚಯಿಸಿದವರು ಸಾವಿತ್ರಿ ಬಾಯಿ ಫುಲೆಯವರು.

`ಬಾಲ್ಯ ವಿವಾಹಕ್ಕೊಳಗಾದ 8 ವರ್ಷದ ಪೋರಿ 13 ವರ್ಷದ ಪೋರ ಜ್ಯೋತಿ ಬಾಫುಲೆಯವರ ಕೈ ಹಿಡಿದು ಸಮಾಜದಲ್ಲಿ ಶೋಷಣೆಗೆ ಒಳಗಾದ ಅಸ್ಪೃಶ್ಯರೆಂದು ತುಳಿತಕ್ಕೊಳಪಟ್ಟಿದ್ದ ಮಹಿಳೆಯರ ಎದೆಯಲ್ಲಿ ಅಕ್ಷರದ ಕಿಚ್ಚನ್ನು ಹಚ್ಚಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿ, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿದವರು ಫುಲೆ ದಂಪತಿ.

ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯೊಬ್ಬಳು ಸಮಾಜದ ಅಪಮಾನಗಳನ್ನು ಮೆಟ್ಟಿನಿಂತು ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿ ಗುರುತಿಸಿಕೊಂಡ ಸಾವಿತ್ರಿ ಬಾಯಿ ಫುಲೆಯವರು ಇದು ಇತಿಹಾಸ ಚರಿತ್ರೆ.

ದಾನ-ಧರ್ಮಗಳಿಗೆ, ಸಮಾಜ ಸೇವೆಗೆ, ಗುರು-ವಿರಕ್ತರ, ಸಾಧು-ಸಂತರ, ಸೇವೆಗೆ ತಮ್ಮ ಮನೆತನ ವನ್ನೇ ಮೀಸಲಾಗಿಟ್ಟುಕೊಂಡಿರುವ ದಾವಣಗೆರೆ ಮಹಾನಗರದ ಹಲವಾರು ಮನೆತನಗಳಲ್ಲಿ ಚಿಗಟೇರಿ ಮನೆತನವೂ ಒಂದು. ಆ ಮನೆತನದ ಹಿರಿಯ ಜೀವ ಧರ್ಮಪ್ರಕಾಶ ಚಿಗಟೇರಿ ಮುರಿಗೆಪ್ಪ ನವರು 60ರ ದಶಕದಲ್ಲಿಯೇ ದಾವಣಗೆರೆ ಮಹಾನಗರದಲ್ಲಿ ಚಿಗಟೇರಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಿದ್ದು ಈಗ ಅದು ಪೂರ್ಣ ಪ್ರಮಾಣದ ಕೋವಿಡ್ 19 ಆಸ್ಪತ್ರೆಯಾಗಿ ತಾತ್ಕಾಲಿಕವಾಗಿ ಪರಿವರ್ತನೆಗೊಂಡಿದೆ. 

1962ರಲ್ಲಿ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿ, ಅದರಡಿಯಲ್ಲಿ ದಾವಣಗೆರೆ ನಗರದ ಹಳೆ ಪ್ರದೇಶದ ಹೆಣ್ಣು ಮಕ್ಕಳು, ಪ್ರೌಢಶಿಕ್ಷಣಕ್ಕಾಗಿ ಅವಲಂಬಿತವಾಗಿದ್ದ ಒಂದೇ ಶಾಲೆ ಸೀತಮ್ಮ ಬಾಲಕಿಯರ ಪ್ರೌಢಶಾಲೆ. ಆ ಕಾಲದಲ್ಲಿ ಮೈ ನೆರೆತ ಹೆಣ್ಣು ಮಕ್ಕಳನ್ನು ರೈಲ್ವೇ ಹಳಿ ಆಚೆ ಓದಿಸಲು ಕಳುಹಿಸುವುದು ಕನಸೇ ಆಗಿತ್ತು. ಅದನ್ನು ಮನಗಂಡು ವಿಶೇಷವಾಗಿ ಬಾಲಕಿಯರಿಗಾಗಿ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ  ಹಾಗೂ ಬಾಲಕರಿಗಾಗಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯನ್ನು ಕಿಂಚಿತ್ತೂ ಚ್ಯುತಿ ಬರದಂತೆ 58 ವರ್ಷಗಳ ಕಾಲ ಮುನ್ನಡೆಸಿಕೊಂಡು ಅವರೊಂದಿಗೆ ಕೈ ಜೋಡಿಸಿದ ಇತರೆ ಕೆಲ ಮನೆತನದವರು ಸುಸಜ್ಜಿತವಾಗಿ ನಡೆಸಿಕೊಂಡು ಬರುತ್ತಿದ್ದು ಸುಮಾರು ಕೋಟಿ ರೂಪಾಯಿಗಳ ಬೆಲೆ ಬಾಳುವ ಆಸ್ತಿಯಲ್ಲಿ ಬೆಲೆ ಬರುವಂತಹ ಬದುಕನ್ನು ಕಟ್ಟಿಕೊಂಡಿರುವ ಅಜ್ಜಿಯರು, ಮಕ್ಕಳು, ಮೊಮ್ಮಕ್ಕಳು ಈ ಶಾಲೆಯಲ್ಲಿ ಓದಿ ಅಕ್ಕಮಹಾದೇವಿಯವರ ನುಡಿಯಂತೆ `ನಿಮ್ಮ ಮಂಡೆಗೆ ಹೂವ ತರುವೆವಲ್ಲದೆ ಹುಲ್ಲ ತಾರೆವು’ ಎಂಬುದನ್ನು ಸಾಬೀತು ಮಾಡಿತೋರಿಸಿ ಇಂದು ಸಮಾಜದ ದಶದಿಕ್ಕುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಂದು ಹೊತ್ತಿಸಿದ `ಕಲ್ಯಾಣವೆಂಬ ಪ್ರಣತೆಯಲ್ಲಿ ಅಸಂಖ್ಯಾತರು ತೊಳಗಿ ಬೆಳಗುತ್ತಿದ್ದಾರೆ’. 

ಹಳೇ ನಗರದ ಪ್ರದೇಶದಲ್ಲಿ ನಿಂತು ಒಂದು ಕಲ್ಲು ಒಗೆದರೆ ಅದು ಬೀಳುವ ಮನೆಯ ಅಜ್ಜಿಯೋ, ತಾಯಿಯೋ, ಮಗಳೋ-ಮೊಮ್ಮಗಳೋ ಅಕ್ಕಮಹಾದೇವಿ ಶಾಲೆಯ ತೂಕದ ಬೆಲೆ ಬಾಳುವ ಬದುಕಿಗೆ ಬೆಲೆ ಬರುವಂತೆ ಬದುಕುತ್ತಿರುವವರ ಮನೆ ಮೇಲೆ ಬೀಳುತ್ತದೆ ಎನ್ನುವುದು ಅತಿಶಯೋಕ್ತಿಯ ಮಾತಲ್ಲ.


– ಎಂ.ಕೆ. ಬಕ್ಕಪ್ಪ, ಸಹ ಕಾರ್ಯದರ್ಶಿ,
ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ
ದಾವಣಗೆರೆ. 

error: Content is protected !!