ಹಳ್ಳಿಯಲ್ಲಿ ತರ್ಲೆ ಮಾಡೋ ಹುಡುಗರಿಗೆ ”ಲೇ ಜೋಕುಮಾರ ಮಾಡ್ದಂಗೆ ಮಾಡ್ತಿಯಲ್ಲೋ” ಎನ್ನುವ ಮಾತನ್ನು ನೀವು ಕೇಳಿರಬಹುದು. ಆ ಮಾತಿನಲ್ಲಿರುವ ಜೋಕುಮಾರ ಯಾರು? ಅವನ ಹಿನ್ನೆಲೆ ಏನು? ಎಂಬುದರ ಬಗ್ಗೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಗಣೇಶ ಹಬ್ಬ ಮುಗಿದು ಮೂರನೇ ದಿನದಂದು ವಿಸರ್ಜನೆಯಾದ ರಾತ್ರಿ ಜೋಕುಮಾರನನ್ನು ಪ್ರತಿಷ್ಠಾಪಿಸಲಾಗುತ್ತದೆ. ಗಣೇಶನನ್ನು ಮೂರನೇ ದಿನ ವಿಸರ್ಜಿಸಿದ ನಂತರ ಗಣೇಶ ಶಿವನ ಬಳಿ ಹೋಗುತ್ತಾನೆ, ನಂತರ ಜೋಕುಮಾರ ಭೂಮಿಗೆ ಬಂದು ಮಳೆ ಸುರಿಸುತ್ತಾನೆ ಎನ್ನುವುದು ಹಳ್ಳಿ ಜನರ ನಂಬಿಕೆ.
ಗಣೇಶನನ್ನು ಪ್ರತಿಷ್ಠಾಪಿಸಿ ಮೂರು ದಿನವಾದ ಮೇಲೆ ವಿಸರ್ಜಿಸಿದ ರಾತ್ರಿ ಊರ ಬಾರಿಕರ (ಗಂಗಾಮತಸ್ಥ-ಬೆಸ್ತ) ಮಹಿಳೆಯರು ಸೇರಿ ಜೋಕುಮಾರನನ್ನು ಎಣ್ಣೆ ಮತ್ತು ಹುತ್ತದ ಮಣ್ಣಿನಿಂದ ಪ್ರತಿಷ್ಠಾಪಿಸಿ, ಒಂದು ಬಿದಿರಿನ ಪುಟ್ಟಿಯಲ್ಲಿ ಬೇವಿನ ಎಲೆಗಳ ಮಧ್ಯ ಇಟ್ಟು, ಬಾಯಲ್ಲಿ ಬೆಣ್ಣೆ ಹುಂಡಿಯನ್ನು ತುರುಕುತ್ತಾರೆ. ನಂತರ ಬಾರಿಕರ ಐದು ಜನ ಮಹಿಳೆಯರು ಏಳು ದಿವಸ ಊರು ಊರು ತಿರುಗಿ ದವಸ-ಧಾನ್ಯ ಸಂಗ್ರಹಿಸಿ ಪ್ರತಿ ದಿನ ಊರು ತಲುಪಿದ ಮೇಲೆ ಸಂಜೆ ಊರಿನಲ್ಲಿರುವ ಆ ಜನಾಂಗದವರು ಮಾತ್ರ ಒಂದೆಡೆ ಸೇರಿ ಎಲ್ಲರೂ ಸಮ ಪಾಲಾಗಿ ಹಂಚಿಕೊಳ್ಳುತ್ತಾರೆ.
ಜೋಕುಮಾರನ ಕಥೆ: ಜೋಕುಮಾರನ ಹುಟ್ಟು-ಸಾವಿನ ಬಗ್ಗೆ ಕೆಲವು ಕಡೆ ಹಲವು ಕಥೆಗಳು ಇವೆ. ಕಕ್ಕರಗೊಳ್ಳದ ಬಾರಿಕರ ಮಹಿಳೆಯರು ಹೇಳುವ ಹಾಗೆ, ಕ್ಯಾತಪ್ಪ ಹಾಗೂ ಗೌರವ್ವನ ಮಗನಾಗಿ ಜೋಕುಮಾರ ಹುಟ್ಟಿದನಂತೆ. ಹುಟ್ಟಿದ ಜೋಕುಮಾರ ತುಂಬಾ ಪುಢಾರಿಯಾಗಿದ್ದನಂತೆ. ಕುದುರೆಯ ನ್ನೇರಿ ಊರು ತುಂಬಾ ಸುತ್ತುತ್ತಾ ಊರ ಹೆಣ್ಣು ಮಕ್ಕಳಿಗೆ ಕೀಟಲೆ ಮಾಡುತ್ತಿದ್ದನಂತೆ. ಇವನ ಪುಂಡಾಟಕ್ಕೆ ಬೇಸತ್ತ ಊರ ಜನರು ಹಿಂಡುಗಟ್ಟಿ ಕಲ್ಲಿನಿಂದ ಹೊಡೆದು ಕಲ್ಲು ಬುಡದಲ್ಲಿಟ್ಟರಂತೆ. ಜೋಕುಮಾರನ ತಲೆಗೆ ಹೊಡೆದಾಗ ಅವನು ಉಂಡದ್ದು ಅಂಬಲಿಯಾಗಿ ಹರಿದಾಡಿ ಗುಡುಗು ಸಹಿತ ಮಳೆ ಬಂದು ಬರಡು ಭೂಮಿಯೆಲ್ಲ ಹಸಿರಾಗಿ ಹೊಲದಲ್ಲಿನ ಬೆಳೆ ಹುಲುಸಾಗಿ ಬೆಳೆದವಂತೆ.
ಜೋಕುಮಾರನಿಗೂ ಗಣೇಶನಿಗೂ ನಂಟು : ಕಕ್ಕರಗೊಳ್ಳ ಗ್ರಾಮದ ಬಾರಿಕರ ಮಹಿಳೆಯರು ಹೇಳುವ ಹಾಗೆ ಗಣೇಶನಿಗೂ ಜೋಕುಮಾರನಿಗೂ ಒಂದು ನಂಟಿದೆಯಂತೆ. ಗಣೇಶನನ್ನು ಪ್ರತಿಷ್ಠಾಪಿಸಿ ಮೂರು ದಿನಕ್ಕೆ ವಿಸರ್ಜಿಸುತ್ತಾರೆ. ನಂತರ ಗಣೇಶ ಶಿವನ ಬಳಿ ಹೋಗಿ ತಂದೆ ಭೂ ಲೋಕದಲ್ಲಿ ಗಣೇಶ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಎಲ್ಲಿ ನೋಡಿದರೂ ಸಂತೋಷ ಸಂಭ್ರಮ, ಸಡಗರ ಮೋದಕ, ಲಾಡು, ಕಡುಬುಗಳನ್ನು ತಯಾರಿಸಿ ಅರ್ಪಿಸಿದರು ಎಂದು ಹೇಳುತ್ತಾನಂತೆ. ಗಣೇಶ ವಿಸರ್ಜನೆಯ ಮಾರನೇ ದಿನ ಜೋಕುಮಾರ ಹುಟ್ಟುತ್ತಾರೆ. ನಂತರ ಏಳು ದಿನಕ್ಕೆ ಸತ್ತು ಶಿವನ ಬಳಿ ಹೋಗಿ ಊರೆಲ್ಲ ತಿರುಗಿದರೂ ಎಳ್ಳಷ್ಟು ದವಸ-ಧಾನ್ಯ ಸಿಗಲಿಲ್ಲ ಎಂದು ಹೇಳುತ್ತಾನೆ. ಆಗ ಶಿವ ಮಳೆ ಸುರಿಸುತ್ತಾನೆ ಎಂಬಕಥೆ ಇದೆ.
ಜೋಕುಮಾರನಿಗೆ ದವಸ-ಧಾನ್ಯ ನೀಡಲು ಕಾಯುವ ಒಕ್ಕಲಿಗರು: ಒಕ್ಕಲುತನ ಮಾಡುವವರು ಜೋಕುಮಾರ ಬರುವಿಕೆಗಾಗಿ ಕಾಯುತ್ತಾರೆ. ಜೋಕುಮಾರನ ಹೊತ್ತು ತರುವ ಮಹಿಳೆಯರ ಬಳಿ ಜೋಕುಮಾರ ಚರಗವನ್ನು ತೆಗೆದುಕೊಂಡು ತಮ್ಮ ಹೊಲಗಳಲ್ಲಿ ಹಾಕಿದರೆ ಬೆಳೆ ಚೆನ್ನಾಗಿ ಬೆಳೆಯುತ್ತದೆ ಎಂಬ ನಂಬಿಕೆ. ಹಾಗೆಯೆ ಕಕ್ಕರಗೊಳ್ಳ ಗ್ರಾಮದಲ್ಲಿ ಹುಟ್ಟಿದ ಜೋಕುಮಾರನ ಬರುವಿಕೆಗೆ ಅಕ್ಕ ಪಕ್ಕದ ಊರುಗಳಾದ ಕೊಂಡಜ್ಜಿ, ಯರಗುಂಟೆ, ಆವರಗೊಳ್ಳ, ಕೋಡಿಹಳ್ಳಿ, ಅಮರಾವತಿ ಇನ್ನೂ ಮುಂತಾದ ಊರ ಒಕ್ಕಲುತನ ಮಾಡುವವರು ಬರುವಿಕೆಗಾಗಿ ಕಾದು, ಬಾರಿಕರ ಮಹಿಳೆಯರು ಕೊಟ್ಟ ಜೋಕುಮಾರನ ಚರಗವನ್ನು ತಮ್ಮ ಹೊಲದಲ್ಲಿ ಹಾಕುತ್ತಾರೆ.
ಮರೆಯಾಗುತ್ತಿರುವ ಜೋಕುಮಾರ: ಜೋಕುಮಾರನನ್ನು ಪ್ರತಿಷ್ಠಾಪಿಸುವುದು ಸುಲಭದ ಮಾತಲ್ಲ. ಅದರ ಹಿನ್ನೆಲೆಯನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಅಷ್ಟೇ ಅಲ್ಲದೆ ಜೋಕುಮಾರನ ಬಗ್ಗೆ ಇರುವ 30 ಜಾನಪದ ಗೀತೆಗಳನ್ನು ಹಾಡಬೇಕು. ಈಗಿನ ಪೀಳಿಗೆಯ ಮಹಿಳೆಯರು ಈ ಪದ್ಧತಿಯನ್ನು ಮರೆಯುತ್ತಿದ್ದಾರೆ ಎನ್ನುವುದು ಬೇಸರದ ಸಂಗತಿಯಾಗಿದೆ.
ಜೋಕುಮಾರನಿಗೆ ಕೊರೊನಾ ಅಡ್ಡಿ: ಈ ಬಾರಿ ಕೊರೊನಾ ಕರಿನೆರಳು ಇರುವುದರಿಂದ ಕೆಲವು ಹಳ್ಳಿಗಳಲ್ಲಿ ಬಾರಿಕರ ಮಹಿಳೆಯರು ಊರು ಊರು ಸುತ್ತಲು ಹೆದರಿ ಈ ಬಾರಿ ಜೋಕುಮಾರನನ್ನು ಪ್ರತಿಷ್ಠಾಪಿಸುವುದನ್ನು ಬಿಟ್ಟಿದ್ದಾರೆ. ಅದರಂತೆ ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲೂ ಈ ಬಾರಿ ಕೊರೋನಾ ಕಾಟದಿಂದ ಜೋಕುಮಾರನನ್ನು ಪ್ರತಿಷ್ಠಾಪಿಸಿಲ್ಲ.
ಅಡ್ಡಡ್ಡ ಮಳಿ ಬಂದು, ದೊಡ್ಡ ದೊಡ್ಡ ಕೆರೆ ತುಂಬ್ಲಿ ಜೋಕುಮಾರ
ಮಳೆ ಬಾರದೆ ಬರ ಬಡಿದು ಬೆಳೆ ನಾಶವಾಗುತ್ತಿರುವ ಹೊತ್ತಿನಲ್ಲಿ ಮಳೆರಾಯನ ಕರೆಯಲು ಹಳ್ಳಿಗಳಲ್ಲಿ ಪುರಾತನ ಹಾಗು ಸಾಂಪ್ರದಾಯಿಕವಾಗಿ ಜೋಕುಮಾರನನ್ನು ಪ್ರತಿಷ್ಠಾಪಿಸುವ ಪದ್ದತಿಗಳಲ್ಲಿ ಒಂದು ಇನ್ನೂ ಆಚರಣೆಯಲ್ಲಿದೆ.
ಹಾಗೆಯೇ ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿರುವುದು ಖುಷಿಯ ಸಂಗತಿ. ಕಕ್ಕರಗೊಳ್ಳ ಗ್ರಾಮದ ಬಾರಿಕರ ಕುಟುಂಬದವರು ಮನೆಗೊಬ್ಬ ಮಹಿಳೆ ಎಂದು ಐದು ಜನ ಸೇರಿಕೊಂಡು ಈ ಜೋಕುಮಾರನನ್ನು ಹೊಳೆಯಿಂದ ತಂದು ಹುತ್ತದ ಮಣ್ಣಿನಿಂದ ಪ್ರತಿಷ್ಠಾಪಿಸಿ, ಕಕ್ಕರಗೊಳ್ಳ ಸುತ್ತಮುತ್ತ ಇರುವ ಕೋಡಿಹಳ್ಳಿ, ಕೊಂಡಜ್ಜಿ, ಆವರಗೊಳ್ಳ, ಯರಗುಂಟೆ, ಅಮರಾವತಿ, ದುಗ್ಗತ್ತಿ ಮುಂತಾದ ಹಳ್ಳಿಗಳಲ್ಲಿ ಸಂಚರಿಸಿ ಪ್ರತಿ ಮನೆಯಲ್ಲೂ ಎಣ್ಣೆ, ಗೋಧಿ, ಜೋಳ, ಅಕ್ಕಿ, ಎಲೆ, ಕಾಳು-ಕಡಿ, ಅಡಿಕೆ, ಉಪ್ಪು, ಮೆಣಸಿನ ಕಾಯಿ, ಟೊಮ್ಯಾಟೋ ಹೀಗೆ ಪ್ರತಿಯೊಂದು ದವಸ-ಧಾನ್ಯಗಳನ್ನು ಸಂಗ್ರಹಿಸಿಕೊಂಡು ಬರುತ್ತಾರೆ. ಜೋಕುಮಾರನನ್ನು ಹೊತ್ತು ತಿರುಗುವ ಮಹಿಳೆಯರು ಸುಮಾರು 30 ಜನಪದ ಹಾಡುಗಳನ್ನು ಹಾಡುತ್ತಾರೆ.
– ಸುರೇಶ್ ಕಕ್ಕರಗೊಳ್ಳ