ರಂಗಜಂಗಮರಿಗೊಂದು ನಮನ

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಜನಾಂಗಗಳ ತವರು. ಕೋಟೆ ಕೊತ್ತಲುಗಳ ನಾಡು. ಬಯಲಾಟ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಎಲ್ಲಾ ಪ್ರಕಾರಗಳ ನಾಟಕಗಳು ಇಲ್ಲಿ ಪ್ರಚಲಿತದಲ್ಲಿವೆ. ಸಂಚಾರಿ ನಾಟಕಗಳ ತವರೂರೆಂದೇ ಹೆಸರಾದ ಜಿಲ್ಲೆಯಲ್ಲಿ `ಶಿವ ಸಂಚಾರ’ ಎಂಬ ರೆಪರ್ಟರಿಯನ್ನು ನಾಡಿನಾದ್ಯಂತ ನಡೆಸಿಕೊಂಡು ಬರುತ್ತಿರುವವರು ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಯವರು. ಶ್ರೀಗಳು ವೈಚಾರಿಕ ಬರಹಗಳನ್ನು, ವಚನ ಸಾಹಿತ್ಯ ಮತ್ತು ವಚನಕಾರರ ಜೀವನಾದರ್ಶಗಳನ್ನು ರಂಗಭೂಮಿಯ ಮೂಲಕ ಜನಮನಕ್ಕೆ ಮುಟ್ಟಿ ಸುವ ಮಹಾಮಣಿಹದ ನೇತಾರರಾಗಿ ಆಧುನಿಕ ಕನ್ನಡ ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿ ದ್ದಾರೆ. ರೆಪರ್ಟರಿಯ ಮೂಲಕ ಕಾರ್ಯಕ್ಷೇತ್ರವಾದ ಸಾಣೇಹಳ್ಳಿಯನ್ನು ಕರ್ನಾಟಕದ ರಂಗ ಕಾಶಿಯನ್ನಾ ಗಿಸಿದ್ದಾರೆ. `ಶಿವ ಶರಣರ’ ಕನ್ನಡ ನಾಟಕಗಳನ್ನು ಹಿಂದಿಗೆ ಅನುವಾದಿಸಿ, ಭಾರತದ ಪ್ರಸಿದ್ಧ ನಗರಗಳಲ್ಲಿ `ಭಾರತ ಸಂಚಾರ’ ಮತ್ತು `ಶಿವದೇಶ ಸಂಚಾರ’ ಎಂಬ ರಂಗಯಾತ್ರೆಯ ಮೂಲಕ ಹೊರನಾಡಿನಲ್ಲೂ ವಚನಕಾರರ ಪರಿಚಯ ಮಾಡಿಸಿದ್ದಾರೆ.

ಶ್ರೀಗಳು ಜವಾನನ ಕೆಲಸ ಬಯಸಿ, 1967ರಲ್ಲಿ ಸಿರಿಗೆರೆಗೆ ಬಂದವರು. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕನಸಿನ ಬಳ್ಳಿ ಇವರು. ಪೂಜ್ಯರ ಆಶೀರ್ವಾದದಿಂದ ಸಿರಿಗೆರೆಯಲ್ಲೇ ಪಿ.ಯು.ಸಿ. ಸೇರಿದರು. ಪೂಜ್ಯರು ಜನಿಸಿದ್ದು, 04-09-1951 ರಲ್ಲಿ ಹೆಡಿಯಾಲದಲ್ಲಿ. (ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲ್ಲೂಕು) ತಂದೆ ನಾಗಯ್ಯ, ತಾಯಿ ಶಿವನಮ್ಮ. ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿಯಾದರೆ, ಪ್ರೌಢಶಿಕ್ಷಣ ಪಕ್ಕದ ಗ್ರಾಮ ಸುಣಕಲ್ಬಿದರಿಯಲ್ಲಿ. ಕಾಲೇಜು ಶಿಕ್ಷಣ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ. ಬಿ.ಎ. ತತ್ವಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾಂಕ್‌ನೊಂದಿಗೆ ಚಿನ್ನದ ಪದಕದೊಂದಿಗೆ ಉತ್ತೀರ್ಣರಾದರು. 1974ರಲ್ಲಿ ಮೈಸೂರಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ತತ್ವಶಾಸ್ತ್ರ ವಿಭಾಗದಲ್ಲೂ ಪ್ರಥಮ ರಾಂಕ್‌ ಗಳಿಸಿ, ಚಿನ್ನದ ಪದಕ ಪಡೆದರು. ಆಗ ವಿಶ್ವವಿದ್ಯಾನಿಲಯ ಸ್ವಲ್ಪ ಹಣ ಕಟ್ಟಿ ಚಿನ್ನದ ಪದಕ ಪಡೆಯಲು ಸೂಚಿಸಿದಾಗ ಅಂತಹ ಪದಕವೇ ಬೇಡವೆಂದು ಪ್ರತಿಭಟಿಸಿದ ಬಂಡಾಯದ ಮನೋಧರ್ಮದವರು.

ಸಿರಿಗೆರೆಯ ತರಳಬಾಳು ಬೃಹನ್ಮಠದ ಶಾಖಾ ಮಠಗಳಲ್ಲಿ ಸಾಣೇಹಳ್ಳಿ ಶ್ರೀಮಠದ ಪಾತ್ರ ಪ್ರಮುಖ ವಾದುದು. 1977 ಡಿಸೆಂಬರ್ 25 ರಂದು ಪಟ್ಟಾಭಿ ಷಿಕ್ತರಾದ ಪಂಡಿತಾರಾಧ್ಯ ಶ್ರೀಗಳು, ಕೇವಲ ತಾಲ್ಲೂಕು, ಜಿಲ್ಲೆಗೆ ಪರಿಚಯವಿದ್ದ ಶ್ರೀಮಠದ ವ್ಯಾಪ್ತಿ ಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿ ದ್ದಾರೆ. ಪೂಜ್ಯರಿಗೆ ಪಟ್ಟವಾದಾಗ ಸಾಣೇಹಳ್ಳಿ ಶಾಖಾಮಠ ಪ್ರೌಢಶಾಲೆ ಮತ್ತು ಹಾಸ್ಟೆಲ್ ಮಾತ್ರ ಹೊಂದಿತ್ತು. ಭಕ್ತರೂ ಸಹ ಮಠದ ಕಡೆಗೆ ಅಷ್ಟೇನು ಆಸಕ್ತಿ ತೋರಿಸುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಧೃತಿಗೆಡದೆ, ಸಮಾಜದ ಭಕ್ತರ ಬೆಂಬಲ ಪಡೆದು ಹಗಲಿರುಳು ಶ್ರಮಿಸಿ, ಸಾಣೇಹಳ್ಳಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಭಕ್ತರು ಮಠದ ಕಡೆಗೆ ಬರುವಂತೆ ಆಕರ್ಷಣೆ ಮಾಡಿದರು. ಇಲ್ಲಿ ಒಟ್ಟು ಐದು ರಂಗಮಂದಿರಗಳನ್ನು ನಿರ್ಮಾಣ ಮಾಡಿದ್ದಾರೆ. ಜಗತ್ತಿನ ಯಾವ ಹಳ್ಳಿಯಲ್ಲೂ ಒಂದೇ ಗ್ರಾಮದಲ್ಲಿ ಇಷ್ಟೊಂದು ರಂಗಮಂದಿರಗಳಿಲ್ಲವೆನಿ ಸುತ್ತದೆ. ಇಲ್ಲಿ ಭಕ್ತಿ, ಆರಾಧನೆ, ನಂಬಿಕೆ, ಉಸಿರು ಎಲ್ಲವೂ ಬರೀ ನಾಟಕ, ಕಲೆ, ಸಂಗೀತ, ವಿಚಾರ ಸಂಕಿರಣಗಳು, ಶಿಕ್ಷಣವೇ ಆಗಿದೆ.

ಜಗತ್ತಿನ ಯಾವುದೇ ಕಲೆ ಇರಲಿ ಅವುಗಳೆಲ್ಲವು ನೆಲ ಮೂಲದ ಸಂಬಂಧ ಹೊಂದಿವೆ. ಅವು ಹುಟ್ಟಿಕೊಂಡ ನೆಲದಲ್ಲಿ ಕೂತು ಅವುಗಳಿಂದ ಆಚೆ-ಈಚೆ ಸೇರಿದ ಮನಸ್ಸುಗಳು ಒಟ್ಟಾಗಿ ಮತ್ತೆ ಮುಖಾ ಮುಖಿಯಾಗುವುದು, ಅನುಭವಿಸುವುದು ಒಂದು ಆಂತರ್ಯದ ಸುಖವೆನ್ನಬಹುದು. ಆದರೆ, ಅದನ್ನೆಲ್ಲ ಹಳ್ಳಿ ನೆಲದಲ್ಲಿ ಕಟ್ಟಿಕೊಡುವವರು ಬೇಕಲ್ಲವೇ? ಅಂತಹದೊಂದು ಕಾಯಕ ಮಾಡುತ್ತಾ ಬಂದವರು ಪಂಡಿತಾರಾಧ್ಯ ಶ್ರೀಗಳು. ಪೂಜ್ಯರು 43 ವರ್ಷಗಳಿಂ ದ ಮಾಡುತ್ತಾ ಬಂದಿರುವ ಸಾಧನೆ ಅವಿಸ್ಮರಣೀಯ.

ಓದಿದ್ದು ತತ್ವಶಾಸ್ತ್ರ. ಒಪ್ಪಿದ್ದು ವಚನಶಾಸ್ತ್ರ. ಅಪ್ಪಿದ್ದು ರಂಗಭೂಮಿ. ಲೇಖಕರು, ನಾಟಕಕಾರರು, ಆಧುನಿಕ ವಚನಕಾರರು, ಅಂಕಣಕಾರರು ಆಗಿರುವ ಪೂಜ್ಯರಿಂದ ಇದುವರೆಗೆ 106ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಗೊಂ ಡಿವೆ. ಹಲವು ಪತ್ರಿಕೆಗಳಿಗೆ ಲೇಖನ ಬರೆಯುವ ಜೊತೆಗೆ ಪ್ರಜಾವಾಣಿಯಲ್ಲಿ `ಬಾಳಬುತ್ತಿ’ಯ ಅಂಕಣಕಾರರಾಗಿದ್ದರು. ಲೆಕ್ಕವಿಲ್ಲದಷ್ಟು ಸರ್ವ ಶರಣರ ಸಮ್ಮೇಳನಗಳು ಸೇರಿದಂತೆ ಶ್ರಾವಣ ಸಂಜೆ, ಮತ್ತೆ ಕಲ್ಯಾಣದಂತಹ ಸಮಾಜಮುಖಿ, ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಿಲ್ಲೆಯಾ ದ್ಯಂತ ಕಳೆದೆರಡು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಜಗತ್ತನ್ನು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಅರಿವು, ಅನ್ನದಾಸೋಹ ಮತ್ತು ಕಾಯ ಕಗಳು ಪರಿಹಾರವಾಗಬಲ್ಲವು. ಅಂತಹ ಚಿಂತನೆಗ ಳಿಂದ ಹುಟ್ಟಿದ ಕಾರ್ಯಕ್ರಮಗಳೇ ಇವುಗಳು. 

ಹಳ್ಳಿಗಳ ಸ್ವಚ್ಛತೆ, ವೈಚಾರಿಕ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜನಮನದಲ್ಲಿ ಉಪನ್ಯಾಸ, ಕಾರ್ಯಾಗಾರ, ವಿಚಾರ ಸಂಕಿರಣ, ವಚನ ಗಾಯನ, ನಾಟಕ ಪ್ರದರ್ಶನಗಳು ಪ್ರಮುಖ ಕಾರ್ಯಕ್ರಮದ ಉದ್ದೇಶಗಳಾಗಿದ್ದವು. ಜಡತ್ವಕ್ಕೆ ಸಂದ ಮನಸ್ಸುಗಳನ್ನು ಬಡಿದೆಚ್ಚರಿಸಿ, ಬದುಕಿನ ಸಾರ್ಥಕತೆಯ ಮಾರ್ಗ ತೋರಿಸಿದ್ದು, 12ನೇಯ ಶತಮಾನದ ಶರಣ ಚಳುವಳಿ. ಆ ಅರಿವಿನ ಮಾರ್ಗವನ್ನು ‘ಮತ್ತೆ ಕಲ್ಯಾಣ’ವೆಂಬ ಆಂದೋಲನದ ಮೂಲಕ ಪೂಜ್ಯರು ನಡೆಸಿದ್ದಾರೆ. ಸಮಯಕ್ಕೆ ಹೆಚ್ಚು ಒತ್ತು ಕೊಡುವ ಶ್ರೀಗಳ ಸೇವಾ ಕ್ಷೇತ್ರಗಳು ಹಲವಾರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರು, ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉಪಾಧ್ಯಕ್ಷರು, ಸಿರಿಗೆರೆ ಎಂ.ಬಿ.ಆರ್. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಹಾ ಪೋಷಕರು, ವಚನ ಮಂಟಪದ ಅಧ್ಯಕ್ಷರು, ಶಿವ ಸಂಚಾರದ ರೂವಾರಿಗಳು. ಪರಿಸರ ರಕ್ಷಣೆ, ಪುಸ್ತಕ ಪ್ರೇಮ, ಸಾಹಿತ್ಯ ಕೃಷಿ, ರಂಗ ಚಟುವಟಿಕೆ, ವೈಚಾರಿಕ ಮುನ್ನೋಟ ನಿರಂತರ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಪಾರ ಜನ ಮನ್ನಣೆ ಗಳಿಸಿದ್ದಾರೆ. ಗ್ರಾಮೀಣ ಜನರ, ದೀನ-ದಲಿತರ ಬಗ್ಗೆ ವಿಶೇಷ ಕಾಳಜಿಯುಳ್ಳ ಶ್ರೀಗಳು ಅವರ ಯಾವುದೇ ಸಮಸ್ಯೆಗಳಿದ್ದರೂ ಸಹ ತಕ್ಷಣ ಪರಿಹರಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ.

ನೇರ, ನಿಷ್ಠೂರ, ನಡೆನುಡಿಯ ಶ್ರೀಗಳು ಸನ್ಯಾಸಿಗಳಲ್ಲೇ ಅಪರೂಪದ ವ್ಯಕ್ತಿತ್ವವುಳ್ಳವರು. ರಂಗಭೂಮಿ ಚರಿತ್ರೆಯಲ್ಲೇ ಧಾರ್ಮಿಕ, ಸಾಹಿತ್ಯಿಕ ಆಸಕ್ತಿಯನ್ನು ಮೊಟ್ಟ ಮೊದಲು ತೋರಿದ ಮಠಾಧಿಪತಿಗಳಾಗಿದ್ದಾರೆ. `ಗುಬ್ಬಿ ವೀರಣ್ಣ ಪ್ರಶಸ್ತಿ’ ಪುರಸ್ಕೃತರನ್ನೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿಸಿ, ಅವರಿಗೆ ಬೆಳ್ಳಿಯ ಬೆತ್ತ, ಮೈಸೂರು ಪೇಟ ನೀಡಿ ಗೌರವಿಸಿದ್ದು, ರಂಗಭೂಮಿಯ ಇತಿಹಾಸದಲ್ಲೇ ಸ್ಮರಣೀಯ. ಹೊಸದುರ್ಗದಲ್ಲಿ 2004ರಲ್ಲಿ ನಡೆದ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು, ಪೂಜ್ಯರ ಸಾಹಿತ್ಯ ಪ್ರೇಮಕ್ಕೆ ಹಿಡಿದ ಕನ್ನಡಿ. ಬಸವಣ್ಣನವರ ಬದುಕಿನ ಸುತ್ತ ಹೆಣೆದ ಮೂರು ಕನ್ನಡ ನಾಟಕಗಳನ್ನು ಹಿಂದಿಯಲ್ಲಿ ಕಲಿಸಿ, `ಭಾರತ ರಂಗ ಸಂಚಾರ ಏರ್ಪಡಿಸಿದ್ದು’ ಭಾರತೀಯ ರಂಗಭೂಮಿಯ ಇತಿಹಾಸದಲ್ಲೇ ದಾಖಲಾರ್ಹವಾದುದಾಗಿದೆ.

ಶ್ರೀಗಳು ಮಠ ಮತ್ತು ಮಠಾಧೀಶರನ್ನು ಅನುಮಾನದಿಂದ ನೋಡುವ ಈ ಕಾಲದಲ್ಲೂ ಇದಕ್ಕೆ ಅಪವಾದವಾಗಿದ್ದಾರೆ. ತಮ್ಮ ಪರಿಶ್ರಮ, ಜನಪರ ಕಾಳಜಿ, ವೈಚಾರಿಕತೆ, ರಂಗಾಸಕ್ತಿ, ಸಾಹಿತ್ಯಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಒಲವು, ಲೇಖನ, ಭಾಷಣಗಳ ಮೂಲಕ ಸಹೃದಯರ ಗಮನವನ್ನು ಸೆಳೆದಿದ್ದಾರೆ.

ಇಂದು ಸಾಣೇಹಳ್ಳಿ ನಾಡಿನ ಎಲ್ಲಾ ವರ್ಗದ ಜನರ ಗಮನ ಸೆಳೆಯಲು ಕಾರಣವಾದುದು ಶ್ರೀಗಳ ರಂಗಭೂಮಿಯ ಚಟುವಟಿಕೆಗಳು. ಹೀ ಗಾಗಿ ಅವರು ನಾಡಿನಾದ್ಯಂತ `ರಂಗಜಂಗಮ’ರೆಂದೇ ಪ್ರಖ್ಯಾತರಾಗಿದ್ದಾರೆ. ಪೂಜ್ಯರ ರಂಗಸಾಧನೆ ಗಮನಿಸಿ, ಕುವೆಂಪು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 1998ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಫೆಲೋಷಿಪ್, 2004ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಫಾಲ್ ಹ್ಯಾರಿಸ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕೆ.ವಿ.ಶಂಕರಗೌಡ ಪ್ರಶಸ್ತಿ, ದುಬೈ ಕನ್ನಡಿಗರ ಧ್ವನಿ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಪೂಜ್ಯರು, ಇಂದು 70ನೇಯ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಡು ಕಂಡರಿಯದ ಅಪರೂಪದ ಸಂತರಲ್ಲಿ ನಾಡಿನ ಪ್ರಗತಿಪರ ಚಿಂತಕರು, ವಿಚಾರವಾದಿಗಳು ನಮ್ಮ ಸಮಾಜಕ್ಕೆ ದೊರೆತಿರುವುದು ನಮ್ಮ ಸೌಭಾಗ್ಯ.


ಉಷಾ ಕೆ.ಬಿ., ಉಪನ್ಯಾಸಕರು
ಬಿ. ಪರಮೇಶ್ವರಪ್ಪ ಕಲಾ
ಮತ್ತು ವಾಣಿಜ್ಯಶಾಸ್ತ್ರ ಕಾಲೇಜು, ಹೊಳಲ್ಕೆರೆ.
[email protected]

error: Content is protected !!